ಮಕ್ಕಳಿಗಲ್ಲ... ಇದು ಪೋಷಕರಿಗೆ ಪರೀಕ್ಷಾ ಕಾಲ
ನಿಮ್ಮ ಮಗುವಿನ ಭವಿಷ್ಯ ನಿಮ್ಮ ಕೈಯಲ್ಲಿ!
ಪರೀಕ್ಷೆಗಳು ಅತ್ಯಂತ ಪ್ರಮುಖ ಹಾಗೂ ಇವು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತವೆ ಎಂಬ ಕಲ್ಪನೆ ಬಗ್ಗೆ ಮಕ್ಕಳಿಗೆ ಎಳವೆಯಿಂದಲೂ ಚಿಂತನೆಗೆ ಹಚ್ಚುತ್ತೇವೆ. ಅಂಥ ಪರಿಸ್ಥಿತಿಯಲ್ಲಿ ಪರೀಕ್ಷೆಯ ಒತ್ತಡ ಅಧಿಕವಾದಾಗ ಮಕ್ಕಳು ಮುಗ್ಗರಿಸುತ್ತಾರೆ. ಮಕ್ಕಳ ಪರೀಕ್ಷಾ ಒತ್ತಡವನ್ನು ನಿರ್ಲಕ್ಷಿಸಿದಾಗ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸುವ ಹಾಗೂ ಅದರಲ್ಲಿ ಯಶಸ್ವಿಯಾದ ನಿದರ್ಶನಗಳೂ ಸಾಕಷ್ಟಿವೆ. ಅದಾಗ್ಯೂ ಆಪ್ತಸಲಹೆ ಹಾಗೂ ಒತ್ತಡ ನಿರ್ವಹಿಸುವಲ್ಲಿ ಪೋಷಕರು ವಹಿಸುವ ಪಾತ್ರದಿಂದ ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.
ಪೋಷಕರು ಮಕ್ಕಳ ಜತೆಗೆ ನೇರವಾಗಿ ಸಂವಾದ ನಡೆಸಲು ಹೆಚ್ಚಿನ ಅವಕಾಶ ಇರುವುದರಿಂದ ಮಕ್ಕಳ ಪರೀಕ್ಷಾ ಒತ್ತಡಗಳನ್ನು ಚೆನ್ನಾಗಿ ಅವರೇ ನಿರ್ವಹಿಸಬಲ್ಲರು. ಮಕ್ಕಳು ತಮ್ಮ ಪರೀಕ್ಷಾ ಒತ್ತಡವನ್ನು ಮನೆಯಲ್ಲಿ ನಿರ್ವಹಿಸಲು ಅವರು ಸಹಕರಿಸಬಲ್ಲರು. ಜತೆಗೆ ಮಕ್ಕಳು ಒತ್ತಡದಲ್ಲಿ ಕುಸಿಯದಂತೆ ನೋಡಿಕೊಳ್ಳಬಲ್ಲರು. ಮಕ್ಕಳು ಆರಾಮದಾಯಕವಾಗಿರುವಂತೆ ಮಾಡಲು ಮಕ್ಕಳು ಯಾವ ಯಾವ ಕ್ರಮಗಳನ್ನು ಅನುಸರಿಸಬಹುದು?
ಪರೀಕ್ಷೆಯ ಸಂದರ್ಭದಲ್ಲಿ ಪೋಷಕರ ಪಾತ್ರವನ್ನು ಅರ್ಥ ಮಾಡಿಕೊಳ್ಳಲು, ಈ ದಿನ ಹಾಗೂ ಕಾಲಘಟ್ಟದಲ್ಲಿ ವಿದ್ಯಾರ್ಥಿ ಅಂದರೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಇಂದಿನ ಯುವಕರು ಎದುರಿಸುವ ಸಾಮಾನ್ಯ ಸಮಸ್ಯೆಗಳೇನು? ಇಂಥ ಪ್ರಶ್ನೆಗಳೇ ಗೊಂದಲಕಾರಿ ಹಾಗೂ ಅಸ್ಪಷ್ಟವಾಗಿದ್ದು, ಮಕ್ಕಳ ನಡವಳಿಕೆ ಮೂಲಕವೇ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಸಿಟ್ಟು, ಒತ್ತಡ ಹಾಗೂ ಉದ್ವಿಗ್ನತೆಗಳು ಪರೀಕ್ಷೆಯ ಒತ್ತಡದ ನೇರ ಫಲಿತಾಂಶಗಳು. ಇದರ ಜತೆಗೆ ಹೋರಾಟ ಮನೋಭಾವವೂ ಬರುತ್ತದೆ.
