ವಸೀಮ್ ಇಕ್ಬಾಲ್ ಅಂಡಮಾನ್-ನಿಕೋಬಾರ್‌ನ ಬುಡಕಟ್ಟು ಸಮುದಾಯದ ಪ್ರಪ್ರಥಮ ಪಿಎಚ್‌ಡಿ ಸಾಧಕ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರೇಡಿಯೋ ಸ್ಟೇಷನ್‌ನಲ್ಲಿ ಆ ದಿನ ಒಂದು ವಿಶೇಷ ಸುದ್ದಿ ಪ್ರಸಾರವಾಯಿತು. ಸ್ಥಳೀಯ ಬಾಲಕ ವಸೀಮ್ ಇಕ್ಬಾಲ್ ಎಂಬವರು ಡಾ. ವಸೀಮ್ ಇಕ್ಬಾಲ್ ಆಗಿರುವ ಸುದ್ದಿಯದು.
ಆ ಸುದ್ದಿಯನ್ನು ರೇಡಿಯೊದಲ್ಲಿ ಕೇಳಿದ ಆತನ ಚಿಕ್ಕಮ್ಮ ತಕ್ಷಣ ಇಕ್ಬಾಲ್‌ಗೆ ಕರೆ ಮಾಡಿ ಅಭಿನಂದನೆ ಹೇಳಿದರು. ಬಳಿಕ ಅತ್ಯಂತ ಕಾಳಜಿಯ ಧ್ವನಿಯಿಂದ ಆಕೆ ಕೇಳಿದ ಪ್ರಶ್ನೆ- ನೀನೇಕೆ ಊರಿಗೆ ಬಂದು ಇಲ್ಲಿ ವೈದ್ಯಕೀಯ ವೃತ್ತಿ ಮುಂದುವರಿಸಬಾರದು. ಇಲ್ಲಿ ಸ್ಥಳೀಯರಿಗೆ ಚಿಕಿತ್ಸೆ ನೀಡಬಾರದು..?
ತಾನು ಜನತೆಯ ಸಮಸ್ಯೆಗೆ ಚಿಕಿತ್ಸೆ ನೀಡುವ ವೈದ್ಯ ಅಲ್ಲ, ಅಂತರ್ಜಲ ಸಮಸ್ಯೆಗೆ ಪರಿಹಾರ ಸೂಚಿಸುವ ತಜ್ಞ ಎಂದು ಆಕೆಗೆ ತಿಳಿಹೇಳುವಷ್ಟರಲ್ಲಿ ತಾನು ಸುಸ್ತಾಗಿದ್ದೆ ಎನ್ನುತ್ತಾರೆ ವಸೀಮ್ ಇಕ್ಬಾಲ್. ಶಿಕ್ಷಣ ಪಡೆಯುವುದೇ ಅಪರೂಪವಾಗಿದ್ದ ಆ ಬುಡಕಟ್ಟು ಸಮುದಾಯದಲ್ಲಿ ಪಿಎಚ್‌ಡಿ ಪಡೆಯುವುದೆಂದರೆ ಅದೇನೂ ಸಾಮಾನ್ಯ ವಿಷಯವಲ್ಲ. ಈ ಅಪರೂಪದ ಸಾಧಕ ವಸೀಮ್ ಇಕ್ಬಾಲ್ ಕಾರ್ ನಿಕೊಬಾರ್ ಪ್ರದೇಶದ ಕಿನ್ಯೂಕಾ ಎಂಬ ಹಳ್ಳಿಯಿಂದ ಬಂದವರು. ಈ ಹಳ್ಳಿಯ ಜನಸಂಖ್ಯೆ ಸುಮಾರು 30,000. ಈತನ ತಂದೆ ಕ್ರಿಶ್ಚಿಯನ್ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. 2007ರ ಡಿ.31ರಂದು ಅಪ್ಪಳಿಸಿದ್ದ ಸುನಾಮಿ ಇಕ್ಬಾಲ್‌ರ ತಂದೆ -ತಾಯಿಯನ್ನು ಬಲಿ ಪಡೆದಿತ್ತು. ಆದಾಗ್ಯೂ, ಸರಕಾರ ನೀಡಿದ ಪರಿಹಾರ ನಿಧಿಯ ನೆರವಿನಿಂದ ಇಕ್ಬಾಲ್ ತನ್ನ ಶಿಕ್ಷಣ ಪೂರೈಸಿದ್ದರು. ಶಾಲಾ ಶಿಕ್ಷಣದ ಬಳಿಕ ಮುಂದಿನ ಶಿಕ್ಷಣಕ್ಕೆ ಪೋರ್ಟ್ ಬ್ಲೇರ್‌ನ ಜವಾಹರಲಾಲ್ ನೆಹರೂ ರಾಜಕೀಯ ಮಹಾವಿದ್ಯಾಲಯಕ್ಕೆ ಸೇರಿಕೊಂಡರು. ಆದರೆ ಇಲ್ಲಿ ಅಧ್ಯಯನಕ್ಕೆ ಅವರು ಆರಿಸಿಕೊಂಡ ವಿಷಯ - ಭೂಗೋಳಶಾಸ್ತ್ರ (ಜಿಯೊಗ್ರಫಿ).
