ಕಾರ್ಮಿಕರ ಮಕ್ಕಳ ಶಿಕ್ಷಣವೇ ಈಕೆಯ ಕನಸು
ದಿಲ್ಲಿಯ ಜಾಮಿಯ ಮಿಲ್ಲಿಯಾದ ಎಂ.ಎ. ವಿದ್ಯಾರ್ಥಿನಿ ಅಫ್ಶಾನ್
‘‘ನನ್ನ ದಾರಿಯಲ್ಲಿ ಹಲವು ತೊಡಕುಗಳು ಇಲ್ಲದಿಲ್ಲ. ಆದರೆ, ಸಮಾಜಮುಖಿಯಾಗಿರುವ ನನ್ನ ಗುರಿ ಸ್ಪಷ್ಟ. ನಮ್ಮ ಒಳ್ಳೆಯ ಕಾರ್ಯಗಳಿಗೆ ದಾಪುಗಾಲಿಡುವಾಗ ಸಮಾಜದ ಸಹಾಯ, ಪ್ರೋತ್ಸಾಹಗಳು ಇರಬೇಕೆಂದು ನಾವು ನಿರೀಕ್ಷಿಸಬಹುದು. ಆದರೆ, ನಮ್ಮ ಮೇಲೆ ನಾವು ವಿಶ್ವಾಸವಿರಿಸಿ ಮುನ್ನುಗ್ಗಬೇಕಾಗುತ್ತದೆ. ಅದು ಮಾತ್ರ ನಮ್ಮ ಗುರಿಯನ್ನು ತಲುಪಲು ಸಹಾಯಕವಾಗಬಹುದು’’ ಎನ್ನುವುದು ಇವರ ಸ್ಪಷ್ಟ ನಿಲುವು.
ಇವತ್ತು ಕಾಲೇಜು ಶಿಕ್ಷಣ ಎಂಬುದು ಬಹುಪಾಲು ಜನರಿಗೆ ಇನ್ನೂ ಕೈಗೆಟುಕದ ಕನಸು. ಇನ್ನೊಂದೆಡೆ ಕಾಲೇಜು ಮೆಟ್ಟಿಲು ಹತ್ತಿದವರು ತಮ್ಮ ಗುರಿಯನ್ನು ಕೇವಲ ಅಕಾಡಮಿಕ್ ಆಗಿ, ಪರೀಕ್ಷೆ, ಅಂಕ, ನೌಕರಿ ಎಂಬುದಕ್ಕೆ ಸೀಮಿತಗೊಳಿಸುತ್ತಲೂ ಇದ್ದಾರೆ. ಆದರೆ, ಶಿಕ್ಷಣದ ಗುರಿ ಅಷ್ಟು ಮಾತ್ರವೇ? ಹೀಗೆಂದು ಪ್ರಶ್ನಿಸುತ್ತಾ ಶಿಕ್ಷಣದ ನೈಜ ಉದ್ದೇಶವನ್ನು ಸಫಲವಾಗಿಸಲು ಪಣತೊಟ್ಟಿದ್ದಾಳೆ ಈ ಹೆಣ್ಣುಮಗಳು. ದಿಲ್ಲಿಯ ಪ್ರತಿಷ್ಠಿತ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಈಕೆಯ ಹೆಸರು ಅಫ್ಶಾನ್ ಖಾನ್.
