ರಾಜಸ್ಥಾನ ಪೊಲೀಸರಿಗೆ ಮೈಲಿಗೆಯಾ ಗಂಗಾ
ಲಿಂಗಾಂತರಿಯ ನೇಮಕಕ್ಕೆ ಹಿಂದೇಟು ಹಾಕುತ್ತಿರುವ ಪೊಲೀಸ್ ಇಲಾಖೆ

ವೈದ್ಯಕೀಯ ಪರೀಕ್ಷೆಗೊಳಗಾದ ಬಳಿಕ ಗಂಗಾ ಅವರ ಪ್ರಕರಣವನ್ನು ಜೈಪುರದ ಪೊಲೀಸ್ ಮುಖ್ಯ ಕಾರ್ಯಾಲಯದ ಪ್ರಸ್ತಾವನೆಗೆ ಒಪ್ಪಿಸಲಾಗಿತ್ತು. ಅದನ್ನು ಕಾರ್ಯಾಲಯವು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಆದಾಗ್ಯೂ ಗಂಗಾರ ಭವಿಷ್ಯದ ಬಗ್ಗೆ ಈವರೆಗೂ ಯಾವುದೇ ನಿರ್ಧಾರವಾಗಿಲ್ಲ.
ತಮಿಳುನಾಡಿನ ಕೆ. ಪ್ರೀತಾ ಯಾಶಿನಿಗಿಂತ ಕನಿಷ್ಠ ಒಂದು ವರ್ಷ ಮೊದಲು ರಾಜಸ್ಥಾನದ ಗಂಗಾ ಕುಮಾರಿಗೆ ಕಾನ್‌ಸ್ಟೇಬಲ್ ಆಗಿ 2015ರ ಡಿಸೆಂಬರ್‌ನಲ್ಲಿ ನೇಮಕಗೊಳ್ಳಲು ಅವಕಾಶ ನೀಡಿದ್ದಲ್ಲಿ, ಭಾರತದ ಪೊಲೀಸ್ ಪಡೆಯ ಪ್ರಪ್ರಥಮ ಲಿಂಗಾಂತರಿ ಪೊಲೀಸ್ ಎಂಬ ದಾಖಲೆ ಅವರದ್ದಾಗಿರುತ್ತಿತ್ತು.
ಯಾಶಿನಿ ಚೆನ್ನೈನಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ ಧರ್ಮಪುರಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸಬ್‌ಇನ್‌ಸ್ಪೆೆಕ್ಟರ್ ಆಗಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಯಾಶಿನಿಯ ಸೇರ್ಪಡೆಗೂ ಪೊಲೀಸ್ ಇಲಾಖೆಯಿಂದ ಅಡ್ಡಿ ಎದುರಾಗಿತ್ತಾದರೂ, ಮದ್ರಾಸ್ ಹೈಕೋರ್ಟ್‌ನ ಮಧ್ಯ ಪ್ರವೇಶದ ಬಳಿಕ ಆಕೆ ಸೇವೆಗೆ ಸೇರ್ಪಡೆಗೊಳ್ಳಲು ಅನುಮತಿ ನೀಡಿತ್ತು.
ರಾಜಸ್ಥಾನದಲ್ಲಿ ಗಂಗಾ ಅವರ ಬ್ಯಾಚ್‌ಮೇಟ್‌ಗಳು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಗಂಗಾ ಲಿಂಗಾಂತರಿಯೆಂದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾದ ಬಳಿಕ ಆಕೆಗೆ ಪೊಲೀಸ್ ಸೇವೆಯಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಪೊಲೀಸ್ ಪಡೆಯಲ್ಲಿ ಲಿಂಗಾಂತರಿಗಳ ನೇಮಕಾತಿ ಬಗ್ಗೆ ಸ್ಪಷ್ಟವಾದ ನಿಯಮಗಳು ಇಲ್ಲದಿರುವುದರಿಂದ ಪೊಲೀಸ್ ಅಧಿಕಾರಿಗಳು ಗಂಗಾ ನೇಮಕಕ್ಕೆ ಹಿಂದೇಟು ಹಾಕಿದ್ದರು.
