ಇದು ಮುಮ್ತಾಝ್ ಅಲ್ಲ, ತಝಮ್ಮುಲಿಯ ತಾಜ್ ಮಹಲ್!
ನಿವೃತ್ತ ಅಂಚೆ ಉದ್ಯೋಗಿಯ ಪ್ರೇಮಸೌಧ

‘‘ಮಕ್ಕಳಿಲ್ಲದ್ದರಿಂದ ಪರಸ್ಪರರಿಗೆ ಮಕ್ಕಳಾಗಿ ಬದುಕಿದ್ದೆವು. ಅವಳೀಗ ಭೌತಿಕವಾಗಿಲ್ಲ. ಇದೀಗ ನನ್ನ ಸಂಬಂಧಿಕರೆಲ್ಲರಿಗೂ ಉಯಿಲು ಬರೆದಿಟ್ಟಿದ್ದೇನೆ. ಅವಳ ಗೋರಿಯ ಪಕ್ಕದಲ್ಲಿ ಸ್ವಲ್ಪಜಾಗ ಖಾಲಿ ಇದೆ. ನಾನು ಮೃತನಾದ ಬಳಿಕ ಅಲ್ಲಿಯೇ ನನ್ನ ದಫನ ಕಾರ್ಯವೂ ನಡೆಯಬೇಕೆಂದು ಹೇಳಿದ್ದೇನೆ. ಬದುಕಿರುವಷ್ಟು ದಿನವೂ ಮೃತರಾದ ಬಳಿಕವೂ ಜೊತೆಗಿರುವುದೇ ಅಲ್ಲವೇ ನಾನು ಕೊಡಬಹುದಾದ ಪ್ರೇಮದ ಕಾಣಿಕೆ?’’ - ತಾನೇ ನಿರ್ಮಿಸಿದ ತನ್ನ ಪ್ರೇಮಸೌಧವನ್ನು ದಿಟ್ಟಿಸುತ್ತಾ ಫೈಝುಲ್ ತಮ್ಮ ಜೊಂಪೆ ಗಡ್ಡವನ್ನು ನೀವುತ್ತಾರೆ.
ಇವತ್ತೇನಿದ್ದರೂ ವಾಟ್ಸ್‌ಆಪ್, ಫೇಸ್ಬುಕ್ ಪ್ರೀತಿಯ ದಿನಗಳು. ಪ್ರೇಮವೆಂಬುದು ಎಫ್ಬಿ ಕವಿತೆಯಲ್ಲಿ ಹುಟ್ಟಿ, ಚಾಟಿಂಗ್‌ನಲ್ಲಿ ಬೆಳೆದು, ವಿಷಾದದ ಸ್ಟೇಟಸ್‌ನಲ್ಲಿ ಅಂತ್ಯಗೊಂಡು, ಹೊಸ ಅಕೌಂಟ್‌ನಲ್ಲಿ ಮತ್ತೊಂದು ಪ್ರೇಮಕ್ಕೆ ವೀಡಿಯೊ ಸ್ಟೇಟಸ್ ಮೂಲಕ ಮುನ್ನುಡಿ ಬರೆಯುವ ಕಾಲ. ಇಂತಿಪ್ಪ ಕಾಲದಲ್ಲಿ ಕಳೆದು ಹೋದ ಅಮರಪ್ರೇಮದ ನೆನಪಿಗೆ ಶಾಶ್ವತ ಕಾಣಿಕೆ ಸಲ್ಲಿಸಿದ ಅಮರ ಪ್ರೇಮಿಯೊಬ್ಬರ ಬದುಕಿನ ಕತೆಯೊಂದಿದೆ. ಅವರ ಬದುಕು ಅನ್ನೋದಕ್ಕಿಂತಲೂ ತನ್ನ ಮುಮ್ತಾಝ್‌ಗಾಗಿ ತಾಜ್ ಮಹಲ್ ಕಟ್ಟಿದ ಕತೆಯಿದು. ಇದಿರುವುದು ಅಸಲಿ ತಾಜ್ ಮಹಲಿರುವ ಉತ್ತರ ಪ್ರದೇಶದ್ದೇ ಇನ್ನೊಂದು ಜಿಲ್ಲೆಯಾದ ಬುಲಂದ್ ಶಹರಿನ ಕೇಸರ್ ಕಲನ್ ಎಂಬ ಊರಿನಲ್ಲಿ. ಇಲ್ಲಿನ ಫೈಝುಲ್ ಹಸನ್ ಖಾದ್ರಿ ಎಂಬ ತರುಣ ತಝಮ್ಮುಲಿ ಬೇಗಂ ಎಂಬ ತರುಣಿಯನ್ನು 1953ರಲ್ಲಿ ಮದುವೆಯಾಗುತ್ತಾರೆ. ಅಂಚೆ ಇಲಾಖೆಯಲ್ಲಿ ಸಣ್ಣ ಉದ್ಯೋಗದಲ್ಲಿದ್ದ ಫೈಝುಲ್‌ಗೆ ಕೊಂಚ ಕೃಷಿ ಭೂಮಿಯೂ ಇದೆ. ಸುಖಿ ಸಂಸಾರ. ಆದರೆ, ಮಕ್ಕಳಾಗಿಲ್ಲ ಎನ್ನುವುದು ಎಂದಿಗೂ ಕಾಡುತ್ತಿರುವ ಕೊರತೆ.
ಅವರದ್ದು ಸುದೀರ್ಘ ದಾಂಪತ್ಯ. ಆದರೆ, ತನ್ನ ಇಳಿವಯಸ್ಸಿನಲ್ಲಿ ತಝಮ್ಮುಲಿ ಗಂಟಲು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ತನ್ನ ಪತ್ನಿಯನ್ನು ಉಳಿಸಲು ಫೈಝುಲ್ ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರೂ ಅದರಲ್ಲಿ ಸಫಲತೆ ಅಸಾಧ್ಯ ಎಂದು ವೈದ್ಯರೂ ತಿಳಿಸುತ್ತಾರೆ. 2011ರಲ್ಲಿ ಅವರ ಮಡದಿ ಮೃತರಾಗುವ ಮೊದಲು ದಂಪತಿ ಪರಸ್ಪರ ಆಡಿದ ಮಾತುಗಳೇ ಈ ಆಧುನಿಕ ತಾಜ್ ಮಹಲ್‌ನ ಹುಟ್ಟಿಗೆ ಕಾರಣ. ತಝಮ್ಮುಲಿಗೆ ತನ್ನ ಬದುಕಿನ್ನು ಕನಿಷ್ಠ ಸಮಯ ಅಂತ ಗೊತ್ತಾದ ಮೇಲೆ, ತಮಗೆ ಮಕ್ಕಳು ಇಲ್ಲದೆ ಇರುವುದು ತೀವ್ರವಾದ ಕೊರತೆಯೆಂಬಂತೆ ಅನಿಸತೊಡಗಿತು. ಇದೇ ಹಿನ್ನೆಲೆಯಲ್ಲಿ ಒಮ್ಮೆ ಫೈಝುಲ್‌ರೊಂದಿಗೆ, ‘‘ನಮ್ಮ ಕಾಲವಾದ ನಂತರ ನಮ್ಮನ್ನು ಯಾರಾದರೂ ನೆನಪಿಸಿಯಾರೇ?’’ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಫೈಝುಲ್, ‘‘ನಮ್ಮನ್ನು ಊರವರೆಲ್ಲಾ ಪ್ರತೀ ದಿನ ನೆನೆಸಿಕೊಳ್ಳುವ ಹಾಗೆ ಮಾಡುತ್ತೇನೆ’’ ಎಂದು ಮಡದಿಗೆ ಮಾತು ಕೊಡುತ್ತಾರೆ. ಮತ್ತು ಹಾಗೇ ಮಾಡುತ್ತಾರೆ.
ಮಡದಿ ಇನ್ನು ಬದುಕುವುದಿಲ್ಲ ಎಂದು ತಿಳಿದ ಮೇಲೆ ಪಕ್ಕದ ಹಳ್ಳಿಯಲ್ಲೊಂದು ಕೃಷಿ ಜಮೀನನ್ನು ಕೊಂಡುಕೊಳ್ಳುತ್ತಾರೆ. ಅದರಲ್ಲೇ ಒಂದು ಸಣ್ಣ ಮನೆಯನ್ನು ನಿರ್ಮಿಸುತ್ತಾರೆ. ತಮ್ಮದೇ ರಾಜ್ಯದಲ್ಲಿರುವ ಅಮರ ಪ್ರೇಮದ ಕುರುಹು ತಾಜ್ ಮಹಲ್‌ನ ಉದಾಹರಣೆ ತಲೆಯಲ್ಲಿ ಯಾವತ್ತೂ ಸುಳಿದಾಡುತ್ತಿರುತ್ತದೆ. ಈ ಹೊತ್ತಿನಲ್ಲಿಯೇ ಮಡದಿ ಮೃತರಾಗುತ್ತಾರೆ. ತನ್ನದೇ ಒಡೆತನದಲ್ಲಿರುವ ಕೃಷಿ ಭೂಮಿಯಲ್ಲಿ ತನ್ನ ಬಾಳಸಂಗಾತಿಯ ಅಂತ್ಯಸಂಸ್ಕಾರವನ್ನೂ ನೆರವೇರಿಸುತ್ತಾರೆ. ಬಳಿಕ, ಅದರ ಮೇಲೆಯೇ ತಝಮ್ಮುಲಿಗಾಗಿ ತಾಜ್ ಮಹಲೊಂದು ಸಿದ್ಧವಾಗತೊಡಗುತ್ತದೆ.
ಬಳಿಕ ಎರಡು-ಮೂರು ವರ್ಷಗಳಲ್ಲಿ ಮಿನಿ ತಾಜ್ ಮಹಲ್ ಬಹು ಪಾಲು ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ಅವರು ಅಲ್ಪಜಮೀನನ್ನೂ, ಮಡದಿಯಲ್ಲಿದ್ದ ಆಭರಣಗಳನ್ನೂ ತನ್ನ ಪಿಂಚಣಿಯ ಉಳಿಕೆ ಎಲ್ಲವನ್ನೂ ವ್ಯಯಿಸುತ್ತಾರೆ. ಆದರೆ, ಅದಕ್ಕೆ ಮಾರ್ಬಲ್ ಹೊದಿಕೆ, ಮುಂದುಗಡೆ ಉದ್ಯಾನವನವನ್ನು ಮಾಡಬೇಕೆಂಬ ಕನಸಿದ್ದರೂ, ಆರ್ಥಿಕ ಶಕ್ತಿಯಿಲ್ಲದೆ ಸುಮ್ಮನಾಗಿದ್ದಾರೆ. ಈ ಸುದ್ದಿ ಕೇಳಿ ನಿಕಟಪೂರ್ವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರಕಾರದ ವತಿಯಿಂದ ಧನಸಹಾಯ ಮಾಡುವ ಇರಾದೆ ವ್ಯಕ್ತಪಡಿಸಿದರೂ ಅದನ್ನು ಫೈಝುಲ್ ನಯವಾಗಿಯೇ ತಿರಸ್ಕರಿಸಿದ್ದಾರೆ. ‘‘ನನ್ನ ಮಡದಿಗಾಗಿ ನಾನು ನಿರ್ಮಿಸಿರುವ ಸ್ಮಾರಕ ಅದು ನನ್ನದೇ ದುಡಿಮೆ ಆಗಿರಬೇಕು. ಅದಕ್ಕಾಗಿ ಸರಕಾರದ ಸಹಾಯ ತಗೊಂಡಿಲ್ಲ’’ ಎನ್ನುತ್ತಾರೆ.
‘‘ನಾವು ಮದುವೆಯಾದಾಗ ನನ್ನ ಮಡದಿ ಸಣ್ಣ ಹುಡುಗಿ. ಅವಳಿಗೆ ಅಡುಗೆ ಮಾಡುವುದಕ್ಕೂ ಬರುತ್ತಿರಲಿಲ್ಲ. ಬಳಿಕ ನಾನೇ ಅವಳಿಗೆ ಅಡುಗೆ ಮಾಡುವುದನ್ನೂ, ಉರ್ದು ಓದುವುದನ್ನೂ, ಕುರ್ ಆನ್ ಪಾರಾಯಣ ಮಾಡುವುದನ್ನೂ ಹೇಳಿಕೊಟ್ಟೆ.’’ ಎಂದು ಯೌವನದ ದಿನಗಳ ನೆನಪಿನಲ್ಲಿ ತಮ್ಮ ನೆರೆತ ಗಡ್ಡದ ಬದಿಯಲ್ಲಿ ಕಾಣುವ ಸ್ವಲ್ಪವೇ ಸ್ವಲ್ಪ ಕೆನ್ನೆಯನ್ನೂ ಫೈಝುಲ್ ಕೆಂಪಗಾಗಿಸುತ್ತಾರೆ. ‘‘ಮಕ್ಕಳಿಲ್ಲದ್ದರಿಂದ ಪರಸ್ಪರರಿಗೆ ಮಕ್ಕಳಾಗಿ ಬದುಕಿದ್ದೆವು. ಅವಳೀಗ ಭೌತಿಕವಾಗಿಲ್ಲ. ಇದೀಗ ನನ್ನ ಸಂಬಂಧಿಕರೆಲ್ಲರಿಗೂ ಉಯಿಲು ಬರೆದಿಟ್ಟಿದ್ದೇನೆ. ಅವಳ ಗೋರಿಯ ಪಕ್ಕದಲ್ಲಿ ಸ್ವಲ್ಪಜಾಗ ಖಾಲಿ ಇದೆ. ನಾನು ಮೃತನಾದ ಬಳಿಕ ಅಲ್ಲಿಯೇ ನನ್ನ ದಫನ ಕಾರ್ಯವೂ ನಡೆಯಬೇಕೆಂದು ಹೇಳಿದ್ದೇನೆ. ಬದುಕಿರುವಷ್ಟು ದಿನವೂ ಮೃತರಾದ ಬಳಿಕವೂ ಜೊತೆಗಿರುವುದೇ ಅಲ್ಲವೇ ನಾನು ಕೊಡಬಹುದಾದ ಪ್ರೇಮದ ಕಾಣಿಕೆ?’’ - ತಾನೇ ನಿರ್ಮಿಸಿದ ತನ್ನ ಪ್ರೇಮಸೌಧವನ್ನು ದಿಟ್ಟಿಸುತ್ತಾ ಫೈಝುಲ್ ತಮ್ಮ ಜೊಂಪೆ ಗಡ್ಡವನ್ನು ನೀವುತ್ತಾರೆ.