ಕೆಲ ಸ್ಪರ್ಧಾತ್ಮಕ ಮನೋಭಾವ ಆರೋಗ್ಯಪೂರ್ಣವಾದರೂ, ಕೆಲವೊಮ್ಮೆ ಈ ಸಮತೋಲನ ತಪ್ಪಿ ಪೋಷಕರು ಹಾಗೂ ಮಕ್ಕಳನ್ನು ಹೆಚ್ಚು ಉದ್ವಿಗ್ನ ಹಾಗೂ ಒತ್ತಡಕ್ಕೆ ತಳ್ಳುತ್ತದೆ. ಇಂಥ ಉದ್ವಿಗ್ನತೆ ಸಾಮಾನ್ಯವಾಗಿ ಶೈಕ್ಷಣಿಕ ಕ್ಷಮತೆಗೆ ಸಂಬಂಧಿಸಿದ್ದು, ಇದು ಪ್ರಜ್ಞಾಪೂರ್ವಕವಾಗಿ ಅಥವಾ ಅರಿವಿಗೆ ಬಾರದೇ ಪೋಷಕರಿಂದ ಮಕ್ಕಳ ಜೀವನದ ಮೂಲಕ್ಕೇ ಹೋಗುತ್ತದೆ ಎನ್ನುವುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ನಾನು ಇದನ್ನೂ ನೋಡಿದ್ದೇನೆ. ಬಹುತೇಕ ಸಂದರ್ಭದಲ್ಲಿ ಮಕ್ಕಳು ಆರಾಮದಾಯಕವಾಗಿ, ತಲೆಕೆಡಿಸಿಕೊಳ್ಳದೇ ಇದ್ದರೂ, ಪೋಷಕರು ಹೆಚ್ಚು ಉದ್ವಿಗ್ನತೆ, ಒತ್ತಡದಿಂದ ಇರುತ್ತಾರೆ.
ಇಷ್ಟಾಗಿಯೂ ಪೋಷಕರು ಮಕ್ಕಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ಮಾಡಬಹುದು. ಇಂದಿನ ದಿನಮಾನದಲ್ಲಿ ಇಂಥ ಒತ್ತಡದಿಂದ ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯ. ಪರೀಕ್ಷಾ ತಿಂಗಳುಗಳಲ್ಲಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಒತ್ತಡದ ಮಟ್ಟ ಹಿಂದೆಂದಿಗಿಂತಲೂ ಹೆಚ್ಚುತ್ತದೆ. ಮಕ್ಕಳ ಪರೀಕ್ಷಾ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಮೊಟ್ಟಮೊದಲನೆಯದಾಗಿ ಪೋಷಕರು ತಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳು ಪರೀಕ್ಷಾ ಹಾಲ್‌ನಲ್ಲಿ ಯಾವ ಯೋಚನೆಯೂ ಇಲ್ಲದೆ ಪ್ರಶಾಂತ ಮನಸ್ಸಿನಿಂದ ಇರುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.
ನಡವಳಿಕೆ ತಜ್ಞರು ಹಾಗೂ ಮನಃಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ, ಸ್ವಲ್ಪಮಟ್ಟಿನ ಒತ್ತಡ ಒಳ್ಳೆಯದು. ಏಕೆಂದರೆ ಮಕ್ಕಳು ತಮ್ಮ ಗಮನವನ್ನು ಓದಿನತ್ತ ಕೇಂದ್ರೀಕರಿಸಲು ಇದು ಸಹಾಯ ಮಾಡುತ್ತದೆ. ವಾಸ್ತವವಾಗಿ ನೀವು ಒತ್ತಡ ಇಲ್ಲದಿದ್ದರೆ ಕ್ರಿಯಾಶೀಲರಾಗಿ ಇರಲು ಸಾಧ್ಯವೇ ಇಲ್ಲ. ಹೊಸ ಹೊಸ ಸವಾಲುಗಳನ್ನು ಎದುರಿಸುವ ಮೂಲಕ ನೀವು ಹೊಸದನ್ನು ಕಲಿಯುತ್ತೀರಿ ಹಾಗೂ ನಿಮ್ಮ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಕಲಿಕೆಯ ಎಲ್ಲ ಪ್ರಮುಖ ಸಿದ್ಧಾಂತಗಳಲ್ಲೂ, ಒತ್ತಡಕ್ಕೆ ಸ್ಥಾನವಿದೆ. ಆದರೆ ಇಂಥ ಒತ್ತಡವು ಅಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡುವಂತಿದ್ದರೆ, ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಅಧಿಕ ಒತ್ತಡವು ಮಕ್ಕಳನ್ನು ವಿಚ್ಛಿದ್ರಕಾರಿಯಾಗಿಸುತ್ತದೆ.
ಖಂಡಿತವಾಗಿಯೂ ನಿಮ್ಮ ಮಕ್ಕಳು ಉನ್ನತ ಗುರಿಯನ್ನು ಹೊಂದಿರಬೇಕು. ಆದರೆ ಪರಿಪೂರ್ಣತೆಗಾಗಿ ಆತನ/ ಆಕೆಯ ಸಂಘರ್ಷ ಹೆಚ್ಚಿದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಪೋಷಕರಾಗಿ ಮಾಡಬಹುದಾದ ಪ್ರಮುಖ ಕಾರ್ಯವೆಂದರೆ, ಮಕ್ಕಳಲ್ಲಿ ಧನಾತ್ಮಕವಾದ ಆತ್ಮವಿಶ್ವಾಸವನ್ನು ತುಂಬುವುದು. ಜೀವನಕ್ಕೆ ಒಂದು ದೃಷ್ಟಿಕೋನ ಹೊಂದಲು, ಒತ್ತಡವನ್ನು ಅನುಭವಿಸಲು, ಸ್ವಯಂ ಅನುಮಾನ ಹಾಗೂ ವೈಫಲ್ಯವನ್ನು ಎದುರಿಸಲು ಅವರಿಗೆ ನೆರವಾಗಬೇಕು. ಮಕ್ಕಳು ಈ ವಯಸ್ಸಿನಲ್ಲಿ ಹೆಚ್ಚು ಅಂತರ್ಮುಖಿಯಾಗಿರುತ್ತಾರೆ ಹಾಗೂ ತಕ್ಷಣ ಸಮಸ್ಯೆಗಿಂತ ಹೆಚ್ಚಿನದೇನನ್ನೂ ಅವರು ಯೋಚಿಸಲು ಸಮರ್ಥರಾಗಿರುವುದಿಲ್ಲವಾದ್ದರಿಂದ ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ.
ಆದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಸಬೇಕು. ಜೀವನ ಮುಂದೆ ಸಾಗುತ್ತಲೇ ಇರುತ್ತದೆ ಹಾಗೂ ನಾಳೆ ಇಂದಿಗಿಂತ ಒಳ್ಳೆಯದಾಗಬಹುದು ಎಂಬ ಆಶಾಭಾವನೆಯನ್ನು ಅವರಲ್ಲಿ ತುಂಬುವ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡಬಹುದು. ನನ್ನ ಪ್ರಾಮಾಣಿಕ ಅಭಿಪ್ರಾಯದಲ್ಲಿ ಎಲ್ಲರಿಗೂ ನೆರವಾಗಲೇಬೇಕಾದ ಕೆಲವು ಹೊಳಹುಗಳನ್ನು ನೀಡುತ್ತೇನೆ!
