ಮುಖ್ಯಮಂತ್ರಿಯಾಗಿ ಯೋಗಿ ಭಾರತದ ರಾಜಕೀಯದ ವಿಪರ್ಯಾಸ

ಆರೆಸ್ಸೆಸ್-ಬಿಜೆಪಿ ಇನ್ನು ಮುಂದೆ ಹಿಂದೂ ರಾಷ್ಟ್ರ ಅಭಿಯಾನವನ್ನು ಅತಿರೇಕದ ಶೈಲಿಯಲ್ಲಿ ನಡೆಸಲಿದೆ. ಇಡೀ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾಯಿಸುವುದಕ್ಕೂ ಮೊದಲು ಉತ್ತರಪ್ರದೇಶವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಬಯಸುತ್ತೇನೆ ಎಂದು ಯೋಗಿಯೇ ಖುದ್ದಾಗಿ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾರೀ ಗೆಲುವು ಯೋಗಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದರೊಂದಿಗೆ ಸಮಾಪ್ತಿಯಾಯಿತು. ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಯೂ ಇರಲಿಲ್ಲ ಮತ್ತು ಚುನಾವಣೆಗೂ ಮುನ್ನ ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಯೂ ಇರಲಿಲ್ಲ. ಆದಾಗ್ಯೂ ಯೋಗಿಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದಾಗ ಬಹಳಷ್ಟು ಜನರು ಹುಬ್ಬೇರಿಸಿದರಲ್ಲಿ ಯಾವುದೇ ಆಶ್ಚರ್ಯವಿರಲಿಲ್ಲ. ಯೋಗಿ ಧರ್ಮದ ಹೆಸರಲ್ಲಿ ನಡೆಯುವ ರಾಜಕೀಯದ ಪ್ರತಿಷ್ಠಾಪಕ ಮತ್ತು ಆಕ್ರಮಣಕಾರಿ ಮುಖವಾಗಿದ್ದಾರೆ. ಅವರ ಮೇಲೆ ಅನೇಕ ಕ್ರಿಮಿನಲ್ ಕೇಸ್‌ಗಳಿವೆ. ಅವರು ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನೀಡಿರುವ ಕೆಲವು ಹೇಳಿಕೆಗಳು ಮತಾಂಧ ಶಕ್ತಿಗಳಿಂದ ಪ್ರೇರಣೆ ಪಡೆದದ್ದೇ ಆಗಿವೆ. ಮಾಧ್ಯಮದ ಮುಂದೆ ಮತ್ತು ಹಿಂದೆ ಯೋಗಿ ನೀಡಿರುವ ಅಂತಹ ಹೇಳಿಕೆಗಳು ಬಹಳಷ್ಟಿವೆ. ‘ಲವ್ ಜಿಹಾದ್’, ‘ಘರ್ ವಾಪಸಿ’ ಮತ್ತು ‘ಗೋರಕ್ಷಣೆ’ ಮುಂತಾದವುಗಳ ಬಗ್ಗೆ ನಡೆಸಿದ ಅಭಿಯಾನ ಮತ್ತು ಭಾಷಣಗಳು ಸ್ವತಃ ಬಿಜೆಪಿಗೇ ಅರಿಸಿಕೊಳ್ಳುವುದು ಕಷ್ಟವಾಗಿತ್ತು.ಇತರ ಮೃದು ಸ್ವಭಾವದ ಮತ್ತು ಆಧುನಿಕ ಚಿಂತನೆಯ ನಾಯಕರಿದ್ದರೂ ಉದ್ದೇಶಪೂರ್ವಕವಾಗಿಯೇ ಯೋಗಿಯನ್ನು ಆಯ್ಕೆ ಮಾಡಲಾಯಿತು! ಅದು ಕೂಡಾ ಆರೆಸ್ಸೆಸ್‌ನ ಸಾಮಾನ್ಯ ಬೆಂಬಲಿಗ ಗುಂಪಿನ ಹೊರತಾಗಿ ಯೋಗಿ ತಮ್ಮದೇ ಆದ ಬೆಂಗಲಿಗರ ಗುಂಪನ್ನು ರಚಿಸಿದ್ದಾರೆ ಎಂಬ ವಾಸ್ತವಾಂಶದ ಹೊರತಾಗಿಯೂ. ಯೋಗಿ ಮುಖ್ಯವಾಗಿ ಆರೆಸ್ಸೆಸ್‌ನ ರಾಜಕೀಯದ ಮೇಲೆ ಅತಿಯಾಗಿ ಪ್ರಭಾವಿಸಿರುವ ಹಿಂದೂ ಮಹಾಸಭಾದ ಸಿದ್ಧಾಂತದ ಬೆಂಬಲಿಗರಾಗಿದ್ದಾರೆ. ಬಹಳಷ್ಟು ವಿಷಯಗಳಲ್ಲಿ ತನ್ನ ಮುಸ್ಲಿಮ್ ವಿರೋಧಿ ನಿಲುವಿನ ಬಗ್ಗೆ ಯೋಗಿ ಸ್ಪಷ್ಟಪಡಿಸಿಲ್ಲ.
