ಇವಿಎಂ ವಿಶ್ವಾಸಾರ್ಹತೆ ಹಾಳುಗೆಡವಬೇಡಿ -ಎಂ. ಎಸ್. ಗಿಲ್

ಮತಯಂತ್ರದ ಎಲ್ಲ ಟೀಕಾಕಾರರಿಗೆ ಒಂದು ಮಾತು ಸ್ಪಷ್ಟಪಡಿಸಲು ಬಯಸುತ್ತೇನೆ; ಈ ಪರಿಪೂರ್ಣ ಭಾರತೀಯ ಮಿನಿ ರೋಬೋಟ್ ಮೇಲೆ ಹೊಡೆಯಬೇಡಿ. ನೀವು ಗೆದ್ದಾಗ ಯಂತ್ರ ಚೆನ್ನಾಗಿರುತ್ತದೆ; ಆದರೆ ನೀವು ಸೋತಾಗ ಅದರ ಮೇಲೆ ದಾಳಿ ಮಾಡುತ್ತೀರಿ.
ಭಾರತದಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ಗೆ ಸುದೀರ್ಘ ಹಾಗೂ ವರ್ಣರಂಜಿತ ಇತಿಹಾಸವಿದೆ, 1977ರಲ್ಲೇ ಭಾರತ ಸರಕಾರ ಜಿಲೆಕ್ಟ್ರಾನಿಕ್ ಮತ ಯಂತ್ರ ಅಭಿವೃದ್ಧಿಪಡಿಸುವಂತೆ ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್‌ಆಫ್ ಇಂಡಿಯಾಗೆ ಮನವಿ ಮಾಡಿಕೊಂಡಿತ್ತು. ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಕೂಡಾ ಈ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಸುಮಾರು 750 ದಶಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಿನ್ಯಾಸದ ಯಂತ್ರಗಳನ್ನು ಅಭಿವೃದ್ಧಿಪಡಿಸಿದರೂ, ಇದನ್ನು ಭಾರತೀಯ ಮತದಾರರಿಗೆ ಪರಿಚಯಿಸುವ ಗಂಭೀರ ಪ್ರಯತ್ನಗಳು ನಡೆಯಲಿಲ್ಲ. ಕೇರಳದ ಕೆಲ ಮತಗಟ್ಟೆಗಳಲ್ಲಿ ಇವುಗಳನ್ನು ಪರಿಚಯಿಸುವ ಪ್ರಯತ್ನ 1982ರಲ್ಲಿ ನಡೆಯಿತು. ಆದರೆ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಇದನ್ನು ತಡೆಯಲಾಯಿತು. ಮತ್ತೊಂದು ಸಣ್ಣ ಪ್ರಯತ್ನ ಸಿಕ್ಕಿಂನಲ್ಲಿ ನಡೆದರೂ ಅದೂ ವಿಫಲವಾಯಿತು.
ಇದು ಹಣ ವ್ಯರ್ಥ ಮಾಡುವ ಸಾಹಸ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಚುನಾವಣಾ ಆಯೋಗವನ್ನು ಟೀಕಿಸಿದರು. ಆದರೆ ಇಂಥ ಟೀಕೆ ಸ್ವೀಕಾರಾರ್ಹವಲ್ಲ ಎನ್ನುವುದು ನನ್ನ ನಿಲುವಾಗಿತ್ತು. ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ದಿಲ್ಲಿಯ ಆಯ್ದ ಮತಕ್ಷೇತ್ರಗಳಲ್ಲಿ ಇವಿಎಂ ಪರಿಚಯಿಸಲು ನಿರ್ಧರಿಸಿದೆವು. ಗ್ರಾಮೀಣ ಅನಕ್ಷರಸ್ಥರಿಗೆ ಇದನ್ನು ಬಳಕೆ ಮಾಡುವುದು ಕಷ್ಟವಾದ್ದರಿಂದ ಈ ನಿರ್ಧಾರ ಕೈಬಿಡಿ ಎಂಬ ಸಲಹೆ ಕೇಂದ್ರ ಸಚಿವರೊಬ್ಬರಿಂದಲೂ ಬಂತು. ನಗರಗಳಲ್ಲಿ ವಾಸಿಸುವ ಜನರು ಗ್ರಾಮೀಣರ ಬಗ್ಗೆ ಇಂಥ ಪಕ್ಷಪಾತ ಧೋರಣೆ ಹೊಂದಿದ್ದರು. ಇಷ್ಟಾಗಿಯೂ 1997ರಲ್ಲಿ ಮೂರು ರಾಜ್ಯಗಳಲ್ಲಿ ಇವಿಎಂ ಬಳಸುವ ಐತಿಹಾಸಿಕ ನಿರ್ಧಾರವನ್ನು ಚುನಾವಣಾ ಆಯೋಗ ಕೈಗೊಂಡಿತು, ಇದು ಭರ್ಜರಿ ಯಶಸ್ಸನ್ನೂ ಕಂಡಿತು.
ದೇಶದ ಬಹುಭಾಗದಲ್ಲಿ ಅನಕ್ಷರತೆ ತಾಂಡವವಾಡುತ್ತಿದ್ದರೂ, ಈ ಪುಟ್ಟ ಯಂತ್ರದ ದಿಢೀರ್ ಯಶಸ್ಸು ರಾಜಕೀಯ ಪಕ್ಷಗಳಿಗೆ ಅಚ್ಚರಿ ಮೂಡಿಸಿತು. ಇವಿಎಂ ಕಾರಣದಿಂದ ಮತಪೆಟ್ಟಿಗೆ ಕಳ್ಳತನಕ್ಕೆ ಕಡಿವಾಣ ಬೀಳುತ್ತದೆ; ಮತಪೆಟ್ಟಿಗೆಗಳಿಗೆ ಶಾಯಿ ಸುರಿಯುವಂತಿಲ್ಲ; ಮತಪೆಟ್ಟಿಗೆ ಬದಲಿಸಲು ಅವಕಾಶ ಇಲ್ಲ. ಮತ ಎಣಿಕೆಯ ಫಲಿತಾಂಶವನ್ನು ಕೂಡಾ ಎಣಿಕೆ ದಿನ ಮಧ್ಯಾಹ್ನದ ವೇಳೆಗೇ ನೀಡುವ ಕ್ರಾಂತಿಕಾರಿ ವ್ಯವಸ್ಥೆಗೆ ನಾಂದಿ ಹಾಡಲಾಯಿತು. ಇದು ಹೊಸ ತಂತ್ರಜ್ಞಾನದ ವಿಸ್ಮಯ. ಮತಪತ್ರಗಳನ್ನು ಬಳಸುವಾಗ ಫಲಿತಾಂಶಕ್ಕೆ ಸಾಕಷ್ಟು ತಗಾದೆ ಇರುತ್ತಿತ್ತು. ಇವಿಎಂಗಳನ್ನು ಇಡೀ ರಾಜ್ಯದಲ್ಲಿ ಕ್ಷಿಪ್ರ ಹಾಗೂ ವ್ಯಾಪಕವಾಗಿ ಬಳಸಲು ಆರಂಭಿಸಿದ್ದರಿಂದ ಹಲವು ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಮತದಾನ ನಿರ್ವಹಿಸುವುದು ಸಾಧ್ಯವಾಯಿತು.
ಸಹಜವಾಗಿಯೇ ರಾಜಕೀಯ ಪಕ್ಷಗಳಿಗೆ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮತ್ತು ಫಲಿತಾಂಶದ ಬಗ್ಗೆ ತಗಾದೆ ತೆಗೆಯುವ ಅವಕಾಶ ತಪ್ಪಿತು. ಇವಿಎಂ ಆರಂಭಕ್ಕೆ ಮುನ್ನ ನಾನು 52 ಆಂಗೀಕೃತ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಿದೆ. ಅವರ ಸಲಹೆ ಹಾಗೂ ಯೋಚನೆಗಳನ್ನು ಪಡೆದೆ. ಕೆಲವರು ತಮ್ಮ ಕ್ಷೇತ್ರಗಳಲ್ಲಿ ಇವಿಎಂ ಬಳಕೆಯಾಗಬೇಕು ಎಂದು ಬಯಸಿದರು. ಇದು ನನಗೆ ಸಂತಸ ತಂದಿತು. ಆದರೆ ಈ ಮೌಲ್ಯಗಳು ನಷ್ಟವಾದಾಗ ಅವರು ದೂರಲು ಆರಂಭಿಸಿದರು.
ಎರಡು ಆಯಾಮದಲ್ಲಿ ಅವರು ದೂರಿದರು. ಒಂದು ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ತಿರುಚಲು ಅವಕಾಶವಿದೆ ಎನ್ನುವುದು. ಈ ಆರೋಪ ಹಾಗೂ ಅನುಮಾನಗಳನ್ನು ಬಗೆಹರಿಸುವ ಸಲುವಾಗಿ ಇಸಿಐಎಲ್ ಹಾಗೂ ಬಿಇಎಲ್ ಸಿಎಂಡಿ ಹಾಗೂ ಇಂಜಿನಿಯರ್‌ಗಳನ್ನು ಆಹ್ವಾನಿಸಲಾಯಿತು. ಎರಡನೆ ಸಮಸ್ಯೆಯೆಂದರೆ ಕಾನೂನಾತ್ಮಕ ಸವಾಲು. ದಿವಂಗತ ಜೆ.ಜಯಲಲಿತಾ ಭಾರತದ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ದಾವೆ ಹೂಡಿದರು. ಸುದೀರ್ಘ ಹಾಗೂ ಸಂಪೂರ್ಣ ಆಲಿಕೆ ಬಳಿಕ ಈ ದಾವೆ ವಜಾಗೊಳಿಸಲಾಯಿತು. ಕಳೆದ ಎರಡು ವರ್ಷ ಗಳಿಂದ ಭಾರತದಾದ್ಯಂತ ಯಶಸ್ವಿಯಾಗಿ ಇವಿಎಂಗಳು ಕಾರ್ಯ ನಿರ್ವಹಿಸುತ್ತಿವೆ. ಇಷ್ಟಾಗಿಯೂ ಹಲವು ಮಂದಿ ಇದರ ಬಳಕೆಯನ್ನು ವಿರೋಧಿಸುತ್ತಲೇ ಇದ್ದಾರೆ. ಆದರೆ ಯಾರಿಗೂ ಇವಿಎಂ ವಿರುದ್ಧ ಮಾಡಲು ಯಾವ ವಾದವೂ ಉಳಿದಿಲ್ಲ. ಇವಿಎಂಗಳ ಮೂಲಕ ಭಾರತೀಯ ಮತದಾರರಿಗೆ ವಂಚಿಸಲು ಸಾಧ್ಯವಿಲ್ಲ ಎನ್ನುವುದು ನ್ಯಾಯಾಲಯಕ್ಕೂ ಖಾತ್ರಿಯಾಗಿದೆ.
ಈ ವ್ಯವಸ್ಥೆ ಭಾರತದಲ್ಲಿ ಯಶಸ್ವಿಯಾಗಿದ್ದು, ಇಡೀ ವಿಶ್ವಕ್ಕೆ ರಾಯಭಾರಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತನಾಗಿ ನನಗೆ ಕೆನಡಾದ ಇವಿಎಂ ತೋರಿಸಲಾಗಿತ್ತು. ಅದು ತೀರಾ ದುಬಾರಿ ಮಾತ್ರವಲ್ಲದೆ, ಬಳಕೆಯೂ ತೀರಾ ಸಂಕೀರ್ಣವಾಗಿತ್ತು. ಭಾರತೀಯ ಮತಯಂತ್ರಗಳು ಅಗ್ಗ ಹಾಗೂ ಬಳಕೆಗೆ ಸರಳ, ಸುಲಲಿತ. ಅದು ನಮಗೆ ಎಲ್ಲೂ ಕೈಕೊಡಲಿಲ್ಲ ಎನ್ನುವುದು ನಮ್ಮ ಚುನಾವಣೆಗಳನ್ನು ಹದ್ದಿನ ಕಣ್ಣಿನಿಂದ ನೋಡುವ ಇಡೀ ವಿಶ್ವಕ್ಕೆ ತಿಳಿದಿದೆ.
ಭಾರತ 80 ಕೋಟಿಗಿಂತ ಅಧಿಕ ಮತದಾರರನ್ನು ಹೊಂದಿದ್ದು, 12 ಲಕ್ಷ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ. ಈ ಸಾಧನೆಗಾಗಿ ಇಡೀ ವಿಶ್ವ ಭಾರತವನ್ನು ಶ್ಲಾಘಿಸಿದೆ. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ದಿಲ್ಲಿಗೆ ಆಗಮಿಸಿದ್ದಾಗ, ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ, ನನ್ನ ಜತೆ ಮಾತನಾಡುತ್ತಾ ಚುನಾವಣಾ ಆಯೋಗದ ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಮತಯಂತ್ರದ ಎಲ್ಲ ಟೀಕಾಕಾರರಿಗೆ ಒಂದು ಮಾತು ಸ್ಪಷ್ಟಪಡಿಸಲು ಬಯಸುತ್ತೇನೆ; ಈ ಪರಿಪೂರ್ಣ ಭಾರತೀಯ ಮಿನಿ ರೋಬೋಟ್ ಮೇಲೆ ಹೊಡೆಯಬೇಡಿ. ನೀವು ಗೆದ್ದಾಗ ಯಂತ್ರ ಚೆನ್ನಾಗಿರುತ್ತದೆ; ಆದರೆ ನೀವು ಸೋತಾಗ ಅದರ ಮೇಲೆ ದಾಳಿ ಮಾಡುತ್ತೀರಿ.
