‘ಗೋ ವಾಪಸಿ’ಗೆ ಕಾಯುತ್ತಿರುವವರು!

‘‘ಹೇಗೆ ಹೇಳುವುದು ನಾಳೆ ಯಾರಾದರೂ ನಮ್ಮ ಮನೆಯೊಳಗೆ ಹೊಕ್ಕು ಗೋವನ್ನು ನಾವು ಕಡಿಯಲೆಂದೇ ಸಾಕಿದ್ದೇವೆ ಎಂದು ಹೇಳಿದರೆ ಏನು ಮಾಡುವುದು? ಹಸುಗಳು ಅವರಿಗೆ ಸೇರಿದ್ದಾದರೆ ಅಂಥಾ ಹಸುಗಳು ಅವರಿಗೇ ಇರಲಿ’’ ಎಂದು ಹೇಳುತ್ತಾರೆ ಗ್ರಾಮದ ಒಬ್ಬ ವ್ಯಕ್ತಿ. ಇತರರು ಆತನ ಮಾತಿಗೆ ದುಃಖದಿಂದಲೇ ತಲೆಯಾಡಿಸುತ್ತಾರೆ. ಹೌದು ನಾವು ನಮ್ಮಲ್ಲಿರುವ ಲಕ್ಷಗಟ್ಟಲೆ ಬೆಲೆಬಾಳುವ ಹಸುಗಳನ್ನು ಅವರಿಗೆ ವಾಪಸ್ ನೀಡುತ್ತೇವೆ, ಅದನ್ನು ‘ಗೋ ವಾಪಸಿ’ ಎಂದು ಕರೆದರಾಯಿತು ಎಂದು ಗ್ರಾಮಸ್ಥರು ನುಡಿಯುತ್ತಾರೆ.
ಅಂಗೂರಿ ಬೇಗಂ ಓರ್ವ ದೃಷ್ಟಿ ಕಳೆದುಕೊಂಡ ವೃದ್ಧ ಮಹಿಳೆ. ಹಾಗಾಗಿ ಆಕೆಗೆ ತನ್ನ ಮಗ ಪೆಹ್ಲೂಖಾನ್ ಹತ್ಯೆಗೊಳಪಡುವ ವೀಡಿಯೊವನ್ನು ನೋಡುವ ವೇದನೆ ತಪ್ಪಿತು. ಆದರೆ ಆಕೆಯ ಹೃದಯಕ್ಕೆ ಅದರ ನೋವು ಗೊತ್ತು ಮತ್ತು ಆಕೆಯ ಕಾಣದ ಕಣ್ಣುಗಳಿಂದಲೂ ನೀರು ಹರಿಯುವುದು ಮಾತ್ರ ನಿಲ್ಲುತ್ತಿಲ್ಲ. ನಾನು ಅಸಹಾಯಕತೆಯಿಂದ ನೋಡುತ್ತಿದ್ದಂತೆಯೇ ಆಕೆಯ ಗುಬ್ಬಚ್ಚಿಯಂಥಾ ದೇಹವು ಒಮ್ಮೆಲೆ ನಡುಗಲು ಆರಂಭಿಸಿತು, ಭೂಮಿಯ ಗರ್ಭದಲ್ಲಿ ಕಂಪನವಾದಂತೆ. ಆಕೆಯ ಸುತ್ತ ನೆರೆದಿದ್ದ ಮಹಿಳೆಯರು ಆಕೆ ಎಲ್ಲಾ ಸಮಯದಲ್ಲೂ ಹೀಗೆಯೇ ವರ್ತಿಸುತ್ತಾಳೆ ಎಂದು ಹೇಳುತ್ತಾರೆ.