ಇದು ನಡೆದು ಇವತ್ತಿಗೆ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ಆದರೆ ಗಂಗಾರ ಕಾನೂನು ಸಮರ ಈಗಲೂ ಆರಂಭಿಕ ಹಂತದಲ್ಲೇ ಇದೆ. ಕಳೆದ ಡಿಸೆಂಬರ್‌ನಲ್ಲಿ ಗಂಗಾ ರಾಜಸ್ಥಾನ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಬಗ್ಗೆ ಮೂರು ವಾರಗಳೊಳಗೆ ಉತ್ತರಿಸುವಂತೆ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಪ್ರಕರಣದ ಮುಂದಿನ ಆಲಿಕೆಯು ಎಪ್ರಿಲ್ 26ರಂದು ನಡೆಯಲಿದೆ.
2013ರಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯು 12,178 ಕಾನ್‌ಸ್ಟೇಬಲ್‌ಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿ, ಜಾಹೀರಾತೊಂದನ್ನು ಪ್ರಕಟಿಸಿತ್ತು. 1.25 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.
ವೈದ್ಯಕೀಯ ಪರೀಕ್ಷೆಗೊಳಗಾದ ಬಳಿಕ ಗಂಗಾ ಅವರ ಪ್ರಕರಣವನ್ನು ಜೈಪುರದ ಪೊಲೀಸ್ ಮುಖ್ಯ ಕಾರ್ಯಾಲಯದ ಪ್ರಸ್ತಾವನೆಗೆ ಒಪ್ಪಿಸಲಾಗಿತ್ತು. ಅದನ್ನು ಕಾರ್ಯಾಲಯವು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಆದಾಗ್ಯೂ ಗಂಗಾರ ಭವಿಷ್ಯದ ಬಗ್ಗೆ ಈವರೆಗೂ ಯಾವುದೇ ನಿರ್ಧಾರವಾಗಿಲ್ಲ.
‘‘ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ನ್ಯಾಯ ದೊರೆಯುವುದೆಂಬ ಭರವಸೆ ನನಗಿದೆ’’ ಎಂದು ಗಂಗಾ ಇಂಗ್ಲಿಷ್ ದೈನಿಕವೊಂದಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಆಕೆ ಜಾಲೋರ್ ಜಿಲ್ಲೆಯ ಜಖಾರಿ ಗ್ರಾಮದಲ್ಲಿ 20ಕ್ಕೂ ಅಧಿಕ ಮಂದಿ ಸದಸ್ಯರಿರುವ ಕೂಡುಕುಟುಂಬದೊಂದಿಗೆ ವಾಸವಾಗಿದ್ದಾರೆ.
ಆದರೆ, ದೇಶದ ಪ್ರಪ್ರಥಮ ಲಿಂಗಾಂತರಿ ಪೊಲೀಸ್ ತಾನೆಂಬ ದಾಖಲೆಯಿಂದ ತಾನು ವಂಚಿತಳಾಗಿರುವ ಬಗ್ಗೆ ತನಗೆ ಬೇಸರವಿದೆಯೆಂದು ಆಕೆ ಹೇಳುತ್ತಾರೆ.
ರಾಣಿವಾಡ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಲಿಂಗಾಂತರಿಯೆಂಬ ಕಾರಣಕ್ಕಾಗಿ ಯಾವುದೇ ಸಮಸ್ಯೆ ಯನ್ನು ಎದುರಿಸಿರಲಿಲ್ಲ. ‘‘ನನ್ನನ್ನು ಯಾರೂ ಕೆಟ್ಟದಾಗಿ ನೋಡಿಕೊಳ್ಳಲಿಲ್ಲ. ದೇವರು ನನ್ನನ್ನು ಈ ರೀತಿಯಾಗಿ ಸೃಷ್ಟಿಸಿದ್ದಾರೆಂಬುದನ್ನು ಅವರು ಅರಿತುಕೊಂಡಿದ್ದರು. ವಾಸ್ತವವಾಗಿ ನಾನು ಪೊಲೀಸ್ ತರಬೇತಿಯಲ್ಲಿದ್ದಾಗಲೂ ನಾನು ಭೇಟಿಯಾದ ಎಲ್ಲಾ ಅಧಿಕಾರಿಗಳು ಕೂಡಾ ಒಂದಲ್ಲ ಒಂದು ದಿನ ನನಗೆ ಉದ್ಯೋಗ ದೊರೆಯುವುದೆಂದು ಹೇಳುತ್ತಿದ್ದರು. ಆದರೆ ಅದು ಯಾವಾಗ ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ’’ ಎಂದು ಆಕೆ ಹೇಳುತ್ತಾರೆ.
