ಬೆಂಕಿಯ ಬಲೆಯಿಂದ ಬಿಡಿಸುವ ಬಿಪಿನ್ ಗಂಟಾರ
ಇದು ನಿಸ್ವಾರ್ಥಿ ಸಮಾಜ ಸೇವಕನ ಕಥೆ!

‘‘ಬೆಂಕಿಯ ಕೆನ್ನಾಲಿಗೆಗೆ ನಾನು ನನ್ನ ಸೋದರನನ್ನು ಕಳೆದುಕೊಂಡೆ. ಆದರೆ, ನನ್ನ ನಗರದ ಇನ್ಯಾರೂ ಅವರ ಆತ್ಮೀಯರನ್ನು ಕಳೆದುಕೊಳ್ಳಬಾರದು. ಪ್ರತಿಯೊಬ್ಬನನ್ನು ಬೆಂಕಿಯ ಬಲೆಯಿಂದ ರಕ್ಷಿಸುವಾಗಲೂ ನನ್ನ ಸೋದರನ ಆತ್ಮಕ್ಕೆ ಶಾಂತಿ ಸಿಗುತ್ತಿದೆ ಎಂದು ನಾನು ಭಾವಿಸುತ್ತೇನೆ’’ ಎನ್ನುವ ಬಿಪಿನ್‌ರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರವು ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ನಾಲ್ಕು ದಶಕಗಳ ಹಿಂದಿನ ಘಟನೆ. ದೀಪಾವಳಿಯ ಬೆಳಕಿನ ಹಬ್ಬ ಆ ಬಾಲಕರಿಬ್ಬರಲ್ಲ್ಲೂ ಸಂಭ್ರಮ ತಂದಿತ್ತು. ಪಟಾಕಿಗಳು ಅಂದಿನ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಿ ದ್ದವು. ದುರದೃಷ್ಟವಶಾತ್, ಎಲ್ಲೋ ಸಿಡಿದ ಒಂದು ಪಟಾಕಿ ಬೆಳಕಿನ ಹಬ್ಬದಲ್ಲಿ ಕತ್ತಲು ತುಂಬಿತು. ಇಬ್ಬರು ಬಾಲಕರಲ್ಲಿ ಒಬ್ಬನ ಬದುಕು ಪಟಾಕಿ ಸ್ಫೋಟದ ಬೆಂಕಿಯ ಕೆನ್ನಾಲಿಗೆಗೆ ಕರಟಿ ಹೋಯಿತು. ಕನಸೊಂದು ಹಾಗೇ ಕೊನೆಗೊಂಡಾಗ ಇನ್ನೊಬ್ಬ ಸೋದರನಲ್ಲಿ ಹೊಸ ಕನಸೊಂದು ಮೊಳಕೆಯೊಡೆಯಿತು. ತನ್ನ ಸಹೋದರನಿಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದೆಂದು ನಿರ್ಧಾರ ಮಾಡಿದ ಆ ಹುಡುಗ ಬಳಿಕ ಇಂದಿನವರೆಗೂ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಕ್ಕಿ ನಲುಗಿತ್ತಿರುವವರನ್ನು ರಕ್ಷಿಸಲು ತನ್ನ ಬದುಕನ್ನೇ ಮುಡಿಪಾಗಿಸಿದ್ದಾರೆ. ಅಗ್ನಿಶಾಮಕದ ಯಾವುದೇ ಔಪಚಾರಿಕ ತಂತ್ರವನ್ನು ಕಲಿಯದೆ ಹೋದರೂ ಬೆಂಕಿಯ ಕೆನ್ನಾಲಗೆಗೆ ಸಿಕ್ಕಾಗ ಕೋಲ್ಕತಾ ನಗರದಲ್ಲಿ ಮೊದಲು ನೆನಪಾಗುವ ಹೆಸರೇ ಬಿಪಿನ್ ಗಂಟಾರ!
ಸೋದರನ ಮರಣದ ಬಳಿಕ ಶಾಲೆ ತೊರೆದ ಇವರಿಗೆ ಈಗ 59 ವಯಸ್ಸು. ಕೋಲ್ಕತ್ತಾದ ನಗರದೊಳಗಿನ ಸಣ್ಣ ಮನೆಯೊಳಗೆ ಬಿಪಿನ್‌ರದ್ದು ಒಂಟಿ ವಾಸ. ನಗರದೊಳಗೆ ಎಲ್ಲೇ ಅಗ್ನಿ ಅವಘಡವಾದರೂ ಮೊದಲು ತಲುಪುವುದು ಇವರೇ. ಅಗ್ನಿಶಾಮಕ ದಳದ ಜೊತೆಗೆ ಇವರದು ನಿರಂತರ ಸಂಪರ್ಕ. ಅಗ್ನಿಶಾಮಕ ದಳದವರೂ ಮುನ್ನುಗ್ಗಲು ಹಿಂಜರಿಯುವ ಅವಘಡದಲ್ಲೂ ರಕ್ಷಣೆಗೆ ಇವರದೇ ನೇತೃತ್ವ. ಇದೇ ಕಾರಣಕ್ಕೆ ರಾಜ್ಯದ ಅಗ್ನಿಶಾಮಕ ದಳವು 2009ರಲ್ಲಿ ಅವರಿಗೆ ವಿಶೇಷ ಸ್ವಯಂಸೇವಕ ಗುರುತು ಪತ್ರವನ್ನೂ ನೀಡಿದೆ.
ಕೆಂಪು ದೀಪ ಉರಿಸಿ ಸೈರನ್ ಮೊಳಗಿಸುತ್ತಾ ಕೋಲ್ಕತಾದ ಕಿರು ಬೀದಿಯೊಳಗೆ ನುಗ್ಗುವ ಫೈರ್ ಇಂಜಿನ್ ವಾಹನಗಳ ಹಿಂದೆಯೇ ಗಂಟಾರ ಎಳೆವೆಯಲ್ಲಿಯೇ ಓಡುತ್ತಿದ್ದರು. ಅಗ್ನಿಶಾಮಕದಳದ ಸಿಬ್ಬಂದಿಯ ಕಾರ್ಯವನ್ನು ಕಣ್ಣೆವೆ ಮುಚ್ಚದೇ ನೋಡುತ್ತಿದ್ದರು. ಅಲ್ಲದೆ, ಅವರಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಾ ಅವರಿಂದಲೇ ಕಲಿಯಲು ಶುರುಮಾಡಿದರು. 1978ರಲ್ಲಿ ಬ್ಯಾಂಕೊಂದರಲ್ಲಿ ನಡೆದ ಅಗ್ನಿ ಅವಘಡದ ಸಮಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯ ಜೊತೆಜೊತೆಗೇ ಅಧಿಕೃತವಾಗಿ ಮೊದಲಬಾರಿಗೆ ಅಗ್ನಿಶಮನ ನಡೆಸಿದ್ದರು.
ಕೋಲ್ಕತಾ ನಿರಂತರ ಅಗ್ನಿ ಅವಘಡಕ್ಕೆ ತುತ್ತಾಗುತ್ತಿರುವ ನಗರ. ಇಡೀ ದೇಶದಲ್ಲಿಯೇ ಇಲ್ಲಿನ ಅಗ್ನಿಶಾಮಕ ದಳಕ್ಕೆ ಬಿಡುವಿಲ್ಲದ ಕೆಲಸ. ಈ ಹಿನ್ನೆಲೆಯಲ್ಲಿಯೇ ಕೆಲವೊಮ್ಮೆ ಬಿಪಿನ್ ಗಂಟಾರ ದಿನವೊಂದಕ್ಕೆ ಮೂರು ಕಡೆ ಅಗ್ನಿಶಾಮಕ ಚಟುವಟಿಕೆಯಲ್ಲಿ ಪಾಲ್ಗೊಂಡದ್ದೂ ಇದೆ.
ಅತೀ ಹೆಚ್ಚು ಜನಸಾಂದ್ರತೆಯ ಕೋಲ್ಕತಾ ನಗರದೊಳಗೆ 100ಕ್ಕೂ ಹೆಚ್ಚು ಅಗ್ನಿಶಾಮಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವುಗಳಲ್ಲಿ ನೆನಪಿನಲ್ಲಿ ಉಳಿದದ್ದು ಕೆಲವು. ನಾಲ್ಕು ಮಹಡಿಯ ಕಟ್ಟಡವೊಂದರಲ್ಲಿ ಬೆಂಕಿ ಅವಘಡವಾಗಿದ್ದಾಗ, ಒಳಗಿದ್ದ ಗರ್ಭಿಣಿಯೊಬ್ಬರು ಗಾಬರಿಗೊಂಡು ಜಿಗಿಯುವ ಯತ್ನದಲ್ಲಿದ್ದರು. ಆಗ ಅಲ್ಲಿಗೆ ಕ್ಷಿಪ್ರವಾಗಿ ತೆರಳಿದ ಗಂಟಾರ, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸುವವರೆಗೂ ಆ ಗರ್ಭಿಣಿಯ ಜೊತೆಗಿದ್ದು, ಬಳಿಕ ಆಧುನಿಕ ಸ್ಟ್ರೆಚರ್ ಸಹಾಯದಿಂದ ಮುಂದುಗಡೆಯ ಕಟ್ಟಡಕ್ಕೆ ಅವರನ್ನು ಸಾಗಿಸಿ ಎರಡು ಜೀವಗಳನ್ನು ಉಳಿಸಿದ ಪುಣ್ಯವನ್ನು ತನ್ನದಾಗಿಸಿದ್ದರು. ಹಾಗೆಯೇ, 2011ರಲ್ಲಿ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡ(ಅದರಲ್ಲಿ 89 ರೋಗಿಗಳು ಮೃತಪಟ್ಟಿದ್ದರು)ದಲ್ಲಿ ಉಸಿರು ಕಟ್ಟುವ ಹೊಗೆಯಲ್ಲಿ ಸಿಲುಕಿದ್ದ ಇನ್ನೂ ಹಲವು ರೋಗಿಗಳ ಜೀವ ಉಳಿಸಿದ್ದರು.
ಹೊಟ್ಟೆಪಾಡಿಗೆ ಇಲೆಕ್ಟ್ರೀಷಿಯನ್ ನೌಕರಿ ಮಾಡುತ್ತಿರುವ, ಸ್ಥಳೀಯರ ಬಾಯಲ್ಲಿ ಬಿಪಿನ್ ದಾ ಆಗಿರುವ ಅವರಿಗೆ ಕೋಲ್ಕತಾ ಎಂಬ ಬಡವರ ನಗರಿಯಲ್ಲಿ ಸಿಗುವುದು ಜುಜುಬಿ ಕೂಲಿ. ಸ್ನೇಹಿತರ ನೆರವಿನಿಂದ ಬದುಕುತ್ತಿರುವ ಇವರು ಏನೂ ಕೆಲಸವಿಲ್ಲದಿದ್ದರೆ ಕೋಲ್ಕತಾದ ಎಂ.ಜಿ.ರೋಡಿನಲ್ಲಿ ಪೊಲೀಸರ ಜೊತೆ ಟ್ರಾಫಿಕ್ ನಿಯಂತ್ರಣಕ್ಕೂ ಸಹಾಯ ಮಾಡುತ್ತಾರೆ.
‘‘ಬೆಂಕಿಯ ಕೆನ್ನಾಲಿಗೆಗೆ ನಾನು ನನ್ನ ಸೋದರನನ್ನು ಕಳೆದುಕೊಂಡೆ. ಆದರೆ, ನನ್ನ ನಗರದ ಇನ್ಯಾರೂ ಅವರ ಆತ್ಮೀಯರನ್ನು ಕಳೆದುಕೊಳ್ಳಬಾರದು. ಪ್ರತಿಯೊಬ್ಬನನ್ನು ಬೆಂಕಿಯ ಬಲೆಯಿಂದ ರಕ್ಷಿಸುವಾಗಲೂ ನನ್ನ ಸೋದರನ ಆತ್ಮಕ್ಕೆ ಶಾಂತಿ ಸಿಗುತ್ತಿದೆ ಎಂದು ನಾನು ಭಾವಿಸುತ್ತೇನೆ’’ ಎನ್ನುವ ಬಿಪಿನ್‌ರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರವು ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. (ಸಾಧಾರ)