ಗಣಿತವೀಗ ಕಬ್ಬಿಣದ ಕಡಲೆಯಲ್ಲ!!

►ಕುಗ್ರಾಮದ ಸರಕಾರಿ ಶಾಲೆಯ ಗಣಿತ ಶಿಕ್ಷಕನ ಅದ್ಭುತ ಸಾಧನೆ
► ಯುಟ್ಯೂಬ್ ವೀಡಿಯೊ ಮೂಲಕವೂ ಕಲಿಯಬಹುದು ಗಣಿತ..!
►ಗಣಿತವೆಂದರೆ ಭಯಪಡುವ ವಿದ್ಯಾರ್ಥಿಗಳಿಗೆ ಗಣಿತ ಇನ್ನಷ್ಟು ಸರಳ
ಪಠ್ಯಕ್ರಮ ಬದಲಾವಣೆ
2014-15ರಲ್ಲಿ ಸರಕಾರವು ಎಸೆಸೆಲ್ಸಿ ಪಠ್ಯಕ್ರಮ ಬದಲಾವಣೆ ಮಾಡಿದ ಸಂದರ್ಭ ಅನೇಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಹಿನ್ನೆಲೆಯಲ್ಲಿ ನನಗೆ ಆನ್‌ಲೈನ್ ಗಣಿತ ಪಠ್ಯಸಾಮಗ್ರಿರಚನೆಮತ್ತು ವೀಡಿಯೊ ಆಧಾರಿತ ಪಾಠ ಬೋಧನೆಯಿಂದ ಸಮರ್ಪಕವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನಿಸಿತು.
ಯಾಕೂಬ್ ಕೊಯ್ಯೂರ್
ಗಣಿತ ಶಿಕ್ಷಕ
ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಕಬ್ಬಿಣದ ಕಡಲೆಯೆಂದೇ ಮಕ್ಕಳು ತಲೆ ಕೆರೆಸಿಕೊಳ್ಳುವ ಗಣಿತವನ್ನು ಸರಳವಾಗಿ ವೀಡಿಯೊ ಮೂಲಕ ಕಲಿಸುತ್ತಾರೆ ಶಿಕ್ಷಕ ಯಾಕೂಬ್ ಕೊಯ್ಯೂರ್. ಸರಕಾರಿ ಶಾಲೆಯ ಶಿಕ್ಷಕರಾಗಿರುವ ಇವರು, ಈಗಾಗಲೇ ಸರಳ ಗಣಿತ ಸೂತ್ರಗಳನ್ನು ಒಳಗೊಂಡ 90ಕ್ಕೂ ಅಧಿಕ ಯೂಟ್ಯೂಬ್ ವೀಡಿಯೊಗಳು ಮತ್ತು 4 ಸಾವಿರಕ್ಕೂ ಅಧಿಕ ವೆಬ್‌ಪುಟಗಳನ್ನು ರಚಿಸಿದ್ದಾರೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಡ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಗಣಿತದಲ್ಲಿ ರಾಜ್ಯದಲ್ಲೇ ಮೊತ್ತ ಮೊದಲ ಗಣಿತ ಪ್ರಯೋಗಾಲಯವನ್ನು ನಿರ್ಮಿಸಿದ್ದರು. ಈ ಮೂಲಕ ಅವರು ಶಿಕ್ಷಕರ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಮೂಲಕ ಸರಕಾರಿ ಶಾಲೆಗಳಲ್ಲೂ ಅದ್ಭುತ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ರಾಜ್ಯದಲ್ಲೇ ಮೊದಲ ಗಣಿತ ಪ್ರಯೋಗಾಲಯ: ಎರಡು ವರ್ಷಗಳ ಹಿಂದೆ ತಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳ ಮತ್ತು ಸಹ ಶಿಕ್ಷಕರ ನೆರವಿನೊಂದಿಗೆ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ತಮ್ಮ ಶಾಲೆಯಲ್ಲಿಯೇ ಗಣಿತ ಪ್ರಯೋಗಾಲಯ ನಿರ್ಮಿ ಸಿದ ಹಿರಿಮೆ ಯಾಕೂಬ್‌ರದ್ದು. ಮೊದಲಿಗೆ ತಮ್ಮ ಹಳೆ ವಿದ್ಯಾರ್ಥಿ ಗಳದ್ದೇ ಒಂದು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಹಳೇ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರ ನೆರವಿನಿಂದ 2015ರಲ್ಲಿ ‘ಗಣಿತ ಪ್ರಪಂಚ’ ಪ್ರಯೋಗಾಲಯ ನಿರ್ಮಿಸಿದರು. ಇದು ರಾಜ್ಯದ ಪ್ರಥಮ ಗಣಿತ ಪ್ರಯೋಗಾಲಯ ಎಂಬುದು ವಿಶೇಷ. ಸೈದ್ಧಾಂತಿಕ ಕಲಿಕೆಗಿಂತ ಪ್ರಾಯೋಗಿಕ ಕಲಿಕೆ ಉತ್ತಮ ಎನ್ನುವ ಯಾಕೂಬ್‌ರವರು ‘ಗಣಿತ ಪ್ರಪಂಚ’ ಪ್ರಯೋಗಾಲಯದಲ್ಲಿ 8ನೆ ತರಗತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಧ್ವನಿ ಮತ್ತು ಚಿತ್ರ ಸಾಮಗ್ರಿಗಳನ್ನು ಬಳಸಿ ಗಣಿತದ ಪ್ರಾಯೋಗಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದಾರೆ. ‘ಗಣಿತದ ಪ್ರಾಯೋಗಿಕ ಚಟುವಟಿಕೆಗಳು ಮಕ್ಕಳ ಗ್ರಹಿಕಾ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಾಯೋಗಿಕ ಕಲಿಕೆಯು ಮಕ್ಕಳ ಸುಪ್ತ ಮನಸ್ಸಿಗೆ ತಲುಪುವುದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಯ ಜೊತೆ ಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಇದರಿಂದ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹೆಚ್ಚುತ್ತದೆ’ ಎನ್ನುತ್ತಾರೆ ಶಿಕ್ಷಕ ಯಾಕೂಬ್. ಪ್ರಸ್ತುತ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುವ ಆಂಗ್ಲ ಮಾಧ್ಯಮ ಗಣಿತ ಕಲಿಕಾ ಸಾಮಗ್ರಿಗಳನ್ನು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೂ ಒದಗಿಸಬೇಕೆಂಬ ಉದ್ದೇಶದಿಂದ ತಾವೇ ಅತ್ಯುತ್ತಮ ಕನ್ನಡ ಮಾಧ್ಯಮದ ಕಲಿಕಾ ಸಾಮಗ್ರಿ ಸಿದ್ಧಪಡಿಸಿ ಸಾವಿರಾರು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಒದಗಿಸಿದ್ದಾರೆ.
ಬಹಳಷ್ಟು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಆದರೆ ಯಾಕೂಬ್ ಕೊಯ್ಯೂರ್‌ರ ಗಣಿತ ಕುರಿತಾದ ಮಾಹಿತಿಯ ವೆಬ್‌ಪುಟ್‌ಗಳು ಹಾಗೂ ಯೂಟ್ಯೂಬ್ ಪಾಠ ಬೋಧನಾ ಸಾಮಗ್ರಿ ಎಸೆಸೆಲ್ಸಿ ಮಕ್ಕಳು ತಮ್ಮ ಗಣಿತ ಪರೀಕ್ಷೆಯಲ್ಲಿ ಉತೀರ್ಣರಾಗಲೂ ಪೂರಕವಾಗಿವೆ.
‘‘ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಉತ್ತಮ ಸಂಘಟನಾ ಮನೋಭಾವದಿಂದ ಸರಕಾರಿ ಶಾಲೆಯಲ್ಲಿ ಮೊತ್ತ ಮೊದಲು ಗಣಿತ ಪ್ರಯೋಗಾಲಯ ನಿರ್ಮಿಸಿದ ಹೆಮ್ಮೆ ನಮ್ಮ ಶಾಲೆಯದ್ದು. ಇದಕ್ಕಾಗಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದ ಯಾಕೂಬ್ ಕೊಯ್ಯೂರ್ ಅವರ ಸಾಧನೆ ಹೆಮ್ಮೆಯ ಸಂಗತಿ’’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ಬಿ.
ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯಿಂದ ಕಲಿಕೆ ಸುಲಭ
ಶಿಕ್ಷಕರು ತಮ್ಮ ಪಾಠ ಬೋಧನೆಯ ಜೊತೆಗೆ ಆಧುನಿಕ ತಂತ್ರಜ್ಞಾನಗಳಾದ ಯುಟ್ಯೂಬ್ ವೀಡಿಯೊ ಪಾಠ ಬೋಧನೆ ಮತ್ತು ಪವರ್ ಪಾಯಿಂಟ್ ಬಳಸುವ ಮೂಲಕ ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಬಹುದಾಗಿದೆ. ಇದರಿಂದ ಶಿಕ್ಷಕರ ಪಾಠ ಪುನರಾವರ್ತನೆ ಶ್ರಮ ಕಡಿಮೆಯಾಗುವುದರ ಜೊತೆ ಮಕ್ಕಳು ತಮ್ಮ ಮನೆಗಳಲ್ಲೂ ಈ ಆನ್‌ಲೈನ್ ಪಾಠವನ್ನು ಪುನರ್ ಮನನ ಮಾಡಿಕೊಳ್ಳಬ ಹುದಾಗಿದೆ ಎನ್ನುತ್ತಾರೆ ಯಾಕೂಬ್ ಕೊಯ್ಯೂರ್.

ಕಠಿಣ ಪರಿಶ್ರಮ, ಸಾಧಿಸಬೇಕು ಎಂಬ ಛಲದಿಂದ ತಮ್ಮ ವೃತ್ತಿ ಕೌಶಲ್ಯ, ನೈಪುಣ್ಯದೊಂದಿಗೆ ಕಾರ್ಯ ಪ್ರವೃತರಾದ ಯಾಕೂಬ್‌ರವರು, ಯುಟ್ಯೂಬ್ ಪಾಠ ಬೋಧನೆ ಹಾಗೂ ವೆಬ್‌ಪುಟ್ ಗಳಲ್ಲಿ ಗಣಿತ ಕುರಿತ ಹಲವು ಸಂಗತಿಗಳನ್ನು ಹಂಚಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾವಿರಾರು ಗಣಿತ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದರಿ ಶಿಕ್ಷಕರಾಗಿದ್ದಾರೆ.
ಶಿವಪುತ್ರ ಸುಣಗಾರ್, ಸಹ ಶಿಕ್ಷಕ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ‘ಪಾಸಿಂಗ್ ಪ್ಯಾಕೇಜ್’
http://www.inyatrust.co.in/2016/05/yakub.htmlಯಾಕೂಬ್ ಕೊಯ್ಯೂರ್ ರಚಿಸಿದ ಸುಮಾರು 750ಕ್ಕೂ ಅಧಿಕ ಪುಟಗಳ ಗಣಿತ ಕಲಿಕಾ ಸಾಮಗ್ರಿಯಲ್ಲಿ 360ಕ್ಕೂ ಅಧಿಕ ಪುಟಗಳು ಕನ್ನಡ ಹಾಗೂ ಇನ್ನಿತರ ಪುಟಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅಧ್ಯಯನ ಸಾಮಗ್ರಿ ಲಭ್ಯವಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳು ವೀಡಿಯೊ ಪಾಠ ಬೋಧನೆ, ಕಲಿಕಾ ಸಾಮಗ್ರಿ, ಪ್ರಶ್ನೋತ್ತರ ಮತ್ತು ‘ಪಾಸಿಂಗ್ ಪ್ಯಾಕೇಜ್’ನ್ನು ಅಂತರ್ಜಾಲ ತಾಣ ನಲ್ಲಿ ಪಡೆಯಬಹುದಾಗಿದೆ.







