ತೆಂಡುಲ್ಕರ್: ರಾಜ್ಯಸಭೆಯಲ್ಲೂ ‘ಭಯಂಕರ’ ದಾಖಲೆ
ಆದರೆ ತಲೆ ತಗ್ಗಿಸಬೇಕಾದ ಸ್ಕೋರ್ ಇದು...!

ಸೆಲೆಬ್ರಿಟಿ ಸಂಸದರಾಗಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಬಾಲಿವುಡ್‌ನ ಚಿರಯೌವನೆ ರೇಖಾ ಅವರು ರಾಜ್ಯಸಭೆಯ ಕಲಾಪಗಳಿಗೆ ಎಷ್ಟು ಸಲ ಹಾಜರಾಗಿದ್ದಾರೆ ಎಂದು ತಿಳಿಯುವ ಕುತೂಹಲವಿದೆಯೇ? ಎಸ್ಪಿಯ ರಾಜ್ಯಸಭಾ ಸದಸ್ಯ ನರೇಶ ಅಗರವಾಲ್ ಅವರು ಇತ್ತೀಚೆಗಷ್ಟೇ ಈ ಸೆಲೆಬ್ರಿಟಿಗಳ ಕಳಪೆ ಹಾಜರಾತಿಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. ರಾಜ್ಯಸಭೆಯ ಜಾಲತಾಣದಲ್ಲಿಯ ಇತ್ತೀಚಿನ ಮಾಹಿತಿಯಂತೆ ತೆಂಡುಲ್ಕರ್ ಅವರ ಹಾಜರಾತಿಯ ಪ್ರಮಾಣ ಕೇವಲ ಶೇ.6.6 ಮತ್ತು ಅವರು ರೇಖಾ ಅವರಿಗಿಂತ ಐದು ದಿನ ಹೆಚ್ಚು ಸದನದಲ್ಲಿ ಹಾಜರಾಗಿದ್ದಾರೆ. ಅಂದ ಹಾಗೆ ತೆಂಡುಲ್ಕರ್ ಅವರ ಈ ‘ಭಾರೀ ಸ್ಕೋರ್’ ಗಾಗಿ ಸರಕಾರವು ವ್ಯಯಿಸಿರುವ ಮೊತ್ತ ಬರೋಬ್ಬರಿ 58.8 ಲ.ರೂ.ಗಳು. ರೇಖಾ ಈ ವಿಷಯದಲ್ಲಿ ಸಚಿನ್‌ರನ್ನೂ ಮೀರಿಸಿದ್ದಾರೆ. ಅವರಿಗಾಗಿ ಸರಕಾರವು ವ್ಯಯಿಸಿರುವ ಮೊತ್ತ 65 ಲ.ರೂ.ಗಳು!
ರಾಜ್ಯಸಭೆ ಅಥವಾ ಮೇಲ್ಮನೆ 12 ನಾಮ ನಿರ್ದೇಶಿತ ಸದಸ್ಯರನ್ನು ಹೊಂದಿದೆ. ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಈ ಸದಸ್ಯರನ್ನು ನಾಮಕರಣ ಗೊಳಿಸುತ್ತಾರೆ. ಸಂವಿಧಾನದ ವಿಧಿ 80(3)ರಡಿ ರಾಷ್ಟ್ರಪತಿಗಳು ರಾಜ್ಯಸಭೆಗೆ ಗರಿಷ್ಠ 12 ಸದಸ್ಯರನ್ನು ನಾಮಕರಣಗೊಳಿಸಬಹುದಾಗಿದೆ ಮತ್ತು ಈ ಸದಸ್ಯರು ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ವ್ಯಕ್ತಿಗಳಾಗಿರುತ್ತಾರೆ.
ರಾಜ್ಯಸಭೆಯಲ್ಲಿ ಹಾಲಿ ಇರುವ 12 ನಾಮಕರಣಗೊಂಡಿರುವ ಸದಸ್ಯರ ಪೈಕಿ ನಾಲ್ವರು 2012ರಲ್ಲಿ, ಓರ್ವರು 2014ರಲ್ಲಿ ರಾಜ್ಯಸಭೆಯನ್ನು ಪ್ರವೇಶಿಸಿದ್ದರೆ ಇತರ ಏಳು ಜನರು 2016ರಲ್ಲಿ ಈ ಭಾಗ್ಯವನ್ನು ಪಡೆದಿದ್ದಾರೆ.
ಈ ಪೈಕಿ ನಾಲ್ವರು ಬಿಜೆಪಿಗೆ ಸೇರಿದ್ದು, ಅವರನ್ನು ಸದನದಲ್ಲಿ ಬಿಜೆಪಿ ಸದಸ್ಯರೆಂದೇ ಪರಿಗಣಿಸಲಾಗುತ್ತಿದೆ. ಸದಸ್ಯನೋರ್ವ ನಾಮಕರಣಗೊಂಡ ಆರು ತಿಂಗಳಲ್ಲಿ ರಾಜಕೀಯ ಪಕ್ಷವೊಂದನ್ನು ಸೇರಬಹುದಾಗಿದೆ. 2012ರಲ್ಲಿ ನಾಮಕರಣಗೊಂಡಿರುವವರಲ್ಲಿ ತೆಂಡುಲ್ಕರ್ ಮತ್ತು ರೇಖಾ ಸೇರಿದ್ದಾರೆ.
