ಭಾರತ ಭಾಗ್ಯ ವಿಧಾತ
ಈ ದೇಶ ಮಾಡಿದ ಗಾಯ ಒಂದಾ ಎರಡಾ?

ರಾಮನಗರದ ‘ಟ್ರೂಪ್ಲೇನ್’ ಎಂಬ ಊರಿನಲ್ಲಿ ನಾನು ನನ್ನ ಬಾಲ್ಯದ ದಿನಗಳನ್ನು ಕಳೆದೆ. ದಲಿತರು, ಮುಸ್ಲಿಮರು, ತಮಿಳರು ಮತ್ತು ಕ್ರೈಸ್ತರು ಹೆಚ್ಚಿರುವ ಈ ಊರಿನಲ್ಲಿ ‘ಸಂತ ಲೂರ್ದುಮಾತೆ’ಯ ಹೆಸರಿನಲ್ಲೊಂದು ಚರ್ಚಿದೆ. ಚರ್ಚಿಗೂ ಮತ್ತು ‘ಟ್ರೂಪ್ಲೇನ್’ ನಡುವೆ ರೈಲ್ವೆ ಟ್ರ್ಯಾಕಿದೆ. ಡಿಸೆಂಬರ್ ಇಪ್ಪತ್ತೈದರ ಹೊತ್ತಿಗೆ ಆಕಾಶದ ನಕ್ಷತ್ರಗಳೆಲ್ಲ ಕೆಳಗಿಳಿದು ಬಂದು ಯಾವುದೇ ಬಿಂಕ ತೋರದೆ ಇಲ್ಲಿನ ಕ್ರೈಸ್ತರ ಮನೆಗಳ ನೆತ್ತಿಯ ಮೇಲೆ ತೂಗಾಡುವುದನ್ನು ನಾನು ಖುದ್ದು ಕಂಡಿದ್ದೇನೆ. ಬಾಲ್ಯದಲ್ಲಿ ನನಗೆ ಯೇಸು ಕ್ರಿಸ್ತನ ಮೇಲೆ ಎಂಥದ್ದೋ ಮೋಹ ಬೆಳೆದಿತ್ತು. ದೇವರು ಇದ್ದರೆ ಯೇಸುವಿನಂತೆಯೇ ಇರಲಿ ಎಂದು ಸಾವಿರ ಸಲ ನನಗೆ ನಾನೇ ಹೇಳಿಕೊಂಡಿದ್ದೇನೆ.
ಡಿಸೆಂಬರ್ ಇಪ್ಪತ್ತೈದರ ನಡುರಾತ್ರಿ ನಾವಿದ್ದ ‘ಟ್ರೂಪ್ಲೇನ್’ ನಗರದ ಹೊಟ್ಟೆಯೊಳಗಿದ್ದ ದೊಡ್ಡ ಗೋಡೆಯೊಂದರ ಮೇಲೆ ಯಾವುದೋ ದೇಶದ, ಯಾವುದೋ ಭಾಷೆಯ ಯೇಸುವಿನ ಚಲನಚಿತ್ರವನ್ನು ತೋರಿಸಲಾಗುತ್ತಿತ್ತು. ಬಹುಶಃ ನಾನು ನೋಡಿದ ಮೊಟ್ಟಮೊದಲ ಸಿನೆಮಾ ಇದೇ ಇರಬೇಕು. ಗೋಡೆಯ ಮೇಲೆ ತೋರಿಸಲಾಗುತ್ತಿದ್ದ ಸಿನೆಮಾ ನೋಡಲು ಸಂಭ್ರಮದಿಂದ ಅಲ್ಲಿಗೆ ಬರುತ್ತಿದ್ದ ಜನ ಸಿನೆಮಾ ಮುಗಿಯುವ ಹೊತ್ತಿಗೆ ಬಿಕ್ಕುತ್ತಾ ಮನೆ ಸೇರುತ್ತಿದ್ದರು. ಯೇಸುವನ್ನು ಶಿಲುಬೆಗೇರಿಸಿ, ಕೈಕಾಲುಗಳಿಗೆ ಮೊಳೆ ಹೊಡೆಯುವ ಹೊತ್ತಿಗೆ ನೆರೆದಿದ್ದ ಜನರ ದುಃಖದ ಕಟ್ಟೆ ಛಿದ್ರವಾಗುತ್ತಿತ್ತು. ಮನೆಗೆ ಹಿಂದಿರುಗುವ ಹಾದಿಯಲ್ಲಿ ‘ಟ್ರೂಪ್ಲೇನ್’ ನಗರದ ಹೆಂಗಸರು ಅಳುತ್ತಾ ಯಾರನ್ನೋ ಶಪಿಸುತ್ತಾ ನಟಿಕೆ ಮುರಿಯುತ್ತಿದ್ದರು. ನನ್ನ ಬಾಲ್ಯದ ಪ್ರತೀ ಡಿಸೆಂಬರ್ ಇಪ್ಪತ್ತೈದರ ರಾತ್ರಿ ಮಾತ್ರ ಮುಗಿಯುತ್ತಿದ್ದದ್ದು ಹೀಗೆ.
