ಜಗತ್ತಿನ ಅತೀ ಕಲುಷಿತ ಪ್ರದೇಶಗಳ ಸಾಲಿಗೆ ಮುಂಬೈ ಕರಾವಳಿ

ಮುಂಬೈ, ಕೇರಳ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪ ಸಮೀಪದ ಸಮುದ್ರಗಳು ಜಗತ್ತಿನಲ್ಲೇ ಅತ್ಯಂತ ಕಲುಷಿತ ಸಾಗರಪ್ರದೇಶಗಳ ಸಾಲಿಗೆ ಸೇರಿರುವುದಾಗಿ ಜಾಗತಿಕ ಅಧ್ಯಯನ ಸಂಸ್ಥೆಯ ವರದಿಯೊಂದು ತಿಳಿಸಿದೆ.
ಅಲ್ಫ್ರೆಡ್ ವೆಗೆನೆರ್ ಇನ್ಸ್‌ಟಿಟ್ಯೂಟ್ (ಎಡಬ್ಲುಐ), ಧ್ರುವೀಯ ಹಾಗೂ ಸಾಗರ ಸಂಶೋಧನೆಗಾಗಿನ ಹೆಮ್‌ಹೋಲ್ಟ್ಝ್ ಕೇಂದ್ರದ ಸಂಶೋಧಕರು ಇದೇ ಮೊದಲ ಬಾರಿಗೆ ಸಮುದ್ರ ತ್ಯಾಜ್ಯಗಳ ಕುರಿತಾದ 1,237 ವೈಜ್ಞಾನಿಕ ಅಧ್ಯಯನಗಳನ್ನು ಒಟ್ಟುಗೂಡಿಸಿ, ‘ಲಿಟ್ಟರ್‌ಬೇಸ್’ ಎಂಬ ದತ್ತಾಂಶ ಆಧಾರಿತ ಸಮಗ್ರ ವರದಿಯನ್ನು ತಯಾರಿಸಿದ್ದಾರೆ. ಜಗತ್ತಿನಲ್ಲಿ ಗರಿಷ್ಠ ಪ್ರಮಾಣದ ಸಮುದ್ರ ಪ್ಲಾಸ್ಟಿಕ್ ಮಾಲಿನ್ಯವಿರುವ ಪ್ರದೇಶಗಳನ್ನು ಗುರುತಿಸುವ ಜಾಗತಿಕ ನಕಾಶೆಯೊಂದನ್ನು ಲಿಟ್ಟರ್‌ಬೇಸ್ ಸ್ಥಾಪಿಸಿದೆ. ತ್ಯಾಜ್ಯಗಳು ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್, ಹಲವು ದಶಕಗಳಿಂದ ನಮ್ಮ ನದಿಗಳನ್ನು ಹಾಗೂ ತೊರೆಗಳನ್ನು ಮಲಿನಗೊಳಿಸುತ್ತಿದ್ದು, ಕಟ್ಟಕಡೆಯದಾಗಿ ಅವು ಸಮುದ್ರವನ್ನು ಸೇರುತ್ತವೆ.
ಮುಂಬೈ ಕರಾವಳಿ ಹಾಗೂ ಅದರ ಪಕ್ಕದ ಸಮುದ್ರವು ಅತ್ಯಧಿಕ ಮಾಲಿನ್ಯ ಪೀಡಿತವಾದ ಪ್ರದೇಶವಾಗಿದೆ. ಈ ವರದಿಯಲ್ಲಿ ಮುಂಬೈಯ ಬೀಚ್‌ಗಳಲ್ಲಿರುವ ಪ್ಲಾಸ್ಟಿಕ್ ಅವಶೇಷಗಳ ಬಗ್ಗೆ ವಿಶ್ಲೇಷಣಾತ್ಮಕ ಅಧ್ಯಯನವನ್ನು ಮಾಡಲಾಗಿದೆ. ಮುಂಬೈ ಮಹಾನಗರದ ನಾಲ್ಕು ಬೀಚ್‌ಗಳಾದ ಜುಹು, ವರ್ಸೊವಾ, ದಾದರ್ ಹಾಗೂ ಅಕ್ಸಾಗಳಲ್ಲಿ ಪ್ರತಿ ಚ.ಕಿ.ಮೀ.ಗೆ ಸರಾಸರಿ 68.83 ತ್ಯಾಜ್ಯಸಾಮಗ್ರಿಗಳು ಪತ್ತೆಯಾಗಿವೆ. ಅವುಗಳಲ್ಲಿ ಹೆಚ್ಚಿನವು (41.85 ಶೇ.)ದಷ್ಟು 1 ಮೀಟರ್‌ನಿಂದ 5 ಮೀಟರ್‌ವರೆಗಿನ ಮೈಕ್ರೋಪ್ಲಾಸ್ಟಿಕ್‌ಗಳಾಗಿವೆ.