ಮನೆ ವಾತಾವರಣ ತಿಳಿ ಇರಲಿ
ಪರೀಕ್ಷೆಗಳು ಅತ್ಯಂತ ಗಂಭೀರ ವಿಚಾರ ಹಾಗೂ ಅದನ್ನು ಅಷ್ಟೇ ಗಂಭೀರವಾಗಿ ನಿರ್ವಹಿಸಬೇಕು ಎನ್ನುವುದು ನಿಸ್ಸಂಶಯ. ಇದಕ್ಕೆ ಕೆಲ ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸುವುದು ಹಾಗೂ ನಿರ್ದಿಷ್ಟ ಅಗತ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಶಿಸ್ತಿಗೆ ಬದ್ಧವಾಗಿರುವುದು ಮುಖ್ಯ. ಆದರೆ ಬಹಳಷ್ಟು ಸಲ ಗಮನಕ್ಕೆ ಬರುವಂತೆ ಪೋಷಕರು ಮಾಮೂಲಿ ವಿಷಯವನ್ನೂ ದೊಡ್ಡದು ಮಾಡುತ್ತಾರೆ. ತೀರಾ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಮಕ್ಕಳ ಮೇಲೆ ಹೇರುವುದರಿಂದ ಅಕ್ಷರಶಃ ಮಕ್ಕಳಲ್ಲಿ ತಾವು ಬಂಧಿ ಎಂಬ ಮನೋಭಾವ ಬೆಳೆಯುತ್ತದೆ.
ಮನೆಯಲ್ಲಿ ಪರೀಕ್ಷೆ ಹಾಗೂ ಅಧ್ಯಯನದ ಬಗ್ಗೆ ಚರ್ಚೆಗಳು ಪ್ರತಿ ಗಂಟೆಗೊಮ್ಮೆ ಎಂಬಂತೆ ನಡೆಯುತ್ತಿರುತ್ತವೆ. ಆದರೆ ಮಕ್ಕಳಿಗೆ ಕೂಡಾ ಸ್ವಲ್ಪಮಟ್ಟಿಗೆ ಆರಾಮದಾಯಕ ವಾತಾವರಣ ಬೇಕಾಗುತ್ತದೆ. ಅಧ್ಯಯನದ ಬಗ್ಗೆಯೇ ನಿರಂತರ ಚರ್ಚೆಗಳು, ಮಗುವಿನಲ್ಲಿ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತವೆ. ಇಂಥ ಏಕತಾನತೆಯಿಂದ ಸ್ವಲ್ಪವೂ ಬಿಡುವು ಇಲ್ಲ ಎಂಬ ಭಾವನೆ ಮಗುವಿನಲ್ಲಿ ಬೆಳೆಯುತ್ತದೆ. ಇದರಿಂದಾಗಿ ಓದಿನ ಬಗ್ಗೆ ಕೇಂದ್ರೀಕರಿಸುವ ಬದಲು ಮಗು ಸಹಜವಾಗಿಯೇ ಒತ್ತಡ ಅನುಭವಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳಿಗೆ ಪರೀಕ್ಷೆ ಸಂದರ್ಭದಲ್ಲಿ ತೀರಾ ಬೇಡಿಕೆಯನ್ನೇನೂ ಮುಂದಿಡಬೇಡಿ. ಮಕ್ಕಳ ಜತೆ ವಾದ ಖಂಡಿತವಾಗಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಮಗುವಿನ ಒತ್ತಡ ಮತ್ತಷ್ಟು ಹೆಚ್ಚುತ್ತದೆ ಹಾಗೂ ಮಗು ಪುನರ್‌ಮನನದಿಂದ ವಿಚಲಿತವಾಗುತ್ತದೆ.
ಶಿಸ್ತು ಇರಲಿ ಆದರೆ ಜೈಲರ್ ಆಗಬೇಡಿ
ಈ ಮೊದಲು ಹೇಳಿದಂತೆ, ನಿಗದಿತ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಮಗು ಅದಕ್ಕೆ ತಕ್ಕಂತೆ ನಡೆದುಕೊಳ್ಳುವಂಥ ವಾತಾವರಣ ಸೃಷ್ಟಿಸಬೇಕು. ಹೀಗೆ ವ್ಯವಸ್ಥಿತ ನಿಯಮಾವಳಿ ಪಾಲನೆಯಿಂದ ಎಲ್ಲ ವಿಷಯಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಹೀಗೆ ನಿಯಮಗಳಿಗೆ ಅನುಗುಣವಾಗಿ ಮಕ್ಕಳು ನಡೆದುಕೊಳ್ಳುವುದು ಅಗತ್ಯವಾಗಿದ್ದರೂ, ಕೆಲವಿಷಯಗಳ ಬಗ್ಗೆ ಅವರು ಸಡಿಲವಾಗಿರುವಾಗ ಅವರ ಮೇಲೆ ಅನಗತ್ಯವಾಗಿ ರೇಗಾಡಬೇಡಿ.