ಇವೆಲ್ಲಾ ನೆನಪುಗಳು ಮೊನ್ನೆ ‘ಭಾರತ ಭಾಗ್ಯ ವಿಧಾತ’ ನೋಡುವಾಗ ರಪ್ಪಂತ ನನ್ನ ಕಣ್ಣಮುಂದೆ ಬಂದು ನನ್ನನ್ನು ಗಕ್ಕನೆ ನಿಲ್ಲಿಸಿ ಹಾದುಹೋದಂತಾಯಿತು. ನಿನ್ನೆ, ಮೊನ್ನೆ ನೋಡಿದ ‘ಭಾರತ ಭಾಗ್ಯ ವಿಧಾತ’ವು ನನ್ನ ಬಾಲ್ಯದ ನೆನಪುಗಳಿಗೆ ನನ್ನನ್ನು ಕರೆದೊಯ್ಯಲು ಕಾರಣವಿದೆ. ‘ಭಾರತ ಭಾಗ್ಯ ವಿಧಾತ’ದಲ್ಲೊಂದು ಸನ್ನಿವೇಶ ಬರುತ್ತದೆ, ಹೆಚ್ಚಿನ ಓದಿಗೆಂದು ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಿರುವ ಅಂಬೇಡ್ಕರರಿಗೆ ಒಂದಾದ ಮೇಲೊಂದರಂತೆ ತಮ್ಮ ಮೂವರು ಮಕ್ಕಳು ತೀರಿಕೊಂಡ ಸುದ್ದಿಯೇ ತಲುಪುವುದಿಲ್ಲ. ‘‘ಎಲ್ಲಿ ನಿಮ್ಮ ಓದಿಗೆ ತೊಂದರೆಯಾಗುತ್ತದೋ ಎಂದೋ ನಾನೇ ಮಕ್ಕಳ ಸಾವಿನ ಸುದ್ದಿ ನಿಮಗೆ ತಿಳಿಸಲಿಲ್ಲ’’ ಎಂದು ಅಂಬೇಡ್ಕರರ ಪತ್ನಿ ರಮಾಬಾಯಿ ಅಳುತ್ತಾ ಹೇಳುತ್ತಾರೆ. ‘‘ಇಲ್ಲಿನ ಕೊಳಚೆ, ಈ ನರಕ ನನ್ನ ಮಕ್ಕಳ ಬಲಿ ಪಡೆಯಿತು’’ ಎಂದು ರಮಾಬಾಯಿ ರೋದಿಸುತ್ತಾರೆ. ಅಂಬೇಡ್ಕರ್ ಕ್ಷಣ ಕೂಡ ತಡಮಾಡದೆ ನಗರಪ್ರದೇಶಕ್ಕೆ ಬಂದು ಬಾಡಿಗೆಗೆ ಮನೆ ನೀಡುವಂತೆ ತಮ್ಮ ಪತ್ನಿಯೊಂದಿಗೆ ಮೇಲ್ಜಾತಿಯವರ ಮನೆಯ ಮುಂದೆ ನಿಂತು ಅಂಗಲಾಚುತ್ತಾರೆ. ಮೇಲ್ಜಾತಿಯವರು ಅಂಬೇಡ್ಕರ್ ಮುಖ ಕಂಡವರೇ ಬೈದು ದೊಡ್ಡ ಸದ್ದುಮಾಡಿ ಕದವಿಕ್ಕಿಕೊಳ್ಳುತ್ತಾರೆ. ಇದೇ ಹೊತ್ತಿಗೆ ನನ್ನ ಮುಂದೆ ಕೂತಿದ್ದ ಅರವತ್ತು ದಾಟಿದ ಹಿರಿಯರೊಬ್ಬರು ‘‘ಈ ಬಸವೇಶ್ವರನಗರದಲ್ಲೂ ನಾನು ಇದನ್ನೇ ಅನುಭವಿಸ್ದೆ ನನ್ನಪ್ಪಾ’’ ಎಂದು ಹೇಳಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರು.
