ಕನಸುಗಳಿಗೆ ರೆಕ್ಕೆಗಳಿವೆ
ಮಲಪ್ಪುರಂನ ರಾಬಿಯಾರ ಸಾಹಸಗಾಥೆ

ಸಾಕ್ಷರತಾ ಆಂದೋಲನ ಆರಂಭಿಸಿದ ಆರು ತಿಂಗಳಿಗೇ ಬಹುಪಾಲು ತಿರೂರಂಗಾಡಿಯ ಜನತೆ ಆಕೆಯ ತರಗತಿಯಲ್ಲಿದ್ದರು. ತನ್ನ ದೈಹಿಕ ಊನತೆಯ ಹೊರತಾಗಿಯೂ ಅಕ್ಷರ ಕಲಿಸುವಲ್ಲಿನ ಆಕೆಯ ಪ್ರಯತ್ನ ಸ್ಥಳೀಯರ ಹಾಗೂ ಸರಕಾರದ ಗಮನ ಸೆಳೆಯುವಲ್ಲಿ, ಬೆಂಬಲ ಗಳಿಸುವಲ್ಲಿ ಸಫಲವಾಯಿತು.
‘‘ನೀವೊಂದು ಕಾಲನ್ನು ಕಳೆದುಕೊಂಡರೆ ಇನ್ನೊಂದರಲ್ಲಿ ನಿಂತುಕೊಳ್ಳಿ. ಎರಡನ್ನೂ ಕಳೆದುಕೊಂಡರೆ ನಿಮಗೆ ಕೈಯಿದೆಯೆಂದು ನೆನಪಿಸಿಕೊಳ್ಳಿ. ದುರದೃಷ್ಟವಶಾತ್ ಅದನ್ನೂ ಕಳೆದುಕೊಂಡರೆ ನಿಮ್ಮ ಮೆದುಳಿನಿಂದಲೇ ಬದುಕು ಕಟ್ಟಿಕೊಳ್ಳಿ’’ ಹೀಗೆಂದು ಹೇಳುವುದು ಯಾವುದೋ ಎಸಿ ರೂಮಿನಲ್ಲಿ ಕೂತು ಕಾರ್ಪೊರೇಟ್ ಪರ್ಸನಾಲಿಟಿ ಡೆವಲಪ್‌ಮೆಂಟ್ ಟ್ರೈನರ್ ಅಲ್ಲ. ಬದಲಾಗಿ, ಹಲವನ್ನು ಕಳೆದುಕೊಂಡರೂ ಬದುಕಲ್ಲಿ ಇನ್ನೂ ಛಲವಿರಿಸಿ ಇನ್ನೊಬ್ಬರ ಬದುಕನ್ನು ಹಸನಾಗಿಸಲು ಪಣತೊಟ್ಟ ಓರ್ವ ಮಧ್ಯವಯಸ್ಕ ಮಹಿಳೆ. ಸ್ವತಃ ವಿಕಲಚೇತನರಾಗಿರುವ ಈಕೆಯ ಹೆಸರು ಕರಿವೆಪ್ಪಿಲ್ ರಾಬಿಯಾ ಅಥವಾ ಕೆ.ವಿ.ರಾಬಿಯಾ. ಕೇರಳದ ಮುಸ್ಲಿಂ ಬಾಹುಳ್ಯವಿರುವ ಮಲಪ್ಪುರಂ ಜಿಲ್ಲೆಯ ವೆಲ್ಲಿಲಕ್ಕಾಡಿನ ಧೀಮಂತ ಮಹಿಳೆ.
ರಾಬಿಯಾರಿಗೆ ತುಂಬಾ ಎಳವೆಯಲ್ಲಿಯೇ, ಅಂದರೆ, ಶಾಲಾ ದಿನಗಳಲ್ಲಿಯೇ ಪೋಲಿಯೊ ಕಾಯಿಲೆಯಿಂದ ಕಾಲುಗಳು ಬಲಗುಂದಿದ್ದವು. ಆದರೆ, ಬಲಗುಂದಿದ ಕಾಲುಗಳು ಆಕೆಯ ಶಿಕ್ಷಣ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ನಡೆಸಲೇನೂ ಕುಂದು ತರಲಿಲ್ಲ.