ಒಂದು ವಿಷಯದ ಬದಲಾಗಿ ಮತ್ತೊಂದು ವಿಷಯದಲ್ಲಿ ಆಸಕ್ತಿ ತೋರಿಸಿದರೆ ಅಥವಾ ಬಿಡುವಿನ ವೇಳೆಯನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಿಕೊಂಡರೆ ಅದನ್ನು ಆಕ್ಷೇಪಿಸುವುದು ಸಲ್ಲದು. ನಿಯಮಕ್ಕೆ ಕಟ್ಟುನಿಟ್ಟಾಗಿ ಇರುವ ಜತೆಜತೆಗೆ ಮಾನವೀಯ ದೃಷ್ಟಿಕೋನವೂ ಇರಲಿ. ಇದೇ ವೇಳೆ ಮಕ್ಕಳಿಗೆ ಸದಾ ನೀವು ಲಭ್ಯರಿರುವಂತೆ ನೋಡಿಕೊಳ್ಳಿ. ಅವರ ಸಂದೇಹ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿ. ಇದು ಖಂಡಿತವಾಗಿಯೂ ಅವರ ಒತ್ತಡದ ಹೊರೆಯನ್ನು ತಗ್ಗಿಸಲು ನೆರವಾಗುತ್ತದೆ. ಅವರ ಅಗತ್ಯ ಸಂದರ್ಭದಲ್ಲಿ ಅವರ ನೆರವಿಗೆ ನೀವು ಇರುತ್ತೀರಿ ಎಂಬ ಭಾವನೆ ಅವರಲ್ಲಿ ದಟ್ಟವಾಗುತ್ತದೆ.
ಲಂಚ, ಟ್ರೀಟ್ ಹಾಗೂ ಬಹುಮಾನ
ಕೆಲ ಮಕ್ಕಳಿಗೆ ಲಂಚ ನೀಡಿ, ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವಂತೆ ಆಮಿಷ ಒಡ್ಡಲಾಗುತ್ತದೆ. ಉತ್ತಮ ಅಂಕ ಗಳಿಸಿದರೆ ನಗದು ಅಥವಾ ಉಡುಗೊರೆಯನ್ನು ಲಂಚವಾಗಿ ನೀಡುವ ಪ್ರವೃತ್ತಿ ಕೆಲವರಲ್ಲಿದೆ. ಆದರೆ ಇದು ಖಂಡಿತಾ ಒಳ್ಳೆಯದಲ್ಲ. ಕಠಿಣ ಪರಿಶ್ರಮಕ್ಕೆ ಸಿಗುವ ಪ್ರತಿಫಲ ಎಂದರೆ ಹಣ ಎಂಬ ಭಾವನೆ ಮೂಡಲು ಇದು ಕಾರಣವಾಗುತ್ತದೆ. ಮಗು ಕಠಿಣ ಪರಿಶ್ರಮ ನಡೆಸುವ ಬಗ್ಗೆ ನಿಮಗೆ ವಿಶ್ವಾಸವಿಲ್ಲ ಎಂಬ ಭಾವನೆ ಬರುತ್ತದೆ. ಇಂಥ ಋಣಾತ್ಮಕ ಸಂದೇಶವು ಮಗುವಿನ ಸ್ವಂತಿಕೆಯ ಭಾವನೆಗೆ ಧಕ್ಕೆ ತರುತ್ತದೆ.