ಆರೆಸ್ಸೆಸ್-ಬಿಜೆಪಿ ರಾಜಕೀಯದಲ್ಲಿ ನಾಯಕರು ವಿವಿಧ ನಿರ್ಧಾರಗಳನ್ನು ತಳೆದಿದ್ದು ಆದಿತ್ಯನಾಥ್ ಆಯ್ಕೆಯಿಂದ ಅದು ಸ್ಪಷ್ಟವಾಗುತ್ತದೆ. ಮೊದಲನೆಯದಾಗಿ ಈ ಚುನಾವಣೆಯ ಫಲಿತಾಂಶದ ಹಿಂದೆ ಕೋಮುಧ್ರುವೀಕರಣ ಮುಖ್ಯ ಪಾತ್ರ ವಹಿಸಿತ್ತು. ಎಲ್ಲ ಅಭಿವೃದ್ಧಿ ವಿಷಯಗಳು ಹಿಂದುತ್ವದೊಂದಿಗೆ ಬೆಸೆಯಲ್ಪಟ್ಟಿದ್ದವು ಮತ್ತು ಮುಸ್ಲಿಮರನ್ನು ಓಲೈಸಿದ ಪರಿಣಾಮವಾಗಿ ಹಿಂದೂಗಳು ಈ ವಿಕಾಸದ ಫಲದಿಂದ ವಂಚಿತರಾಗಿದ್ದಾರೆ ಮತ್ತು ಹಿಂದೂಗಳ ವಿಕಾಸಕ್ಕೆ ಕೇವಲ ಬಿಜೆಪಿಯೊಂದೇ ಪರಿಹಾರ ಎಂಬ ಸಂದೇಶವನ್ನು ನೀಡಲಾಗಿತ್ತು. ಕೈರಾನಾದ ಸಾಮೂಹಿಕ ವಲಸೆ ಪ್ರಕರಣವನ್ನು ಯೋಗಿಯೇ ಖುದ್ದಾಗಿ ಕಾಶ್ಮೀರ ಕಣಿವೆಯಿಂದ ಪಂಡಿತರ ವಲಸೆಗೆ ಹೋಲಿಸಿದ್ದರು. ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೆ ಇರುವ ಮೂಲಕ ಚುನಾವಣೆಯಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿತ್ತು. ಬಿಜೆಪಿಯು ಮುಸ್ಲಿಮ್ ಮತಗಳನ್ನು ವಿಭಜಿಸುವ ಮತ್ತು ಹಿಂದೂ ಮತಗಳನ್ನು ಕ್ರೋಡೀಕರಿಸುವ ತನ್ನ ತಂತ್ರದಲ್ಲಿ ಯಶಸ್ವಿಯಾಗಿರುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ.
