ಮೇ ಮರಗಳಲ್ಲಿ ಮತ್ತೆ ಅರಳಲಿ ಕೆಂಪು ಹೂವುಗಳು!
ಇಂದು ಕಾರ್ಮಿಕರ ದಿನ

ಕಾರ್ಮಿಕ ಹಕ್ಕುಗಳಿಗೆ ಧ್ವನಿ ಕೊಟ್ಟ ದಿನ ಮೇ ತಿಂಗಳು. ಆ ತಿಂಗಳಲ್ಲಿ ಕೆಂಪು ಹೂಗಳನ್ನು ಬಿಡುವ ಮೇ ಫ್ಲವರ್ ಮರಗಳು, ಮೇ ತಿಂಗಳಲ್ಲಿ ಕಾರ್ಮಿಕ ಹಕ್ಕುಗಳಿಗಾಗಿ ಹುತಾತ್ಮರಾದ ನಾಯಕರ ಕೆಂಪು ನೆನಪುಗಳಿಗೆ ರೂಪಕವಾಗಿವೆ. ವಿಶ್ವದ ಕಾರ್ಮಿಕರೆಲ್ಲ ಒಂದಾಗಿ. ‘‘ನೀವು ಸಂಕೋಲೆಗಳನ್ನಲ್ಲದೆ ಕಳೆದುಕೊಳ್ಳಲು ಬೇರೇನೂ ಇಲ್ಲ’’ ಎಂದು ಘೋಷಿಸುವುದರೊಂದಿಗೆ 1890ರಿಂದ ಮೇ ದಿನಾಚರಣೆ ಆರಂಭವಾಯಿತು. 1886ರ ಮೇ ತಿಂಗಳಲ್ಲಿ ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದ ಬಳಿಯ ಓಣಿಯಲ್ಲಿ ನೆರೆದಿದ್ದ ಸಾವಿರಾರು ಕಾರ್ಮಿಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಿಂದ ನಾಲ್ವರು ಕಾರ್ಮಿಕರು ಹುತಾತ್ಮರಾದರು. ಕೊನೆಗೂ ಕಾರ್ಮಿಕರ ಹೋರಾಟಕ್ಕೆ ಜಯಸಂದಿತ್ತು. ಮೇ 1 ಕಾರ್ಮಿಕ ಪಾಲಿನ ಸಂಭ್ರಮದ ದಿನ ಹೇಗೋ ಹಾಗೆಯೇ, ಹೋರಾಟಕ್ಕಾಗಿ ರಕ್ತತರ್ಪಣ ಮಾಡಿದ ವಿಷಾದದ ದಿನವೂ ಹೌದು. ಮಾತ್ರವಲ್ಲ ಮೇ 1ರಂದು ಹೇ ಮಾರ್ಕೆಟ್ ಚೌಕದಲ್ಲಿ ಸಂಭವಿಸಿದ ಸ್ಫೋಟದ ಆರೋಪದ ಮೇಲೆ ನಾಲ್ವರು ಕಾರ್ಮಿಕರನ್ನು ಸರಕಾರ ಗಲ್ಲಿಗೇರಿಸಿತು.
‘‘ನೀವಿಂದು ಹಿಸುಕಿ ಹಾಕಿದ ದನಿಗಳಿಗಿಂತ ನಮ್ಮ ವೌನವೇ ಹೆಚ್ಚು ಬಲಿಷ್ಠವಾಗುವ ದಿನ ಬಂದೇ ಬರುತ್ತದೆ’’ ಎನ್ನುವ ಕನಸಿನೊಂದಿಗೆ ಆ ನಾಲ್ವರು ನೇಣುಗಂಬವೇರಿದರು. ಹೋರಾಟದ ಫಲವಾಗಿ ಕಾರ್ಮಿಕರ ಪ್ರಮುಖ ಬೇಡಿಕೆಗಳು ಈಡೇರಿದವು. ‘ದಿನ ಎಂಟು ಗಂಟೆ ಕೆಲಸ’ ಎಂಬ ಕಾರ್ಮಿಕರ ಬೇಡಿಕೆ ಅದರಲ್ಲಿ ಪ್ರಮುಖವಾದುದು. ಮುಂದೆ ಹಂತ ಹಂತವಾಗಿ ಕಾರ್ಮಿಕ ಶಕ್ತಿ ರಾಜಕೀಯ ಶಕ್ತಿಯಾಗಿಯಾಗಿ ಬದಲಾಯಿತು. ವಿಷಾದನೀಯ ಸಂಗತಿಯೆಂದರೆ ಒಂದು ಕಾಲದಲ್ಲಿ ಆಳುವವರನ್ನೇ ಬುಡಮೇಲು ಮಾಡುತ್ತಿದ್ದ ಕಾರ್ಮಿಕ ಸಂಘಟನೆಗಳು ಇಂದು ತನ್ನ ಬೇರುಗಳನ್ನು ಕಳೆದುಕೊಂಡಿವೆ. ಬದಲಿಗೆ ರಾಜಕೀಯ ಪಕ್ಷಗಳೇ ಕಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸುವಂತಹ ಸನ್ನಿವೇಶಗಳು ನಿರ್ಮಾಣವಾಗಿವೆ. ಕಾರ್ಮಿಕರನ್ನು ಎದುರಿಸುವುದಕ್ಕೆ ಕಾರ್ಮಿಕರನ್ನೇ ಬಳಸುವ ತಂತ್ರವನ್ನು ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ.