ಮಗುವಿಗೆ ಹಣದ ಆಮಿಷ ಒಡ್ಡುವ ಬದಲಾಗಿ ಅಥವಾ ನಿಮಗೋಸ್ಕರ ಸಾಧನೆ ಮಾಡುವ ಬದಲು ಹೆಚ್ಚು ಶೈಕ್ಷಣಿಕ ಸಾಧನೆ ಮಾಡಿದಷ್ಟೂ ನಿನ್ನ ಭವಿಷ್ಯವೇ ಉಜ್ವಲವಾಗುತ್ತದೆ ಎಂಬ ಧನಾತ್ಮಕ ಅಂಶವನ್ನು ಮಗುವಿಗೆ ಮನವರಿಕೆ ಮಾಡಿ. ಪರೀಕ್ಷೆಯೇ ಕೊನೆಯ ಮಾರ್ಗವಲ್ಲ; ಆದರೆ ಅದು ಕೂಡಾ ಜೀವನದ ಮುಂದಿನ ಹಂತಕ್ಕೆ ರಹದಾರಿ ಎನ್ನುವುದನ್ನು ಮನದಟ್ಟು ಮಾಡಿ. ಅಂದರೆ ಕಾಲೇಜು, ವಿಶ್ವವಿದ್ಯಾನಿಲಯ ಅಥವಾ ಉದ್ಯೋಗದ ಹಂತಕ್ಕೆ ಬರಲು ಇದು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಉತ್ತಮ ಫಲಿತಾಂಶವೇ ಕಠಿಣ ಪರಿಶ್ರಮಕ್ಕೆ ಅತಿದೊಡ್ಡ ಉಡುಗೊರೆ. ಆತನ/ ಆಕೆಯ ಸಾಧನೆ ಬಗ್ಗೆ ಆತ/ ಆಕೆಯೇ ಹೆಮ್ಮೆಪಡುವಂತೆ ಮಾಡಿ. ಮಕ್ಕಳ ಕೆಲಸದಲ್ಲಿ ನಿಮಗೆ ಆಸಕ್ತಿ ಇದೆ ಎಂಬ ವಿಷಯ ಅವರ ಮನಸ್ಸಿಗೆ ಮುಟ್ಟುವಂತೆ ಮಾಡಿ. ಅವರು ಒಳ್ಳೆಯ ಸಾಧನೆ ಮಾಡಿದಷ್ಟೂ ನೀವು ಹೆಮ್ಮೆಪಡುತ್ತೀರಿ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಿ.
ಲಂಚಕೋರತನ ಒಳ್ಳೆಯದಲ್ಲದಿದ್ದರೂ, ಉತ್ತೇಜಕ ಕ್ರಮವಾಗಿ ಮಗುವಿಗೆ ಸಣ್ಣ ಟ್ರೀಟ್ ನೀಡುವ ಪರಿಪಾಠ ಬೆಳೆಸಿಕೊಳ್ಳಿ. ಒಂದು ಹಂತದ ಪುನರ್‌ಮನನ ಮುಗಿದ ಬಳಿಕ ಒಂದು ಕೇಕ್ ಅಥವಾ ಬಿಸ್ಕೆಟ್ ನೀಡುವಂಥ ರೂಢಿ ಒಳ್ಳೆಯದು. ಅಂತೆಯೇ ಪರೀಕ್ಷೆ ಮುಗಿದಾಗ ಪ್ರತೀ ಮಕ್ಕಳೂ ನಿರೀಕ್ಷಿಸುವಂತೆ ಹೊರಗೆ ಒಳ್ಳೆಯ ಊಟ ಕೊಡಿಸುವುದು ಅಥವಾ ಪ್ರವಾಸ, ಸಿನೆಮಾಗೆ ಕರೆದೊಯ್ಯುವಂಥ ಉದಾರತೆ ತೋರಿ.
ಹೋಲಿಕೆ ಬೇಡ
ಇಂದಿನ ದಿನಗಳಲ್ಲಿ ಬಹುತೇಕ ಪೋಷಕರು ಸಾಮಾನ್ಯವಾಗಿ ಇದನ್ನು ಮಾಡುತ್ತಾರೆ. ಉದ್ದೇಶಪೂರ್ವಕವಲ್ಲದಿದ್ದರೂ, ಇಂಥ ಹೋಲಿಕೆ ಮಗುವಿನ ದೀರ್ಘಾವಧಿ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಆತ್ಮವಿಶ್ವಾಸ ಕುಗ್ಗುವುದಲ್ಲದೆ, ಇಂಥ ಹೋಲಿಕೆಯ ದೀರ್ಘಾವಧಿ ಶಾಪದಿಂದ ಮಕ್ಕಳು ಪಾರಾಗಲು ನೋಡುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಹೋಲಿಕೆ ಬೇಡ. ಪೋಷಕರು ಇಂಥ ಹೋಲಿಕೆ ತಪ್ಪಿಸುವುದು ಮಾತ್ರವಲ್ಲದೆ, ಮಕ್ಕಳೂ ತಮ್ಮನ್ನು ಬೇರೆಯವರ ಜತೆ ಹೋಲಿಸಿಕೊಳ್ಳದಂತೆ ತಡೆಯಬೇಕು.