ಕೈಗಾರಿಕೋದ್ಯಮಿ ಅನು ಆಗಾ, ನ್ಯಾಯವಾದಿಗಳಾದ ಕೆ.ಪರಾಶರನ್ ಮತ್ತು ಕೆಟಿಎಸ್ ತುಲಸಿ, ಸಾಮಾಜಿಕ ಕಾರ್ಯಕರ್ತ ಸಂಭಾಜಿ ಛತ್ರಪತಿ, ಪತ್ರಕರ್ತ ಸ್ವಪನ್ ದಾಸಗುಪ್ತಾ, ನಟಿ ರೂಪಾ ಗಂಗೂಲಿ, ನಟ ಸುರೇಶ ಗೋಪಿ, ಅರ್ಥಶಾಸ್ತ್ರಜ್ಞ ನರೇಂದ್ರ ಜಾಧವ, ಕ್ರೀಡಾಪಟು ಮೇರಿ ಕೋಮ್ ಮತ್ತು ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಇತರ ನಾಮಕರಣ ಸದಸ್ಯರಾಗಿದ್ದಾರೆ.
ಕೇಳಿದ ಪ್ರಶ್ನೆಗಳು
ರಾಜ್ಯಸಭೆಯನ್ನು ಪ್ರವೇಶಿಸಿ ಐದು ವರ್ಷಗಳಾಗುತ್ತ ಬಂದರೂ ರೇಖಾ ಈವರೆಗೂ ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಈ ವಿಷಯದಲ್ಲಿ ತೆಂಡುಲ್ಕರ್ ಕೊಂಚ ವಾಸಿ, ಅವರು 22 ಪ್ರಶ್ನೆಗಳನ್ನು ಕೇಳಿದ್ದಾರೆ. ಇವರಿಬ್ಬರ ಜೊತೆಯಲ್ಲೇ ನಾಮಕರಣಗೊಂಡಿದ್ದ ಅನು ಆಗಾ ಕೂಡ ಈವರೆಗೆ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಎಲ್ಲ ನಾಮಕರಣ ಸದಸ್ಯರ ಪೈಕಿ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದು ಕೆಟಿಎಸ್ ತುಲಸಿ ಅವರು. ಏಳು ಸದಸ್ಯರು 2016ರಲ್ಲಷ್ಟೇ ನಾಮಕರಣಗೊಂಡಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಚರ್ಚೆಯಲ್ಲಿ ಪಾಲ್ಗೊಳ್ಳುವಿಕೆ
ಸಚಿನ್ ಮತ್ತು ರೇಖಾ ಈವರೆಗೆ ಒಂದೇ ಒಂದು ಚರ್ಚೆಯಲ್ಲಿ ಭಾಗವಹಿಸಿಲ್ಲ. ಹಾಗೆ ನೋಡಿದರೆ 2016ರಲ್ಲಿ ನಾಮಕರಣಗೊಂಡ ಸುರೇಶ ಗೋಪಿ ಮತ್ತು ಮೇರಿ ಕೋಮ್ ಅವರೇ ವಾಸಿ. ಅವರು ಅನುಕ್ರಮವಾಗಿ ಮೂರು ಮತ್ತು ಎರಡು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಸಂಸದರ ನಿಧಿ ಬಳಕೆ
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಯಲ್ಲಿ ರೇಖಾಗಿಂತ ತೆಂಡುಲ್ಕರ್ ಸಾಧನೆ ಉತ್ತಮವಾಗಿದೆ. ಈವರೆಗೆ ತನ್ನ ಪಾಲಿಗೆ ಲಭ್ಯವಿದ್ದ 25 ಕೋ.ರೂ.ಗಳಲ್ಲಿ 21.19 ಕೋ.ರೂ.ಗಳ ಕಾಮಗಾರಿಗಳಿಗೆ ಅವರು ಶಿಫಾರಸು ಮಾಡಿದ್ದು, ಈ ಪೈಕಿ 17.65 ಕೋ.ರೂ.ಗಳು ವೆಚ್ಚಕ್ಕೆ ಲಭ್ಯವಾಗಿವೆ. ರೇಖಾ 9.28 ಕೋ.ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದು, ವೆಚ್ಚಕ್ಕೆ ಲಭ್ಯವಾಗಿರುವ ಮೊತ್ತ 7.6 ಕೋ.ರೂ. ಈ ವಿಷಯದಲ್ಲಿ ತೆಂಡುಲ್ಕರ್ 2012ರಲ್ಲಿ ತನ್ನ ಜೊತೆ ನಾಮಕರಣಗೊಂಡಿದ್ದ ಇತರ ಎಲ್ಲ ಸದಸ್ಯರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ.