‘ಭಾರತ ಭಾಗ್ಯ ವಿಧಾತ’ವನ್ನು ಇದರ ಆಯೋಜಕರು ‘ಧ್ವನಿಬೆಳಕು’ ಪ್ರದರ್ಶನ ಎಂದೇನೋ ಬರೆದುಕೊಂಡಿರುವಂತೆ ನನಗೆ ಕಂಡಿತು. ಆದರೆ ಇಡೀ ಒಂದೂವರೆ ಗಂಟೆಯ ಚಿತ್ರಣ ನನಗೆ ನನ್ನ ಬಾಲ್ಯದ ದಿನಗಳಲ್ಲಿ ಗೋಡೆಯ ಮೇಲೆ ತೋರಿಸಲಾಗುತ್ತಿದ್ದ ಯೇಸುವಿನ ಚಲನಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸಿತು. ಜಾತಿ ಕೇಳದೆ ಮನೆ ಬಾಡಿಗೆ ಕೊಡುವಷ್ಟು ದೊಡ್ಡಗುಣ ಈ ದೇಶದ ಮೇಲ್ಜಾತಿಗಳಿಗೆ ಎಂದಾದರೂ ಬರಲು ಸಾಧ್ಯವೇ?
ಗಿರಿರಾಜ್ ಅವರ ಅಲ್ರೌಂಡರ್ ಪ್ರತಿಭೆ ಚೂರು ಕೂಡ ಪೋಲಾಗದಂತೆ ‘ಭಾರತ ಭಾಗ್ಯ ವಿಧಾತ’ದಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ‘ಭಾರತ ಭಾಗ್ಯ ವಿಧಾತ’ ಗಿರಿರಾಜ್ ಅವರ ಪ್ರಚಂಡ ಪ್ರತಿಭೆಯ ಅನಾವರಣ ಕೂಡ ಹೌದು. ಅಂಬೇಡ್ಕರ್ ಬದುಕುಬರಹಗಳನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಲು ಗಿರಿ ಆಯ್ದುಕೊಂಡ ಮಾರ್ಗ ಮಾತ್ರ ಕನ್ನಡದ ನೆಲಕ್ಕೆ ಹೊಸದು. ಮತ್ತೆ ಮತ್ತೆ ನವೀಕರಣಗೊಳ್ಳುತ್ತಿರುವ ಅಂಬೇಡ್ಕರ್ ಮತ್ತು ಇದ್ದಲ್ಲೇ ಬಿದ್ದಿರುವ ಭಾರತದ ಮಹಾದರ್ಶನವನ್ನೇ ‘ಭಾರತ ಭಾಗ್ಯ ವಿಧಾತ’ ಮಾಡಿಸುತ್ತದೆ. ಸಮಾಜದ ಕಾಯಿಲೆಗಳಿಗೆ ಮದ್ದು ಕಂಡುಹಿಡಿಯಲು ಹೊರಟ ವ್ಯಕ್ತಿಯೊಬ್ಬನಿಗೆ ಈ ದೇಶ ಮಾಡಿದ ಗಾಯ, ಅವಮಾನ ಒಂದಾ ಎರಡಾ?
