ಆದಿತ್ಯನಾಥ್ ಆಯ್ಕೆ: ವಿದೇಶಿ ಮಾಧ್ಯಮಗಳಲ್ಲಿನ ಪರ-ವಿರೋಧ

ಆದಿತ್ಯನಾಥ್, ‘‘ಹಿಂದುತ್ವದ ಬೆಂಕಿಚೆಂಡು’’ ಎಂದು ಬಣ್ಣಿಸಿರುವ ಬಹುತೇಕ ವಿಶ್ಲೇಷಣೆಗಳು, ಅವರ ಮುಸ್ಲಿಂ ವಿರೋಧಿ ವಾಕ್‌ಚಾತುರ್ಯ, ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂ ನಿಷೇಧ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಹಾಗೂ ಅವರನ್ನು ನೇಮಕ ಮಾಡುವ ಮೂಲಕ ಯಾವ ಸಂದೇಶ ರವಾನೆಯಾಗಿದೆ ಎಂಬ ಅಂಶಗಳ ಮೇಲೆ ಕೇಂದ್ರಿತವಾಗಿವೆ.
ಉತ್ತರಪ್ರದೇಶ ಒಂದು ದೇಶವಾಗಿದ್ದರೆ, ಅದು ವಿಶ್ವದ ನಾಲ್ಕನೆ ದೊಡ್ಡ ಪ್ರಜಾಪ್ರಭುತ್ವ ದೇಶವಾಗುತ್ತಿತ್ತು ಎಂದು ಹೇಳುವುದಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಫಲಿತಾಂಶ ಈ ಕಾರಣಕ್ಕಾಗಿಯೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡಾ ಮಹತ್ವ ಪಡೆದಿತ್ತು. ಯೋಗಿ ಆದಿತ್ಯನಾಥ್ ಅವರನ್ನು ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆದಿತ್ಯನಾಥ್, ‘‘ಹಿಂದುತ್ವದ ಬೆಂಕಿಚೆಂಡು’’ ಎಂದು ಬಣ್ಣಿಸಿರುವ ಬಹುತೇಕ ವಿಶ್ಲೇಷಣೆಗಳು, ಅವರ ಮುಸ್ಲಿಂ ವಿರೋಧಿ ವಾಕ್‌ಚಾತುರ್ಯ, ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂ ನಿಷೇಧ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಹಾಗೂ ಅವರನ್ನು ನೇಮಕ ಮಾಡುವ ಮೂಲಕ ಯಾವ ಸಂದೇಶ ರವಾನೆಯಾಗಿದೆ ಎಂಬ ಅಂಶಗಳ ಮೇಲೆ ಕೇಂದ್ರಿತವಾಗಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಯಾವ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂಬ ಇಣುಕು ನೋಟ ಇಲ್ಲಿದೆ.
ಗಾರ್ಡಿಯನ್

ಬ್ರಿಟಿಷ್ ದೈನಿಕದ ಸಂಪಾದಕೀಯದಲ್ಲಿ ಆದಿತ್ಯನಾಥ್ ಅವರ ಆಯ್ಕೆಯನ್ನು ‘‘ಮುಸ್ಲಿಂ ವಿರೋಧಿ ಧರ್ಮಾಂಧತೆಯ ಜಯ’’ ಎಂದು ಬಣ್ಣಿಸಲಾಗಿದೆ. ಈ ಸಂಪಾದಕೀಯ ಹೀಗೆ ಆರಂಭವಾಗುತ್ತದೆ: ‘‘ಕಳೆದ ವಾರ ಹಾಲೆಂಡ್‌ನ ಅತಿದೊಡ್ಡ ಪಕ್ಷದ ಮುಖ್ಯಸ್ಥರಾಗಿ ಇಸ್ಲಮೊಫೋನಿಯಾ ಪ್ರತಿಪಾದಕ ಗ್ರೀಟ್ ವೈಲ್ಡರ್ಸ್ ಆಯ್ಕೆಯಾಗಲು ವಿಫಲವಾಗುವುದರೊಂದಿಗೆ ವಿಶ್ವ ನಿರಾಳವಾಗಿ ಉಸಿರಾಡುವಂತಾಗಿದೆ. ಆದರೆ ಧರ್ಮಾಂಧತೆಯ ಆಯ್ಕೆಯ ನೆಮ್ಮದಿಯ ನಿಟ್ಟುಸಿರು ದೀರ್ಘಕಾಲದ ವರೆಗೆ ಉಳಿಯಲಿಲ್ಲ. ರವಿವಾರ ಮತ್ತಷ್ಟು ಪ್ರಖರ ಮುಸ್ಲಿಂ ತೀವ್ರಗಾಮಿ ಈ ವರ್ಷದ ಅತಿದೊಡ್ಡ ಚುನಾವಣೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ’’
‘‘ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಹೆಚ್ಚು ತಾರ್ಕಿಕವಾಗುತ್ತದೆ ಎಂಬ ವಾದ ಇಲ್ಲಿ ಸೂಕ್ತವೆನಿಸುವುದಿಲ್ಲ. ಆದಿತ್ಯನಾಥ್ ಇದೀಗ ಪ್ರಭಾವಿ ಮುಖಂಡ. ಭಾರತದಲ್ಲಿ ಅಲ್ಪಸಂಖ್ಯಾತರು ಕೇವಲ ಬಹುಸಂಖ್ಯಾತರ ಮರ್ಜಿಯಲ್ಲಿ ಬದುಕುತ್ತಿದ್ದಾರೆ ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ನಿಯಂತ್ರಣ ರೇಖೆಯನ್ನು ದಾಟಿದರೆ ಅಲ್ಲಿ ರಕ್ತ ಹರಿಯುತ್ತದೆ’’ ಎಂದು ಸಂಪಾದಕೀಯ ಬಣ್ಣಿಸಿದೆ.
ಬಿಬಿಸಿ

ಬಿಬಿಸಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಏಶ್ಯಾ ವಿಶ್ಲೇಷಕ ಅಂಬರಸನ್ ಎತಿರಾಜನ್ ಹೀಗೆ ಬರೆದಿದ್ದಾರೆ. ‘‘ಭಾರತದ ಉದಾರವಾದಿಗಳು ಆದಿತ್ಯನಾಥ್ ಏಕೆ ಎಂದು ಪ್ರಶ್ನಿಸುತ್ತಾರೆ. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಯಾಕಾಗಬಾರದು ಎಂದು ಪ್ರಶ್ನೆ ಎಸೆಯುತ್ತಾರೆ’’
‘‘ಆದರೆ ಆದಿತ್ಯನಾಥ್ ಅವರು ವಿಸ್ತೃತವಾಗಿ, ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ ಧ್ರುವೀಕರಣದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹಿಂದೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸುವ ಚುನಾವಣಾ ಸೂತ್ರ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಪಕ್ಷವನ್ನು ದಡ ಸೇರಿಸುತ್ತದೆ ಎಂಬ ನಂಬಿಕೆ ಬಿಜೆಪಿ ಮುಖಂಡರದ್ದು.
ಇದು ಎರಡು ಅಲುಗಿನ ತಂತ್ರ. ಇದು ಯಶಸ್ವಿಯಾಗಲೂಬಹುದು; ಇಲ್ಲವೇ ಹತಾಶ ವಿರೋಧ ಪಕ್ಷಗಳು ಒಗ್ಗೂಡುವಂತೆ ಹುರಿದುಂಬಿಸಲೂಬಹುದು. ಹಿಂದೂ ರಾಷ್ಟ್ರೀಯವಾದಿಗಳ ಉದಯ ಈಗಾಗಲೇ ಭಾರತದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಕಳವಳಕ್ಕೆ ಕಾರಣವಾಗಿದೆ. ಆದಿತ್ಯನಾಥ್ ಅವರ ಆಯ್ಕೆಯಿಂದ ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.’’
ದ ನ್ಯೂಯಾರ್ಕ್ ಟೈಮ್ಸ್

ದ ನ್ಯೂಯಾರ್ಕ್ ಟೈಮ್ಸ್‌ನ ಎಲೆನ್ ಬರ್ರಿ ಅವರು ಆದಿತ್ಯನಾಥ್ ನೇಮಕವನ್ನು ಮೋದಿ ಸರಕಾರದ ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ. ‘‘ಮುಸ್ಲಿಂ ವಿರೋಧಿ ಭಾವನೆಗಳನ್ನು ಪದೇ ಪದೇ ಕೆದಕುತ್ತಾ ಬಂದ ಆರೋಪ ಎದುರಿಸುತ್ತಿರುವ ಆದಿತ್ಯನಾಥ್ ಅವರನ್ನು ನೇಮಕ ಮಾಡಿರುವುದು, ಮೋದಿಯವರನ್ನು ಅಭಿವೃದ್ಧಿಪರ ಹಾಗೂ ಜಾಗತಿಕ ಮುತ್ಸದ್ಧಿ ಎಂದು ಪರಿಗಣಿಸುತ್ತಾ ಬಂದ ರಾಜಕೀಯ ವೀಕ್ಷಕರ ಆಘಾತಕ್ಕೆ ಕಾರಣವಾಗಿದೆ’’ ಎಂದು ವಿವರಿಸಿದ್ದಾರೆ.
ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಅವರ ಹೇಳಿಕೆಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ: ‘‘ಈ ನೇಮಕದ ಮೂಲಕ ಮೋದಿ ಬಹುಸಂಖ್ಯಾತ ಪರ ದೃಷ್ಟಿಕೋನವನ್ನು ಅನಾವರಣಗೊಳಿಸಿದ್ದಾರೆ.’’
ದ ವಾಶಿಂಗ್ಟನ್ ಪೋಸ್ಟ್

‘‘ರಾಜ್ಯ ನಾಯಕತ್ವಕ್ಕಾಗಿ ಮೋದಿ, ಮುಸ್ಲಿಂ ಹತ್ಯೆಯನ್ನು ಪ್ರತಿಪಾದಿಸಿದ್ದ ಫೈರ್‌ಬ್ರಾಂಡ್ ರಾಜಕಾರಣಿಯನ್ನು ಆಯ್ಕೆ ಮಾಡಿದ್ದಾರೆ ಎಂದು ‘ದ ವಾಶಿಂಗ್ಟನ್ ಪೋಸ್ಟ್’ ಶೀರ್ಷಿಕೆ ಹೇಳಿದೆ.
‘‘ತೀರಾ ಹಿಂದುಳಿದ ಉತ್ತರ ಪ್ರದೇಶದಲ್ಲಿ ಪ್ರಚೋದನಾಕಾರಿ ಭಾಷಣದ ಮೂಲಕ ಅವರು ಕೇಸರಿ ಚಿಂತನೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದವರು. ಮುಸ್ಲಿಮರನ್ನು ಹತ್ಯೆ ಮಾಡುವಂತೆಯೂ ಅವರು ಹಿಂದೂಗಳನ್ನು ಕೆರಳಿಸಿದ್ದಾರೆ’’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘‘ಅಚ್ಚರಿಯ ನಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ, ಉತ್ತರ ಪ್ರದೇಶದ ನಾಯಕರಾಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದೆ. ಈ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೋದಿ, 2019ರ ಸಾರ್ವತ್ರಿಕ ಚುನಾವಣೆಗೆ ಹಿಂದೂ ಮತದ ತಳಹದಿಯನ್ನು ಕ್ರೋಡೀಕರಿಸುವತ್ತ ಮುನ್ನಡೆದಿದ್ದಾರೆ’’ ಎಂದು ವಿವರಿಸಿದೆ.
ಅಲ್ ಜಝೀರಾ

‘‘ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದು 2019ರಲ್ಲಿ ಬಿಜೆಪಿ ವಿಜಯಕ್ಕೆ ಪೂರಕವಾಗುತ್ತದೆಯೇ ಅಥವಾ ಅವರಿಗೇ ತಿರುಗುಬಾಣವಾಗುತ್ತದೆಯೇ ಎಂದು ಕಾದುನೋಡಬೇಕು’’ ಎಂಬ ಅರ್ಥದ ವರದಿಯನ್ನು ಅಲ್ ಜಝೀರಾ ಪ್ರಕಟಿಸಿದೆ. ಆದಿತ್ಯನಾಥ್ ಅವರು ಧಾರ್ಮಿಕ ಮತಾಂತರ, ಅಂತರ್ಧ ರ್ಮದ ವಿವಾಹದಂಥ ವಿಚಾರಗಳ ಬಗೆಗಿನ ವಿವಾದದ ಬೆಂಕಿಗೆ ತುಪ್ಪಸುರಿಯುತ್ತಲೇ ಬಂದವರು. ಹಲವು ಗಲಭೆ, ಕೊಲೆ ಯತ್ನ, ಸ್ಮಶಾನಗಳಿಗೆ ಅಕ್ರಮ ಪ್ರವೇಶದಂಥ ಪ್ರಕರಣಗಳಲ್ಲಿ ಇವರ ವಿರುದ್ಧ ದೂರುಗಳಿವೆ.
ಸಾಮಾನ್ಯವಾಗಿ ಧಾರ್ಮಿಕ ಹಾಗೂ ಜಾತಿ ಆಧಾರದಲ್ಲಿ ವಿಭಜನೆಯಾಗುತ್ತಾ ಬಂದಿದ್ದ ಉತ್ತರ ಪ್ರದೇಶದಲ್ಲಿ ಪ್ರಚಾರದುದ್ದಕ್ಕೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಮೋದಿ ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ಇದೀಗ ಹಿಂದೂ ಸನ್ಯಾಸಿ-ರಾಜಕಾರಣಿಯಾದ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕೃಪೆ: hindustantimes







