ಇವಿಎಂ ನಿಷೇಧಿಸಿ ಮನವಿ ಅಭಿಯಾನ
7 ಸಾವಿರಕ್ಕೂ ಹೆಚ್ಚು ಜನರಿಂದ ಸಹಿ
ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ಬಳಿಕ ಮಾಯಾವತಿ ಸಹಿತ ಕೆಲವು ಹಿರಿಯ ರಾಜಕೀಯ ನಾಯಕರು ಇಲೆಕ್ಟ್ರಾನಿಕ್ ಮತ ಯಂತ್ರಗಳ ಸಾಚಾತನವನ್ನು ಪ್ರಶ್ನಿಸಿ, ಮರು ಮತದಾನಕ್ಕೆ ಕರೆ ನೀಡಿರುವ ಬೆನ್ನಿಗೇ ಸತ್ಯೇಂದ್ರ ಮುರಳಿ ಎಂಬ ಸಂಶೋಧಕ ಮತ್ತು ಪತ್ರಕರ್ತ ಮತಯಂತ್ರಗಳನ್ನು ನಿಷೇಧಿಸಬೇಕು ಹಾಗೂ ಚುನಾವಣೆಗಳಲ್ಲಿ ಮತಪತ್ರಗಳ ಮೂಲಕ ಮತ ಚಲಾಯಿಸುವ ಪದ್ಧತಿಯನ್ನು ಮರು ಜಾರಿಗೊಳಿಸುವಂತೆ ಅಭಿಯಾನವೊಂದನ್ನು ಪ್ರಾರಂಭಿಸಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ ಬಳಕೆ ಪ್ರಜಾಪ್ರಭುತ್ವಕ್ಕೆ ಹೇಳಿಸಿದ್ದಲ್ಲ, ಅವುಗಳಲ್ಲಿ ಅಕ್ರಮಗಳನ್ನು ನಡೆಸುವ ಮೂಲಕ ಇಡೀ ಫಲಿತಾಂಶವನ್ನು ಬದಲಿಸುವ ಸಾಧ್ಯತೆಯಿದೆ. ಹಾಗಾಗಿ ಇವಿಎಂ ಬಳಕೆ ನಿಷೇಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ, ಚುನಾವಣಾ ಆಯೋಗ ಮತ್ತು ಸಂಸತ್ತಿಗೆ ಅಹವಾಲನ್ನು ಚೇಂಜ್ ಡಾಟ್ ಆರ್ಗ್ ಮೂಲಕ ಸಲ್ಲಿಸಿದ್ದಾರೆ. ಒಂದು ದಿನದಲ್ಲಿ 7,700ಕ್ಕೂ ಅಧಿಕ ಜನರು ಅವರೊಂದಿಗೆ ಸಹಮತ ವ್ಯಕ್ತ ಪಡಿಸಿ ಸಹಿ ಹಾಕಿದ್ದಾರೆ. ಅವರ ಅಹವಾಲು ಇಲ್ಲಿದೆ.
ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ನಿಷೇಧಿಸುವಂತೆ ಮತ್ತು ಮತಪತ್ರಗಳ ಮೂಲಕ ಮತ ಚಲಾಯಿಸುವ ಪದ್ಧತಿಯನ್ನು ಮರು ಜಾರಿಗೊಳಿಸುವಂತೆ ಬೇಡಿಕೆಯೊಂದಿಗೆ ಜನರು ಸುದೀರ್ಘ ಕಾಲದಿಂದ ಸಂಘರ್ಷ ನಡೆಸುತ್ತಿದ್ದಾರೆ. ಜನರ ಈ ಆಗ್ರಹಕ್ಕೆ ಪರ್ಯಾಪ್ತ ಕಾರಣಗಳೂ ಇವೆ. ಎವಿಎಂಗಳು ‘ಮುಕ್ತ ಮತ್ತು ನ್ಯಾಯಸಮ್ಮತ’ವಲ್ಲ. ಸರ್ವೋಚ್ಚ ನ್ಯಾಯಾಲಯವೂ ಇವುಗಳಲ್ಲಿ ಮತದಾನದ ವಿವರಗಳನ್ನು ದಾಖಲಿಸುವ ಮುದ್ರಿತ ಚೀಟಿಗಳನ್ನು ನೀಡುವ ‘ಪೇಪರ್ ಟ್ರೇಲ್’ ವ್ಯವಸ್ಥೆಯು ಅತ್ಯಗತ್ಯವಾಗಿದೆ ಎಂದು ಹೇಳಿತ್ತಲ್ಲದೆ, ‘ಪೇಪರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್(ಬಿಬಿಪಿಎಟಿ)’ ವ್ಯವಸ್ಥೆಯನ್ನು ಇವಿಎಂಗಳಲ್ಲಿ ಅಳವಡಿಸುವಂತೆ ಆದೇಶವನ್ನೂ ನೀಡಿತ್ತು. ಇದನ್ನು ನಾವು ಎಟಿಎಂಗಳಿಂದ ಹಣ ತೆಗೆದ ಬಳಿಕ ದೊರೆಯುವ ಮುದ್ರಿತ ಚೀಟಿಗಳಿಗೆ ಹೋಲಿಸಬಹುದು ಮತ್ತು ಯಾವುದೇ ಶಂಕೆಯಿದ್ದರೆ ಮುದ್ರಿತ ಚೀಟಿಯನ್ನು ಪರಿಶೀಲಿಸಿ ನಿವಾರಿಸಿಕೊಳ್ಳಬಹುದು.