ಯೋಗಿಯನ್ನು ಮುಖ್ಯಮಂತ್ರಿಯನ್ನಾಗಿಸಿರುವುದು ಏನನ್ನು ತೋರಿಸುತ್ತದೆಯೆಂದರೆ ಆರೆಸ್ಸೆಸ್-ಬಿಜೆಪಿ ಇನ್ನು ಮುಂದೆ ಕೋಮು ವಿಷಯವನ್ನು ಮತ್ತಷ್ಟು ಸ್ಪಷ್ಟ ರೀತಿಯಲ್ಲಿ ಬಳಸಲಿದೆ ಮತ್ತವರು ಮುಸ್ಲಿಂ ಮತಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಶೇ.20 ಮುಸ್ಲಿಮ್ ಮತಗಳು ಒಂದು ಕಡೆ ಅಖಿಲೇಶ್ ಯಾದವ್ ಮತ್ತೊಂದು ಕಡೆ ಮಾಯಾವತಿ ಮಧ್ಯೆ ಹರಿದು ಹೋಗುವ ಕಾರಣ ಅವುಗಳು ಅಷ್ಟೊಂದು ಮುಖ್ಯವಾಗುವುದಿಲ್ಲ. ಇನ್ನೊಂದು ಸಂದೇಶವೆಂದರೆ ಆರೆಸ್ಸೆಸ್-ಬಿಜೆಪಿ ಇನ್ನು ಮುಂದೆ ಹಿಂದೂ ರಾಷ್ಟ್ರ ಅಭಿಯಾನವನ್ನು ಅತಿರೇಕದ ಶೈಲಿಯಲ್ಲಿ ನಡೆಸಲಿದೆ. ಇಡೀ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾಯಿಸುವುದಕ್ಕೂ ಮೊದಲು ಉತ್ತರಪ್ರದೇಶವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಬಯಸುತ್ತೇನೆ ಎಂದು ಯೋಗಿಯೇ ಖುದ್ದಾಗಿ ಹೇಳಿಕೊಂಡಿದ್ದಾರೆ.
ಮೋದಿ-ಯೋಗಿ ಮಾದರಿಯ ರಾಜಕೀಯದ ಆಧಿಪತ್ಯ ಮತ್ತು ಹಿಂದೂ ರಾಷ್ಟ್ರದ ಬೆದರಿಕೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ ಏನು? ಬಿಹಾರ ಚುನಾವಣೆಯ ಹೊರತಾಗಿಯೂ ಅವುಗಳು ಇಲ್ಲಿಯವರೆಗೆ ಆತ್ಮಹತ್ಯಾ ಹಾದಿಯನ್ನೇ ತುಳಿದಿವೆ. ಅನೇಕ ನಾಯಕರು ತಮ್ಮ ರಾಜಕೀಯ ಸಿದ್ಧಾಂತ ಮತ್ತು ಮೌಲ್ಯಗಳಿಗೆ ಬದ್ಧರಾಗಿರುವುದರ ಬದಲು ತಮ್ಮದೇ ಆದ ಸಂಕುಚಿತ ಅಹಂಗಳಿಗೆ ಅಂಟಿಕೊಂಡಿದ್ದಾರೆ. ಹಿಂದೂ ರಾಷ್ಟ್ರದ ಅಪಾಯ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಇರುವುದಲ್ಲ. ಭಾರತೀಯ ಸಂವಿಧಾನ ಪ್ರತಿಪಾದಿಸುವ ಸ್ವಾತಂತ್ರ, ಸಮಾನತೆ ಮತ್ತು ಸಂಘಟನೆ ಮತ್ತು ಸಮಾಜದ ದುರ್ಬಲವರ್ಗಕ್ಕೆ ಸಾಮಾಜಿಕ ನ್ಯಾಯ ಮತ್ತು ಸಕಾರಾತ್ಮಕ ಕ್ರಮ ಈ ಎಲ್ಲದಕ್ಕೂ ಅಪಾಯ ತಂದೊಡ್ಡಿದೆ. ಇಂತಹ ಸಮಯದಲ್ಲಿ ಪ್ರಜಾಸತಾತ್ಮಕ ಶಕ್ತಿಗಳು ಒಗ್ಗಟ್ಟಾಗುವ ಅಗತ್ಯವಿದೆ ಎಂದು ಅನೇಕ ರಾಜಕೀಯ ವಿಶ್ಲೇಷಕರು ವಾದಿಸುತ್ತಾರೆ. ಇದು ಬಿಜೆಪಿಯ ಹಿಂದೂ ರಾಷ್ಟ್ರ ಸಿದ್ಧಾಂತದ ಬಗ್ಗೆ ಬೆಳೆಯುತ್ತಿರುವ ಅರಿವಾಗಿದೆ. ಪ್ರಜಾಸತಾತ್ಮಕ ನಿಯಮಗಳ ಜೊತೆ ಆಟವಾಡುವುದಲ್ಲಿ ಎಲ್ಲ ಪಕ್ಷಗಳೂ ಸಮಾನವಾಗಿವೆಯಾದರೂ ಬಿಜೆಪಿ ಮಾತ್ರ ತನ್ನ ಹಿಂದೂ ರಾಷ್ಟ್ರದ ಗುರಿಯನ್ನು ಈಡೇರಿಸಲು ಕಾರ್ಯಸನ್ನದ್ಧವಾಗಿದೆ.
