ಇತಿಹಾಸ ಬಿಚ್ಚಿಡುತ್ತಿದೆ ಆರೆಸ್ಸೆಸ್ ನ ರಾಷ್ಟ್ರಪ್ರೇಮ!
ಸ್ವಾತಂತ್ರ್ಯೋತ್ತರ ರಾಷ್ಟ್ರದ್ರೋಹ
ಆರೆಸ್ಸೆಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಸ್ವಾತಂತ್ರ್ಯದ ಮುನ್ನಾ ದಿನ ಪ್ರಕಟವಾದ ಸಂಪಾದಕೀಯದಲ್ಲಿ, ‘‘ಸಂಘ ತ್ರಿವರ್ಣ ಧ್ವಜವನ್ನು ವಿರೋಧಿಸಿತ್ತು. ಅದನ್ನು ಯಾವ ಹಿಂದೂಗಳೂ ಗೌರವಿಸುವುದಿಲ್ಲ’’ ಎಂದು ಘೋಷಿಸಿತ್ತು. ‘ದ ವರ್ಡ್ ಥ್ರೀ’ ಎಂಬ ಸಂಪಾದಕೀಯ, ‘‘ಅದುವೇ ಒಂದು ದುಷ್ಟಶಕ್ತಿ. ಮೂರು ಬಣ್ಣಗಳಿಂದ ಕೂಡಿದ ಧ್ವಜ ಖಂಡಿತವಾಗಿಯೂ ತೀರಾ ಕೆಟ್ಟ ಮಾನಸಿಕ ಪರಿಣಾಮವನ್ನು ಉಂಟುಮಾಡುತ್ತದೆ. ಇದು ದೇಶಕ್ಕೆ ಘಾತಕ’’ ಎಂದು ವಿವರಿಸಿತ್ತು.
ಸ್ವಾತಂತ್ರ್ಯ ಬಂದ ಕೆಲ ತಿಂಗಳ ಬಳಿಕ, ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ ಸದಸ್ಯರಾಗಿದ್ದ ನಾಥೂರಾಂ ಗೋಡ್ಸೆ 1948ರ ಜನವರಿ 30ರಂದು ತಮ್ಮ ಪಿಸ್ತೂಲಿನಿಂದ ಗಾಂಧೀಜಿಗೆ ಮೂರು ಬಾರಿ ಗುಂಡು ಹೊಡೆದ. ಇತಿಹಾಸಕಾರ ಎ.ಜಿ.ನೂರಾನಿಯವರು ಗಾಂಧೀಜಿಯವರ ಖಾಸಗಿ ಕಾರ್ಯದರ್ಶಿಯಾಗಿ ಪ್ಯಾರೇಲಾಲ್ ನಾಯರ್ ಅವರನ್ನು ಉಲ್ಲೇಖಿಸುವ ದಾಖಲೆಗಳನ್ನು ಹೀಗೆ ವಿವರಿಸಿದ್ದಾರೆ.
‘‘ಈ ಆರೆಸ್ಸೆಸ್‌ನ ಸದಸ್ಯರು ಮುಂಚಿತವಾಗಿಯೇ ರೇಡಿಯೊ ಕೇಳುವಂತೆ ಸೂಚಿಸಲಾಗಿತ್ತು. ಈ ಕರಾಳ ಶುಕ್ರವಾರ ಶುಭ ಸುದ್ದಿಗಾಗಿ ರೇಡಿಯೊ ಮುಂದೆ ಇರುವಂತೆ ಕೋರಲಾಗಿತ್ತು.’’