‘‘ನನ್ನ ವಿದ್ಯಾಭ್ಯಾಸ, ಬದುಕಿನ ಗುರಿ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕೂತು ಪಾಠ ಕೇಳುವ, ದೊಡ್ಡ ವಿದ್ವಾಂಸರ ಪುಸ್ತಕಗಳನ್ನು ಉರುಹೊಡೆದು ಪರೀಕ್ಷೆಯಲ್ಲಿ ಬರೆಯುವುದಷ್ಟೇ ಅಲ್ಲ. ನಮ್ಮ ಸುತ್ತಮುತ್ತಲಿನ ಸಮಾಜವನ್ನು ಉನ್ನತಿಗೆ ಕೊಂಡೊಯ್ಯುವುದು, ಇಲ್ಲಿನ ನೋವಿಗೆ ಧ್ವನಿಯಾಗುವುದು’’ ಎಂದು ಅಫ್ಶಾನ್ ಬಲವಾಗಿ ನಂಬಿರುವಾಕೆ. ತಾನು ಓದುವ ವಿಶ್ವವಿದ್ಯಾನಿಲಯದ ಕಾಂಪೌಂಡಿನೊಳಗೆ ನಿತ್ಯವೂ ಹಲವು ನಿರ್ಮಾಣ ಕಾರ್ಯಗಳು ನಡೆಯುತ್ತಿರುತ್ತವೆ. ದೂರದ ಊರುಗಳಿಂದ ಹಲವು ಕಾರ್ಮಿಕರು ಕುಟುಂಬ ಸಮೇತ ಇಲ್ಲಿ ದುಡಿಯುತ್ತಿರುತ್ತಾರೆ. ಆದರೆ, ಅವರ ಮಕ್ಕಳ ಶಿಕ್ಷಣದ ಕತೆ ಏನಾಗಬೇಕು? ಅವರಿಗೂ ಉಳಿದ ಮಕ್ಕಳಂತೆ ಶಿಕ್ಷಣದ ಹಕ್ಕಿಲ್ಲವೇ? ಇದು ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಓದುತ್ತಿರುವ ಈಕೆಗೆ ಕಾಡಿದ ಸಂಗತಿ.
ಹುಟ್ಟಿದ್ದು ಬಿಹಾರ ರಾಜ್ಯದ ಗಯಾದಲ್ಲಿಯಾದರೂ, ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಫ್ಶಾನ್ ತಂದೆ ದಿಲ್ಲಿಗೆ ತನ್ನ ವಾಸ್ತವ್ಯ ಬದಲಿಸಿಕೊಂಡರು. ಅಫ್ಶಾನ್‌ಗೆ ತನ್ನ ಮಾತೃಭಾಷೆ ಉರ್ದುವಿನಷ್ಟೇ ಸಂಸ್ಕೃತದ ಮೇಲೂ ಹಿಡಿತವಿತ್ತು. ಶಾಲಾ ದಿನಗಳಲ್ಲಿ ಯಾರಾದರೂ ಶಿಕ್ಷಕರ ಅನುಪಸ್ಥಿತಿ ಇದ್ದಾಗ ತಾನೇ ಮುಂದುವರಿದು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಈಕೆಯ ಪಾಠವನ್ನು ಸಹಪಾಠಿಗಳೂ ಮೆಚ್ಚುತ್ತಿದ್ದರು. ಅಲ್ಲದೆ, ತನ್ನ ಹನ್ನೆರಡನೆ ವರ್ಷದಲ್ಲಿ ತನಗಿಂತ ಮೂರು ಪಟ್ಟು ಅಧಿಕ ವಯಸ್ಸಿನ ಪಕ್ಕದ ಮನೆಯ ಮಹಿಳೆಗೆ ಅಕ್ಷರ ಕಲಿಸಲು ಆರಂಭಿಸಿದ್ದಳು. ತನಗೆ ಶಿಕ್ಷಕ ವೃತ್ತಿಯ ಮೇಲೆ ನಂಬಿಕೆ ಬಂದದ್ದು ಆಗಲೇ. ‘‘ಈಗಲೂ ನಾನು ಕಲಿತ ಶಾಲೆಗೆ ಭೇಟಿ ನೀಡುತ್ತಿರುತ್ತೇನೆ. ಅವಕಾಶ ಸಿಕ್ಕಾಗಲೆಲ್ಲ ಪಾಠವೂ ಮಾಡುತ್ತೇನೆ. ಇದೇ ಹಿನ್ನೆಲೆಯಿಂದಾಗಿ ನನಗೆ ಕಾರ್ಮಿಕರ ಮಕ್ಕಳಿಗೂ ಶಿಕ್ಷಣ ನೀಡಬೇಕೆನ್ನುವ ಆಸೆ ಹುಟ್ಟಿದ್ದು’’ ಎನ್ನುತ್ತಾರೆ ಅಫ್ಶಾನ್.
ಆದರೆ, ಕಾರ್ಮಿಕರ ಮಕ್ಕಳಿಗೆ ಸಾಮಾನ್ಯ ಶಾಲೆಯಂತೆ, ತರಗತಿಗಳಂತೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಹೊಸ ವಿಧಾನ ಅನುಸರಿಸುತ್ತಿದ್ದಾರೆ. ಪೋಸ್ಟರ್ ಸ್ಪರ್ಧೆ. ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳಿಗೆ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಅಧಿಕ ಆಸಕ್ತಿ. ಅವರ ಆಸಕ್ತಿಯನ್ನೇ ಅನುಸರಿಸಿಕೊಂಡು ಅವರಿಗೆ ಅಕ್ಷರ ಕಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
‘‘ನಾನು ಈ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿ ಕೆಲವು ತಿಂಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾದೆ. ಆಗ ಕೆಲವು ಸಮಯ ಮನೆಯಲ್ಲಿರಬೇಕಾಯಿತು. ಮರಳಿ ಬಂದಾಗ ಅಲ್ಲಿನ ಹಲವು ಕಾರ್ಮಿಕರು ಅಲ್ಲಿಂದ ತೆರಳಿದ್ದರು. ಬಳಿಕ ಅವರನ್ನು ಸಂಪರ್ಕಿಸಲು ಆಗುತ್ತಿಲ್ಲ. ಉಳಿದಂತೆ ಕೆಲವು ಮಕ್ಕಳು ಸಣ್ಣ ಪುಟ್ಟ ಕೆಲಸದಲ್ಲಿ ತಂದೆ ತಾಯಿಗೆ ಸಹಾಯ ಮಾಡಲು ಆರಂಭಿಸಿದ್ದಾರೆ. ಅವರ ಭವಿಷ್ಯ ನನಗೆ ಭಯವುಂಟುಮಾಡುತ್ತದೆ. ಈ ಮಕ್ಕಳ ಸ್ಥಿತಿಗೆ ನಾವು ಕೂಡಾ ಕಾರಣರು, ಇವರ ಬಾಲ್ಯ ಕಸಿದುಕೊಳ್ಳುವಲ್ಲಿ ನಾವು, ಒಟ್ಟು ಸಮಾಜ ಕೂಡಾ ಜವಾಬ್ದಾರರಲ್ಲವೇ?’’ ಎಂದು ಅಫ್ಶಾನ್ ಪ್ರಶ್ನಿಸುತ್ತಾರೆ.
ಅಫ್ಶಾನ್‌ಅವರ ಚಟುವಟಿಕೆ ಕೇವಲ ಅಕ್ಷರ ಕಲಿಸುವ ಶಿಕ್ಷಣದತ್ತ ಮಾತ್ರವಲ್ಲ. ಬದಲಾಗಿ ಅವರು ಓರ್ವ ಪರಿಸರ ಪ್ರೇಮಿಯೂ ಹೌದು.. ತನ್ನ ಐದನೆ ಕ್ಲಾಸಿನಿಂದಲೇ ಪರಿಸರ ರಕ್ಷಣೆ ಸಂಬಂಧಿ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಆರನೆ ಕ್ಲಾಸಿನಲ್ಲಿ ಓದುತ್ತಿರುವಾಗಲೇ ಪರಿಸರ ರಕ್ಷಣೆಯ ಸಂದೇಶ ಹೊತ್ತ ಭಿತ್ತಿಪತ್ರ ಹಾಗೂ ಕರಪತ್ರ ರಚಿಸಿ, ಹಂಚಿದ್ದರು. ಜೊತೆಗೆ ತನ್ನ ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಲ್ಲಿಯೂ ಅವರು ಅರಿವು ನೀಡುತ್ತಿದ್ದಾರೆ.
ಜನರ ಯೋಚನೆ ಬದಲಾಯಿಸಬೇಕು.ಹೆಂಗೆಳೆಯರ ಭವಿಷ್ಯ ಸ್ತಬ್ಧಗೊಳ್ಳದಂತೆ ಮಾಡುವುದು, ಇಸ್ಲಾಮಿನ ನೈಜ ಆದರ್ಶಗಳನ್ನು ನಮ್ಮ ಸಮುದಾಯಕ್ಕೆ ತಿಳಿಸುವುದು, ಕಲಿಯುವುದು ಮತ್ತು ಕಲಿಸುವುದು ನನ್ನ ಬದುಕಿನ ಉದ್ದೇಶ. ಹೆಣ್ಣುಮಕ್ಕಳು ಸಾಧನೆ ಮಾಡಿದರೆ, ಅವರಿಗೆ ಪ್ರೋತ್ಸಾಹ ಸಿಗುವುದು ಕಡಿಮೆ. ಅದರ ಪ್ರಮಾಣ ಹಿಂದಿಗಿಂತ ಕಡಿಮೆ ಆಗಿದ್ದರೂ, ಹೆಣ್ಣುಮಕ್ಕಳು ಇನ್ನೂ ಬದುಕಲ್ಲಿ ಸೆಣಸುತ್ತಲೇ ಇದ್ದಾರೆ. ಅದು ಬದಲಾಗಬೇಕಿದೆ ಎನ್ನುತ್ತಾರೆ ಅಫ್ಶಾನ್ ಖಾನ್. ಈಗೇನಿದ್ದರೂ ಯುವಜನತೆಗೆ ಶಿಕ್ಷಣವೆಂದರೆ ಕರಿಯರ್, ನೌಕರಿ ಇಷ್ಟಕ್ಕೇ ಸೀಮಿತವಾಗಿದೆ. ಆದರೆ, ಶಿಕ್ಷಣ ನಮ್ಮಲ್ಲಿ ಮಾನವೀಯತೆಯನ್ನು ಉದ್ದೀಪನಗೊಳಿಸಬೇಕು. ಹೆಣ್ಣುಮಕ್ಕಳು ಸಮಾಜ ಹಾಗೂ ದೇಶಕ್ಕೆ ದೊಡ್ಡ ಕೊಡುಗೆ. ಅದನ್ನು ಅರ್ಥೈಸಿಕೊಂಡು ಪ್ರೋತ್ಸಾಹ ನೀಡಬೇಕು ಎಂದು ಈ ಹುಡುಗಿ ಆಶಿಸುತ್ತಾರೆ.
‘‘ನನ್ನ ದಾರಿಯಲ್ಲಿ ಹಲವು ತೊಡಕುಗಳು ಇಲ್ಲದಿಲ್ಲ. ಆದರೆ, ಸಮಾಜಮುಖಿಯಾಗಿರುವ ನನ್ನ ಗುರಿ ಸ್ಪಷ್ಟ. ನಮ್ಮ ಒಳ್ಳೆಯ ಕಾರ್ಯಗಳಿಗೆ ದಾಪುಗಾಲಿಡುವಾಗ ಸಮಾಜದ ಸಹಾಯ, ಪ್ರೋತ್ಸಾಹಗಳು ಇರಬೇಕೆಂದು ನಾವು ನಿರೀಕ್ಷಿಸಬಹುದು. ಆದರೆ, ನಮ್ಮ ಮೇಲೆ ನಾವು ವಿಶ್ವಾಸವಿರಿಸಿ ಮುನ್ನುಗ್ಗಬೇಕಾಗುತ್ತದೆ. ಅದು ಮಾತ್ರ ನಮ್ಮ ಗುರಿಯನ್ನು ತಲುಪಲು ಸಹಾಯಕ ವಾಗಬಹುದು’’ ಎನ್ನುವುದು ಇವರ ಸ್ಪಷ್ಟ ನಿಲುವು.
ಕೃಪೆ: Twocircles.net