‘‘ರಾಮ.., ರಾಮಾ..! ಒಮ್ಮೆ ಮುಗಿದು ಹೋಗಲಿ ಎಂದು ಬಯಸಿದರೆ...!’’

ವಿವರಗಳು ಅನಗತ್ಯ; ಎಲ್ಲರಿಗೂ ಎಲ್ಲವೂ ಗೊತ್ತಿದೆ.
ದೇಶವಿಭಜನೆಯ ಬಳಿಕ, ಅದು ಹೇಗೋ ಅಷ್ಟಿಷ್ಟು ಸಂಬಾಳಿಸಿಕೊಂಡು ಬಂದಿದ್ದ ಕೋಮು ಸೌಹಾರ್ದದ ತೆಳು ಎಳೆಯನ್ನು, ನಮ್ಮ ರಾಜಕೀಯ ಲಾಭಕ್ಕಾಗಿ 1992ರಲ್ಲಿ ನಾವೇ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿದೆವು. ಆ ನಂತರ ಯಥಾಪ್ರಕಾರ ಕೋರ್ಟು ಕಾನೂನು ಅಂತ ಕಾಲು ಶತಮಾನ ಮಾತಿನಲ್ಲೇ ಕಳೆದೆವು. ಏಳುವರ್ಷಗಳ ಹಿಂದೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್, ‘‘ಒಮ್ಮೆ ಮುಗಿದು ಹೋಗಲಿ’’ ಎಂಬ ಪ್ರಾಮಾಣಿಕ ಆಸೆಯಿಂದ, ವಿವಾದಿತ 2.77 ಎಕರೆ ಜಾಗವನ್ನು ಮೂರು ಸಮಪಾಲು ಮಾಡಿ ಹಂಚಿಕೊಂಡು ‘ಒಮ್ಮೆ ಮುಗಿಸಿಬಿಡಿ’ ಎಂದು ತೀರ್ಪು ನೀಡಿತ್ತು. ಆದರೆ ಒಡೆದ ಪಕ್ಷದವರೂ, ಒಡೆಸಿಕೊಂಡ ಪಕ್ಷದವರೂ ಹೈಕೋರ್ಟಿನ ಸಲಹೆಯನ್ನು ಸಹಮತದಿಂದ ತಿರಸ್ಕರಿಸಿದ್ದರು.
ಇದೀಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ಸನ್ಮಾನ್ಯ ನ್ಯಾಯಮೂರ್ತಿ ಖೇಹರ್ ಸಾಹೇಬರು, ‘‘ಒಮ್ಮೆ ಮುಗಿದು ಹೋಗಲಿ’’ ಎಂಬ ಪ್ರಾಮಾಣಿಕ ಆಸೆಯಿಂದ ನಾಡಿನ ಸಂವಿಧಾನದ ಮಿತಿಯೊಳಗೆ ತೀರ್ಮಾನಿಸಲಾಗದ ಈ ವಿವಾದವನ್ನು, ‘ಸ್ವಲ್ಪ ಬಿಡುವ ಮತ್ತು ಸ್ವಲ್ಪ ಪಡೆಯುವ’ ಸಂಧಾನದೊಂದಿಗೆ ನ್ಯಾಯಾಲಯದ ಹೊರಗೆ ತೀರ್ಮಾನಿಸಿಕೊಳ್ಳುವಂತೆ ಸಂಬಂಧಿಸಿದ ಎರಡೂ ಪಕ್ಷಗಳವರಿಗೆ ಸಲಹೆ ಕೊಟ್ಟಿದ್ದಾರೆ. ಈ ಸಲಹೆಯನ್ನು ಮಸೀದಿ ಒಡೆದ ಪಕ್ಷದವರು (ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡ ಸೇರಿಕೊಂಡಂತೆ ಬಹುತೇಕ ಎಲ್ಲ ಹಿಂದೂ ಸಂಘಟನೆಗಳು) ಸಂತೋಷದಿಂದ ಸ್ವಾಗತಿಸಿದರೆ, ಒಡೆಸಿಕೊಂಡ ಪಕ್ಷದವರು (ಇಸ್ಲಾಮಿಕ್ ಸುನ್ನಿ ವಕ್ಫ್ ಮಂಡಳಿ ಸೇರಿಕೊಂಡಂತೆ ಬಹುತೇಕ ಎಲ್ಲ ಮುಸ್ಲಿಮ್ ಸಂಘಟನೆಗಳು) ಅಷ್ಟೇ ಸಹಜವಾಗಿ ತಿರಸ್ಕರಿಸಿದ್ದಾರೆ.
***
‘‘ಒಮ್ಮೆ ಮುಗಿದು ಹೋಗಲಿ’’ ಎಂಬ ಪ್ರಾಮಾಣಿಕ ಆಸೆಯಿಂದ ಕಳೆದ ಎರಡು ದಿನಗಳಿಂದ ನಾನು ನನ್ನ ಕೆಲವು ಹಿಂದೂ ಮತ್ತು ಮುಸ್ಲಿಮ್ ಹೆಸರುಗಳನ್ನು ಇಟ್ಟುಕೊಂಡಿರುವ ಗೆಳೆಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದೆ. ‘‘ಒಮ್ಮೆ ಮುಗಿದು ಹೋಗಲಿ’’ ಎಂಬ ಪ್ರಾಮಾಣಿಕ ಆಸೆಯಿಂದ ಹಿಂದೂ ಹೆಸರಿರುವ ಗೆಳೆಯರೆಲ್ಲ ಖೇಹರ್ ಸಲಹೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದರೆ, ‘‘ಒಮ್ಮೆ ಮುಗಿದು ಹೋಗಲಿ’’ ಎಂಬ ಪ್ರಾಮಾಣಿಕ ಆಸೆಯಿರುವ ಮುಸ್ಲಿಮ್ ಹೆಸರಿರುವ ಕೆಲವು ಗೆಳೆಯರು, ಅದೆಲ್ಲ ಸರಿ ಮಾರಾಯಾ.., ಈ ‘‘ಸ್ವಲ್ಪ ಬಿಡುವ ಮತ್ತು ಸ್ವಲ್ಪಪಡೆಯುವ’’ ಎಂದರೇನು ಎಂದು ಮರು ಪ್ರಶ್ನೆ ಹಾಕಿದ್ದರು. ‘‘ಬಿಡುವುದು ಎಂದರೆ, ಲಭ್ಯವಿರುವ ದಾಖಲೆಗಳಂತೆ ಮಸೀದಿಯ ಒಡೆತನದಲ್ಲಿರುವ ಪಟ್ಟಾ ಜಮೀನನ್ನು ಬಿಟ್ಟುಕೊಡುವುದು ಮತ್ತು ಪಡೆಯುವುದು ಎಂದರೆ, ಈ ದೇಶದ ಬಹುಸಂಖ್ಯಾತರ ಪ್ರೀತಿ ವಿಶ್ವಾಸಗಳನ್ನು ಅಲ್ಸಂಖ್ಯಾತರು ಪಡೆಯುವುದು’’ ಎಂದೆ. ‘‘ಸ್ವಲ್ಪವಿವರಿಸು’’ ಎಂದರು. ವಿವರಿಸತೊಡಗಿದೆ..
‘‘ದೇಶದ ಕಾನೂನಿನಂತೆ ಆ ಜಾಗವು ಮಸೀದಿಯ ಹೆಸರಲ್ಲಿ ದಾಖಲಾಗಿದ್ದರೂ, ಆದೀಗ ವಿವಾದಿತ ಜಾಗ. ವಿವಾದಿತ ಜಾಗದಲ್ಲಿರುವ ಮಸೀದಿಯಲ್ಲಿ ಮಾಡಿದ ನಮಾಝನ್ನು ಅಲ್ಲಾಹು ಸ್ವೀಕರಿಸುವುದಿಲ್ಲ ಎಂಬುದು ಮುಸ್ಲಿಮ್ ನಂಬಿಕೆ. ಮತ್ತೇಕೆ ಹಟ?’’ ಎಂದೆ.
‘‘ಹೌದಲ್ಲ!’’ ಎಂದರು.
ಉತ್ಸಾಹದಿಂದ ನನ್ನ ಮಾತನ್ನು ಮುಂದುವರಿಸಿ, ‘‘ಬಾಬರಿ ಮಸೀದಿಯು ಕೂಡಾ ಅಜ್ಮೀರ್, ನಿಝಾಮುದ್ದೀನ್, ಮಕ್ಕಾ ಅಥವಾ ಮದೀನಗಳಂತೆ, ಮುಸ್ಲಿಮರ ಧಾರ್ಮಿಕ ಯಾತ್ರಾ ಸ್ಥಳವಾಗಿದ್ದಿರಲಿಲ್ಲ’’ ಎಂದೆ. ನಾನು ಸಿಕ್ಕಿಬಿದ್ದದ್ದೇ ಅಲ್ಲಿ. ‘‘ಕಾಶಿ, ರಾಮೇಶ್ವರಗಳಂತೆ ರಾಮಜನ್ಮಭೂಮಿಯು ಎಂದು ಹಿಂದುಗಳ ಯಾತ್ರಾಸ್ಥಳವಾಗಿತ್ತು?’’ ಅವರ ಮರುಪ್ರಶ್ನೆಗೆ ಉತ್ತರಿಸಲು ತಡವರಿಸಿದೆ. ಯೋಚಿಸಿ ಹೇಳುತ್ತೇನೆ ಎಂದೆ.