‘‘ಈ ಸುದ್ದಿಯ ಬಳಿಕ ಆರೆಸ್ಸೆಸ್ ವಲಯದಲ್ಲಿ ಹಲವೆಡೆ ಸಿಹಿ ಹಂಚಲಾಯಿತು’’ ಎಂದು ಯುವಕನೊಬ್ಬ ಸರ್ದಾರ್ ಪಟೇಲ್ ಅವರಿಗೆ ಪತ್ರ ಬರೆದಿದ್ದ. ತೀರಾ ಉತ್ಸಾಹದಿಂದ ಆರೆಸ್ಸೆಸ್‌ಗೆ ಸೇರಿದ್ದಾಗಿಯೂ ಬಳಿಕ ಭ್ರಮನಿರಸನಗೊಂಡಿರುವುದಾಗಿಯೂ ಆತ ಸ್ಪಷ್ಟಪಡಿಸಿದ್ದ.
ಕೆಲ ದಿನಗಳ ಬಳಿಕ ಆರೆಸ್ಸೆಸ್ ಮುಖಂಡರನ್ನು ಬಂಧಿಸಿ, ಆರೆಸ್ಸೆಸ್ ನಿಷೇಧಿಸಲಾಯಿತು. ಸರಕಾರ 1948ರ ಫೆಬ್ರವರಿ 4ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹೀಗೆ ವಿವರಿಸಲಾಗಿದೆ:
‘‘ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ವೇಷ ಹಾಗೂ ಹಿಂಸೆಯ ಸಂಘಟನೆಗಳನ್ನು ಬೇರು ಸಹಿತ ಕಿತ್ತುಹಾಕುವ ಸಲುವಾಗಿ, ದೇಶದ ಸ್ವಾತಂತ್ರ್ಯವನ್ನು ಕಾಪಾಡುವ ಸಲುವಾಗಿ ಭಾರತ ಸರಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲು ನಿರ್ಧರಿಸಿದೆ. ದೇಶದ ಹಲವೆಡೆ, ಆರೆಸ್ಸೆಸ್ ಕಾರ್ಯಕರ್ತರು ಅಶಾಂತಿ, ದರೋಡೆ, ಸುಲಿಗೆ ಹಾಗೂ ಕೊಲೆಯಂಥ ಹಿಂಸಾಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಜತೆಗೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನೂ ಹೊಂದಿದ್ದಾರೆ. ಜನರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುವ ಕರಪತ್ರಗಳನ್ನು ಹಂಚುತ್ತಿದ್ದಾರೆ. ಹೀಗೆ ಇವರಿಂದ ಪ್ರಚೋದನೆ ಪಡೆದು ಉಂಟಾದ ಹಿಂಸಾಕೃತ್ಯಗಳಲ್ಲಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಇತ್ತೀಚಿನ ಹಾಗೂ ಮಹತ್ವದ ಹಾನಿ ಎಂದರೆ ಗಾಂಧೀಜಿಯವರ ಕಗ್ಗೊಲೆ. ಇಂಥ ಪರಿಸ್ಥಿತಿಯಲ್ಲಿ, ಇಂಥ ಹಿಂಸಾಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಸಂಘವನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದು ಮತ್ತು ಪರಿಣಾಮಕಾರಿಯಾಗಿ ಹಿಂಸೆಯನ್ನು ತಡೆಯುವುದು ಸರಕಾರದ ಕರ್ತವ್ಯ’’
ಆರೆಸ್ಸೆಸ್ ಇಂದು ತನ್ನ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್, ಅದೇ ವರ್ಷದ ಸೆಪ್ಟ್ಟಂಬರ್‌ನಲ್ಲಿ ಗೋಳ್ವಾಲ್ಕರ್‌ಗೆ ಪತ್ರ ಬರೆದು, ಆರೆಸ್ಸೆಸ್ ನಿಷೇಕ್ಕೆ ಕಾರಣಗಳನ್ನು ವಿವರಿಸಿದ್ದರು.