ಈ ಒಂದು ಪಕ್ಷ ಮಾತ್ರ ಸೈದ್ಧಾಂತಿಕವಾಗಿ, ಜಾತಿಪದ್ಧತಿಯೇ ಕಾನೂನಾಗಿದ್ದ ಮತ್ತು ಅಧಿಕಾರ ಸರ್ವಾಧಿಕಾರಿ ಆಡಳಿತವೇ ರಾಜಕೀಯ ವ್ಯವಸ್ಥೆಯಾಗಿದ್ದ ಹಳೆಯ ಕಾಲವನ್ನೇ ವೈಭವೀಕರಿಸುವ ಆರೆಸ್ಸೆಸ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇತರ ಪಕ್ಷಗಳು ಪ್ರಜಾಸತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿವೆ ಎಂಬುದು ಕೂಡಾ ಸತ್ಯ. ಅವುಗಳು ಅವಕಾಶವಾದಿ ಮೈತ್ರಿಗಳನ್ನು ಮಾಡಿಕೊಂಡಿವೆ ಆದರೆ ಅವುಗಳಲ್ಲಿ ಬಹುತೇಕವು ಭಾರತೀಯ ರಾಷ್ಟ್ರೀಯತೆಯ ವ್ಯಾಖ್ಯಾನದ ಪರಿಧಿಯಲ್ಲೇ ಇದ್ದವು. ಆದರೆ ಬಿಜೆಪಿ ಮಾತ್ರ ಹಿಂದೂ ರಾಷ್ಟ್ರೀಯತೆಗಾಗಿ ದುಡಿಯುತ್ತಿದೆ. ಅದರ ನಾಗಲೋಟವನ್ನು ನಿಲ್ಲಿಸಬಹುದೇ? ಯೋಗಿಯನ್ನು ಅಧಿಕಾರಕ್ಕೇರಿಸಿರುವುದನ್ನು ಇತರ ರಾಜಕೀಯ ಪಕ್ಷಗಳು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸದಿದ್ದಲ್ಲಿ 2019ರ ಸಾಮಾನ್ಯ ಚುನಾವಣೆ ಬಿಜೆಪಿ ಪಾಲಿಗೆ ಹೂವಿನ ಮೇಲಿನ ನಡಿಗೆಯಾಗುತ್ತದೆ. ದೃಢಸಂಕಲ್ಪ ಹೊಂದಿರುವ ವಿಪಕ್ಷವು ಬಿಜೆಪಿಯ ಚುನಾವಣಾ ಮತ್ತು ಸಾಮಾಜಿಕ ತಂತ್ರಗಳನ್ನು ಮೆಟ್ಟಿನಿಂತು ಅಧಿಕಾರಕ್ಕೇರಬಹುದು ಎಂಬುದು ಈ ಹಿಂದೆಯೇ ಸಾಬೀತಾಗಿದೆ.
