ಪುಟ್ಟ ಬುಡಕಟ್ಟು ಶಾಲೆಯ ದೊಡ್ಡ ಸಾಧನೆ
‘ಸರ್ವ್ ಇಂಡಿಯಾ ಆದಿವಾಸಿ ಕಿರಿಯ ಪ್ರಾಥಮಿಕ ಶಾಲೆ’ ಆರಂಭಿಸಿದ ಈ ಯೋಜನೆ, ಶಾಲೆಯಲ್ಲಿ ಆರಂಭಿಸುವ ಒಂದು ಸಣ್ಣ ಬೆಳವಣಿಗೆ ಸಮಾಜವನ್ನು ರೂಪಿಸುವಲ್ಲಿ, ಅದರಲ್ಲೂ ಮುಖ್ಯವಾಗಿ ಭವಿಷ್ಯದ ರೂವಾರಿಗಳೆನಿಸಿದ ಮಕ್ಕಳಿಗೆ ಇಂಥ ಸೌಲಭ್ಯ ಸಿಕ್ಕಿದಾಗ ಹೇಗೆ ಮಹತ್ವದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ನಿದರ್ಶನವಾಗಿದೆ.
ಇದೊಂದು ಗುಡ್ಡಗಾಡು ಪ್ರದೇಶದ ಪುಟ್ಟ ಶಾಲೆ. ಬುಡಕಟ್ಟು ಮಕ್ಕಳಿಗೆ ಸೀಮಿತ. ಒಂದರಿಂದ ನಾಲ್ಕನೆ ತರಗತಿವರೆಗಿನ 75 ಮಕ್ಕಳು ಇಲ್ಲಿ ಕಲಿಯುತ್ತಾರೆ. ವಯನಾಡ್‌ನ ಈ ಪುಟ್ಟ ಶಾಲೆಯ ದೊಡ್ಡ ಸಾಧನೆ ಏನು ಗೊತ್ತೇ? ಇಲ್ಲಿ ಅರ್ಧದಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೂನ್ಯ!
ಹಲವು ಶತಮಾನಗಳ ಹಿಂದೆ ಟಿಪ್ಪುಸುಲ್ತಾನ್, ವಯನಾಡ್‌ನಲ್ಲಿ ‘ಕುಟೀರಪಾಂಡಿ ರಸ್ತೆ’ ಎಂಬ ಹೆಸರಿನ ಸರಕು ಸಾಗಾಣೆ ಮಾರ್ಗ ನಿರ್ಮಿಸಿದ್ದರು. ಬ್ರಿಟಿಷರು ಇದನ್ನು ಬಳಿಕ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯಾಗಿ ಅಭಿವೃದ್ಧಿಪಡಿಸಿದರು. ಈ ಪ್ರಾಚೀನ ರಸ್ತೆಯ ಪಕ್ಕಕ್ಕೆ ತಾರಿಯೋಡು ಗ್ರಾಮವಿದೆ. ಮೊದಲು ಇದನ್ನು ‘ಎಡತರ’ ಎಂಬ ಹೆಸರಿನಿಂದ ಕರೆಲಾಗುತ್ತಿತ್ತು. ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆ, ಮಕ್ಕಳ ಕಲಿಕಾಮಟ್ಟ ಸುಧಾರಿಸಲು ಕುತೂಹಲಕಾರಿ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಿ ಇಡೀ ರಾಜ್ಯದ ಗಮನ ಸೆಳೆದಿದೆ.
ವಯನಾಡ್‌ನ ಹಲವು ಗ್ರಾಮ ಹಾಗೂ ನಗರಗಳಂತೆ ತಾರಿಯೋಡ್‌ನಲ್ಲೂ ಹಲವು ಭಿನ್ನ ಬುಡಕಟ್ಟು ಜನಾಂಗಗಳಿಗೆ ಸೇರಿದ ಕುಟುಂಬಗಳಿವೆ.
1950ರ ದಶಕದಲ್ಲಿ ಬುಡಕಟ್ಟು ಮಕ್ಕಳಿಗಾಗಿ ಸರಕಾರ ಹಲವು ಶಾಲೆಗಳನ್ನು ನಿರ್ಮಿಸಿ, ಆದಿವಾಸಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿತು. ‘ಸರ್ವ್ ಇಂಡಿಯಾ ಆದಿವಾಸಿ ಕಿರಿಯ ಪ್ರಾಥಮಿಕ ಶಾಲೆ’ ಇಂಥದ್ದರಲ್ಲಿ ಒಂದು.