ರಾಬಿಯಾರ ಸಾಮಾಜಿಕ ಸಾಹಸಗಾಥೆ ಆರಂಭವಾಗುವುದು 1990ರಿಂದ. ತಾನು ವಾಸವಿರುವ ಸುತ್ತಮುತ್ತಲ ಹಳ್ಳಿಗಳ ಅನಕ್ಷರಸ್ಥ ಜನರಿಗೆ ಸಾಕ್ಷರತಾ ಆಂದೋಲನದಲ್ಲಿ ಅಕ್ಷರ ಕಲಿಸುವ ಮೂಲಕ, ಅದೂ ವಿಭಿನ್ನ ವಯೋಮಾನದವರಿಗೆ. ಆಂದೋಲನ ಆರಂಭಿಸಿದ ಆರು ತಿಂಗಳಿಗೇ ಬಹುಪಾಲು ತಿರೂರಂಗಾಡಿಯ ಜನತೆ ಆಕೆಯ ತರಗತಿಯಲ್ಲಿದ್ದರು. ತನ್ನ ದೈಹಿಕ ಊನತೆಯ ಹೊರತಾಗಿಯೂ ಅಕ್ಷರ ಕಲಿಸುವಲ್ಲಿನ ಆಕೆಯ ಪ್ರಯತ್ನ ಸ್ಥಳೀಯರ ಹಾಗೂ ಸರಕಾರದ ಗಮನ ಸೆಳೆಯುವಲ್ಲಿ, ಬೆಂಬಲ ಗಳಿಸುವಲ್ಲಿ ಸಫಲವಾಯಿತು. 1992ರಲ್ಲಿ ಕೇರಳ ರಾಜ್ಯ ಸರಕಾರದ ಕೆಲವು ಅಧಿಕಾರಿಗಳು ಬಂದು ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. 8 ವರ್ಷದ ಮಗುವಿನಿಂದ 80 ವರ್ಷದ ವೃದ್ಧ ಮಹಿಳೆಯರೂ ಕೂಡಾ ರಾಬಿಯಾರ ವಿದ್ಯಾರ್ಥಿಯಾಗಿದ್ದರು! ಇದರ ಬಗ್ಗೆ ಹೇಳುವ ರಾಬಿಯಾ, ‘‘ತರಗತಿಯಲ್ಲಿ 60-70ರ ವಯೋಮಾನದವರಿರುವುದೇ ಒಂದು ಸ್ಫೂರ್ತಿ. ಜೊತೆಗೆ ನನ್ನ ಅಜ್ಜಿಯೇ ನನ್ನನ್ನು ಟೀಚರ್ ಎಂದು ಕರೆದಾಗ ನನಗೆ ಥ್ರಿಲ್ಲಾಗಿತ್ತು’’ ಎನ್ನುತ್ತಾರೆ.
ತನ್ನ ಊರಿನಲ್ಲಿ ಮೂಲಸೌಕರ್ಯಗಳಿಲ್ಲ ಎಂಬ ಅಹವಾಲಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಕೆಯ ಹಳ್ಳಿಗೆ ಅಗತ್ಯವಿರುವ ರಸ್ತೆ, ವಿದ್ಯುತ್, ದೂರವಾಣಿ ಹಾಗೂ ನೀರಿನ ಸಂಪರ್ಕ ಕಲ್ಪಿಸಿದರು. ವಿಶೇಷವೆಂದರೆ ಆಕೆಯ ಹಳ್ಳಿಗಿರುವ ಒಂದೂವರೆ ಕಿ.ಮೀ. ಉದ್ದದ ರಸ್ತೆಗೆ ‘ಅಕ್ಷರ’ ಎಂದು ಹೆಸರಿಡಲಾಯಿತು.

ಬಳಿಕ ಆಕೆ ‘ಚಲನಂ’ ಎನ್ನುವ ಸ್ವಯಂಸೇವಾ ಸಂಘವನ್ನು ಆರಂಭಿಸುವ ಮೂಲಕ ಕೇರಳದಲ್ಲಿ ಸಾಕ್ಷರತಾ ಆಂದೋಲನಕ್ಕೆ ಒಂದು ಹೊಸ ರೂಪುರೇಷೆಯನ್ನೂ ಬರೆಯುತ್ತಾರೆ. ದೈಹಿಕ ಹಾಗೂ ಮಾನಸಿಕ ವಿಕಲಚೇತನರಿಗಾಗಿ ಆರು ಶಾಲೆಗಳನ್ನೂ ಈ ಸಂಸ್ಥೆ ನಡೆಸುತ್ತಿದೆ. ಜೊತೆಗೆ ಆರೋಗ್ಯ ಅರಿವು, ಮುಂದುವರಿದ ಶಿಕ್ಷಣ ಕಾರ್ಯಕ್ರಮ, ಮಹಿಳೆಯರಿಗೆ ವಿವಿಧ ತರಬೇತಿ, ವಿಕಲಾಂಗರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಅದಲ್ಲದೆ, ವರದಕ್ಷಿಣೆ ವಿರೋಧಿ ಹೋರಾಟ, ಮೌಢ್ಯ ಹಾಗೂ ಕೋಮುವಾದ ವಿರೋಧಿ ಅರಿವು, ಕುಡಿತದ ವಿರೋಧಿ ಅರಿವು ಕಾರ್ಯಕ್ರಮಗಳನ್ನೂ ಇತ್ತೀಚೆಗೆ ನಡೆಸುತ್ತಿದೆ. ಇಷ್ಟಲ್ಲದೆ, ವೆಲ್ಲಿಲಕಾಡುವಿನಲ್ಲಿ ಮಹಿಳೆಯರಿಗಾಗಿ ಕಿರು ಕೈಗಾರಿಕೆ, ಮಹಿಳಾ ಗ್ರಂಥಾಲಯವನ್ನೂ ಚಲನಂ ಸಂಸ್ಥೆ ಹೊಂದಿದೆ. ಅಲ್ಲದೆ, ಮಲಪ್ಪುರಂನ್ನು ಜಿಲ್ಲೆಯನ್ನು ದೇಶದಲ್ಲಿಯೇ ಮೊದಲ ಇ-ಸಾಕ್ಷರ ಜಿಲ್ಲೆಯನ್ನಾಗಿ ಮಾಡುವಲ್ಲಿ ರಾಬಿಯಾರ ಪಾತ್ರ ಹಿರಿದು.
1994ರಲ್ಲಿ ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯದಿಂದ ರಾಷ್ಟ್ರೀಯ ಯುವ ಪುರಸ್ಕಾರ, ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2000ನೆ ವರ್ಷದಲ್ಲಿ ಮೊದಲ ‘ಕನ್ನಗಿ ಸ್ತ್ರೀಶಕ್ತಿ ಪುರಸ್ಕಾರ’ವೂ ಅವರಿಗೆ ಲಭಿಸಿದೆ. ಜೊತೆಗೆ ನೆಹರೂ ಯುವಕೇಂದ್ರ, ರಾಜ್ಯ ಸಾಕ್ಷರತಾ ಸಮಿತಿ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಇಷ್ಟೆಲ್ಲಾ ಆಗಿಯೂ ರಾಬಿಯಾರ ದೇಹ ಅವರ ಸಾಧನೆಗೆ ಸಾಥ್ ಕೊಡುತ್ತಿರಲಿಲ್ಲ ಎಂಬುದಕ್ಕೆ 2000ನೆ ವರ್ಷದಲ್ಲಿ ಆಕೆಯನ್ನು ಕಾಡಿದ ಕ್ಯಾನ್ಸರ್ ಸಾಕ್ಷಿ. ತ್ರಿಶ್ಶೂರಿನ ಅಮಲಾ ಆಸ್ಪತ್ರೆಯಲ್ಲಿ ಇದಕ್ಕಾಗಿ ಕೀಮೊಥೆರಪಿ ಪಡೆದಿದ್ದರು. ವಿಶೇಷವೆಂದರೆ, ಆ ಸಮಯದಲ್ಲಿಯೂ ಅಲ್ಲಿನ ಉಳಿದ ರೋಗಿಗಳನ್ನು ಬದುಕಿನ ಬಗ್ಗೆ ಆಶಾವಾದವನ್ನು ಇಡುವಲ್ಲಿ ಆಸ್ಪತ್ರೆಯಲ್ಲೇ ತರಗತಿ ನಡೆಸುತ್ತಿದ್ದರು!