ಕಳೆದ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ಶೇ.31 ಮತಗಳನ್ನು ಬಾಚಿಕೊಂಡಿತ್ತು. ಆ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಅದರ ಮತಗಳ ಪಾಲು ಶೇ.41 ಆಗಿತ್ತು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅದು ಶೇ.39 ಆಗಿದೆ. ಇತರ ಪಕ್ಷಗಳು ಬಿಜೆಪಿ ಸಿದ್ಧಾಂತವನ್ನು ಹೇಗೆ ಕಾಣುತ್ತಾರೆ? ಸೈದ್ಧಾಂತಿಕವಾಗಿ ಗಾಂಧಿ, ನೆಹರೂ ಮತ್ತು ಮೌಲಾನಾ ಆಝಾದ್ ಕಾಲದ ಜಾತ್ಯತೀತ ಪ್ರಮಾಣವನ್ನು ಹೊಂದಿರದಿದ್ದರೂ ಇಲ್ಲಿಯವರೆಗೆ ಸಾಮಾಜಿಕವಾಗಿ ಅತ್ಯಂತ ದೊಡ್ಡ ಸ್ಥಾನಮಾನವನ್ನು ಹೊಂದಿದ್ದ ಕಾಂಗ್ರೆಸ್ ಬಿಜೆಪಿ-ಆರೆಸ್ಸೆಸ್‌ನ ಸಂಪೂರ್ಣ ವಿರೋಧಿಯಾಗಿದೆ. ಕಮ್ಯುನಿಸ್ಟರು, ಸಿಪಿಐ ಮತ್ತು ಸಿಪಿಎಂ ಕೂಡಾ ಬಿಜೆಪಿಯನ್ನು ಒಂದು ತೀವ್ರವಾದಿ ಕೋಮುಪಕ್ಷವಾಗಿ ಕಾಣುತ್ತದೆ ಮತ್ತು ಅದರ ಬಹಳಷ್ಟು ಮಂದಿ ಬಿಜೆಪಿಯನ್ನು ಒಂದು ಮತಾಂಧ ಪಕ್ಷವೆಂದೂ ಭಾವಿಸಿದ್ದಾರೆ.
ಆದರೆ ಪ್ರಾದೇಶಿಕ ಪಕ್ಷಗಳ ನಿಲುವು ಮಾತ್ರ ಅಸ್ಪಷ್ಟ. ಯಾಕೆಂದರೆ ಇವುಗಳಲ್ಲಿ ಬಹುತೇಕ ಪಕ್ಷಗಳು ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿವೆ. ಹಲವರ ಪಾಲಿಗೆ ಹೊಸ ಉದಯೋನ್ಮುಖ ಪಕ್ಷವಾಗಿ ಹೊರಹೊಮ್ಮಿರುವ ಆಪ್‌ನ ಒಂದೇ ಸಿದ್ಧಾಂತವೆಂದರೆ ಭ್ರಷ್ಟಾಚಾರ ವಿರೋಧ ಎಂಬುದು. ಅದು ಕೋಮು ವಿರೋಧಿ ಮೈತ್ರಿಯಲ್ಲಿ ಜೊತೆಯಾಗುವುದೇ? ಅದನ್ನು ಸಮಯವೇ ಹೇಳಲು ಸಾಧ್ಯ, ಇಲ್ಲಿಯವರೆಗೆ ಅದರ ಮುಖ್ಯ ಉದ್ದೇಶ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿಯಿರುವ ಸ್ಥಳಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿಯುವುದೇ ಆಗಿದೆ. ವಿಭಜನಾ ರಾಜಕೀಯವು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಎಂದು ಮನಗಾಣುವುದರ ಜೊತೆಗೆ ಆಪ್ ರಾಷ್ಟ್ರಮಟ್ಟದಲ್ಲಿ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ರಚಿಸಲು ಕೈಜೋಡಿಸುವುದೇ ಎಂಬ ಬಗ್ಗೆ ಸಮಯವೇ ಉತ್ತರಿಸಲಿದೆ. ಪ್ರಜಾಪ್ರಭುತ್ವದ ರಕ್ಷಣೆಗೆ ವೇದಿಕೆಯನ್ನು ನಿರ್ಮಿಸಲು ಸಮಾಜದ ದುರ್ಬಲವರ್ಗದ ಅಧಿಕಾರಕ್ಕಾಗಿ ಸಾಮಾಜಿಕ ಚಳವಳಿಯನ್ನು ನಡೆಸುವ ಅಗತ್ಯವಿದೆ. ಸದ್ಯಕ್ಕೆ ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಪಕ್ಷಗಳು ಒಂದೋ ಒಗ್ಗಟ್ಟಾಗಬೇಕು ಅಥವಾ ಚುನಾವಣಾ ರಾಜಕೀಯದಲ್ಲಿ ಧೂಳೀಪಟವಾಗಬೇಕು ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ. ಬಿಹಾರದ ರೀತಿಯ ಚುನಾವಣಾ ಮೈತ್ರಿ ಮಾತ್ರ ಮುಂಬರುವ ಸಮಯಕ್ಕೆ ಮಾದರಿಯಾಗಿದೆ.