ಇವರು ದಾಖಲೆಯ ಪದವೀಧರರು!
ವ್ಯಕ್ತಿ ವಿಶೇಷ

ಸಾಮಾನ್ಯವಾಗಿ ಪದವಿಯ ನಂತರ ಒಂದೆರಡು ಸ್ನಾತಕೋತ್ತರ, ಬಳಿಕ ಎಂಫಿಲ್, ಡಾಕ್ಟರೇಟ್ ಪದವಿ ಪಡೆದುಕೊಳ್ಳುವುದು ಸಾಮಾನ್ಯ. ಇಲ್ಲವೇ, ಒಬ್ಬ ಸಾದಾ ಸೀದಾ ವ್ಯಕ್ತಿ ನಾಲ್ಕೈದು ಪದವಿಗಳನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆ. ಹೀಗಿರುವಾಗ, ಚೆನ್ನೈನಲ್ಲೊಬ್ಬ ಉಪನ್ಯಾಸಕರಿದ್ದಾರೆ. ಇವರಲ್ಲಿರುವುದು ಸುಮಾರು 145ಕ್ಕಿಂತಲೂ ಅಧಿಕ ಪದವಿ. ಅಂದಹಾಗೆ, ಇವುಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೇ ಹೋಗುತ್ತಿದೆ!
ಇವರ ಹೆಸರು ಪ್ರೊಫೆಸರ್ ವಿ.ಎನ್. ಪಾರ್ತಿಬನ್. ಸುಮ್ಮನೆ ಅವರ ಪದವಿಗಳ ಪಟ್ಟಿಯ ಉದಾಹರಣೆಯನ್ನು ನೋಡಿ. ಕಾನೂನಿನ ವಿವಿಧ ವಿಷಯಗಳಲ್ಲಿ 8 ಪದವಿಗಳು, 10 ಸ್ನಾತಕೋತ್ತರ ಕಲಾವಿಷಯದ ಪದವಿಗಳು, ವಾಣಿಜ್ಯ ವಿಷಯಗಳಲ್ಲಿ 8, ವಿಜ್ಞಾನ ವಿಷಯಗಳಲ್ಲಿ 3, 12 ಸಂಶೋಧನಾ ಪದವಿ(ಎಂ.ಫಿಲ್)ಗಳು, ವ್ಯವಹಾರ ಅಧ್ಯಯನದಲ್ಲಿ 9 ಪದವಿಗಳು ಹೀಗೆ..... ಅಲ್ಲದೆ, ಚೆನ್ನೈನ ಹಲವು ಕಾಲೇಜುಗಳಲ್ಲಿ ಅವರು ನೂರಕ್ಕೂ ಅಧಿಕ ವಿಷಯಗಳಿಗೆ ಉಪನ್ಯಾಸ ನೀಡುತ್ತಾರೆ. ಇದೀಗ 56ರ ಹೊಸ್ತಿಲಲ್ಲಿರುವ ಪಾರ್ತಿಬನ್ ಇಷ್ಟೆಲ್ಲಾ ಓದಿ, ಪರೀಕ್ಷೆ ಬರೆದು, ಪದವಿಗಳಿಸಲು ಸ್ಫೂರ್ತಿಯಾದರೂ ಏನು?
ನನಗೆ ಅಧ್ಯಯನವೆಂದರೆ ಖುಷಿ. ಹೊಸ ವಿಷಯಗಳನ್ನು ತಿಳಿದು ಅದರ ಪರೀಕ್ಷೆಗಾಗಿ ತಯಾರಿ ನಡೆಸುವುದು ನನಗೆ ನಿತ್ಯದ ಚಟುವಟಿಕೆ ಎನ್ನುವ ಪಾರ್ತಿಬನ್ ನಿಜಕ್ಕೂ ಒಬ್ಬ ಪುಸ್ತಕದ ಹುಳ!
ಬಡಕುಟುಂಬದಿಂದ ಬಂದ ಪಾರ್ತಿಬನ್ ಮೊದಲ ಬಾರಿಗೆ ಪದವಿ ಓದುತ್ತಿದ್ದಾಗ 59.9 ಶೇಕಡಾ ಅಂಕಗಳು ಬಂದಿತ್ತಂತೆ. ಇದನ್ನು ನೋಡಿ ಇವರ ತಾಯಿ ನೊಂದುಕೊಂಡಿದ್ದರಂತೆ. ಬಳಿಕ ನ್ಯಾಯಾಂಗ ಇಲಾಖೆಯಲ್ಲಿ ಸಣ್ಣ ನೌಕರಿ ಲಭಿಸಲು ತುಂಬಾ ಕಷ್ಟ ಪಟ್ಟಿದ್ದರಂತೆ. ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ಅವರು ಕಳೆದ ಮೂವತ್ತೈದು ವರ್ಷಗಳಿಂದ ನಿರಂತರ ಓದುತ್ತಾ, ಪರೀಕ್ಷೆ ಬರೆಯುತ್ತಾ ಇದ್ದಾರೆ.
ಆದರೂ, ಇವರು ಸೋತ ವಿಷಯ ಗಣಿತವಂತೆ. ಗಣಿತದಲ್ಲಿ ಅಡ್ಮಿಷನ್ ಮಾಡಿಕೊಂಡರೂ ಅದನ್ನು ಪೂರೈಸಲು ಆಗಲಿಲ್ಲ ಎಂದು ಪಾರ್ತಿಬನ್ ನೊಂದುಕೊಳ್ಳುತ್ತಾರೆ.
ಇನ್ನೊಂದು ತಮಾಷೆಯ ವಿಚಾರವೆಂದರೆ, ಅವರು ಕೆಲವೊಮ್ಮೆ ಯಾವುದೋ ವಿಷಯನ್ನು ಓದಿ ಇನ್ಯಾವುದೋ ಪರೀಕ್ಷೆ ಬರೆದು ಫೇಲಾಗಿದ್ದೂ ಇದೆಯಂತೆ.
ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿರುವ ಇವರ ಪತ್ನಿಯೂ ಒಂಬತ್ತು ಪದವಿಗಳನ್ನು ಹೊಂದಿದ್ದಾರೆ.