***
‘ಒಮ್ಮೆ ಮುಗಿದು ಹೋಗಲಿ’ ಎಂದು ಪ್ರಾಮಾಣಿಕವಾಗಿ ಬಯಸುವ ಹಿಂದೂ ಹೆಸರಿಟ್ಟುಕೊಂಡಿರುವ ಮತ್ತೊಬ್ಬರು ‘ಕುತೂಹಲದಿಂದ’ ಒಂದು ಪ್ರಶ್ನೆ ಕೇಳಿದರು, ‘‘ಸಂಧಾನದ ಮಧ್ಯಸ್ಥಿಕೆ ವಹಿಸಿ ತೀರ್ಮಾನ ಹೇಳಲು ಸಿದ್ಧರಿರುವ ಸನ್ಮಾನ್ಯ ಖೇಹರ್ ಸರ್ ಅವರು, ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠದಲ್ಲಿ ಕುಳಿತೇ ತಮ್ಮ ತೀರ್ಮಾನ ಹೇಳಬಹುದಲ್ಲ?’’
‘‘ಹೇಳಬಹುದು; ಆದರೆ, ನ್ಯಾಯಾಲಯವು ಬಹುಜನರ ನಂಬಿಕೆ ಮತ್ತು ಭಾವನೆಗಳ ಆಧಾರದಲ್ಲಿ ತೀರ್ಪು ಕೊಡುವುದಿಲ್ಲ. ಅದು ತನ್ನೆದುರು ಸಲ್ಲಿಸಲಾಗಿರುವ ಲಿಖಿತ ದಾಖಲೆಗಳ ಆಧಾರದಲ್ಲಷ್ಟೇ ತೀರ್ಪು ಕೊಡಬೇಕಾಗುತ್ತದೆ.’’
‘‘ಕೊಟ್ಟರೇನಾಗುತ್ತದೆ?’’ ಅವರಿಗೆ ಎಲ್ಲದರಲ್ಲೂ ಅವಸರ.
‘‘ಅಯ್ಯಯ್ಯೋ..! ರೊಚ್ಚಿಗೆದ್ದಾರು..’’ ‘‘ಯಾರು?’’
ಉತ್ತರಿಸಬೇಕು ಎನ್ನುವಷ್ಟರಲ್ಲಿ, ‘ಕಾಲ್ ಡ್ರಾಪ್’ ಆಯಿತು.
***
‘‘ಒಮ್ಮೆ ಮುಗಿದು ಹೋಗಲಿ’’ ಎಂದು ಪ್ರಾಮಾಣಿಕವಾಗಿ ಬಯಸುವ ಮುಸ್ಲಿಮ್ ಹೆಸರಿಟ್ಟುಕೊಂಡಿರುವ ಮತ್ತೊಬ್ಬರು ಖಡಕ್ಕಾದ ಪರಿಹಾರ ಹೇಳಿದರು.
‘‘ನಮ್ಮ ದೇಶಕ್ಕೆ ಇಸ್ಲಾಮ್ ಧರ್ಮ ಕಾಲಿಡುವ ಮೊದಲು ಅಂದರೆ, ಸುಮಾರು 700 ವರ್ಷಗಳ ಹಿಂದೆ ಅಲ್ಲಿ ಯಾವುದೇ ಮಸೀದಿ ಇದ್ದಿರಲು ಸಾಧ್ಯವಿಲ್ಲ. ಆದ್ದರಿಂದ, ಆ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಹಿಂದೊಮ್ಮೆ ರಾಮಮಂದಿರ ಇತ್ತು ಎಂಬ ವಾದಕ್ಕೆ ಲಿಖಿತ ದಾಖಲೆಗಳಿಲ್ಲವಾದರೂ, ಬಹುಸಂಖ್ಯಾತರ ನಂಬಿಕೆಯನ್ನು ಅಲ್ಪಸಂಖ್ಯಾತರಾದ ನಾವು, ‘ಒಮ್ಮೆ ಮುಗಿದುಹೋಗಲಿ’ ಎಂಬ ಕಾರಣದಿಂದ ಮನ್ನಿಸೋಣ. ಖೇಹರ್ ಸಾಹೇಬರ ಸಲಹೆಗೂ ಗೌರವ ಕೊಡೋಣ.’’ ‘‘ಅಲಹಾಬಾದ್ ಕೋರ್ಟ್ ಹೇಳಿದಂತೆ ಆ 2. 