‘‘ಈ ಆರೆಸ್ಸೆಸ್‌ನ ಭಾಷಣಗಳು ಕೋಮು ವಿಷದಿಂದ ಕೂಡಿವೆ. ಈ ವಿಷದ ಪರಿಣಾಮವಾಗಿ, ದೇಶ ಗಾಂಧೀಜಿಯವರ ಅಮೂಲ್ಯ ಜೀವವನ್ನು ತ್ಯಾಗ ಮಾಡಬೇಕಾ ಯಿತು. ಇದರಿಂದಾಗಿ ಸರಕಾರಕ್ಕಾಗಲೀ, ಜನರಿಗಾಗಲೀ ಆರೆಸ್ಸೆಸ್ ಬಗ್ಗೆ ಎಳ್ಳಷ್ಟೂ ಅನುಕಂಪ ಉಳಿದಿಲ್ಲ. ಬದಲು ವಿರೋಧ ಭಾವನೆ ಬೆಳೆಯುತ್ತಿದೆ. ಗಾಂಧೀಜಿ ಸಾವಿನ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮಂದಿ ಸಿಹಿ ಹಂಚಿ ಸಂಭ್ರಮಿಸಿದ್ದು ಈ ವಿರೋಧ ತೀವ್ರವಾಗಲು ಕಾರಣವಾಗಿದೆ. ಈ ಪರಿಸ್ಥಿತಿಯಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು’’
1948ರ ಜುಲೈ 18ರಂದು ಪಟೇಲ್ ಅವರು ಹಿಂದೂ ಮಹಾಸಭಾ ಮುಖಂಡ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಬರೆದ ಇನ್ನೊಂದು ಪತ್ರದಲ್ಲಿ, ‘‘ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾ ಚಟುವಟಿಕೆಗಳ ಕಾರಣದಿಂದ, ಇಂಥ ಹೇಯ ಕೃತ್ಯ ನಮ್ಮ ದೇಶದಲ್ಲಿ ನಡೆಯುವ ವಾತಾವರಣ ಸೃಷ್ಟಿಯಾಯಿತು ಎನ್ನುವುದನ್ನು ನಮ್ಮ ವರದಿಗಳು ದೃಢಪಡಿಸಿವೆ’’ ಎಂದು ವಿವರಿಸಿದ್ದರು.
ಗಾಂಧಿ ಹತ್ಯೆಯ ಸಂಚಿನ ಆರೋಪಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ 1948ರ ಮೇ 27ರಂದು ಆರಂಭವಾಯಿತು. ಆದಾಗ್ಯೂ ಗೋಡ್ಸೆ, ಗಾಂಧಿ ಹತ್ಯೆಗಿಂತ ಮುನ್ನ ತಾವು ಆರೆಸ್ಸೆಸ್ ತ್ಯಜಿಸಿದ್ದಾಗಿ ಸಮರ್ಥಿಸಿಕೊಂಡರು. ಆರೆಸ್ಸೆಸ್ ಕೂಡಾ ಹಾಗೆಯೇ ಮಾಡಿತು. ಆದರೆ ಈ ಸಮರ್ಥನೆಯನ್ನು ದೃಢೀಕರಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ‘‘ಆರೆಸ್ಸೆಸ್‌ನ ನಡಾವಳಿಗಳ ಯಾವ ದಾಖಲೆಗಳಾಗಲೀ, ಸದಸ್ಯತ್ವ ದಾಖಲೆಯನ್ನಾಗಲೀ ನಿರ್ವಹಿಸಿಲ್ಲ’’ ಎಂದು ರಾಜೇಂದ್ರಪ್ರಸಾದ್, ಪಟೇಲ್ ಅವರಿಗೆ ಪತ್ರ ಬರೆದಿದ್ದರು. ಈ ಪರಿಸ್ಥಿತಿಯಿಂದಾಗಿ, ಗೋಡ್ಸೆ ಆರೆಸ್ಸೆಸ್ ಸದಸ್ಯರಾಗಿದ್ದರು ಎನ್ನುವುದನ್ನು ಸಮರ್ಥಿಸುವ ಯಾವ ಪುರಾವೆಯನ್ನೂ ಸಾಬೀತುಪಡಿಸಲಾಗಲಿಲ್ಲ.