ನಿಜವಾಗಿ ಹೇಳಬೇಕೆಂದರೆ ಇಕ್ಬಾಲ್‌ಗೆ ಭೂಗೋಳಶಾಸ್ತ್ರದ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಆದರೆ ಅವರು ನೋಡುತ್ತಿದ್ದ ಟಿವಿ ಚಾನೆಲ್- ನ್ಯಾಷನಲ್ ಜಿಯೊಗ್ರಫಿಯಲ್ಲಿ ಪ್ರಾಣಿ, ಪಕ್ಷಿಗಳ ಬಗ್ಗೆ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದರಿಂದ ಆಕರ್ಷಿತನಾಗಿದ್ದ ಅವರಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವ ಇಚ್ಚೆಯಿತ್ತು. ಆ ಕಾರಣ ಆತ ಜಿಯೊಗ್ರಫಿ ಆರಿಸಿಕೊಂಡಿದ್ದರು. ಜಿಯೊಗ್ರಫಿ ಎಂದರೆ ಪ್ರಾಣಿ, ಪಕ್ಷಿಗಳ ಬಗ್ಗೆ ಅಧ್ಯಯನ ಎಂದು ಆತ ಎಣಿಸಿದ್ದರು. ಅಂತೂ ತನಗಿಷ್ಟವಿಲ್ಲದ ವಿಷಯವನ್ನು ಓದುತ್ತಾ ಆತ ಎರಡು ವರ್ಷ ಪೂರೈಸಿದರು. ಆದರೆ ಮೂರನೆ ವರ್ಷ ಆತನಿಗೆ ಸಮುದ್ರ ಜೀವವಿಜ್ಞಾನದ ವಿಷಯವನ್ನು ಅಧ್ಯಯನ ಮಾಡಬೇಕಿತ್ತು. ಈ ವಿಷಯ ಆತನಿಗೆ ಅಚ್ಚುಮೆಚ್ಚಾಗಿತ್ತು.
ಸ್ನಾತಕೋತ್ತರ ಪದವಿ ಸಂದರ್ಭ ಇವರಿಗೆ ಸಮುದ್ರ ಅಧ್ಯಯನ ಮತ್ತು ಸಮುದ್ರ ಜೀವವಿಜ್ಞಾನ ವಿಭಾಗದಲ್ಲಿ - ಕಡಲತೀರ ಅಪಾಯ ನಿರ್ವಹಣೆ ವಿಷಯವನ್ನು ಆರಿಸುವಂತೆ ಪ್ರಾಧ್ಯಾಪಕರು ಸಲಹೆ ನೀಡಿದರು. ಅದರಂತೆ ಇವರು ಆ ವಿಷಯ ಆರಿಸಿಕೊಂಡು ಪ್ರವೇಶ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದರು.
ಪೋರ್ಟ್‌ಬ್ಲೇರ್‌ನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾಗ ಇವರಿಗೆ ತಿಂಗಳಿಗೆ 3,000 ರೂ. ಶಿಷ್ಯ ವೇತನ ದೊರೆಯುತ್ತಿತ್ತು. ಈ ಮೊತ್ತದಲ್ಲೇ ಇವರ ತಿಂಗಳ ಖರ್ಚು ಸಾಗಬೇಕಿತ್ತು.
‘‘ಪೋರ್ಟ್‌ಬ್ಲೇರ್‌ನಿಂದ ಮನೆಗೆ ಬರಬೇಕಿದ್ದರೆ 24 ಗಂಟೆ ಪ್ರಯಾಣ ಮಾಡಬೇಕಿತ್ತು. ಹೆಲಿಕಾಪ್ಟರ್‌ನಲ್ಲಿ ಬೇಗ ತಲುಪಬಹುದಿತ್ತು. ಆದರೆ 2,400 ರೂ. ದರ ವಸೂಲಿ ಮಾಡುತ್ತಿದ್ದರು. ಆದ್ದರಿಂದ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿಬಿಟ್ಟೆ’’ ಎನ್ನುತ್ತಾರೆ ಇಕ್ಬಾಲ್. ಆದರೆ ಇವರು ಸಂಶೋಧನಾ ವಿದ್ಯಾರ್ಥಿಯಾದಾಗ ಪರಿಸ್ಥಿತಿ ಸುಧಾರಿಸಿತು. ಹಲವು ಶಿಷ್ಯವೇತನದ ನೆರವಿನಿಂದ ತಿಂಗಳಿಗೆ ಸುಮಾರು 30,000 ರೂ. ಗಳಿಸುವ ಅವಕಾಶ ದೊರಕಿತು.
ಇದೀಗ ಪಿಎಚ್‌ಡಿ ಪಡೆದಿರುವ ವಸೀಮ್ ಇಕ್ಬಾಲ್ ಅಂಡಮಾನ್, ನಿಕೋಬಾರ್ ದ್ವೀಪ ಸಮೂಹದಲ್ಲಿ ಓರ್ವ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ.