ಮೇಘಾಲಯದ ಬೇರುಗಳ ಸೇತುವೆ
ಮನುಷ್ಯ ಮತ್ತು ಪ್ರಕೃತಿಯ ಜುಗಲ್ ಬಂದಿಯ ಕೊಡುಗೆ

ಪೂರ್ವ ಭಾರತದ ಸುಂದರ ರಾಜ್ಯ ಮೇಘಾಲಯ. ಈ ಹೆಸರು ಕೇಳಿದಾಗ ನೆನಪಾಗುವುದು ಚಿರಾಪುಂಜಿ, ಅಲ್ಲಿನ ಮಳೆ. ಎಲ್ಲೆಡೆಯೂ ಪ್ರಕೃತಿಯನ್ನು ಮನುಷ್ಯರು ಹಾಳುಗೆಡವುತ್ತಿದ್ದರೆ, ಇದೇ ಮೇಘಾಲಯದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಪರಸ್ಪರ ಕೊಡುಕೊಳ್ಳುವಿಕೆಯ ಅದ್ಭುತ ಉದಾಹರಣೆಗಳಿವೆ. ಪಶ್ಚಿಮ ಜಯಂತಿಯಾ ಹಿಲ್ಸ್ ಹಾಗೂ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಗಳ ಹಲವೆಡೆ ಪ್ರಾಕೃತಿಕ ಅದ್ಭುತಗಳು ಕಂಡುಬರುತ್ತದೆ... ಅದುವೇ ಬೇರುಗಳ ಸೇತುವೆ. ಆಲದ ಮರದ ಬೇರುಗಳು ಹಾಗೂ ಬಿಳಲುಗಳಿಂದ ಈ ಸೇತುವೆ ನಿರ್ಮಾಣ ಮಾಡಲಾಗುತ್ತವೆ.
ಮಳೆ ಎಂಬುದು ಮೇಘಾಲಯಕ್ಕಿರುವ ಅನ್ವರ್ಥ ನಾಮವೆಂದೂ ಹೇಳಬಹುದು. ಇಲ್ಲಿ ಅತೀವ ಮಳೆಯಾಗುತ್ತದೆ. ಅದಕ್ಕಾಗಿಯೇ, ಹಲವಾರು ವರ್ಷಗಳ ಹಿಂದೆ ಇಲ್ಲಿನ ಮೂಲನಿವಾಸಿಗಳು, ಪ್ರಕೃತಿಯ ಬಗ್ಗೆ ಅಪಾರ ಜ್ಞಾನವಿರುವವರು ಇಲ್ಲಿನ ನದಿಯ ದಡದಲ್ಲೆಲ್ಲಾ ಆಲದ ಮರದ ಸಸಿಗಳನ್ನು ಬೆಳೆಸಿದರು. ಈ ಆಲದ ಮರ ಬೆಳೆದಂತೆಲ್ಲಾ ಅದರ ಬೇರುಗಳು, ಬಿಳಲುಗಳು ಉದ್ದಕ್ಕೆ ಬೆಳೆಯುತ್ತವೆ. ಈ ಬೇರುಗಳು ಹಾಗೂ ಬಿಳಲುಗಳಿಂದ ಬೇರುಗಳ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ, ಇದು ಒಂದೇ ರಾತ್ರಿಯಿಂದಾಗುವ ಕೆಲಸವಲ್ಲ. ಹತ್ತಿರ ಹತ್ತಿರವಿರುವ ಆಲದ ಮರದ ಬೇರುಗಳನ್ನು ಒಂದಕ್ಕೊಂದು ಜೋಡಿಸಿ, ಅದು ಬೆಳೆಯುತ್ತಿರುವಂತೆ ಬಳಕೆಗೆ ಸೂಕ್ತವಾಗುವ ರೀತಿಯಲ್ಲಿ ಮಾರ್ಪಾಡು ಮಾಡುವುದು ಒಂದು ಬಗೆಯ ನಿರಂತರ ಪ್ರಕ್ರಿಯೆ. ಒಂದೊಂದು ಸೇತುವೆ ನಿರ್ಮಾಣಕ್ಕೆ ಸುಮಾರು 10ರಿಂದ 15 ವರ್ಷಗಳಷ್ಟು ಕಾಲ ಬೇಕಾಗುತ್ತವೆ. ಆದರೆ, ಒಮ್ಮೆ ಬಳಕೆಗೆ ಲಭ್ಯವಾದರೆ, ಅದು ಸುಮಾರು 500 ವರ್ಷಗಳಷ್ಟು ಕಾಲ ಬಳಸಲೂ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ. ಇಲ್ಲಿ ಕೆಲವೊಂದು ಸೇತುವೆಗಳು ಸುಮಾರು 65 ಅಡಿ ಉದ್ದವಿದ್ದು, 6 ರಿಂದ 8 ಅಡಿಗಳಷ್ಟು ಅಗಲವಿದೆ. ಈ ಸೇತುವೆ ಎಷ್ಟೊಂದು ಗಟ್ಟಿಯಾಗಿದೆ ಅಂದರೆ, ಏಕಕಾಲದಲ್ಲಿ ಇದರ ಮೇಲೆ ಸುಮಾರು 500 ಜನರು ನಿಂತುಕೊಳ್ಳಬಹುದಾಗಿದೆ. ದಕ್ಷಿಣ ಚಿರಾಪುಂಜಿಯ ನಂಗ್ರಿಯಾತ್ ಗ್ರಾಮದಲ್ಲಿ ಸಾಮಾನ್ಯ ಬೇರು ಸೇತುವೆಗಳಲ್ಲದೆ, ಬೇರಿನಿಂದ ನಿರ್ಮಾಣವಾದ ಛಾವಣಿ ಸೇತುವೆ (ಡಬಲ್ ಡೆಕ್ಕರ್)ಗಳೂ ನೋಡಲು ಸಿಗುತ್ತವೆ. ಆಲದ ಮರದ ಬೇರುಗಳಲ್ಲಿರುವ ನೈಸರ್ಗಿಕ ಹಿಗ್ಗುವಿಕೆಯ ಗುಣ ಈ ಸೇತುವೆಗಳನ್ನು ಸುದೃಢವಾಗಿಸುತ್ತದೆ. ಸೇತುವೆಗಳನ್ನು ಬಳಸುವ ಸಲುವಾಗಿ ಈ ಬೇರುಗಳ ಮೇಲೆ ಬಿದಿರು ಹಾಗೂ ಇನ್ನಿತರ ಮರದ ತೊಗಟೆಯ ಹೊದಿಕೆ ಮಾಡಲಾಗುತ್ತದೆ. ಬಳಿಕ ಮಣ್ಣು ಹಾಗೂ ಸಣ್ಣ ಕಲ್ಲುಗಳನ್ನೂ ಇವುಗಳ ಮೇಲೆ ಸುರಿಯಲಾಗುತ್ತದೆ. ಇಲ್ಲಿನ ನಿರಂತರ ಮತ್ತು ಅತೀವ ಮಳೆಯಿಂದಾಗಿ ಸಾಮಾನ್ಯವಾಗಿ ನಿರ್ಮಿಸುವ ಉಕ್ಕಿನ ಸೇತುವೆಗಳಿಗೆಲ್ಲ ಬೇಗ ತುಕ್ಕು ಹಿಡಿದು ಹಾಳಾಗುವ ಸಾಧ್ಯತೆಗಳು ಅಧಿಕ. ಅಂತಹ ಸಂದರ್ಭದಲ್ಲಿ ಈ ರೀತಿಯ ನೈಸರ್ಗಿಕ ಬೇರು ಸೇತುವೆ ಇಲ್ಲಿನ ಜನಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೇರುಗಳ ಸೇತುವೆ ಎಂಬದು ಆರ್ಗ್ಯಾನಿಕ್ ಇಂಜಿನಿಯರಿಂಗ್ ನ ಬಹು ದೊಡ್ಡ ಉದಾಹರಣೆ ಎಂಬುದು ಸಸ್ಯ ವಿಜ್ಞಾನಿಗಳ ಅಂಬೋಣ. ಈ ಸೇತುವೆಗಳ ನಿರ್ಮಾಣ ತಂತ್ರ ಯಾವಾಗ ಆರಂಭಿಸಲಾಯಿತು ಎಂದು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಏಶ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಪತ್ರಿಕೆಯಲ್ಲಿ 1844ರಲ್ಲಿ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಎಚ್. ಯೂಲೆ ಎಂಬವರು ಮೊದಲ ಬಾರಿಗೆ ಈ ಬಗ್ಗೆ ಉಲ್ಲೇಖಿಸಿದ್ದರಂತೆ.