ಇದೇ ವೇಳೆ ನಾಥೂರಾಂ ಗೋಡ್ಸೆಯವರ ಸಹೋದರ ಗೋಪಾಲ ಗೋಡ್ಸೆಯನ್ನು ಸಹ ಸಂಚುಕೋರ ಎಂಬ ಆರೋಪದಲ್ಲಿ ಬಂಧಿಸಲಾಯಿತು ಹಾಗೂ ಈತನಿಗೆ ಜೈಲು ಶಿಕ್ಷೆಯೂ ಆಗಿತ್ತು. ಜೈಲಿನಿಂದ ಬಿಡುಗಡೆಯಾದ 30 ವರ್ಷ ಬಳಿಕ ‘ಫ್ರಂಟ್‌ಲೈನ್’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಆತ, ‘‘ನಾಥೂರಾಂ ಆರೆಸ್ಸೆಸ್‌ನ್ನು ಎಂದೂ ಬಿಟ್ಟಿರಲಿಲ್ಲ ಮತ್ತು ನ್ಯಾಯಾಲಯದಲ್ಲಿ ಸುಳ್ಳುಹೇಳಿದ್ದ. ನಾಥೂರಾಂ, ದತ್ತಾತ್ರೇಯ, ನಾನು ಹಾಗೂ ಗೋವಿಂದ್ ಗೋಡ್ಸೆ ಎಲ್ಲರೂ ಆರೆಸ್ಸೆಸ್‌ನಲ್ಲಿದ್ದೆವು. ನಾನು ನಮ್ಮ ಮನೆಯಲ್ಲಿ ಬೆಳೆದದ್ದಕ್ಕಿಂತ ಆರೆಸ್ಸೆಸ್‌ನಲ್ಲಿ ಬೆಳೆದದ್ದೇ ಹೆಚ್ಚು. ಅದು ನಮಗೆ ಕುಟುಂಬ ಇದ್ದಂತೆ. ನಾಥೂರಾಂ ತನ್ನ ಹೇಳಿಕೆಯಲ್ಲಿ ಆರೆಸ್ಸೆಸ್ ತೊರೆದಿದ್ದಾಗಿ ಹೇಳಿದ್ದ. ಏಕೆಂದರೆ ಗೋಳ್ವಾಲ್ಕರ್ ಹಾಗೂ ಆರೆಸ್ಸೆಸ್, ಗಾಂಧಿ ಹತ್ಯೆ ಬಳಿಕ ತೊಂದರೆಗೆ ಸಿಕ್ಕಿಹಾಕಿಕೊಂಡಿತ್ತು. ಆದರೆ ಆತ ಆರೆಸ್ಸೆಸ್ ಬಿಡಲಿಲ್ಲ’’ ಎಂದು ಸ್ಪಷ್ಟಪಡಿಸಿದ್ದರು. ಗೋಡ್ಸೆ ಕುಟುಂಬದ ಮತ್ತೊಬ್ಬರು ಇತ್ತೀಚೆಗೆ ‘ಇಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಅಂಶಗಳಿಗೂ ಇದು ತಾಳೆಯಾಗುತ್ತದೆ.
ಗೋಪಾಲ್ ಗೋಡ್ಸೆ ‘ಫ್ರಂಟ್‌ಲೈನ್’ಗೆ ನೀಡಿದ್ದ ಅದೇ ಸಂದರ್ಶನದಲ್ಲಿ ಎಲ್.ಕೆ. ಅಡ್ವಾಣಿಯವರನ್ನು, ಗೋಡ್ಸೆಯನ್ನು ಅಗೌರವಿಸಿದ ದನಗಾಹಿ ಎಂದು ಕರೆದಿದ್ದರು. ‘‘ಆರೆಸ್ಸೆಸ್ ಗಾಂಧೀಜಿ ಹತ್ಯೆ ಮಾಡಿದೆ ಎಂಬ ನಿರ್ಣಯವನ್ನು ಆಂಗೀಕರಿಸಿದೆ ಎಂದು ಹೇಳುವಂತಿಲ್ಲ. ಆದರೆ ಅದನ್ನು ಸುಳ್ಳು ಎಂದು ಕರೆಯಲು ಸಾಧ್ಯವಿಲ್ಲ’’ ಎಂಬುದಾಗಿ ಹೇಳಿದ್ದರು.