ಗಂಗಾ ಪ್ರಕರಣವು ಎಪ್ರಿಲ್ 26ರಂದು ಆಲಿಕೆಗಾಗಿ ನ್ಯಾಯಾಲಯದ ಮುಂದೆ ಬರುವ ಸಾಧ್ಯತೆಯಿದೆಯೆಂದು ಅವರ ವಕೀಲ ತೇಜರಾಮ್ ಚೌಧುರಿ ಹೇಳುತ್ತಾರೆ. ‘‘ ಸರಕಾರವು ಇದಕ್ಕೂ ಮೊದಲೇ ನ್ಯಾಯಾಲಯಕ್ಕೆ ಉತ್ತರಿಸುವುದು ಹಾಗೂ ಇದರಿಂದಾಗಿ ಪ್ರಕರಣವು ಶೀಘ್ರದಲ್ಲೇ ಇತ್ಯರ್ಥಗೊಳ್ಳುವುದೆಂಬುದಾಗಿ ನಾವು ಆಶಿಸುತ್ತೇವೆ’’ ಎಂದವರು ಹೇಳುತ್ತಾರೆ.
ರಾಜಸ್ಥಾನವು 2016ರ ಆಗಸ್ಟ್‌ನಲ್ಲಿ ಲಿಂಗಾಂತರಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದ್ದು, ನಾಲ್ವರು ತೃತೀಯ ಲಿಂಗಿಗಳನ್ನು ಸದಸ್ಯರಾಗಿ ನೇಮಕಗೊಳಿಸಿದೆ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರು ಅಧ್ಯಕ್ಷರಾಗಿದ್ದಾರೆ. ಆದಾಗ್ಯೂ ಮಂಡಳಿಯು ಈವರೆಗೆ ಒಂದು ಬಾರಿಯೂ ಸಭೆ ಸೇರಿಲ್ಲವೆಂದು ಲಿಂಗಾಂತರಿ ಹೋರಾಟಗಾರ್ತಿ ಹಾಗೂ ಮಂಡಳಿಯ ಸದಸ್ಯೆಯೂ ಆಗಿರುವ ಪುಷ್ಪಾ ಹೇಳುತ್ತಾರೆ.
ಸುಪ್ರೀಂಕೋರ್ಟ್ 2015ರ ಎಪ್ರಿಲ್‌ನಲ್ಲಿ ನೀಡಿದ ಐತಿಹಾಸಿಕ ತೀರ್ಪೊಂದರಲ್ಲಿ ತೃತೀಯ ಲಿಂಗಿಗಳನ್ನು ಪುರುಷರೆಂದಾಗಲಿ ಅಥವಾ ಮಹಿಳೆಯರೆಂದಾಗಲಿ ಪರಿಗಣಿಸಲು ಸಾಧ್ಯವಿಲ್ಲವೆಂದು ಘೋಷಿಸಿತ್ತು. ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗಗಳಲ್ಲಿ ಅವರಿಗೆ ಮೀಸಲಾತಿ ದೊರೆಯುವುದನ್ನು ಖಾತರಿಪಡಿಸಬೇಕೆಂದು ಅದು ಆಗ್ರಹಿಸಿತ್ತು.
ಆದಾಗ್ಯೂ ಬಹುತೇಕ ರಾಜ್ಯಗಳಲ್ಲಿ ತೃತೀಯ ಲಿಂಗಿ ಗಳು ಇನ್ನೂ ಕೂಡಾ ಗುರುತಿನ ಚೀಟಿ ಪಡೆಯುವುದರಿಂದ ವಂಚಿತರಾಗಿದ್ದಾರೆ.