ಪೆಹ್ಲೂ ಖಾನ್‌ರ ಪತ್ನಿ ಝೈನಬಾ ಸಮೀಪದಲ್ಲೇ ಮರದ ಮಂಚದ ಮೇಲೆ ಒಂದಿನಿತೂ ಚಲಿಸದಂತೆ ಕುಳಿತಿದ್ದಾಳೆ. ಮಹಿಳೆಯರು ನೆರೆದಿದ್ದ ಮನೆಯ ಒಳಗಿನ ಆವರಣವನ್ನು ನಾವು ಪ್ರವೇಶಿಸುತ್ತಿದ್ದಂತೆ ಆಕೆ ತನ್ನ ಕತ್ತನ್ನು ಮೇಲಕ್ಕೆತ್ತಿದಳು. ಆದರೆ ಆಕೆ ನಮ್ಮನ್ನು ನೋಡಲಿಲ್ಲ. ಆಕೆಯ ಇಡೀ ದೇಹವನ್ನು ಒಂದು ರೀತಿಯ ನರಕ ಆವರಿಸಿದಂತೆ ಭಾಸವಾಗುತ್ತಿತ್ತು. ನಾನಾಕೆಯ ಕೈಯನ್ನು ಮೆದುವಾಗಿ ಸ್ಪರ್ಶಿಸಿದೆ. ಆಕೆಯ ಮೌನದ ಕಟ್ಟೆಯೊಡೆದಿತ್ತು, ಆಕೆ ನನ್ನನ್ನು ಅದೇ ಮೊದಲ ಬಾರಿ ಕಂಡಂತೆ ನನಗನಿಸಿತ್ತು. ‘‘ನನ್ನವರನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದರು’’ ಎಂದೆನ್ನುತ್ತಲೇ ಆಕೆಗೆ ದುಃಖ ಉಮ್ಮಳಿಸಿ ಬಂತು. ಅದನ್ನಡಗಿಸಲು ಆಕೆ ತನ್ನ ಮುಖವನ್ನು ಶಾಲಿನಿಂದ ಮುಚ್ಚಿದರೂ ಅದು ಸಾಧ್ಯವಾಗಲಿಲ್ಲ. ನಾನಾಕೆಯನ್ನು ನನಗೆ ಸಾಧ್ಯವಾಗುವಷ್ಟು ಹೊತ್ತು ಗಟ್ಟಿಯಾಗಿ ತಬ್ಬಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದೆ.

‘‘ನನ್ನ ತಾಯಿ ವೀಡಿಯೊವನ್ನು ನೋಡಿದ್ದಾರೆ. ಆದರೆ ಇಡೀ ಪೈಶಾಚಿಕ ಕೃತ್ಯವನ್ನು ನೋಡಲಿಲ್ಲ’’ ಎಂದು ಖಾನ್‌ರ ಹಿರಿಯ ಮಗಳು ಆಬಿದಾ ನಮಗೆ ತಿಳಿಸಿದಳು. ಆಕೆಯಿಂದ ಅದು ಸಾಧ್ಯವಾಗಲಿಲ್ಲ ಯಾಕೆಂದರೆ ವೀಡಿಯೊ ನೋಡುತ್ತಿದ್ದಂತೆ ಆಕೆ ದುಃಖದಿಂದ ರೋದಿಸತೊಡಗಿದ್ದಳು. ನಾನು ಝೈನಬಾಗೆ ಪೊಳ್ಳು ಸಮಾಧಾನವನ್ನು ನೀಡಿದೆ. ಧೈರ್ಯದಿಂದಿರು ತಾಯಿ, ಇಂಥಾ ಸಮಯದಲ್ಲಿ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು ಎಂದು ನಾನು ಹೇಳಿದೆ. ನನ್ನತ್ತ ತಿರುಗಿದ ಆಬಿದಾಳ ಮುಖದಲ್ಲಿ ನೋವು ಗಂಟುಕಟ್ಟಿತ್ತು, ಆಕೆಯ ಬಾಯಿ ನಡುಗುತ್ತಿತ್ತು, ‘‘ನಮಗೆ ನ್ಯಾಯ ಬೇಕು, ಅಪರಾಗಳನ್ನು ನೇಣುಗಂಬಕ್ಕೇರಿಸಬೇಕು’’ ಎಂದಾಕೆ ನೋವಿನಿಂದ ನುಡಿದಳು. ನಮಗೆಲ್ಲರಿಗೂ ಸಾವಿನ ಬಗ್ಗೆ ಅರಿವಿದೆ. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದರ ನೋವು, ಆ ತುಂಬಲಾಗದ ನಿರ್ವಾತ. ಎಲ್ಲವೂ. ಆದರೆ ಇದು ಅದಕ್ಕಿಂತ ಭಿನ್ನ. ಅದು ಮುಗ್ಧನೋರ್ವನ ಸಾವು. ದ್ವೇಷದಿಂದ ಉಂಟಾದ ಸಾವು. ಅದನ್ನು ನೀವು ಖಾನ್‌ನ ರಕ್ಷಣಾರಹಿತ ಕುಟುಂಬಕ್ಕೆ ರಕ್ಷಕರಾಗಿ ನಿಂತಿದ್ದ ಜೈಸಿಂಗ್‌ಪುರದ ಪ್ರತಿಯೊಂದು ಗ್ರಾಮಸ್ಥರ ಮುಖದಲ್ಲಿ ನಾವು ಕಾಣಬಹುದು. ಅದು ನಾನು ಈ ಹಿಂದೆ ಗುಜರಾತ್ ಮತ್ತು ಮುಝರ್‌ನಗರಗಳಲ್ಲಿ ನೋಡಿರುವಂತಹ ನೋಟ. ಅದು ದ್ವೇಷಾಪರಾಧಕ್ಕೆ ಗುರಿಯಾಗಿರುವ ಸಂತ್ರಸ್ತರ ನೋಟ. ನೀವು ಏನಾಗಿದ್ದೀರೋ ಆ ಕಾರಣಕ್ಕೆ ನಿಮ್ಮ ಮೇಲೆ ನಡೆಸುವ ಈ ಆಕ್ರಮಣವು ಮಾನವ ಆತ್ಮದಿಂದ ದೂರವಾಗಲು ಎಂದೂ ಸಾಧ್ಯವಿಲ್ಲ. ಅದು ನೀವೆಂದೂ ಬದಲಿಸಲಾಗದ ಮತ್ತು ಸ್ವೀಕರಿಸಲಾಗದಂತಹ ಅಪರಾಧ. ಖಾನ್‌ರ ಹಳ್ಳಿ ಜೈಸಿಂಗ್‌ಪುರ ಹರ್ಯಾಣದ ನಹ್ ಜಿಲ್ಲೆಯಲ್ಲಿದೆ. ಖಾನ್‌ರನ್ನು ಹತ್ಯೆ ಮತ್ತು ಇತರರು ಗಾಯಗೊಂಡ ಸಾಮೂಹಿಕ ಹಿಂಸಾ ಪ್ರಕರಣ ನಡೆದಿದ್ದು ರಾಜಸ್ಥಾನದ ಬೆಹ್ರೋರ್‌ನಲ್ಲಿ. ಅಲ್ಲಿಯೇ ಅದರ ಕಾನೂನು ಪ್ರಕ್ರಿಯೆ ನಡೆಯಲಿದೆ. ಇಲ್ಲಿ ನಾವು ಒಂದಲ್ಲ ಎರಡು ರಾಜ್ಯ ಸರಕಾರಗಳು ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ಕೊಂಡೊಯ್ಯುವಂತಹ ಜವಾಬ್ದಾರಿಯನ್ನು ನಿಭಾಯಿಸಬಹುದಾದ ಅವಕಾಶವನ್ನು ಹೊಂದಿದ್ದೇವೆ. ಆದರೆ ಸದ್ಯಕ್ಕೆ ಎರಡೂ ಸರಕಾರಗಳಲ್ಲಿ ಜೀವವಿರುವಂತೆ ಕಾಣುತ್ತಿಲ್ಲ. ಆಳುವ ಪಕ್ಷದ ಯಾವೊಬ್ಬ ಕೂಡಾ ಖಾನ್ ಕುಟುಂಬವನ್ನು ಭೇಟಿಯಾಗಿಲ್ಲ. ಈ ಕುಟುಂಬ ನ್ಯಾಯಕ್ಕಾಗಿ ಯಾರತ್ತ ನೋಡಬೇಕು? ಪ್ರಶ್ನಾರ್ಥಕವಾಗಿದ್ದ ಮುಖವನ್ನು ನಾನು ಘಟನೆ ನಡೆದ ಸಂದರ್ಭದಲ್ಲಿ ವಾಹನವನ್ನು ಚಲಾಯಿಸುತ್ತಿದ್ದ ಇರ್ಷಾದ್‌ರತ್ತ ತಿರುಗಿಸಿದೆ. ಆತನ ಮುಖ ಖಾಲಿಹಾಳೆಯಂತಿತ್ತು, ಎಲ್ಲಿಯೂ ಓಡಲಾಗದ ಪರಿಸ್ಥಿತಿಯಲ್ಲಿ ಹೋರಾಟದ ಕೆಚ್ಚು ಕಡಿಮೆಯಾಗಿತ್ತು ಕೋಪ ಸ್ವಲ್ಪವಷ್ಟೇ ಉಳಿದಿತ್ತು. ಆದರೆ ಅದು ತಾತ್ಕಾಲಿಕ, ಕೋಪ ಮತ್ತೊಮ್ಮೆ ಕುದಿಯುತ್ತದೆ. ಆದರೆ ಸದ್ಯ ಬದುಕುಳಿಯುವುದಕ್ಕೇ ಮೊದಲ ಆದ್ಯತೆ.
ಖಾನ್‌ರದ್ದು ಅತ್ಯಂತ ಬಡಕುಟುಂಬ. ಆತನೇ ಅದರ ಆಧಾರಸ್ತಂಭವಾಗಿದ್ದರು. ಆತ ತನ್ನ ತಾಯಿ, ಪತ್ನಿ, ನಾಲ್ವರು ಗಂಡುಮಕ್ಕಳು ಮತ್ತು ಇಬ್ಬರು ಅವಿವಾಹಿತ ಹೆಣ್ಮಕ್ಕಳನ್ನು ಸಲಹಲು ತಿಂಗಳಿಗೆ ರೂ. 8ರಿಂದ 12 ಸಾವಿರ ದುಡಿಯುತ್ತಿದ್ದರು. ಜೈಪುರ ಜಾತ್ರೆಯಲ್ಲಿ ಕಡಿಮೆ ದರದಲ್ಲಿ ಸಿಗುವ ಪಶುವನ್ನು ಖರೀದಿಸಿ ಅದನ್ನು ಸ್ವಲ್ಪಹೆಚ್ಚಿನ ಬೆಲೆಗೆ ತನ್ನ ಗ್ರಾಮದಲ್ಲಿ ಮಾರಾಟ ಮಾಡುವ ಸಲುವಾಗಿ ಪೆಹ್ಲೂ ಖಾನ್ ಗ್ರಾಮದ ಇತರ ಐದರಿಂದ ಹತ್ತು ಜನರ ಜೊತೆಗೆ ಅಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ದುಷ್ಕೃತ್ಯ ನಡೆದಿತ್ತು. ಪೆಹ್ಲೂ ತನ್ನ ಮಕ್ಕಳು ಕೂಡಾ ಪಶು ವ್ಯಾಪಾರವನ್ನು ಕಲಿಯಬೇಕು ಎಂದು ಬಯಸಿದ್ದರು. ಅದಕ್ಕಾಗಿಯೇ ಇರ್ಷಾದ್ (24) ಮತ್ತು ಆರೀಫ್ (19) ಹಾಗೂ ಗ್ರಾಮದ ಇತರ ಇಬ್ಬರು ಯುವಕರಾದ ರಫೀಕ್ ಮತ್ತು ಅಝ್ಮತ್ ಪೆಹ್ಲೂ ಖಾನ್ ಜೊತೆ ಜಾತ್ರೆಗೆ ತೆರಳಿದ್ದರು. ಈ ಬಾರಿ ರಮಝಾನ್ ತಿಂಗಳಾದ ಕಾರಣ ಹೆಚ್ಚಿನ ಆದಾಯ ಗಳಿಸುವ ಆಸೆಯೂ ಇತ್ತು. ರಮಝಾನ್ ತಿಂಗಳಲ್ಲಿ ಮುಂಜಾನೆಯ ಸೆಹ್ರಿಗೆ ಅಗತ್ಯವಿರುವ ಹಾಲು ಮತ್ತು ಮೊಸರನ್ನು ಒದಗಿಸಬಲ್ಲಂಥ ಹಸುಗಳ ಹುಡುಕಾಟದಲ್ಲಿ ಅವರಿದ್ದರು. ಎಮ್ಮೆಯ ದರ ಅತಿಯಾಗಿದ್ದ ಕಾರಣ ಅವರು ಹಸುಗಳನ್ನು ಖರೀದಿಸಲು ನಿರ್ಧರಿಸಿದರು. ಪೆಹ್ಲೂ ಮತ್ತು ಅವರ ಮಕ್ಕಳು ಸಣ್ಣಕರುಗಳನ್ನು ಹೊಂದಿದ್ದ ಎರಡು ಹಸುಗಳನ್ನು ಖರೀದಿಸಿದರು. ‘‘ಅವುಗಳೆರಡೂ ಹನ್ನೆರಡು ದಿನಗಳ ಬಾಣಂತಿ ಹಸುಗಳಾಗಿದ್ದವು’’ ಎಂದು ಆರೀಫ್ ವಿವರಿಸುತ್ತಾರೆ. ಈ ಹಸುಗಳು ಸಾಕಷ್ಟು ಕಡಿಮೆ ದರದಲ್ಲಿ ಸಿಕ್ಕಿದ್ದವು ಮತ್ತು ರಮಝಾನ್ ಸಮಯದಲ್ಲಿ ಉತ್ತಮ ಹಾಲನ್ನೂ ನೀಡುತ್ತಿದ್ದವು. ಅವೆರಡು ಜೋಡಿ ಹಸುಗಳ ದರ ರೂ. 45,000. ಎಂದಿನಂತೆ ಈ ಬಾರಿಯೂ ಈ ಮೊತ್ತವನ್ನು ಸಮೀಪದ ಗ್ರಾಮದ ಜಮೀನ್ದಾರನಿಂದ ಶೇ. 5-6ರ ಬಡ್ಡಿಗೆ ಪಡೆದುಕೊಳ್ಳಲಾಗಿತ್ತು.

ಜೈಸಿಂಗ್‌ಪುರದ ಇನ್ನೋರ್ವ ಯುವ ಪಶುವ್ಯಾಪಾರಿ ಅಝ್ಮತ್ ಮೂರು ಹಸುಗಳನ್ನು ಅವುಗಳ ಕರುಗಳ ಜೊತೆಗೆ ರೂ. 75,000 ಖರೀದಿಸಿದ್ದರು. ಈಗ ಅಝ್ಮತ್ ಬೆನ್ನುಮೂಳೆಯ ಗಾಯದಿಂದಾಗಿ ಖಾನ್ ಮನೆಯ ಸಮೀಪದಲ್ಲೇ ಇರುವ ತನ್ನ ಮನೆಯ ಆವರಣದಲ್ಲಿರುವ ಮರದ ಹಾಸಿಗೆಯ ಮೇಲೆ ಅಲುಗಾಡಲಾಗದೆ ಮಲಗಿದ್ದಾರೆ. ಆತನಿಗಾದ ನೋವನ್ನು ಅವರ ಮುಖದಲ್ಲಿ ಕಾಣಬಹುದಾಗಿತ್ತು. ‘‘ನಾವು ಖರೀದಿಸಿದ್ದ ಹಸು 4-5 ದಿನಗಳ ಹಿಂದಷ್ಟೇ ಕರು ಹಾಕಿತ್ತು. ಏನಿಲ್ಲವೆಂದರೂ ದಿನಕ್ಕೆ 10-15 ಲೀಟರ್ ಹಾಲು ನೀಡುತ್ತಿತ್ತು’’ ಎಂದು ಕೈಯಲ್ಲಿ ತನ್ನ ಪುಟ್ಟಮಗು ಕುಶ್ನುಮಾಳನ್ನು ಹಿಡಿದುಕೊಂಡಿದ್ದ ಅಝ್ಮತ್‌ನ ಪತ್ನಿ ನಫೀಸಾ ತಿಳಿಸಿದರು. ನಮ್ಮ ಮಧ್ಯೆ ನಡೆಯುತ್ತಿದ್ದ ಸಂಭಾಷಣೆಯ ಗಾಂಭೀರ್ಯವನ್ನರಿಯದ ಆ ಪುಟ್ಟಕಂದಮ್ಮ ತನ್ನ ಹೆಸರಿಗೆ ತಕ್ಕಂತೆ ನಿದ್ದೆಗಣ್ಣಿನಲ್ಲೂ ನಗೆಬೀರುತ್ತಿತ್ತು. ಅಝ್ಮತ್‌ನ ತಾಯಿ ಝಹೀರಾ ತಮ್ಮ ಮೇಲೆರಗಿದ ಆಘಾತದಿಂದ ಇನ್ನೂ ಹೊರಬರಲಾಗದೆ ತಲೆಯಲ್ಲಾಡಿಸುತ್ತಾ ಕುಳಿತಿದ್ದಾರೆ. ಗುತ್ತಿಗೆ ಬೇಸಾಯ ನಡೆಸುತ್ತಿದ್ದ ಅಝ್ಮತ್ ಇದೇ ಮೊದಲ ಬಾರಿ ಜೈಪುರದ ಪಶು ಜಾತ್ರೆಗೆ ತೆರಳಿದ್ದರು. ಆದರೆ ಅದಾಗಲೇ ನಡೆಯಬಾರದ್ದು ನಡೆದುಹೋಗಿತ್ತು. ‘‘ಇನ್ನು ಯಾರೂ ಹೋಗುವುದಿಲ್ಲ, ಎಂದಿಗೂ’’ ಎಂದು ದುಃಖತಪ್ತಳಾಗಿ ನುಡಿಯುತ್ತಾರೆ ಅಝ್ಮತ್ ತಾಯಿ. ಖಾನ್ ಮತ್ತು ಅಝ್ಮತ್ ಖರೀದಿಸಿದ್ದ ರೂ. 1.2 ಲಕ್ಷ ಮೌಲ್ಯದ ಪಶುಗಳೂ ಹೋದವು. ಜೊತೆಗೆ ಅವರು ಕೊಂಡೊಯ್ದಿದ್ದ ಹೆಚ್ಚುವರಿ ರೂ. 45,000ವೂ ಕಳೆದುಹೋಯಿತು. ಒಟ್ಟಾರೆಯಾಗಿ ಐದು ಹಸುಗಳು ಮತ್ತು ಐದು ಕರುಗಳನ್ನು ಪೊಲೀಸರು ಯಾವುದೇ ರಸೀದಿ ಅಥವಾ ಸಾಕ್ಷಿಪತ್ರವಿಲ್ಲದೆ ಸಾಗಾಟ ಮಾಡುವ ಕಳ್ಳವಸ್ತುಗಳಂತೆ ಸ್ವಾೀನಕ್ಕೆ ಪಡೆದುಕೊಂಡರು. ಸದ್ಯ ಗೋಶಾಲೆಗಳಲ್ಲಿ ಅವುಗಳನ್ನು ಇಡಲಾಗಿದ್ದು ಅವುಗಳು ಚೇತರಿಸಿಕೊಳ್ಳುವ ಯಾವುದೇ ಭರವಸೆಯಿಲ್ಲ.
ಗ್ರಾಮಸ್ಥರು ಹೇಳುವಂತೆ ಈ ಗೋಶಾಲೆಗಳ ಅವಸ್ಥೆಯನ್ನು ಗಮನಿಸಿದರೆ ಈ ಆರೋಗ್ಯವಂತ ಹಸುಗಳು ಶೀಘ್ರದಲ್ಲೇ ಹಾಲು ನೀಡುವುದನ್ನು ನಿಲ್ಲಿಸಲಿದೆ ಮತ್ತು ಅರೆಸತ್ತ ಜೀವನ ಸಾಗಿಸಲಿದೆ. ಅದು ಹಳ್ಳಿಗರಿಗೆ ನೋವುಂಟು ಮಾಡುತ್ತದೆ. ‘‘ನಮ್ಮ ಪಶುಗಳನ್ನು ನಾವು ನಮ್ಮ ಮಕ್ಕಳಂತೆ ಪ್ರೀತಿಸುತ್ತೇವೆ. ಪುಟ್ಟ ಮಕ್ಕಳಂತೆ ಅವುಗಳಿಗೆ ಸ್ನಾನ ಮಾಡಿಸುತ್ತೇವೆ. ಆಹಾರ ನೀಡುತ್ತೇವೆ. ಅವುಗಳು ನಮಗೆ ಹಾಲು ಮತ್ತು ಮೊಸರು ನೀಡುತ್ತವೆ ಎಂದು ಹೇಳುತ್ತಾರೆ’’ ಖಾನ್‌ರ ಮನೆಯ ಮಹಿಳೆಯರು. ಹೊರಗೆ ನೆರೆದಿರುವ ಪುರುಷರ ಗುಂಪಿನಿಂದಲೂ ಇದೇ ಮಾತು ಕೇಳಿಬರುತ್ತದೆ. ಆದರೆ ಆ ಧ್ವನಿಯಲ್ಲಿ ಕೋಪ, ಆವೇಶವಿದೆ. ‘‘ಈ ಗೋರಕ್ಷಣೆಯ ಬಗ್ಗೆ ಮಾತನಾಡುವವರಿಗೆ ಹಸುವಿನ ಬಾಲವನ್ನು ಕೂಡಾ ಸ್ವಚ್ಛ ಮಾಡಲು ಬರುವುದಿಲ್ಲ. ನಮಗೆ ಕಲಿಸಲು ಬರುತ್ತಾರೆ. ನಮ್ಮ ಮೇಲೆ ಗೋಹತ್ಯೆಯ ದೂರು ದಾಖಲಿಸುತ್ತಾರೆ.’’ ಎಂಬ ಮಾತುಗಳು ಹೊರಗಿನಿಂದ ಕೇಳಿಬರುತ್ತದೆ. ಗೋರಕ್ಷಕರು ಎಂಬುದು ಸ್ವಯಂಘೋಷಿತ ಜಾಗೃತಗುಂಪುಗಳು ಮತ್ತು ಇವುಗಳನ್ನು ಕಾನೂನು ರೀತಿಯಲ್ಲಿ ನಿಭಾಯಿಸುವ ಅವಕಾಶವಿದೆ. ಆದರೆ ಪ್ರಶ್ನೆಯೇನೆಂದರೆ, ಈ ಗುಂಪುಗಳ ಕೈಗೆ ಬೀದಿ ಪೊಲೀಸ್‌ಗಿರಿಯನ್ನು ಗುತ್ತಿಗೆ ನೀಡಿರುವ ಸರಕಾರಗಳನ್ನು ನಾವು ಏನು ಮಾಡುವುದು? ಇವುಗಳು ಜೊತೆಯಾಗಿ ಕಳುಹಿಸುವ ರಾಜಕೀಯ ಸಂದೇಶವೇ ಜೈಸಿಂಗ್‌ಪುರದ ಕುಟುಂಬಗಳನ್ನು ಹತಾಶೆಗೊಳಿಸುತ್ತದೆ. ಮುಸ್ಲಿಂ ಪಶುವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಹತ್ಯೆಗೈಯುವುದು ಮಾತ್ರವಲ್ಲ ಅವರೇ ಅವರ ಸಾವಿನ ನೈತಿಕ ಆರೋಪವನ್ನೂ ಹೊರಬೇಕು. ರಾಜಸ್ಥಾನ ಪೊಲೀಸರು ನಡೆಸಿದ ಪ್ರಹಸನ ನಿಜವಾಗಿಯೂ ಎಲ್ಲರನ್ನೂ ಮೂಕವಾಗಿಸುತ್ತದೆ. ಈ ಇಡೀ ಹೇಯ ಪ್ರಕರಣದಲ್ಲಿ ಮೊತ್ತಮೊದಲ ನ್ಯಾಯಿಕ ಲೋಪವೆಂದರೆ ಖಾನ್ ಮತ್ತವರ ಜೊತೆಗಾರರ ಮೇಲೆ ನಡೆದ ಹಿಂಸಾಚಾರ ವಿರುದ್ಧ ಎಫ್ಐಆರ್ ದಾಖಲಿಸಿಯೇ ಇಲ್ಲ. ಬದಲಿಗೆ ರಾಜಸ್ಥಾನ ಗೋ ಕಾನೂನು 1995 (ವಧೆ ನಿಷಿದ್ಧ ಮತ್ತು ತಾತ್ಕಾಲಿಕ ವಲಸೆ ಮತ್ತು ರ್ತು ನಿಯಂತ್ರಣ) ಅಡಿ ಖಾನ್, ಇರ್ಷಾದ್ ಮತ್ತು ಆರಿಫ್ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಈ ಎಫ್ಐಆರ್ನ್ನು ಅವರು ಗೋಕಳ್ಳರು ಅಥವಾ ಹಸುವನ್ನು ಹತ್ಯೆ ಮಾಡುವ ಇರಾದೆ ಹೊಂದಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲದಿದ್ದರೂ ಎಪ್ರಿಲ್ 2ರಂದು ಮಧ್ಯಾಹ್ನ 2:42 ಗಂಟೆಗೆ ದಾಖಲಿಸಲಾಯಿತು. ಸಾಕ್ಷಿಗಳು ಏನನ್ನು ತೋರಿಸುತ್ತಿದ್ದವು ಎಂದರೆ ಅವರು ಕೇವಲ ಪಶುವ್ಯಾಪಾರ ನಡೆಸಿದ್ದರು.
ಎರಡನೆ ಬಾರಿ ದಾಖಲಾದ ಎಫ್ಐಆರ್ ಮಾತ್ರ ಗೋರಕ್ಷಕರ ವಿರುದ್ಧವಾಗಿತ್ತು. ದೈಹಿಕ ಹಲ್ಲೆಗೊಳಗಾದುದಕ್ಕೆ ಸಾಕ್ಷಿಯಾಗಿ ರಕ್ತಸಿಕ್ತ ದೇಹಗಳು ಎದುರಿಗಿದ್ದರೂ ಈ ಎಫ್ಐಆರ್ನ್ನು ಎಪ್ರಿಲ್ 2ರಂದು ಸಂಜೆ 4:24ಕ್ಕೆ ಅಂದರೆ ಮೊದಲ ಎಫ್ಐಆರ್ರ್ ದಾಖಲಾದ ಎರಡು ಗಂಟೆಗಳ ನಂತರ ದಾಖಲಿಸಲಾಯಿತು. ನಾವು ಜೈಸಿಂಗ್‌ಪುರದಿಂದ ತೆರಳುತ್ತಿದ್ದಂತೆ ಪಶುವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಕೈಬಿಡುವ ಮಾತುಗಳು ಕೇಳಿಬರುತ್ತಿತ್ತು. ನಮಗೆ ಅವರು ಹೇಳಿದ ಪ್ರಕಾರ ಹಸುಗಳನ್ನು ಸಾಗಿಸುವುದು ಬಿಡಿ ಒಬ್ಬ ಮುಸಲ್ಮಾನ ಅಲ್ಲೀಗ ಗೋವನ್ನು ಸಾಕಲು ಕೂಡಾ ಹೆದರುತ್ತಾನೆ. ‘‘ಹೇಗೆ ಹೇಳುವುದು ನಾಳೆ ಯಾರಾದರೂ ನಮ್ಮ ಮನೆಯೊಳಗೆ ಹೊಕ್ಕು ಗೋವನ್ನು ನಾವು ಕಡಿಯಲೆಂದೇ ಸಾಕಿದ್ದೇವೆ ಎಂದು ಹೇಳಿದರೆ ಏನು ಮಾಡುವುದು? ಹಸುಗಳು ಅವರಿಗೆ ಸೇರಿದ್ದಾದರೆ ಅಂಥಾ ಹಸುಗಳು ಅವರಿಗೇ ಇರಲಿ’’ ಎಂದು ಹೇಳುತ್ತಾರೆ ಗ್ರಾಮದ ಒಬ್ಬ ವ್ಯಕ್ತಿ. ಇತರರು ಆತನ ಮಾತಿಗೆ ದುಃಖದಿಂದಲೇ ತಲೆಯಾಡಿಸುತ್ತಾರೆ. ಹೌದು ನಾವು ನಮ್ಮಲ್ಲಿರುವ ಲಕ್ಷಗಟ್ಟಲೆ ಬೆಲೆಬಾಳುವ ಹಸುಗಳನ್ನು ಅವರಿಗೆ ವಾಪಸ್ ನೀಡುತ್ತೇವೆ, ಅದನ್ನು ‘ಗೋ ವಾಪಸಿ’ ಎಂದು ಕರೆದರಾಯಿತು ಎಂದು ಗ್ರಾಮಸ್ಥರು ನುಡಿಯುತ್ತಾರೆ.
ಕೃಪೆ: thewire.in