ಗಾಂಧಿ ಹತ್ಯೆ ವೇಳೆಯೂ ನಾಥೂರಾಂ ಆರೆಸ್ಸೆಸ್ ಸದಸ್ಯರಾಗಿಯೇ ಇದ್ದರು ಎಂದು ಗೋಪಾಲ್ ಗೋಡ್ಸೆ ಹೇಳಿಕೆ ನೀಡುವುದಕ್ಕೆ ಮುಂಚೆಯೇ, ಸರಕಾರ ಸೂಕ್ತ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗದೆ, ಆರೆಸ್ಸೆಸ್ ಮೇಲಿನ ನಿಷೇಧವನ್ನು 1949ರ ಜುಲೈನಲ್ಲಿ ರದ್ದುಮಾಡಿತು. ಆ ಬಳಿಕ ಆರೆಸ್ಸೆಸ್‌ಗೆ ಸಂವಿಧಾನ ರಚಿಸಿ, ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗಷ್ಟೇ ಸೀಮಿತವಾದ ಸಂಘಟನೆ ಮತ್ತು ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ನಾಲ್ಕು ತಿಂಗಳ ಬಳಿಕ, ಸಂವಿಧಾನ ಕರಡು ಸಮಿತಿ ಸಂವಿಧಾನ ರಚಿಸುವ ತನ್ನ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದ ಸಂದರ್ಭದಲ್ಲಿ ‘ಆರ್ಗನೈಸರ್’ (1949ರ ನವೆಂಬರ್ 30ರ ಸಂಚಿಕೆ) ಮೂಲಕ ಆರೆಸ್ಸೆಸ್ ಇದಕ್ಕೆ ಆಕ್ಷೇಪಗಳನ್ನು ಸಲ್ಲಿಸಿತ್ತು.
‘‘ಆದರೆ ನಮ್ಮ ಸಂವಿಧಾನದಲ್ಲಿ ವಿಶಿಷ್ಟವಾದ ಪ್ರಾಚೀನ ಭಾರತದ ಸಂವಿಧಾನಾತ್ಮಕ ಅಭಿವೃದ್ಧಿಯ ಬಗೆಗಿನ ಯಾವ ಉಲ್ಲೇಖವೂ ಇಲ್ಲ. ಈ ದಿನ ಮನುಸ್ಮತಿಯಾಗಿ ಆತನ ನಿಯಮಗಳನ್ನು ಅಳವಡಿಸಿಕೊಳ್ಳಲಾಯಿತು. ಇದನ್ನು ಇಡೀ ವಿಶ್ವವೇ ಒಪ್ಪಿಕೊಂಡಿತು. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ
ಇಲ್ಲಿ ಬಹುಶಃ ಆರೆಸ್ಸೆಸ್ ದೇಶದ ಸಂವಿಧಾನಕ್ಕಿಂತ ಮನುಸ್ಮತಿಯೇ ಶ್ರೇಷ್ಠ ಎಂಬ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದರ ಪ್ರಕಾರ, ಬ್ರಾಹ್ಮಣರ ಸೇವೆ ಮಾಡುವುದೇ ಶೂದ್ರನಿಗೆ ಶ್ರೇಷ್ಠ ವೃತ್ತಿ. ಉಳಿದಂತೆ ಆತ ಏನು ಮಾಡಿದರೂ ಫಲ ಪಡೆಯಲಾರ. ಶೂದ್ರರು ಸಂಪತ್ತು ಗಳಿಕೆ ಮಾಡುವುದನ್ನು ತಡೆಯುವ ಹುನ್ನಾರ ಅದು/ ಆತ ಸಮರ್ಥನಾಗಿದ್ದರೂ, ಶೂದ್ರ ಸಂಪತ್ತು ಹೊಂದುವುದು ಬ್ರಾಹ್ಮಣರ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು.