ಉತ್ತಮ ಹಾಗೂ ಸಮಗ್ರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಶಾಲೆಯಲ್ಲಿ ಕೇವಲ 30 ನಿಮಿಷ ಅವಧಿಯ ವಿಶಿಷ್ಟ ಶಿಕ್ಷಣ ಯೋಜನೆಯನ್ನು ನಾಲ್ಕು ವರ್ಷದ ಹಿಂದೆ ಜಾರಿಗೆ ತರಲಾಯಿತು. ಪೂರ್ವಪ್ರಾಥಮಿಕ ಹಂತವನ್ನು ಉತ್ತೀರ್ಣರಾದರೂ, ಮೂಲ ಸಂವಹನ ಕೌಶಲ ಹೊಂದಿರದ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತು. ಈ 30 ನಿಮಿಷಗಳ ಕಲಿಕಾ ಯೋಜನೆ ಮುಖ್ಯ ಶಿಕ್ಷಕಿ ನಿಶಾ ದೇವಸ್ಯ ಅವರ ಕನಸಿನ ಕೂಸು.
‘‘ಶಿಕ್ಷಕರ ಬಹುತೇಕ ಬೋಧನೆ ನಿಗದಿತ, ಕಠಿಣ ಪಠ್ಯಕ್ರಮಕ್ಕೇ ಸೀಮಿತವಾಗಿರುತ್ತದೆ. ಆದರೆ ಶಿಕ್ಷಕರು ಬೋಧಿಸಿದ್ದನ್ನು ಮಕ್ಕಳು ಅರ್ಥಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಜತೆಗೆ ಪ್ರತೀ ಮಗುವಿನ ಸಾಮರ್ಥ್ಯವೂ ಭಿನ್ನವಾಗಿರುತ್ತದೆ. ಆದರೆ ಮಕ್ಕಳು ತಮ್ಮ ಪಠ್ಯದ ಬಗ್ಗೆ ತಾವೇ ಸಕ್ರಿಯ ಪಾತ್ರವನ್ನು ನಿರ್ವಹಿಸುವಂತೆ ಉತ್ತೇಜಿಸುವ ಈ ಕ್ರಮ ಮಕ್ಕಳ ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ’’ ಎಂದು ನಿಶಾ ಹೇಳುತ್ತಾರೆ.
ದಿನದ ಆರು ಗಂಟೆಯ ಶಾಲಾ ಅವಧಿಯಲ್ಲಿ ಮೂಲಭೂತ ಅಂಕಗಣಿತದ ಪಾಠವನ್ನು ಪ್ರತಿದಿನ ಅರ್ಧಗಂಟೆ ಕಾಲ ತೆಗೆದುಕೊಳ್ಳಲಾಗುತ್ತಿತ್ತು. ನಂತರ ಸಮಗ್ರ ಇಂಗ್ಲಿಷ್ ಚಟುವಟಿಕೆಗಳಾದ ಇಂಗ್ಲಿಷ್ ಕಾರ್ನರ್, ನಿಘಂಟು ಬಳಕೆ, ಪತ್ರಿಕೆ ಓದುವುದು ಮತ್ತು ಶಿಕ್ಷಕ ಭಾಷಣವನ್ನು ಸೇರಿಸಲಾಯಿತು. ಇದನ್ನು ಮಲೆಯಾಳಂ ಮಾಧ್ಯಮ ಶಾಲೆಯ ಪಠ್ಯಕ್ರಮದಲ್ಲಿ ವಿಶಿಷ್ಟ ಹೆಜ್ಜೆ ಎಂದು ಪರಿಗಣಿಸಲಾಗಿದೆ.
‘‘ಬಡಕುಟುಂಬಗಳಿಂದ ಬಂದ ಇಂಥ ಆದಿವಾಸಿ ಮಕ್ಕಳಲ್ಲಿ ಮೂಲ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಬೆಳೆಸಲಾಗುತ್ತದೆ. ಇಲ್ಲದಿದ್ದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇವರನ್ನು ನಿರ್ಲಕ್ಷಿಸುತ್ತವೆ. ಇದು ಮಕ್ಕಳಿಗೆ ಕಲಿಕಾ ಲಭ್ಯತೆಯನ್ನು ಕಲ್ಪಿಸಿರುವುದು ಮಾತ್ರವಲ್ಲದೆ, ಬೋಧನೆಯನ್ನು ಸಮೀಕರಿಸಲು ಕೂಡಾ ಸಾಧ್ಯವಾಗುತ್ತಿದೆ’’ ಎಂದು ನಿಶಾ ವಿವರಿಸಿದರು.