ಬಳಿಕ 2004ರಲ್ಲಿ ಮತ್ತೊಂದು ದುರಂತ ಎದುರಾಯಿತು. ಸ್ನಾನದ ಕೋಣೆಯಲ್ಲಿ ಜಾರಿಬಿದ್ದ ಇವರ ಬೆನ್ನುಹುರಿಗೆ ಪೆಟ್ಟಾಗಿ ಓಡಾಟಕ್ಕೆ ಕುತ್ತುಬಿತ್ತು. ಅಲ್ಲದೆ, ಕತ್ತಿನ ಭಾಗದಲ್ಲಿ ಪಾರ್ಶ್ವವಾಯುವಿಗೂ ತುತ್ತಾದರು. ಮೂತ್ರದ ಬ್ಯಾಗನ್ನು ಜೊತೆಗಿಟ್ಟುಕೊಂಡು ಮಲಗಿದಲ್ಲಿಯೇ ಇರಬೇಕಾದ ಸನ್ನಿವೇಶ. ಈ ಸಂದರ್ಭದಲ್ಲಿಯೇ ತನ್ನ ನೆನಪುಗಳನ್ನು ಬರೆಯುವುದಕ್ಕೂ ಆರಂಭಿಸಿದರು. ಅದನ್ನು ಮೌನ ನೊಂಬರಙಳ್ (ಮೌನ ಕಣ್ಣೀರು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಬಳಿಕ 2009ರಲ್ಲಿ ಆಕೆಯ ಆತ್ಮಕತೆ ಸ್ವಪ್ನಙಳ್‌ಕು ಚಿರಕುಗಳುಂಡು (ಕನಸುಗಳಿಗೆ ರೆಕ್ಕೆಗಳಿವೆ) ಪ್ರಕಟವಾಯಿತು.
ಅಪಾರ ಧಾರ್ಮಿಕ ಶ್ರದ್ಧೆಯುಳ್ಳ ಆಕೆಗೆ ಕುರ್‌ಆನ್ ನಿತ್ಯದ ಸಂಗಾತಿ. ‘‘ನನ್ನೆಲ್ಲಾ ಚಟುವಟಿಕೆ ಅಲ್ಲಾಹನ ದಯೆಯಿಂದಲೇ ಆಗಿದೆ. ಇದು ನನ್ನ ಪರಲೋಕದ ಬದುಕಿನಲ್ಲಿ ಯಶಸ್ಸು ಸಾಧಿಸಲಿರುವ ದಾರಿ’’ ಎಂದು ಹೇಳುವ ಅವರು, 2002ರಲ್ಲಿ ಹಜ್ ಯಾತ್ರೆಯನ್ನೂ ಕೈಗೊಂಡಿದ್ದರು. ತನ್ನೊಡನೆ ನೂರಕ್ಕೂ ಹೆಚ್ಚು ಸ್ವಯಂಸೇವಕರನ್ನು ಜೊತೆಗೂಡಿ ನಾಡಿನ ಶ್ರೇಯಾಭಿವೃದ್ಧಿಗೆ ಶ್ರಮಿಸುತ್ತಿರುವ ಇವರಿಂದ ಬದುಕಿನಲ್ಲಿ ಆಶಾವಾದವನ್ನು ಕಳೆದುಕೊಂಡಿರುವ ಪ್ರತಿಯೊಬ್ಬರೂ ಕಲಿಯಲಿರುವುದು, ಪಾಲಿಸಲಿರುವುದು ಬಹಳಷ್ಟಿದೆ.