ಇನ್ನು ಮೊದಲ ಬಾರಿ ಬಳಕೆ ಮಾಡಿದ ಬಳಿಕ ಮೊದಲ ಎರಡು ದಶಕದಲ್ಲಿ, ನಾವು ಹಲವು ಚುನಾವಣೆಗಳನ್ನು ಆಯೋಜಿಸಿದ್ದೇವೆ. ಪ್ರಸ್ತುತ ವಿವಾದ ಹೊರತುಪಡಿಸಿದರೆ ರಾಜಕೀಯ ಪಕ್ಷಗಳು ಗೆಲ್ಲಲಿ; ಸೋಲಲಿ, ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸುವ ಪರಿಪಾಠ ಬಹುತೇಕ ನಿಂತುಹೋಗಿದೆ. ಉತ್ತರ ಪ್ರದೇಶದಲ್ಲಿ 2007 ಹಾಗೂ 2012ರ ಚುನಾವಣೆ ವೇಳೆ, ವಿಭಿನ್ನ ಪಕ್ಷಗಳು ಗೆಲುವಿನ ನಗೆ ಬೀರಿದವು. ದಿಲ್ಲಿಯಲ್ಲಿ ಎರಡು ವರ್ಷಗಳ ಹಿಂದೆ ಆಡಳಿತ ಪಕ್ಷ ಅಭೂತಪೂರ್ವ ವಿಜಯ ಸಾಧಿಸಿತು. ಆದರೆ ಆಗ ಯಾರು ಕೂಡಾ ಮತಯಂತ್ರಗಳ ಬಗ್ಗೆ ಸಂದೇಹ ವ್ಯಕ್ತಪಡಿಸಲಿಲ್ಲ.
ಆದರೆ ಪ್ರಸ್ತುತ ಎದ್ದಿರುವ ವ್ಯಾಪಕ ಹಾಗೂ ಅಸ್ಪಷ್ಟ ಆರೋಪಗಳು ನನಗೆ ಅಚ್ಚರಿ ತಂದಿವೆ. ಚುನಾವಣೆ ನಡೆಸುವ ಈ ಗಮನಾರ್ಹ ರಾಷ್ಟ್ರೀಯ ಸುಧಾರಣೆ ವಿರುದ್ಧ ಇಂಥ ತೀರಾ ಲಘುವಾಗಿ ಅಥವಾ ಹಗುರವಾಗಿ ಮಾತನಾಡಬಾರದು.
ದೇಶದ 80 ಕೋಟಿ ಮಂದಿಯ ವಿಶ್ವಾಸವಿಲ್ಲದೆ ಭಾರತದ ಚುನಾವಣಾ ಆಯೋಗಕ್ಕೆ ಅಸ್ತಿತ್ವವೇ ಇಲ್ಲ. 2009ರ ಆಗಸ್ಟ್ ನಲ್ಲಿ, ಚುನಾವಣಾ ಆಯೋಗ ಒಂದು ವಾರದ ಕಾಲ ಎಲ್ಲ ಆರೋಪಗಳ ಬಗ್ಗೆಯೂ ಸೂಕ್ಷ್ಮ ಪರಿಶೀಲನೆ ನಡೆಸಿತ್ತು. ಇಂದಿಗೆ ಕೂಡಾ ಯಾವುದೇ ವಿಶ್ವಾಸಾರ್ಹ ಸಂದೇಹಗಳನ್ನು ಚುನಾವಣಾ ಆಯೋಗಕ್ಕೆ ತಂದರೆ ಅವುಗಳನ್ನೂ ಪರಿಶೀಲಿಸಿ, ಸೂಕ್ತ ಉತ್ತರ ನೀಡಲಾಗುತ್ತದೆ. ಇದು ಸದಾ ಚುನಾವಣಾ ಆಯೋಗದ ನೀತಿ ಹಾಗೂ ರೂಢಿ.
ಕೃಪೆ: hindustantimes
(ಎಂ.ಎಸ್.ಗಿಲ್ ಮಾಜಿ ಮುಖ್ಯ ಚುನಾವಣಾ ಆಯುಕ್ತರು)