ಇದನ್ನು ದೈನಂದಿನ ಸಂಪ್ರದಾಯವಾಗಿ ಮಾಡುವ ಮೂಲಕ ಮತ್ತು ಸಂವಾದಕ್ಕೆ ಅವರನ್ನು ತೊಡಗಿಸುವ ಮೂಲಕ ಕ್ರಮೇಣ, ಈ ಪಾಠಗಳನ್ನು ‘ವಿ ಕ್ಯಾನ್’ ಎಂಬ ಪುಸ್ತಕವಾಗಿ ಪ್ರಕಟಿಸಲಾಯಿತು. ಈ ಕೃತಿಯನ್ನು ಉದಯೋನ್ಮುಖ ಕೃತಿ ಎಂದು ಪರಿಗಣಿಸಿ, ಈ ಪ್ರದೇಶದ 25 ಶಾಲೆಗಳಿಗೆ ಹಂಚಲಾಗಿದೆ. ಇದರಲ್ಲಿ ಒಂದು ಹೈಸ್ಕೂಲ್ ಕೂಡಾ ಸೇರಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಪರಿಣಾಮಕಾರಿ ಪ್ರಗತಿಯ ಹಿನ್ನೆಲೆಯಲ್ಲಿ, ವಯನಾಡ್ ಪ್ರದೇಶದಾದ್ಯಂತ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಇದನ್ನು ವಿಸ್ತರಿಸಲಾಗಿದೆ. ಎಲ್ಲ ಡೆಗೆ ಧನಾತ್ಮಕ ಸ್ಪಂದನೆ ಸಿಕ್ಕಿದೆ.ಇನ್ನೊಂದು ಪ್ರಯೋಗಾತ್ಮಕ ಯೋಜನೆ ಎಂದರೆ, ‘ವಾರದ ವಾಕ್ಯ’ ಕಾರ್ಯಕ್ರಮ. ಪ್ರತೀ ತರಗತಿಗೆ ಒಂದು ವಾಕ್ಯವನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಮಕ್ಕಳು ತಾವೇ ಅಭಿನಯಿಸುವ ಒಂದು ಪ್ರಹಸನ ಸಿದ್ಧಪಡಿಸಬೇಕಾಗುತ್ತದೆ.
ರಾಜ್ಯ ಸರಕಾರದ ‘ಹರಿತ ಕೇರಳಂ’ ಯೋಜನೆಯಡಿ ಹಸಿರು ಶಿಷ್ಟಾಚಾರವನ್ನು ಶಿಕ್ಷಣ ಇಲಾಖೆಯ ಅಧೀನದ ಎಲ್ಲ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ 30 ನಿಮಿಷಗಳ ಬೋಧನೆಯಲ್ಲಿ ಮಕ್ಕಳು ಮತ್ತು ಅವರ ಪೋಷಕರು ಪರಿಸರ ಸಂರಕ್ಷಣೆಯ ವಿಭಿನ್ನ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದ, ದೂರದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರು, ತಮ್ಮ ಮಕ್ಕಳನ್ನು ಸರ್ವ್ ಇಂಡಿಯಾ ಶಾಲೆಗೆ ಕಳುಹಿಸಲು ಆರಂಭಿಸಿದರು. ಈ ಯೋಜನೆ ತಂದ ಬದಲಾವಣೆಗಳ ಹಿನ್ನೆಲೆಯಲ್ಲಿ ಇನ್ನೊಂದು ಶ್ಲಾಘನೀಯ ಬೆಳವಣಿಗೆ ಎಂದರೆ, ಆದಿವಾಸಿ ಮಕ್ಕಳ ಡ್ರಾಪ್‌ಔಟ್ ಪ್ರಮಾಣ ಶೂನ್ಯವಾಗಿದೆ!
‘ಸರ್ವ್ ಇಂಡಿಯಾ ಆದಿವಾಸಿ ಕಿರಿಯ ಪ್ರಾಥಮಿಕ ಶಾಲೆ’ ಆರಂಭಿಸಿದ ಈ ಯೋಜನೆ, ಶಾಲೆಯಲ್ಲಿ ಆರಂಭಿಸುವ ಒಂದು ಸಣ್ಣ ಬೆಳವಣಿಗೆ ಸಮಾಜವನ್ನು ರೂಪಿಸುವಲ್ಲಿ, ಅದರಲ್ಲೂ ಮುಖ್ಯವಾಗಿ ಭವಿಷ್ಯದ ರೂವಾರಿಗಳೆನಿಸಿದ ಮಕ್ಕಳಿಗೆ ಇಂಥ ಸೌಲಭ್ಯ ಸಿಕ್ಕಿದಾಗ ಹೇಗೆ ಮಹತ್ವದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ನಿದರ್ಶನವಾಗಿದೆ.
ಪ್ರತೀ ದಿನದ 30 ನಿಮಿಷಗಳು, ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ನೆರವಾಗಿವೆ. ಜತೆಗೆ ಪಠ್ಯಕ್ಕಿಂತ ಹೆಚ್ಚಿನದನ್ನು ಅವರಿಗೆ ಕಲಿಸಲು ಸಫಲವಾಗಿದೆ. ಶ್ರೇಷ್ಠ ಮನಸ್ಸುಗಳ ಹೊಸಪೀಳಿಗೆಯನ್ನು ಅಭಿವೃದ್ಧಿಪಡಿಸುವಲ್ಲಿ ಇದೊಂದು ದಿಟ್ಟಹೆಜ್ಜೆ ಎನ್ನಬಹುದು.