ಈ ಅಧ್ಯಯನ ಪ್ರಬಂಧದ ಮುಖ್ಯ ಲೇಖಕಿ, ಶ್ರೀಲಂಕಾದ ರಾಷ್ಟ್ರೀಯ ಜಲ ಸಂಪನ್ಮೂಲಗಳ ಸಂಶೋಧನೆ ಹಾಗೂ ಅಭಿವೃದ್ಧಿ ಏಜೆನ್ಸಿಯ ವಿಜ್ಞಾನಿ ಎಚ್.ಬಿ.ಜಯಶ್ರೀ ಅವರು ಮುಂಬೈ ಸುತ್ತಮುತ್ತಲಿನ ಸಾಗರ ಜಗತ್ತಿನ ಅತ್ಯಂತ ಕಲುಷಿತ ಪ್ರದೇಶ ಎಂದು ಹೇಳಿದ್ದಾರೆ. ‘‘ಮನರಂಜನಾ ಹಾಗೂ ಧಾರ್ಮಿಕ ಚಟುವಟಿಕೆಗಳು ಮತ್ತು ಮೀನುಗಾರಿಕೆಯು ತ್ಯಾಜ್ಯಗಳ ಶೇಖರಣೆಗೆ ಪ್ರಮುಖ ಕೊಡುಗೆ ನೀಡುವ ಅಂಶಗಳಾಗಿವೆ. ಗೃಹತ್ಯಾಜ್ಯಗಳ ಕಳಪೆ ನಿರ್ವಹಣೆಯು ಕೂಡಾ ಅಂತಿಮವಾಗಿ ಸಮುದ್ರವನ್ನು ಕಲುಷಿತಗೊಳಿಸುತ್ತಿದೆಯೆಂಬುದನ್ನು ಕೂಡಾ ನಾವು ಪತ್ತೆಹಚ್ಚಿದ್ದೇವೆ’’ ಎಂದವರು ವರದಿಯಲ್ಲಿ ತಿಳಿಸಿದ್ದಾರೆ.
ಈ ಮಾಲಿನ್ಯದಿಂದಾಗಿ ಸಮುದ್ರ ಪ್ರದೇಶದ ಸನಿಹದಲ್ಲಿ ವಾಸಿಸುತ್ತಿರುವ ಜನರ ಜೀವನೋಪಾಯಕ್ಕೆ ಬೆದರಿಕೆ ಹೆಚ್ಚುತ್ತಿದೆಯಲ್ಲದೆ, ಸಾಗರ ಜೀವವೈವಿಧ್ಯತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ.
‘‘ಎಡಬ್ಲುಐ ತ್ಯಾಜ್ಯ ದತ್ತಾಂಶ (ಲಿಟ್ಟರ್‌ಬೇಸ್) ವರದಿಯಲ್ಲಿ, ಇದೇ ಮೊದಲ ಬಾರಿಗೆ ತ್ಯಾಜ್ಯಗಳಿಂದ ಬಾಧಿತವಾದ ಪ್ರಾಣಿ ಹಾಗೂ ಸಸ್ಯ ಜೀವಿಗಳ ಎಲ್ಲಾ ಗುಂಪುಗಳನ್ನು ವಿಶ್ಲೇಷಿಸಲಾಗಿದೆ ಹಾಗೂ ಅದನ್ನು ನಕಾಶೆಯ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ’’ ಎಂದು ಎಡಬ್ಲುಐನ ಡಾ. ಮೆಲನಿ ಬರ್ಗ್‌ಮನ್ ಹೇಳುತ್ತಾರೆ. ‘‘ಪ್ರಸ್ತುತ 1,220 ಬಗೆಯ ಜೀವಿಗಳು ತ್ಯಾಜ್ಯಗಳಿಂದ ಬಾಧಿತವಾಗಿದ್ದು, ಅವುಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದೆ’’ ಎಂದು ಜಯಶ್ರೀ ತಿಳಿಸಿದ್ದಾರೆ.
ಭಾರತ, ಚೀನಾ, ಜಪಾನ್, ಇಂಡೋನೇಶ್ಯ, ಮಲೇಶ್ಯ, ಆಸ್ಟ್ರೇಲಿಯ, ದ.ಆಫ್ರಿಕ, ಅಮೆರಿಕ, ಯುರೋಪ್‌ನ ವಿಶಾಲವಾದ ಭಾಗ, ದಕ್ಷಿಣ ಆಮೆರಿಕದ ಪಶ್ಚಿಮ ಕರಾವಳಿಯಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತದ ಏಕಾಂತ ಪ್ರದೇಶಗಳಲ್ಲಿ ತ್ಯಾಜ್ಯ ಜಮಾವಣೆಯಾಗಿರುವುದನ್ನು ನಕ್ಷೆಯ ಮೂಲಕವೂ ವರದಿಯು ದಾಖಲಿಸಿದೆ. ‘‘ನಮ್ಮ ನಕ್ಷೆಯಲ್ಲಿರುವ ಖಾಲಿ ಜಾಗಗಳು ಸ್ವಚ್ಛ್ಛವಾದ ಜಾಗಗಳನ್ನು ಪ್ರತಿನಿಧಿಸುತ್ತಿಲ್ಲ. ಬದಲಿಗೆ ಅವು ವೀಕ್ಷಣೆಗೊಳಗಾಗದ ಸ್ಥಳಗಳಾಗಿವೆ’’ ಎಂದು ಬರ್ಗ್‌ಮ್ಯಾನ್ ಸ್ಪಷ್ಟಪಡಿಸಿದ್ದಾರೆ.
ಉಪಗ್ರಹ ಮೂಲಕ ತೆಗೆಯಲಾದ ಭಾರತದ ನಕಾಶೆಯಲ್ಲಿ ಅಧಿಕ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ಹರಡಿರುವ ಸ್ಥಳಗಳನ್ನು ತೋರಿಸಿಕೊಟ್ಟಿದೆ. ಮುಂಬೈನ ಕಡಲಕಿನಾರೆಯೂ ಅವುಗಳಲ್ಲೊಂದಾಗಿದೆ.
ನಮ್ಮ ಸಮುದ್ರಗಳಲ್ಲಿ ಶೇಖರಗೊಂಡಿರುವ ತ್ಯಾಜ್ಯಗಳು
ಪ್ರತಿವರ್ಷವೂ ಜಗತ್ತಿನಾದ್ಯಂತ 8 ದಶಲಕ್ಷ ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರಕ್ಕೆ ಸೋರಿಕೆಯಾಗುತ್ತಿದೆ.
2015ರಲ್ಲಿ 322 ದಶಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್‌ನ್ನು 2015ರಲ್ಲಿ ಉತ್ಪಾದಿಸ ಲಾಗಿದ್ದು, ಇದು 900 ಎಂಪೈರ್‌ಸ್ಟೇಟ್ ಕಟ್ಟಡಗಳ ಎತ್ತರಕ್ಕೆ ಸರಿಸಮಾನವಾಗಿದೆ.
ಅವುಗಳಲ್ಲಿ 13 ದಶಲಕ್ಷ ಟನ್‌ಗಳಷ್ಟು ತ್ಯಾಜ್ಯ ಸಮುದ್ರದ ದಾರಿ ಹಿಡಿಯುತ್ತಿದ್ದು, ಇದು ಪ್ರತಿ ನಿಮಿಷಕ್ಕೆ ಎರಡು ತ್ಯಾಜ್ಯಸಂಗ್ರಹ ಟ್ರಕ್‌ಗಳಲ್ಲಿ ಪ್ಲಾಸ್ಟಿಕ್‌ನ್ನು ಸಮುದ್ರಕ್ಕೆ ಸುರಿಯುವುದಕ್ಕೆ ಸರಿಸಮವಾಗಿದೆ.
ಪ್ಲಾಸ್ಟಿಕ್ ನಮ್ಮ ಮೀನುಗಾರಿಕೆ, ಸಾಗರ ಪರಿಸರ ವ್ಯವಸ್ಥೆ ಹಾಗೂ ಆರ್ಥಿಕತೆಯ ಮೇಲೆ ಅನಾಹುತವನ್ನುಂಟು ಮಾಡುತ್ತಿದ್ದು, ಇದರಿಂದಾಗಿ ನಮ್ಮ ಪರಿಸರಕ್ಕಾಗುವ ಹಾನಿಯ ವೆಚ್ಚವು ವರ್ಷಕ್ಕೆ 13 ಶತಕೋಟಿ ಡಾಲರ್‌ಗಳಾಗಿವೆ.
ಸಮುದ್ರ ತ್ಯಾಜ್ಯ ಅಂದರೇನು?
ಕರಾವಳಿ ಅಥವಾ ಸಮುದ್ರ ಪರಿಸರಕ್ಕೆ ವಿಸರ್ಜಿಸಲ್ಪಡುವ ಮಾನವರು ಸೃಷ್ಟಿಸಿದ ತ್ಯಾಜ್ಯಗಳು.
ಪೇಪರ್, ಜವಳಿ, ಗ್ಲಾಸ್, ರಬ್ಬರ್,ಮರ, ಲೋಹ, ಸೆರಾಮಿಕ್ಸ್, ಪ್ಲಾಸ್ಟಿಕ್.
ಶೇ.60ರಿಂದ 90ರಷ್ಟು ಸಾಗರ ತ್ಯಾಜ್ಯವು ಪ್ಲಾಸ್ಟಿಕ್ ಪಾಲಿಮರ್‌ಗಳಿಂದ ನಿರ್ಮಿತವಾಗಿವೆ.
ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ಚೀಲಗಳು, ಮೀನುಗಾರಿಕಾ ಪರಿಕರಗಳು, ಆಹಾರ ಹಾಗೂ ಲಘುಪಾನೀಯ ಕಂಟೈನರ್‌ಗಳು.