ಸರಕಾರವು ಮಾಡಿರುವ ವೆಚ್ಚ
ಪ್ರತಿಯೋರ್ವ ರಾಜ್ಯಸಭಾ ಸದಸ್ಯರು ಮಾಸಿಕ 50,000 ರೂ.ವೇತನ, 45,000 ರೂ.ಕ್ಷೇತ್ರ ಭತ್ತೆ, 15,000 ರೂ.ಕಚೇರಿ ವೆಚ್ಚ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ ಪ್ರಯಾಣ ವೆಚ್ಚ (ಟಿಎ)ಮತ್ತು ದೈನಂದಿನ ಭತ್ತೆ(ಡಿಎ)ಯನ್ನೂ ಪಡೆಯುತ್ತಾರೆ.
ರೇಖಾ ತನ್ನ ಜೊತೆಯಲ್ಲಿ ನಾಮಕರಣಗೊಂಡಿದ್ದ ಸದಸ್ಯರ ಪೈಕಿ ಅತ್ಯಂತ ಕನಿಷ್ಠ ಹಾಜರಾತಿ ಹೊಂದಿದ್ದರೂ ಅವರ ಮೇಲೆ ಅತ್ಯಂತ ಹೆಚ್ಚಿನ ಹಣ(65 ಲ.ರೂ.)ವ್ಯಯವಾಗಿದೆ. ತೆಂಡುಲ್ಕರ್‌ಗಾಗಿ 58.8 ಲ.ರೂ. ಮತ್ತು ಅನು ಆಗಾ ಅವರಿಗಾಗಿ 61.8 ಲ.ರೂ.ವ್ಯಯವಾಗಿವೆ. ವೇತನ ಮತ್ತು ಇತರ ಭತ್ತೆಗಳು ಎಲ್ಲ ಸದಸ್ಯರಿಗೂ ಸಮನಾಗಿದ್ದರೂ, ಟಿಎ/ಡಿಎಗಳಿಂದಾಗಿ ಮಾತ್ರ ಸದಸ್ಯರಿಗಾಗಿ ಸರಕಾರ ವ್ಯಯಿಸುವ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ. ಸದಸ್ಯರೋರ್ವರು ಹೆಚ್ಚು ಬಾರಿ ಸದನಕ್ಕೆ ಹಾಜರಾದರೆ ಮತ್ತು ಇತರರಿಗಿಂತ ಹೆಚ್ಚು ಪ್ರವಾಸ ಮಾಡಿದ್ದರೆ ಮಾತ್ರ ಅವರ ವೆಚ್ಚ ಹೆಚ್ಚಾಗುತ್ತದೆ. ಆದರೆ ರೇಖಾರ ಪ್ರಕರಣದಲ್ಲಿ ಇದು ತದ್ವಿರುದ್ಧವಾಗಿದೆ !
ಸದನಕ್ಕೆ ಹಾಜರಾದ ಪ್ರತಿಯೊಂದು ದಿನಕ್ಕೂ ಸದಸ್ಯರಿಗಾಗಿ ಸರಕಾರವು ವ್ಯಯಿಸಿರುವ ಸರಾಸರಿ ವೆಚ್ಚವನ್ನು ಪರಿಗಣಿಸಿದರೆ ರೇಖಾ ಪ್ರತೀ ದಿನ 3.6ಲ.ರೂ.ವೆಚ್ಚಕ್ಕೆ ಕಾರಣ ರಾಗಿದ್ದಾರೆ, ತೆಂಡುಲ್ಕರ್‌ಗಾಗಿ 2.56 ಲ.ರೂ.ವೆಚ್ಚವಾಗಿದೆ.
ಇದು ತೆಂಡುಲ್ಕರ್ ಸ್ಕೋರ್
2017,ಮಾ.31ಕ್ಕೆ ಇದ್ದಂತೆ 348 ದಿನಗಳ ಪೈಕಿ ತೆಂಡುಲ್ಕರ್ ಕೇವಲ 23 ಮತ್ತು ರೇಖಾ ಕೇವಲ 18 ದಿನಗಳ ಕಾಲ ಸದನಕ್ಕೆ ಹಾಜರಾಗಿದ್ದರು. ಯಾವುದೇ ಅಧಿವೇಶನದಲ್ಲಿ ಒಂದು ದಿನಕ್ಕಿಂತ ಹೆಚ್ಚು ಸದನಕ್ಕೆ ಹಾಜರಾಗದಿದ್ದ ‘ಹೆಗ್ಗಳಿಕೆ’ಯನ್ನು ರೇಖಾ ತನ್ನ ಮುಡಿಗೇರಿಸಿಕೊಂಡಿದ್ದಾರೆ!