All is well three word verdict Chronology ಹಾಗಿದ್ದರೆ, ‘ಭಾರತ ಭಾಗ್ಯ ವಿಧಾತ’ದಲ್ಲಿ ಏನೂ ಕೊರತೆಯೇ ಇಲ್ಲವೇ? ತಪ್ಪುಗಳು ನುಸುಳಿಲ್ಲವೇ? ‘ಭಾರತ ಭಾಗ್ಯ ವಿಧಾತ’ದ ಕುರಿತು ಎಂಬ ಕೊಡಲಾರೆ. ಇಲ್ಲೂ ಕೂಡ ಒಂದಿಷ್ಟು ತಪ್ಪುಗಳು ಸೇರಿಕೊಂಡಿವೆ. ಕೆಲವೆಡೆ ಅಂಬೇಡ್ಕರ್ ಬದುಕಿನ ಮಿಸ್ಸಾಗಿದೆ. ಬಹುಮುಖ್ಯವಾಗಿ ಗಾಂಧಿ ಅಂಬೇಡ್ಕರ್ ನಿಜ ವ್ಯಕ್ತಿತ್ವಗಳು ಸಾರ್ವಜನಿಕವಾಗಿ ಮುನ್ನೆಲೆಗೆ ಬಂದದ್ದೇ ‘ಪೂನಾ ಒಪ್ಪಂದ’ದ ಸಂದರ್ಭದಲ್ಲಿ. ಆ ಇಡೀ ‘ಪೂನಾ ಒಪ್ಪಂದ’ದ ಸನ್ನಿವೇಶವನ್ನು ಗಿರಿ ಗೌಣವಾಗಿಸಿದಂತೆ ಕಂಡಿತು. ಇದರ ಹಿಂದೆ ಕಾಣದ ಕೈಗಳ ಕೈಚಳಕವೇನಾದರೂ ಇದ್ದಿರಬಹುದೇ? ಅಥವಾ ಅಷ್ಟು ದುಡ್ಡು ಸುರಿದ ರಾಜ್ಯ ಸರಕಾರಕ್ಕೆ ಗಾಂಧಿಯನ್ನು ‘ಪೂನಾ ಒಪ್ಪಂದ’ದ ಗಾಂಧಿಯಂತೆ ತೋರಿಸುವುದು ಬೇಡವಾಗಿತ್ತೇ? ಇದನ್ನು ಬಲ್ಲವರು ಹೇಳಬೇಕು. ‘ಭಾರತ ಭಾಗ್ಯ ವಿಧಾತ’ದಲ್ಲಿ ನನಗೆ ದೊಡ್ಡ ಕೊರತೆ ಅನ್ನಿಸಿದ್ದು ‘ಪೂನಾ ಒಪ್ಪಂದ’ದ ಸನ್ನಿವೇಶವನ್ನು ತೀರಾ ನಾಟಕೀಯಗೊಳಿಸಿ ಗಾಂಧಿ ಮಹಾತ್ಮರ ನಿಜಮುಖವನ್ನು ಮರೆಮಾಚಿ ಎಲ್ಲವನ್ನು ತಿಳಿಗೊಳಿಸಿದಂತೆ ತೆರೆಯ ಮೇಲೆ ಅವಸರವಸರವಾಗಿ ನಿರ್ದೇಶಕರು ತಂದದ್ದು ಏಕೆಂದು ಗೊತ್ತಾಗಲಿಲ್ಲ.
ಇತಿಹಾಸವನ್ನು ತಿರುಚಿ ಹೇಳಬಹುದು. ಇತಿಹಾಸವನ್ನು ಬಣ್ಣಕಟ್ಟಿ ಹೇಳಬಹುದು. ಇತಿಹಾಸದಲ್ಲಿ ನಡೆಯದ ವಿದ್ಯಮಾನವೊಂದನ್ನು ನಡೆದಂತೆ ಹೇಳಿ ಗೆಲ್ಲಬಹುದು. ಟೊಳ್ಳೆನ್ನಿಸುವ ಇತಿಹಾಸವನ್ನು ಅತಿರಂಜಕವಾಗಿಯೂ ಬಣ್ಣಿಸಿ ಹೇಳಬಹುದು; ಆದರೆ, ಕಷ್ಟವಿರುವುದು ನಿಜದ ಇತಿಹಾಸವನ್ನು ನಿಜವಾಗಿ ತೋರುವುದರಲ್ಲಿ. ‘ಪೂನಾ ಒಪ್ಪಂದ’ದ ಚಾರಿತ್ರಿಕ ಸಂದರ್ಭದಲ್ಲಿ ಗಾಂಧಿ ಮಹಾತ್ಮರ ನಡೆ ದಲಿತರ ಕಣ್ಣಲ್ಲಿ ಅವರನ್ನು ಇವತ್ತಿಗೂ ಖಳನಾಯಕನ ಸ್ಥಾನದಲ್ಲಿಟ್ಟಿದೆ ಎಂದರೆ ಅದಕ್ಕೆ ಕಪಟವೂ ಅಲ್ಲದ, ಕೃತಕವೂ ಅಲ್ಲದ ಇತಿಹಾಸವೇ ಕಾರಣ. ಗಾಂಧಿ ಎಂಥ ದೊಡ್ಡ ತಪ್ಪು ಮಾಡಿಬಿಟ್ಟರು ಅಲ್ಲವೇ?
ಇಂಥ ಸಣ್ಣಪುಟ್ಟ ತಪ್ಪುಗಳನ್ನು ನಿರ್ದೇಶಕರು ತಿದ್ದಿಕೊಂಡು ಮುಂದಿನ ಪ್ರದರ್ಶನಗಳಲ್ಲಿ ‘ಭಾರತ ಭಾಗ್ಯ ವಿಧಾತ’ನನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರಲಿ.