ಜಾತಿ ಬೇಡ, ಧರ್ಮ ಬೇಡ ಆಯ್ಕೆ ಬೇಕು!

ಯಾವುದೇ ಧರ್ಮವನ್ನು ಪಾಲಿಸದ ವ್ಯಕ್ತಿಗಳಿಗಾಗಿ ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಯನ್ನೂ ನೀಡಬೇಕೆಂದು ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿ ಈ ದಂಪತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ವಿಶೇಷವೆಂದರೆ ಹೈದರಾಬಾದ್ ಹೈಕೋರ್ಟ್ ಈ ಬಗ್ಗೆ ಎರಡು ವಾರಗಳಲ್ಲಿ ಉತ್ತರ ನೀಡಬೇಕೆಂದು ಈ ಮೂರು ಸರಕಾರಗಳಿಗೆ ಸೂಚಿಸಿದೆ.
ಹಿಂದೂ, ಇಸ್ಲಾಂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಅಥವಾ ಇತರೆ -ಇದು ಧರ್ಮಗಳ ಬಗ್ಗೆ ಇರುವ ಆಯ್ಕೆಗಳು. ಇತರೆ ಎನ್ನುವುದು ಮೇಲೆ ಹೇಳಿರದ ಯಾವುದೇ ಧರ್ಮವೊಂದನ್ನು ಅನುಸರಿಸುತ್ತಿದ್ದರೆ ನಮೂದಿಸಬಹುದು. ಆದರೆ, ಯಾವುದೇ ಧರ್ಮವನ್ನು ಪಾಲಿಸದಿದ್ದರೆ, ಅವರೇನು ಬರೆಯಬೇಕು?-ಹೀಗೊಂದು ಪ್ರಶ್ನೆಯನ್ನು ಎತ್ತಿದವರು ಹೈದರಾಬಾದಿನ ರಾಮಕೃಷ್ಣ ರಾವ್ ಹಾಗೂ ಕ್ಲಾರೆನ್ಸ್ ಕೃಪಾಲಿನಿ ದಂಪತಿ.
ಎಲ್ಲಾ ಸರಕಾರಿ ಅರ್ಜಿಗಳಲ್ಲಿ, ಅದು ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲಾಗಿರಬಹುದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಿರಬಹುದು ಅಥವಾ ಪಾಸ್‌ಪೋರ್ಟ್ ಮಾಡಿಸಲಿರಬಹುದು, ಅದರಲ್ಲಿ ಧರ್ಮ/ಜಾತಿ ಎಂಬಲ್ಲಿ ವಿವಿಧ ಧರ್ಮಗಳಲ್ಲಿ ಒಂದನ್ನು ನಮೂದಿಸುವುದು ಕಡ್ಡಾಯ. ಆದರೆ, ಯಾವುದೇ ಧರ್ಮವನ್ನು ಪಾಲಿಸದ ವ್ಯಕ್ತಿಗಳಿಗಾಗಿ ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಯನ್ನೂ ನೀಡಬೇಕೆಂದು ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿ ಈ ದಂಪತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ವಿಶೇಷವೆಂದರೆ ಹೈದರಾಬಾದ್ ಹೈಕೋರ್ಟ್ ಈ ಬಗ್ಗೆ ಎರಡು ವಾರಗಳಲ್ಲಿ ಉತ್ತರ ನೀಡಬೇಕೆಂದು ಈ ಮೂರು ಸರಕಾರಗಳಿಗೆ ಸೂಚಿಸಿದೆ.
ಕ್ರೈಸ್ತ ಮತೀಯರಾಗಿದ್ದ ಕ್ಲಾರೆನ್ಸ್ ಮತ್ತು ಯಾವುದೇ ನಂಬಿಕೆಯನ್ನು ಪಾಲಿಸದೆ ಇದ್ದ ರಾಮಕೃಷ್ಣ ರಾವ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಮಕ್ಕಳಾದಾಗ, ಅವರನ್ನು ಯಾವುದೇ ಧರ್ಮಕ್ಕೆ ಸೀಮಿತಗೊಳಿಸದೆ ಜಾತ್ಯತೀತ ಮತ್ತು ವೈಚಾರಿಕ ವ್ಯಕ್ತಿಗಳಾಗಿ ಬೆಳೆಸಲು ಪಣತೊಟ್ಟವರು. ಆದರೆ, ಅದಕ್ಕೆ ಪದೇಪದೇ ಎದುರಾಗುತ್ತಿದ್ದ ಕಾನೂನು ತೊಡಕುಗಳಿಂದ ಬೇಸತ್ತು ದಂಪತಿಯು ಈ ಒಂದು ಧರ್ಮ/ಜಾತಿ ಇಲ್ಲ ಎಂಬ ಆಯ್ಕೆಗಾಗಿ ಹೋರಾಟಕ್ಕೆ ಇಳಿದಿದ್ದಾರೆ.
2010ನೆ ವರ್ಷದಲ್ಲಿ ತಮ್ಮ ಕಿರಿಮಗಳು ಸಹಜಾಳನ್ನು ಶಾಲೆಗೆ ದಾಖಲುಗೊಳಿಸುವ ಸಂದರ್ಭದಲ್ಲಿ, ಮಗುವಿನ ತಂದೆಯ ಅಥವಾ ತಾಯಿಯ ಧರ್ಮವನ್ನು ನಮೂದಿಸಲು ಶಾಲಾ ದಾಖಲು ಮಾಡುವ ಸಿಬ್ಬಂದಿ ಸೂಚಿಸುತ್ತಾರೆ. ಇದು ಮುಂದಕ್ಕೆ ಮಗುವಿನ ವರ್ಗಾವಣೆ ಪ್ರಮಾಣಪತ್ರವನ್ನು ನೀಡಲು ಆವಶ್ಯಕ ಎಂದೂ ತಿಳಿಸುತ್ತಾರೆ. ಆದರೆ, ದಂಪತಿಯು ಈ ಬಗ್ಗೆ ಶಾಲಾ ಸಿಬ್ಬಂದಿಯ ಜೊತೆ ತಮ್ಮ ವಿಭಿನ್ನ ನಂಬಿಕೆಗಳ ಬಗ್ಗೆ ತಿಳಿಸುತ್ತಾರೆ. ಆದರೂ ಶಾಲೆಯ ದಾಖಲು ಪ್ರಕ್ರಿಯೆಯಲ್ಲಿ ಅದು ಅಗತ್ಯ ಎಂದು ಪಟ್ಟು ಹಿಡಿದಾಗ ಈ ದಂಪತಿಯು ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಹಾಗೂ ಆಂಧ್ರದ ಮಾನವ ಹಕ್ಕು ಆಯೋಗವನ್ನು ಸಂಪರ್ಕಿಸುತ್ತಾರೆ. ಆದರೆ, ಫಲಿತಾಂಶ ಶೂನ್ಯ. ಸಮಯದ ಅಭಾವ ಹಾಗೂ ಮಗಳ ವಿದ್ಯಾಭ್ಯಾಸದ ಕಾರಣದಿಂದ ಧರ್ಮ ನಮೂದಿಸುವ ಜಾಗದಲ್ಲಿ ತಮ್ಮ ಧರ್ಮವನ್ನು ನಮೂದಿಸುತ್ತಾರೆ. ಏಳು ವರ್ಷಗಳ ಬಳಿಕ ಅಂದರೆ ಈ ವರ್ಷ ತಮ್ಮ ಹಿರಿಮಗಳು 10ನೆ ತರಗತಿ ಪರೀಕ್ಷೆಗೆ ಹಾಜರಾಗಲು ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೂ ವಿವಿಧ ಧರ್ಮಗಳ ಆಯ್ಕೆ ಇತ್ತು. ಜೊತೆಗೆ ಇತರೆ ಆಯ್ಕೆಯೂ ಇತ್ತು. ಆದರೆ, ಯಾವುದೇ ಧರ್ಮವನ್ನು ಪಾಲಿಸದ ನಮಗೆ ಆಯ್ಕೆ ಯಾಕಿಲ್ಲ ಎಂದು ರಾವ್ ಪ್ರಶ್ನಿಸುತ್ತಾರೆ. ಆದರೆ, ಈ ಬಗ್ಗೆ ಸಂಬಂಧಿಸಿದವರನ್ನು ಪ್ರಶ್ನಿಸಿದಾಗ ಯಾವುದೇ ಸೂಕ್ತ ಪರಿಹಾರ ಲಭಿಸಲಿಲ್ಲ.
ಧರ್ಮ/ಜಾತಿ ನಮೂದಿಸಲು ಇಷ್ಟವಿಲ್ಲದವರು ಇರಲಾರರೇ? ಎಂಬ ಬಗ್ಗೆ ಕುತೂಹಲಗೊಂಡ ರಾವ್, ಭಾರತೀಯ ಜನಗಣತಿಯ ಅಂಕಿಅಂಶಗಳಿರುವ ಪ್ರಾಧಿಕಾರದ ಮಹಾನಿರ್ದೇಶಕರಲ್ಲಿ ಮಾಹಿತಿ ಕೇಳಿದರು. 2011ರ ಜನಗಣತಿಯ ಪ್ರಕಾರ 28.7ಲಕ್ಷ ಜನರು ತಮ್ಮ ಧರ್ಮವನ್ನು ನಮೂದಿಸಲು ಇಷ್ಟಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಯಿತು. ಈ ಬಗ್ಗೆ ಮಾತನಾಡುವ ರಾವ್, ಈ 28.7ಲಕ್ಷ ಜನರು ನನ್ನ ಆಯ್ಕೆಯನ್ನೇ ಪುರಸ್ಕರಿಸುತ್ತಾರೆ. ನಾನು ಧಾರ್ಮಿಕ ಮತ್ತು ಜಾತಿ ಆಧಾರಿತ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆದರೆ, ತಮ್ಮ ಧರ್ಮ/ಜಾತಿಯನ್ನು ಗುರುತಿಸಲು ಇಷ್ಟಪಡದವರಿಗೆ ಆ ಆಯ್ಕೆಯೂ ಇರಲಿ. ಧರ್ಮ/ಜಾತಿ ಆಯ್ಕೆಯಂತೆ ಧರ್ಮವಿಲ್ಲ/ಜಾತಿಯಿಲ್ಲ ಆಯ್ಕೆಯೂ ಬೇಕು ಎಂಬುದು ನನ್ನ ನಿಲುವು.
ನಾನು ಯಾವುದೇ ನಂಬಿಕೆಯನ್ನು ಪಾಲಿಸುತ್ತಿಲ್ಲ. ನನ್ನ ಪತ್ನಿ ಇಂದಿಗೂ ಕ್ರೈಸ್ತ ಧರ್ಮವನ್ನು ಪಾಲಿಸುತ್ತಾಳೆ, ನನ್ನ ಈ ಹೋರಾಟಕ್ಕೆ ಕೈಜೋಡಿಸಿದ್ದಾಳೆ. ನಮ್ಮ ಸಮಾಜ, ಕಾನೂನುಗಳೂ ಇದೇ ರೀತಿ ಅವಕಾಶ ನೀಡಬೇಕಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂಬುದು ಧರ್ಮವನ್ನು ಪಾಲಿಸಲು ಹಾಗೂ ಯಾವುದೇ ಧರ್ಮವನ್ನು ಪಾಲಿಸದಿರಲು ಬೇಕಾದ ಹಕ್ಕಾಗಬೇಕಿದೆ ಎನ್ನುತ್ತಾರೆ. ಇದಕ್ಕಾಗಿ ಆನ್‌ಲೈನ್ ಪಿಟಿಶನ್ ಕೂಡಾ ತಯಾರಿಸಿರುವ ರಾವ್, ಅದಕ್ಕೆ ಸಾರ್ವಜನಿಕರ ಬೆಂಬಲವನ್ನೂ ಕೋರಿದ್ದಾರೆ.
ಕೃಪೆ : www.thebetterindia.com