ಆಹಾರಕ್ರಮದ ಬಗ್ಗೆ ಇರಲಿ ಕಾಳಜಿ
ಮಕ್ಕಳ ಆಹಾರಕ್ರಮದ ಬಗ್ಗೆ ನಿಗಾ ವಹಿಸುವುದು ಮುಖ್ಯ. ಇದು ಮಗುವಿನ ಬೆಳವಣಿಗೆ ಹಂತವಾಗಿದ್ದು, ಮಕ್ಕಳ ಪೌಷ್ಟಿಕ ಅಗತ್ಯಗಳು ಪೂರೈಸುವಂತೆ ನೋಡಿಕೊಳ್ಳಬೇಕಾದ್ದು ಪೋಷಕರ ಕರ್ತವ್ಯ. ಪರೀಕ್ಷೆ ಸಂದರ್ಭದಲ್ಲಿ ಸಹಜವಾಗಿಯೇ ಸ್ವಲ್ಪಮಟ್ಟಿಗೆ ಉದ್ವಿಗ್ನತೆ ಹಾಗೂ ಧೈರ್ಯ ಕಳೆದುಕೊಳ್ಳುವ ಸ್ಥಿತಿ ಇರುತ್ತದೆ. ಆದ್ದರಿಂದ ಇಂಥ ಸಂದರ್ಭದಲ್ಲಿ ಮಗುವಿನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇದು ಸರಳ ಹಾಗೂ ಸುಲಭವಾಗಿ ಜೀರ್ಣವಾಗುವಂತಿರಬೇಕು. ಯಾವುದೇ ಬಗೆಯ ದಿಢೀರ್ ಆಹಾರ ಹಾಗೂ ಜಂಕ್‌ಫುಡ್ ಬೇಡವೇ ಬೇಡ.
ಏಕೆಂದರೆ ಇದು ಜೀರ್ಣ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಆಹಾರಕ್ರಮ ಸರಳ ಹಾಗೂ ಸಮತೋಲಿತವಾಗಿರಲಿ. ಒಂದು ಬಾರಿ ಸಹಜ ಚಯಾಪಚಯ ಪ್ರಕ್ರಿಯೆ ಸುಲಲಿತವಾದಷ್ಟೂ, ಒತ್ತಡ ತಾನಾಗಿಯೇ ಕಡಿಮೆಯಾಗುತ್ತದೆ.
ಯಶಸ್ಸಿಗಿರಲಿ ಉತ್ತೇಜನ
ಮಗು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳಿಸಿದರೆ ಹೊಗಳಿ ಹಾಗೂ ಗಳಿಸದಿದ್ದರೆ, ಹೆಚ್ಚು ಅಂಕ ಪಡೆಯುವಂತೆ ಸ್ಫೂರ್ತಿ ತುಂಬಿ. ಇಂಥ ಹೊಗಳಿಕೆ ಮಕ್ಕಳು ಹೆಚ್ಚು ಓದಲು ಸ್ಫೂರ್ತಿ ನೀಡುತ್ತದೆ ಹಾಗೂ ಮುಂದಿನ ಪರೀಕ್ಷೆಯಲ್ಲಿ ಮತ್ತಷ್ಟು ಹೆಚ್ಚಿನ ಅಂಕ ಪಡೆಯಲು ಉತ್ತೇಜನ ಸಿಗುತ್ತದೆ. ಆದರೆ ಕಡಿಮೆ ಅಂಕ ಬಂದಾಗ, ಮಕ್ಕಳು ಓದಿನ ಬಗ್ಗೆ ಹೆಚ್ಚು ಪರಿಶ್ರಮ ವಹಿಸುವಂತೆ ಉತ್ತೇಜನ ನೀಡುವುದು ಅಗತ್ಯವಾಗುತ್ತದೆ. ಕಡಿಮೆ ಅಂಕ ಬಂದಾಗ ಅವರನ್ನು ನಿಂದಿಸಬೇಡಿ. ಇದರಿಂದ ಅವರ ಮನಸ್ಸು ಅಧ್ಯಯನದಿಂದ ವಿಚಲಿತವಾಗಿ, ಓದನ್ನು ದ್ವೇಷಿಸುವ ಪ್ರವೃತ್ತಿ ಬೆಳೆಯಲು ಕಾರಣವಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಕ್ಕಳು ಕಲಿಯಲೇಬೇಕಿರುವ ಪಾಠವೆಂದರೆ, ಯಶಸ್ಸು ಒಂದು ಪ್ರಕ್ರಿಯೆಯೇ ವಿನಃ ಅದೇ ಅಂತಿಮ ಗುರಿಯಲ್ಲ. ಇದಕ್ಕೆ ಹಲವು ವ್ಯಾಖ್ಯಾನಗಳಿವೆ. ಶೈಕ್ಷಣಿಕ ಫಲಿತಾಂಶಗಳು ಯಶಸ್ಸಿನ ಹಲವು ವ್ಯಾಖ್ಯಾನಗಳಲ್ಲಿ ಒಂದು. ಪರೀಕ್ಷೆಯನ್ನು ಕಲಿಕಾ ಪ್ರಕ್ರಿಯೆಯಾಗಿ ಕಾಣುವುದು ಹಾಗೂ ಜೀವನ ಕೌಶಲವಾಗಿ ಕಾಣಬೇಕೇ ವಿನಃ ಇದನ್ನು ಪೋಷಕರು ಹಾಗೂ ವಿದ್ಯಾರ್ಥಿಗಳ ಒತ್ತಡ ಹಾಗೂ ಉದ್ವಿಗ್ನತೆ ಹೆಚ್ಚಿಸುವ ಭೂತವಾಗಿ ಪರಿಗಣಿಸಬಾರದು.
ನಿಮ್ಮ ದಾರಿಯುದ್ದಕ್ಕೂ ಹಸಿರು ಬೆಳಕು ಬೀರಲಿ. ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಶಕ್ತಿಯನ್ನು ಸರ್ವಶಕ್ತನು ನೀಡಲಿ. ಎಲ್ಲಕ್ಕಿಂತ ಹೆಚ್ಚಾಗಿ, ಏನೇ ಮಾಡಿದರೂ, ನಮ್ಮ ದೇಶದ ಮೌಲಿಕ ಪ್ರಜೆಯಾಗಿ ರೂಪುಗೊಳ್ಳಲಿ ಎನ್ನುವುದು ನನ್ನ ಹಾರೈಕೆ.
ಪರೀಕ್ಷಾ ಭಯ ಸಂಬಂಧಿ ವೈಯಕ್ತಿಕ ಸಲಹೆಗಳಿಗೆ ನನಗೆ ಮುಕ್ತವಾಗಿ ಕರೆ ಮಾಡಬಹುದು!
- ಅನಂತ್ ಪ್ರಭು ಜಿ.
ಅನಂತ್ ಪ್ರಭು ಅವರು ಯುವ ಲೇಖಕ,ಸಾಫ್ಟ್‌ವೇರ್ ಇಂಜಿನಿಯರ್, ಸ್ಫೂರ್ತಿ ತುಂಬುವ ವಾಗ್ಮಿ, ಟಿವಿ ನಿರೂಪಕ ಹಾಗೂ ಶಿಕ್ಷಣ ತಜ್ಞ. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಹ ಪ್ರಾಧ್ಯಾಪಕ ಹಾಗೂ ಮಂಗಳೂರಿನ ವಿಕಾಸ್ ಪಿಯು ಕಾಲೇಜಿನ ಸಲಹೆಗಾರ. ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ಸೈಬರ್ ಕ್ರೈಮ್ ಹಾಗೂ ಸೈಬರ್ ಕಾನೂನು ವಿಷಯದಲ್ಲಿ ಸಂದರ್ಶನ ಅಧ್ಯಾಪಕ.