77 ಎಕರೆ ಜಾಗವನ್ನು ಮೂರು ಪಾಲು ಮಾಡುವುದೂ ಬೇಡ. ಸುಬ್ರಹ್ಮಣ್ಯ ಸ್ವಾಮಿಯವರ ಸಲಹೆಯಂತೆ ಸರಯೂ ನದಿಯ ಮತ್ತೊಂದು ಪಕ್ಕದಲ್ಲಿ ಹೊಸ ಮಸೀದಿಯೊಂದನ್ನು ಕಟ್ಟಿಕೊಳ್ಳುವುದೂ ಬೇಡ. ಸರಕಾರೀ ದಾಖಲೆ (RTC ) ಯಂತೆ, ಮಸೀದಿಯ ಖಾತೆಯಲ್ಲಿರುವ ಆ ಜಮೀನನ್ನು ಈ ದೇಶದ ಮುಸ್ಲಿಮರೆಲ್ಲ ಸೇರಿ, ಒಮ್ಮತದಿಂದ ‘ರಾಮ ಮಂದಿರ’ ಕಟ್ಟಲು ಬಿಟ್ಟುಕೊಟ್ಟು, ಹಿಂದೂಬಾಂಧವರ ಆಸೆಯನ್ನು ಈಡೇರಿಸೋಣ.’’ ‘‘ಅಂತೆಯೇ, ಮಸೀದಿ ಕೆಡವಲು ಕಾರಣಕರ್ತರು ಎಂಬ ಅರೋಪ ಹೊತ್ತುಕೊಂಡು ಕೋರ್ಟು ಕಚೇರಿ ಅಲೆಯುತ್ತಿರುವ ಎಲ್ಲ ಹಿರಿಯ ಹಿಂದೂ ನಾಯಕರ ತಪ್ಪುಗಳನ್ನೂ ಮನ್ನಿಸೋಣ. ಅವರೆಲ್ಲರ ವಿರುದ್ಧವಿರುವ ಎಲ್ಲ ಕೇಸುಗಳನ್ನೂ ಖುಲಾಸೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ವಿನಂತಿಸೋಣ. ಎಲ್ಲ ಒಮ್ಮೆ ಮುಗಿದು ಹೋಗಲಿ. ಏನಂತೀರಿ?’’
‘‘ನನ್ನ ಅಭಿಪ್ರಾಯವೂ ಅದುವೆ’’ ಎಂದೆ. ಅಷ್ಟರಲ್ಲಿ, ಹಿಂದೂ ಹೆಸರಿರುವ ಮತ್ತೊಬ್ಬರು ಎರಡನೆಯ ಬಾರಿ ಫೋನ್ ಮಾಡಿದ್ದರು.
‘‘ಆಗ ಹೇಳಲು ಮರೆತಿದ್ದೆ. ‘ಒಮ್ಮೆ ಮುಗಿದು ಹೋಗಲಿ’ ಎಂಬ ಪ್ರಾಮಾಣಿಕ ಆಸೆಯಿಂದ ಮುಸ್ಲಿಮ ರೆಲ್ಲ ಜನಮತ ರೂಪಿಸಿ, ಮಸೀದಿಯ ಹೆಸರಲ್ಲಿರುವ ಜಾಗವನ್ನು ಮಂದಿರ ಕಟ್ಟಲು ದಾನ ಕೊಟ್ಟೇಬಿಟ್ಟರು ಅಂತ ಇಟ್ಟುಕೊಳ್ಳೋಣ. ಮಂದಿರ ನಿರ್ಮಾಣವಾದ ಬಳಿಕ, ‘ಕಾಶಿ’ ಮತ್ತು ‘ಮಥುರಾ’ಗಳನ್ನೂ ಇದೇ ರೀತಿಯಲ್ಲಿ ಬಿಟ್ಟುಕೊಡಿ ಎಂದು ತಮ್ಮ ಹಳೆಯ ರಾಗವನ್ನು ಹಿಂದೂಗಳು ಹೊಸದಾಗಿ ಮತ್ತೆ ಶುರು ಮಾಡಿದರೆ ಏನು ಮಾಡುತ್ತೀರಿ?’’ ಎಂದು ಪ್ರಶ್ನಿಸಿದರು.
‘‘ಇಲ್ಲ. ಇಲ್ಲ. ಅವರಿಗೇನು ಮಂಡೆಪೆಟ್ಟಾಗಿದೆಯಾ? ಶ್ರೀರಾಮಚಂದ್ರನಾಣೆಗೂ ಹಿಂದೂಗಳು ಈಗ ಹಾಗೆಲ್ಲ ಮಾಡಲಾರರು. ‘ಒಮ್ಮೆ ಮುಗಿದು ಹೋಗಲಿ’ ಎಂಬ ಆಸೆ ಅವರಿಗೂ ಇರುವುದಿಲ್ಲವೆ?’’ ಎಂದೆ.
‘‘ನಿಮ್ಮನ್ನು ಶ್ರೀರಾಮಚಂದ್ರನೂ ಕಾಪಾಡಲಾರ!’’ ಎಂದವರು ಫೋನ್ ಕಟ್ ಮಾಡಿದರು.