ಲೋಕತಂತ್ರದ ರಕ್ಷಣೆಗಾಗಿ ಇಂತಹ ಕ್ರಮವು ತುಂಬ ಅಗತ್ಯವಾಗಿದೆ. ಆದರೆ ಚುನಾವಣಾ ಆಯೋಗವು ಇದನ್ನು ತಳ್ಳಿಹಾಕುತ್ತಲೇ ಬಂದಿದೆ. ಮುಖ್ಯವಾಹಿನಿಯ ಮಾಧ್ಯಮಗಳೂ ಇವಿಎಂ ವಿರುದ್ಧದ ಸಂಘರ್ಷವನ್ನು ತುಳಿಯುವ ಕೆಲಸವನ್ನು ಮಾಡುತ್ತಲೇ ಇವೆ.
ಉತ್ತರ ಪ್ರದೇಶದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂಗಳಲ್ಲಿ ಅಕ್ರಮಗಳು ನಡೆದಿವೆಯೆಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಇವಿಎಂಗಳಲ್ಲಿ ಅಕ್ರಮಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಗೊತ್ತಿರುವವರು ಮಾಯಾವತಿಯನ್ನು ಬೆಂಬಲಿಸಿದ್ದಾರೆ ಮತ್ತು ತನಿಖೆಗೆ ಆಗ್ರಹಿಸಿದ್ದಾರೆ.
ತನಿಖೆಯ ಸವಾಲು
ಭೌತಿಕ ತಪಾಸಣೆಗೆ ಅನುಕೂಲ ಕಲ್ಪಿಸುವ ಯಾವುದೇ ಮುದ್ರಿತ ಚೀಟಿಯಿಲ್ಲ, ಅದಾದರೂ ಇದ್ದರೆ ಯಾರ ಹೆಸರಿಗೆ ಮತದಾರ ಮುದ್ರೆ ಒತ್ತಿದ್ದಾನೆ, ಎಷ್ಟು ಮತಗಳು ಬಿದ್ದಿವೆ ಎನ್ನುವುದು ಕಣ್ಣಿಗೆ ಕಾಣುತ್ತಿತ್ತು ಮತ್ತು ಅವುಗಳನ್ನು ಎಣಿಸಬಹುದಿತ್ತು. ಆದರೆ ಇವಿಎಂಗಳಲ್ಲಿ ಇದನ್ನು ನೋಡುವುದಾದರೂ ಹೇಗೆ ? ಯಾರ ಹೆಸರಿನ ಮುಂದಿನ ಗುಂಡಿಯನ್ನು ಎಷ್ಟು ಬಾರಿ ಅದುಮಲಾಗಿದೆ ಮತ್ತು ಮತಗಳು ಎಲ್ಲಿಗೆ ಹೋಗಿವೆ ಎನ್ನುವುದನ್ನು ತಿಳಿಯಲು ಸಾಧ್ಯವೇ ಇಲ್ಲ.
ಇದು ಭಾರತದ ಸಂವಿಧಾನವು ಹೇಳುವ ‘ಮುಕ್ತ ಮತ್ತು ನ್ಯಾಯಸಮ್ಮತ’ ವ್ಯವಸ್ಥೆಯಲ್ಲ.
ಇವಿಎಂ ಮೂಲಕ ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೇಳಿಸಿದ್ದಲ್ಲ. ಈ ಯಂತ್ರಗಳಲ್ಲಿ ಹಸ್ತಕ್ಷೇಪ ನಡೆಸಿ ಸಂಪೂರ್ಣ ಫಲಿತಾಂಶಗಳನ್ನೇ ಬದಲಿಸಬಹುದು. ಚುನಾವಣೆಗಳನ್ನು ಬರೀ ತೋರಿಕೆಗಾಗಿ ನಡೆಸುವಂತಾಗಬಾರದು. ಅವುಗಳನ್ನು ವ್ಯಾಪಾರಿಗಳು ಮತ್ತು ರಾಜಕೀಯ ನಾಯಕರ ‘ಈವೆಂಟ್’ಗಳನ್ನಾಗಿಸಬೇಡಿ. ಅವು ಪ್ರಜಾಪ್ರಭುತ್ವದ ಪರವಾಗಿರಲಿ.