ದೇಶದ ಸಂವಿಧಾನವನ್ನು ಆಂಗೀಕರಿಸಿದ ಬಳಿಕವೂ ಈ ಸಂವಿಧಾನದ ಬದಲು ಮನುಸ್ಮತಿಯನ್ನೇ ಸಂವಿಧಾನವಾಗಿ ಪರಿಗಣಿಸಬೇಕು ಎಂಬ ಆಗ್ರಹವನ್ನು ಮುಂದಿನ ವರ್ಷಗಳಲ್ಲೂ ಆರೆಸ್ಸೆಸ್ ಪ್ರತಿಪಾದಿಸುತ್ತಲೇ ಬಂದಿತ್ತು. ‘ಮನು ರೂಲ್ಸ್ ಅವರ್ ಹರ್ಟ್ಸ್’ ಎಂಬ ಸಂಪಾದಕೀಯದಲ್ಲಿ ಆರೆಸ್ಸೆಸ್ ಇದನ್ನು ಸ್ಪಷ್ಟಪಡಿಸಿದೆ.
‘‘ಮನುಸ್ಮತಿಯ ಕಾಲ ಮುಗಿಯಿತು’’ ಎಂದು ಡಾ.ಅಂಬೇಡ್ಕರ್ ಮುಂಬೈನಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳಿದ್ದರೂ, ಹಿಂದೂಗಳ ದೈನಂದಿನ ಜೀವನದಲ್ಲಿ ಮನುಸ್ಮತಿ ಹಾಗೂ ಇತರ ಸ್ಮತಿಗಳ ನಿಯಮಾವಳಿಗಳು ಹಾಸುಹೊಕ್ಕಾಗಿವೆ. ಸಂಪ್ರದಾಯವಾದಿಯಲ್ಲದ ಹಿಂದೂಗಳು ಕೂಡಾ ಮನುಸ್ಮತಿಯ ನಿಯಮಗಳನ್ನು ಅನುಸರಿಸುತ್ತಾರೆೆ. ಅದನ್ನು ಕೈಬಿಟ್ಟರೆ ತಾನು ಅಧಿಕಾರ ರಹಿತ ಎಂಬ ಭಾವನೆ ದಟ್ಟವಾಗಿದೆ
ಆದ್ದರಿಂದ ಅಂತಿಮವಾಗಿ ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ಎದುರು ಮಂಡಿಯೂರಿ, ಸ್ವತಂತ್ರ ದೇಶವನ್ನು ಕಟ್ಟುವ ಉದ್ದೇಶದ ಸಮೂಹ ಚಳವಳಿಗಳನ್ನು ವಿರೋಧಿಸಿದ; ರಾಷ್ಟ್ರಧ್ವಜವನ್ನು ವಿರೋಧಿಸಿದ, ದೇಶದ ಸಂವಿಧಾನವನ್ನು ವಿರೋಧಿಸಿದ, ಗಾಂಧಿ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮವನ್ನಾಗಿ ಆಚರಿಸಿದ ಈ ಮಂದಿಗೆ ತಾರ್ತಿಕವಾಗಿ ಯಾವ ಶಬ್ದದಿಂದ ಕರೆಯಬಹುದು? ಇವರನ್ನು ದೇಶದ್ರೋಹಿಗಳು ಎಂದು ಕರೆಯಬೇಕೇ? ಇಲ್ಲ. ಇತಿಹಾಸ ದಿನದಿಂದ ದಿನಕ್ಕೆ ಅಪ್ರಸ್ತುತ ಎನಿಸುತ್ತಿರುವ ರಾಜಕೀಯ ವಾತಾವರಣದಲ್ಲಿ, ಅವರು ರಾಷ್ಟ್ರೀಯವಾದಿಗಳು ಉಳಿದೆಲ್ಲರೂ ರಾಷ್ಟ್ರವಿರೋಧಿಗಳು.
thewire