‘‘ಶಾಯಿ ಬಳಿದವರು ಪಕ್ಷದ ವಕ್ತಾರರಾದರು ಶಾಯಿ ಬಳಸಿದವರು ಚಳವಳಿಗಾರರಾದರು’’

ಎನ್‌ಡಿಟಿವಿ ನಿರೂಪಕ ರವೀಶ್ ಕುಮಾರ್ ಅವರಿಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆ ಪರಿಗಣಿಸಿ ರವಿವಾರ (ಮಾರ್ಚ್ 19) ಪ್ರಪ್ರಥಮ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾಡಿದ ಭಾಷಣ ಇಲ್ಲಿದೆ.
ವಿಶ್ವಾದ್ಯಂತ ಕಡೆಗಣಿಸಲಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸನ್ಮಾನಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ಮೋಜಿನ ಸಂಗತಿ. ಇದು ಟಿಕ್ ಟಿಕ್ ಗೋಡೆ ಗಡಿಯಾರಗಳ ಸದ್ದು ದಶಕದ ಹಿಂದೆಯೇ ಅಡಗಿದ್ದರೂ, ಟಿಕ್ ಟಿಕ್ ಸದ್ದು ಮಾಡುವ ಗೋಡೆ ಗಡಿಯಾರವನ್ನು ವೀಕ್ಷಿಸಿದಂತೆ. ಅಂದರೆ ಲಘು ಶಬ್ದದ ಮೂಲಕ ಸಮಯವನ್ನು ಗ್ರಹಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೇವೆ. ಈ ಕಾರಣಕ್ಕಾಗಿ ನಾವು ಪ್ರಸ್ತುತ ವಾಸಿಸುವ ಕಾಲ ನಿರ್ಣಯಿಸಲು ವಿಫಲರಾಗಿದ್ದೇವೆ. ಪ್ರಸ್ತುತ ಸಮಯ, ಪರೀಕ್ಷಾ ಕೊಠಡಿಯಲ್ಲಿ ಕುಳಿತಂತೆ ಭಾಸವಾಗುತ್ತಿದೆ. ನಿರಂತರವಾಗಿ ವಿಚಕ್ಷಣಾ ಗುಂಪುಗಳ ಅಥವಾ ತಪಾಸಣಾ ತಂಡಗಳ ದಾಳಿಗೆ ಒಳಗಾಗುತ್ತಿದ್ದೇವೆ. ಈಗ ನಮ್ಮನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುತ್ತಾರೆ ಎಂಬ ಅಪರಾಧಿ ಪ್ರಜ್ಞೆ ಸದಾ ನಮ್ಮ ಅಂತರ್ಯದಲ್ಲಿ ಪದೇ ಪದೇ ಮೂಡುತ್ತದೆ. ಪದೇ ಪದೇ ನಮ್ಮನ್ನು ಶೋಧಿಸಲಾಗುತ್ತಿದೆ. ಮುಕ್ತವಾಗಿ ಮಾತನಾಡುವವರನ್ನು ಈ ರಾಕ್ಷಸ ಕಾಡುತ್ತಲೇ ಇರುತ್ತದೆ.
ಪ್ರತಿಯೊಂದು ಬಾರಿ ದಾಳಿ ಮಾಡುವ ತಂಡ ಭೇಟಿ ನೀಡಿದಾಗಲೂ ‘ಪರೀಕ್ಷಾ ಕೊಠಡಿ’ಯಲ್ಲಿ ಕುಳಿತವರಲ್ಲಿ ಚಳಿ ಕೂರುತ್ತದೆ. ಯಾವ ಅಪರಾಧ ಎಸಗದಿದ್ದರೂ ವಿನಾಕಾರಣ ನಮ್ಮನ್ನು ಸಿಕ್ಕಿಸಿಹಾಕಲಾಗುತ್ತದೆ ಎಂಬ ಭೀತಿ ಆವರಿಸುತ್ತದೆ. ಇವರು ತಪ್ಪುಮಾಡುವವರನ್ನು ಹಿಡಿಯುವ ಬದಲು ಅಮಾಯಕರನ್ನು ಬೆದರಿಸುತ್ತಾರೆ, ನಕಲಿ ಪದವಿ ಹಾಗೂ ನೈಜ ಪದವಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಯುಗದಲ್ಲಿ, ಮೂರನೆ ಪದವಿ ವಿಭಿನ್ನವಾಗಿ ಮತ್ತೆ ಬಂದಿದೆ. ನಮ್ಮ ಕಾಲದಲ್ಲಿ ಸುದ್ದಿ ನಿರೂಪಕ ಹೊಸ ಅಧಿಕಾರದ ಕೇಂದ್ರಬಿಂದು. ತನಗಿಂತ ಭಿನ್ನವಾಗಿ ಮಾತನಾಡುವವರ ಮೇಲೆ ಮುಕ್ತವಾಗಿ ವಾಗ್ದಾಳಿ ಮಾಡುತ್ತಲೇ ಇರುತ್ತಾರೆೆ. ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಅಪರಾಧ. ಪರ್ಯಾಯ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸುವುದು ಘೋರ ಅಪರಾಧ. ವಾಸ್ತವಾಂಶಗಳನ್ನು ಬಿಂಬಿಸುವುದು ಅಶ್ಲೀಲ ಹಾಗೂ ಸತ್ಯಕ್ಕೆ ಬದ್ಧವಾಗಿರುವುದು ಮಹಾಪಾಪ. ಮೊದಲಿಗೆ ಟೆಲಿವಿಷನ್ ನಮ್ಮ ಸಂಜೆಗಳನ್ನಷ್ಟೇ ಹಿಡಿಯುತ್ತಿತ್ತು. ಆದರೆ ಈಗ ಈ ‘ಪೊಲೀಸ್ ಠಾಣೆಗಳು’ ದಿನವಿಡೀ ಕಾರ್ಯಾಚರಣೆ ನಡೆಸುತ್ತಲೇ ಇರುತ್ತವೆ. ನೀವು ಒಬ್ಬ ಸುದ್ದಿ ನಿರೂಪಕನನ್ನು ಮೊದಲ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿರುವವರು ಇನ್ನೂ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಅವರ ಅಸ್ತಿತ್ವ ಭ್ರಮೆ ಎನಿಸಿದರೂ ಮತ್ತೊಂದು ಸೋಲಿನ ರಿಸ್ಕ್ ಸ್ವೀಕರಿಸಲು ಸಿದ್ಧರಿರುವ ಮಂದಿ ಇನ್ನೂ ಇದ್ದಾರೆ.
ಗಾಂಧಿ ಶಾಂತಿ ಪ್ರತಿಷ್ಠಾನಕ್ಕೆ ಕೃತಜ್ಞತೆಗಳು. ಈ ಪ್ರಶಸ್ತಿಯನ್ನು ಪತ್ರಕರ್ತರ ಬೆವರಿನಿಂದ ಸೃಷ್ಟಿಸಲಾಗಿದೆ ಎಂಬ ವಾಸ್ತವದ ಅರಿವು ನನಗಿದೆ. ವೃತ್ತಿಯಲ್ಲಿ ನನಗಿಂತ ಹಿರಿಯರಿಂದ ಸ್ವೀಕರಿಸುವುದು ನನಗೆ ಭಕ್ಷೀಸು ನೀಡಿದಂತೆ. ನನ್ನ ಪ್ರಾರ್ಥನೆಗೆ ಉತ್ತರಿಸಿದಂತೆ. ಕುಲದೀಪ್ ನಯ್ಯರ್ ಅವರನ್ನು ನಾವೆಲ್ಲರೂ ಪೂಜ್ಯತೆಯಿಂದ ಕಾಣುತ್ತೇವೆ. ಲಕ್ಷಾಂತರ ಮಂದಿ ನಿಮ್ಮನ್ನು ಓದಿದ್ದಾರೆ. ಸದಾ ದ್ವೇಷ ಹಾಗೂ ನಂಜು ಹರಡುವ ಗಡಿಯಲ್ಲಿ ನೀವು ಮೊಂಬತ್ತಿ ಬೆಳಗಿದ್ದೀರಿ. ವಾಸ್ತವವಾಗಿ ನಾವು ಎಷ್ಟು ಮಂದಿ ಪ್ರೀತಿ ಬಗ್ಗೆ ಮಾತನಾಡುತ್ತೇವೆ? ಪ್ರೀತಿಯ ಬಗ್ಗೆ ಜನ ಚಿಂತಿಸುತ್ತಾರೆ ಎಂಬ ಬಗ್ಗೆಯೇ ನನಗೆ ಅನುಮಾನ ಇದೆ. ಉದಯಿಸುವ ಸೂರ್ಯನೊಂದಿಗೆ ನಾವು ನಮ್ಮ ದಿನ ಆರಂಭಿಸುವುದಿಲ್ಲ. ಬದಲಾಗಿ ವಾಟ್ಸ್ ಆ್ಯಪ್‌ನಲ್ಲಿ ‘ಗುಡ್‌ಮಾರ್ನಿಂಗ್’ ಎಂಬ ಸಂದೇಶವನ್ನು ವೀಕ್ಷಿಸುವ ಮೂಲಕ ದಿನ ಆರಂಭಿಸುತ್ತೇವೆ. ಇದು ಸೂರ್ಯೋದಯವಾಗುವುದು ವಾಟ್ಸ್ ಆ್ಯಪ್‌ನಿಂದಲೇ ಎಂದು ಇಡೀ ವಿಶ್ವ ನಂಬುವಂತಹ ವಾತಾವರಣ ಸೃಷ್ಟಿಸಿದೆ. ಸದ್ಯದಲ್ಲೇ ನಾವು ಮತ್ತೆ ಗೆಲಿಲಿಯೊನನ್ನು ದಂಡಿಸಲಿದ್ದೇವೆ. ನಾವದನ್ನು ಟಿವಿ ನೇರಪ್ರಸಾರದ ಮೂಲಕ ವೀಕ್ಷಿಸಲಿದ್ದೇವೆ.
ಅನುಪಮ್ ಮಿಶ್ರಾ ಇಂದು ನಮ್ಮಾಂದಿಗಿಲ್ಲ. ಅವರ ಜೀವಿತಾವಧಿಯಲ್ಲೇ ಸಮಾಜ ಅವರ ಅಸ್ತಿತ್ವವನ್ನು ಮರೆತಂತೆ ಈ ಸತ್ಯವನ್ನು ನಾವು ಸ್ವೀಕರಿಸಲೇಬೇಕಿದೆ. ಅವರು ನಮ್ಮ ಸುತ್ತ ಇರುವಾಗ ಅವರಿಂದಲೇ ಈ ಪ್ರಶಸ್ತಿಯನ್ನು ಸ್ವೀಕರಿಸಿದಂತೆ ಅನಿಸುತ್ತಿದೆ. ಹಿತವಾದ ತಂಗಾಳಿ ಅಥವಾ ಶುದ್ಧನೀರಿನ ಅಲೆಯನ್ನು ನಾನು ಕಲ್ಪಿಸಿಕೊಂಡಾಗಲೆಲ್ಲ ಅನುಪಮ್ ಮಿಶ್ರಾ ನನಗೆ ನೆನಪಾಗುತ್ತಾರೆ. ಹಲವು ಅಂಶಗಳನ್ನು ಉಳಿಸಬಹುದಾದ ಭಾಷೆಯನ್ನು ಅವರು ನಮಗೆ ಬಿಟ್ಟುಹೋಗಿದ್ದಾರೆ, ಆದರೆ ಅದಕ್ಕಾಗಿ ನಾವು ನಮ್ಮ ಆತ್ಮವನ್ನು ಶುದ್ಧ ಮಾಡಿಕೊಳ್ಳಬೇಕು. ನಮ್ಮಾಳಗಿನ ಪಾವಿತ್ರ್ಯಕ್ಕೆ ಕೊಳಕು ಆವರಿಸಿದೆ. ಅನುಪಮ್ ಮಿಶ್ರಾ ಅವರಂತೆ ನಮ್ಮ ಯೋಚನೆ ಹಾಗೂ ಭಾಷೆಯನ್ನು ನಾವು ಶುದ್ಧೀಕರಿಸಿಕೊಳ್ಳಬೇಕು. ನಮ್ಮನ್ನು ಆವರಿಸಿರುವ ದೂಳು ಕೊಡವಿಕೊಳ್ಳದೇ ನಾವು ತಲೆ ಎತ್ತಿ ನಿಲ್ಲಲು ಸಾಧ್ಯವಿಲ್ಲ.
ಇದು ಸಾಧ್ಯತೆಗಳನ್ನು ಸಂಶೋಧಿಸುವ ಹಂತ. ಹೊಸ ಹಾಗೂ ಉಳಿಕೆ ಸಾಧ್ಯತೆಗಳಿಗಾಗಿ, ಹೊಸ ನಿರೀಕ್ಷೆ ಹಾಗೂ ಸಾಧ್ಯತೆಗಳನ್ನು ಬಿತ್ತಿ ಬೆಳೆಸುವ ಜನರಿಗಾಗಿ ನಾವು ನಿರಂತರವಾಗಿ ದೃಷ್ಟಿ ಹರಿಸಬೇಕು; ಆದಾಗ್ಯೂ ಈ ನಿರೀಕ್ಷೆಗಳು, ಸಾಧ್ಯತೆಗಳು ಮಬ್ಬಾಗುತ್ತಿವೆ. ಇವೆಲ್ಲದರ ನಡುವೆಯೂ ನಮ್ಮ ನಿರೀಕ್ಷೆಗಳು ಏಕಾಂಗಿಯಾಗಿ ಬೆಳೆಯುತ್ತಿವೆ ಎನಿಸುತ್ತದೆ. ಎಷ್ಟು ಕಾಲ ನಮ್ಮ ಅಸ್ತಿತ್ವ ಉಳಿಯಬಹುದು ಎಂಬ ಪ್ರಶ್ನೆ ಸದಾ ಎಲ್ಲರನ್ನೂ ಕಾಡುತ್ತಲೇ ಇರುತ್ತದೆ. ನಮ್ಮ ಸುತ್ತಲೂ ಇರುವ ಕಾಲದಲ್ಲೇ ನಾವು ಹೇಗೆ ಅರ್ಥಪೂರ್ಣವಾಗಿ ಬದುಕಲು ಸಾಧ್ಯ ಎನ್ನುವುದನ್ನು ನಾವು ಮರೆತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಶಕ್ತಿ ಹಾಗೂ ಒಲವನ್ನು ಪುನಶ್ಚೇತನಗೊಳಿಸಬೇಕಾಗಿದೆ. ನಿಮ್ಮ ಪ್ರಶ್ನೆ ಹರಿತವಾಗಬೇಕು. ನೀವು ನಂಬುವ ರಾಜಕೀಯ ಪಕ್ಷವನ್ನು ಪ್ರಶ್ನಿಸಿ. ಆ ಗುಂಪುಗಳು ನಮ್ಮ ನಂಬಿಕೆಯನ್ನು ಮುರಿದಿವೆ. ಯಾರ ಬಗ್ಗೆ ನಿಮಗೆ ನಂಬಿಕೆಯೇ ಇಲ್ಲವೋ ಅಂಥವರನ್ನೂ ಪ್ರಶ್ನಿಸಿ. ಸಮಾಜದಲ್ಲಿ ಇತರ ಜನರ ಜತೆಗಿನ ನಮ್ಮ ಸಂವಹನವೇ ಮುರಿದುಬಿದ್ದಿದೆ. ರಾಜಕೀಯ ಪಕ್ಷಗಳು ಬದಲಾವಣೆ ತರುತ್ತವೆ ಎಂಬ ಸಮಾಜದ ನಿರೀಕ್ಷೆ ಹೊಂದಿದೆ. ಇಂದು ರಾಜಕೀಯವಾಗಿ ಪ್ರಭಾವಿಗಳು ಮಾತ್ರ ಹಿತವಾದ ಅಥವಾ ಅಪಾಯಕಾರಿ ಬದಲಾವಣೆ ತರಬಲ್ಲರು ಎನ್ನುವುದು ಸಮಾಜಕ್ಕೆ ಈಗ ಮನವರಿಕೆಯಾಗಿದೆ. ಏಕೆಂದರೆ ರಾಜಕೀಯ ಪಕ್ಷಗಳ ಬಗ್ಗೆ ನಿರೀಕ್ಷೆ ತುಂಬುವುದರಿಂದ ಇವರು ಹಿಂದಡಿ ಇಡುವುದಿಲ್ಲ. ಜನ ಮತ್ತೆ ಈ ರಿಸ್ಕ್ ತೆಗೆದುಕೊಳ್ಳುತ್ತಾರೆ. ರಾಜಕೀಯ ಪಕ್ಷಗಳು ಪ್ರತೀ ಸಲ ವಿಫಲವಾದರೂ, ಮುಂದಿನ ಬಾರಿ ಜನ ಮತ್ತೆ ಅವರ ಪರವಾಗಿಯೇ ಸವಾಲು ಹಾಕುತ್ತಾರೆ.
ನನ್ನ ಪತ್ರಿಕೋದ್ಯಮಕ್ಕಾಗಿ ನನಗೆ ಈ ಪ್ರಶಸ್ತಿ ಸಂದಿದೆ. ಇಂದಿನ ಪತ್ರಿಕೋದ್ಯಮದಲ್ಲಿ ಯಾವ ಸಂಘರ್ಷವೂ ಇಲ್ಲ ಎಂದು ಹೇಳಲು ಸಂತೋಷವಾಗುತ್ತಿದೆ. ರಾಜಧಾನಿಯಿಂದ ಹಿಡಿದು ಸಣ್ಣ ಜಿಲ್ಲೆಗಳವರೆಗಿನ ಎಲ್ಲ ಸಂಪಾದಕರು ಕೂಡಾ, ನಿರ್ದಿಷ್ಟ ಪಕ್ಷಗಳ ಸೈದ್ಧಾಂತಿಕ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ಖುಷಿಯಿಂದಿದ್ದಾರೆ. ಅವರನ್ನು ಎಷ್ಟೇ ಟೀಕಿಸಿದರೂ, ಅವರು ಅತೀವ ಸಂತಸದಿಂದ ಇದ್ದಾರೆ ಎನ್ನುವುದನ್ನೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವರು ಈಗಷ್ಟೇ ಪತ್ರಕರ್ತರು ಎಂದು ನಿರೂಪಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ ಜತೆ ವಿಲೀನವಾಗಲು ಮಾಧ್ಯಮ ಕ್ಷೇತ್ರ ಕಳೆದ 50-60 ವರ್ಷಗಳ ಅವಿರತ ಶ್ರಮ ವಹಿಸಿದೆ. ಹೊಟೇಲ್‌ಗಳು, ಮಾಲ್‌ಗಳು, ಮೈನಿಂಗ್ ಲೀಸ್ ಹಾಗೂ ವಿವಿಧ ಲೈಸನ್ಸ್‌ಗಳು ಅವುಗಳ ಹಸಿವು ಇಂಗಿಸಲಿಲ್ಲ. ಅವರ ಆತ್ಮಗಳು ತೃಪ್ತವಾಗಿಲ್ಲ. ಈಗ ಅವುಗಳಿಗೆ ಶಾಂತಿ ಸಿಕ್ಕಿದೆ. ಅಂತಿಮವಾಗಿ ರಾಜಕೀಯ ಪಕ್ಷಗಳ ಅಧಿಕಾರದ ಭಾಗವಾಗುವ ಆಸೆ ಕೊನೆಗೂ ಈಡೇರಿದೆ.
ಭಾರತೀಯ ಮಾಧ್ಯಮ ಪ್ರಸ್ತುತ ಭಾವಪರವಶತೆಯ ಉತ್ತುಂಗದಲ್ಲಿದೆ. ಸ್ವರ್ಗಕ್ಕೆ ಹೋಗಲು ಮೆಟ್ಟಲುಗಳನ್ನು ಕಂಡುಹಿಡಿಯುವ ಬಗ್ಗೆ ಹಿಂದೊಮ್ಮೆ ಜನ ಮಾತನಾಡುತ್ತಿದ್ದರು; ಇಂದು ಅವರು ಭೂಮಿಯಲ್ಲೇ ಸ್ವರ್ಗ ಕಂಡುಕೊಂಡಿದ್ದಾರೆ. ಸ್ವರ್ಗಕ್ಕೆ ಇದೀಗ ಮೆಟ್ಟಲುಗಳ ಸಾಲು ಬೇಕಾಗಿಲ್ಲ. ನೀವು ನನ್ನನ್ನು ನಂಬದಿದ್ದರೆ, ದಯವಿಟ್ಟು ಪತ್ರಿಕೆ ಓದಿ ಅಥವಾ ಸುದ್ದಿ ಚಾನಲ್ ವೀಕ್ಷಿಸಿ. ನಿರ್ದಿಷ್ಟ ರಾಜಕೀಯ ಕಾರ್ಯಸೂಚಿ ಬಗ್ಗೆ ವಿಶೇಷ ಒಲವು ಹೊಂದಿರುವುದು ಅಥವಾ ವಿಧೇಯರಾಗಿರುವುದು ನಿಮಗೆ ತಿಳಿಯುತ್ತದೆ. ಹಲವು ದಶಕಗಳ ಹತಾಶೆಯ ಬಳಿಕ ಇದನ್ನು ನೀವು ಶ್ಲಾಘಿಸಿದರೆ, ನೀವದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಿಂದೆಂದೂ ಸುದ್ದಿ ನಿರೂಪಕರು ಇಷ್ಟೊಂದು ಸುಂದರವಾಗಿ ಕಂಡದ್ದಿಲ್ಲ. ಅಂತೆಯೇ ಸರಕಾರವನ್ನು ಹೊಗಳುವ ನಿರೂಪಕಿಯರು ಇಷ್ಟು ಅಂದವಾಗಿ ಕಂಡದ್ದಿಲ್ಲ. ಪತ್ರಕರ್ತರು ಕೂಡಾ ಇಂದು ಸರಕಾರವಾಗಿದ್ದಾರೆ.
ನಿಮಗೆ ಹೋರಾಟ ಮಾಡುವ ಹುಮ್ಮಸ್ಸು ಇದ್ದರೆ ಪತ್ರಿಕೆ ಹಾಗೂ ಟೆಲಿವಿಷನ್ ವಿರುದ್ಧ ಹೋರಾಡಿ. ಪತ್ರಿಕೋದ್ಯಮವನ್ನು ರಕ್ಷಿಸುವ ನಿಮ್ಮ ಮೊಂಡುತನ ಹೋಗಲಿ. ಪತ್ರಕರ್ತರಿಗೆ ಅವರನ್ನು ರಕ್ಷಿಸುವುದು ಬೇಕಾಗಿಲ್ಲ! ಈಗಾಗಲೇ ಹೊರಹೋಗಿರುವ ಕೆಲವು ಮಂದಿಯನ್ನು ಸುಲಭವಾಗಿ ಒಕ್ಕಲೆಬ್ಬಿಸಬಹುದು. ವೈಯಕ್ತಿಕ ಪತ್ರಕರ್ತರ ಅಸ್ತಿತ್ವ ಉಳಿದುಕೊಳ್ಳುವುದು ಹೇಗೆ ಪರಿಸ್ಥಿತಿಗೆ ನೆರವಾಗಬಲ್ಲದು? ಇಡೀ ಸಂಘಟನೆಗಳೇ ಕೋಮುಮಯವಾಗಿದೆ. ಪತ್ರಿಕೋದ್ಯಮ ಇಂದು ಭಾರತದಲ್ಲಿ ಕೋಮುವಾದವನ್ನು ಹರಡುತ್ತಿದೆ. ಅದಕ್ಕೆ ರಕ್ತದ ದಾಹ ಇದೆ. ಇಡೀ ದೇಶ ಒಂದು ದಿನ ರಕ್ತ ಸುರಿಸುವಂತೆ ಅದು ಮಾಡುತ್ತದೆ. ತನ್ನ ಕಾರ್ಯಸೂಚಿಯನ್ನು ಪ್ರವರ್ಧಮಾನಕ್ಕೆ ತರುವಲ್ಲಿ ಅದು ಯಶಸ್ವಿಯಾಗದಿರಬಹುದು. ಆದರೆ ಅದರ ಪ್ರಯತ್ನವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಯಾರೆಲ್ಲ ನಮ್ಮ ಸಂಪರ್ಕದಲ್ಲಿ ಬರುತ್ತಾರೆಯೋ ಪ್ರತಿಯೊಬ್ಬರ ಜತೆಗೂ ನಾವು ಇದನ್ನು ಚರ್ಚಿಸಲೇಬೇಕಾಗುತ್ತದೆ. ಪತ್ರಿಕೆಗಳು ಹಾಗೂ ಟೆಲಿವಿಷನ್‌ಗಳು ಇಂದು ರಾಜಕೀಯ ಪಕ್ಷಗಳ ಶಾಖೆಗಳಾಗಿವೆ. ಟಿವಿ ನಿರೂಪಕರು ಇಂದು ಪಕ್ಷಗಳಲ್ಲಿ ಪ್ರಧಾನ ಕಾರ್ಯದರ್ಶಿಗಳಿಗಿಂತ ಹೆಚ್ಚು ಪ್ರಭಾವಶಾಲಿಗಳು. ಈ ಹೊಸ ರಾಜಕೀಯ ಸಂಘಟನೆಗಳ ವಿರುದ್ಧ ಹೋರಾಡುವವರೆಗೂ ಪರ್ಯಾಯ ರಾಜಕೀಯ ಯೋಚನೆಗಳು ರೂಪು ಪಡೆಯಲು ಸಾಧ್ಯವಿಲ್ಲ. ಜನರ ಮನಸ್ಸುಗಳ ಮೇಲೆ ಅವರು ಎಷ್ಟು ಪ್ರಭಾವ ಬೀರಿದ್ಧಾರೆ ಎಂದರೆ ಇಂದು ಪ್ರತಿಯೊಂದನ್ನೂ ನೀವು ಏಕೆ ಪ್ರಶ್ನಿಸುತ್ತೀರಿ ಎಂದು ಜನ ಕೇಳುತ್ತಾರೆ. ಶಾಯಿ ಎರಚಿದವರು ಇಂದು ಪಕ್ಷದ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಅದೇ ಶಾಯಿ ಬಳಸಿ ಬರೆಯುವವರು ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಪತ್ರಿಕೋದ್ಯಮ ಎಂದರೆ ಪ್ರಸ್ತುತ ಪ್ರಚಾರಾಂದೋಲನ ಎನ್ನಲೇಬೇಕಾಗುತ್ತದೆ.
ಆದರೆ ಸಾಧ್ಯತೆಗಳನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಿರುವ ಕೆಲ ಪತ್ರಕರ್ತರನ್ನು ಹೇಗೆ ಕಡೆಗಣಿಸಲು ಸಾಧ್ಯ? ಈ ಸಾಧ್ಯತೆಗಳು ಕ್ರಮೇಣ ಮಬ್ಬಾಗುತ್ತಾ ಬಂದರೂ ಅವರು ಹಾಕಿಕೊಟ್ಟ ಹಾದಿಯೇ ಭವಿಷ್ಯದಲ್ಲಿ ನಮಗೆ ಶಕ್ತಿ ತುಂಬಬಲ್ಲದು. ಈ ಪತ್ರಕರ್ತರು ನಿಷ್ಕ್ರಿಯತೆಯಿಂದ ಎಚ್ಚೆತ್ತುಕೊಂಡಾಗ, ಇಂಥ ನಿರೀಕ್ಷೆ ಹಾಗೂ ಸಾಧ್ಯತೆಗಳು ಅವರನ್ನು ರಕ್ಷಿಸುತ್ತವೆ. ಆದ್ದರಿಂದ ಇಂಥ ನಿರೀಕ್ಷೆ ಹಾಗೂ ಸಾಧ್ಯತೆಗಳನ್ನು ನಾವು ಬಲಗೊಳಿಸಬೇಕು ಎಂಬ ಅಂಶಕ್ಕೆ ನಾನು ಒತ್ತು ಕೊಡುತ್ತೇನೆ. ಪ್ರಸ್ತುತ ಕಾಲಘಟ್ಟವನ್ನು ನಿರೀಕ್ಷೆ ಅಥವಾ ವೈಫಲ್ಯದ ಮಸೂರದಿಂದ ನೋಡುವುದನ್ನು ನಿಲ್ಲಿಸಿ. ನಾವು ರೈಲು ಹಳಿಯಲ್ಲಿದ್ದು, ದೈತ್ಯ ಎಂಜಿನ್ ನಮಗೆ ಎದುರಾಗಿದೆ. ಓಡಿಹೋಗಲು ಅಥವಾ ನಮ್ಮನ್ನು ರಕ್ಷಿಸಿಕೊಳ್ಳಲು ಮಾರ್ಗವೇ ಇಲ್ಲ. ನಿರೀಕ್ಷೆ ಅಥವಾ ವೈಫಲ್ಯ ಇಲ್ಲಿ ಆಯ್ಕೆಗಳೇ ಅಲ್ಲ. ನಿಮ್ಮನ್ನು ಕೆಲಸಕ್ಕೆ ಧುಮುಕಿಸಿಕೊಳ್ಳಲು ಇದು ಸಕಾಲ. ನಮಗೆ ಸಮಯದ ಅಭಾವವಿದ್ದು, ಅತಿವೇಗದಲ್ಲಿ ಈ ಕೆಲಸ ಆಗಬೇಕಾಗಿದೆ.