ಇಂದು ನಡೆಯುತ್ತಿರುವುದು ಮೇ ದಿನದ ಹುಸಿ ವೈಭವೀಕರಣ. ಹೋರಾಟಗಾರರ ಹೆಸರಲ್ಲಿ ಬೀದಿ ಬೀದಿಗಳಲ್ಲಿ ಕೆಂಬಾವುಟಗಳು ಅರಳುತ್ತವೆ. ಆದರೆ ಆ ಬಾವುಟ ಕಾರ್ಮಿಕ ಸಂಘಟನೆಗಳಿಗೆ ಶಕ್ತಿ ತುಂಬುತ್ತಿಲ್ಲ. ಸಂಘಟನೆಗಳು ರಾಜಕೀಯ ಶಕ್ತಿಗಳ ಮೇಲೆ ಪ್ರಭಾವ ಬೀರುವಲ್ಲಿ ದಿನದಿಂದ ದಿನಕ್ಕೆ ವಿಫಲವಾಗುತ್ತಿವೆ. ಮೇ ಫ್ಲವರ್‌ನಲ್ಲಿ ಅರಳುವ ಕೆಂಪು ಹೂವುಗಳ ಬಣ್ಣ ವರ್ಷದಿಂದ ವರ್ಷಕ್ಕೆ ಮಂಕಾಗುತ್ತಿವೆ. ಭಾರತದ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಸರ್ದೇಸಾಯಿ ಸತ್ಯಪಾಲ ಡಾಂಗೆ, ಎಂ.ಕೆ. ಪಂಧೆ ಮೊದಲಾದ ನಾಯಕರು ಕಟ್ಟಿ ಬೆಳೆಸಿರುವ ಕಾರ್ಮಿಕ ಶಕ್ತಿ ಇಂದು ಆ ಚೈತನ್ಯವನ್ನು ತನ್ನೊಳಗೆ ಉಳಿಸಿಕೊಂಡಿಲ್ಲ. ವಿಪರ್ಯಾಸವೆಂದರೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ಕಾರ್ಮಿಕ ಸಂಘಟನೆಗಳನ್ನು ಹೊಂದಿವೆ. ಬಂಡವಾಳ ಶಾಹಿ ವ್ಯವಸ್ಥೆಯ ತಳಹದಿಯಲ್ಲಿ ನಿಂತಿರುವ ಪಕ್ಷಗಳ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಪರವಾಗಿ ಅದೆಷ್ಟರ ಮಟ್ಟಿಗೆ ಧ್ವನಿಯೆತ್ತಬಹುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂದು ರಾಜಕೀಯ ಪಕ್ಷಗಳು ತನ್ನೊಳಗೆ ಬೇರೆ ಬೇರೆ ಮೋರ್ಚಾಗಳನ್ನು, ಉಪಸಂಘಟನೆಗಳನ್ನು ಹೊಂದಿರುವಂತೆಯೇ ಕಾರ್ಮಿಕ ಸಂಘಟನೆಗಳನ್ನು ಹೊಂದಿವೆ. ಮತ ವಿಭಜನೆಯನ್ನು ತಡೆಯುವ ಉದ್ದೇಶದಿಂದಷ್ಟೇ ಈ ಸಂಘಟನೆಗಳು ಸ್ಥಾಪನೆಗೊಂಡಿವೆ. ಬಿಜೆಪಿ, ಕಾಂಗ್ರೆಸ್, ಕಮ್ಯುನಿಷ್ಟ್ ಪಕ್ಷಗಳು ತಮ್ಮದೇ ಆದ ಪ್ರತ್ಯೇಕ ಕಾರ್ಮಿಕ ಸಂಘಟನೆಗಳನ್ನು ಹೊಂದಿವೆಯಾದರೂ ಕಾರ್ಮಿಕ ಹಿತಾಸಕ್ತಿಯ ಸಂದರ್ಭದಲ್ಲಿ ಇವೆಲ್ಲವೂ ಜೊತೆಗೂಡಿ ಧ್ವನಿಯೆತ್ತುವುದು ಅಗತ್ಯವಾಗಿದೆ.ಆದರೆ ಅವುಗಳು ಎಂದಿಗೂ ಒಂದಾಗಿ ಕಾರ್ಮಿಕರ ಪರವಾಗಿ ಮಾತನಾಡಿದ್ದಿಲ್ಲ. ಕೇಂದ್ರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಕಾರ್ಮಿಕಸಂಘಟನೆಗಳು ಒಂದಾದಾಗ ಬಿಜೆಪಿ ಪ್ರಾಯೋಜಿತ ಭಾರತೀಯ ಮಜ್ದೂರ್ ಸಂಘ್, ಹಲವು ನೆಪಗಳನ್ನು ಮುಂದೊಡ್ಡಿ ಬೆಂಬಲದಿಂದ ಹಿಂದೆ ಸರಿಯಿತು. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಕಾರ್ಮಿಕ ಕಾನೂನುಗಳು ಸಂಪೂರ್ಣ ನಿಷ್ಕ್ರಿಯವಾಗುತ್ತಿವೆ. ಇದರ ವಿರುದ್ಧ ಧ್ವನಿಯೆತ್ತಿ, ಕಾರ್ಮಿಕ ಪರವಾದ ನೀತಿಗಳನ್ನು ತಳೆಯುವಂತೆ ಸರಕಾರದ ಮೇಲೆ ಒತ್ತಡ ಹೇರುವುದು ಬಿಎಂಎಸ್ ಕರ್ತವ್ಯವಾಗಿತ್ತು ಆದರೆ ಇಂದು ಬಿಎಂಎಸ್‌ನ್ನು ಬಳಸಿಕೊಂಡು ಕಾರ್ಮಿಕರನ್ನು ತನಗೆ ಬೇಕಾದಂತೆ ಸರಕಾರ ಬಳಸಿಕೊಳ್ಳುತ್ತಿದೆ. ಪಕ್ಷದ ಹೆಸರಿನಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರಶ್ನಿಸದಂತಹ ಸನ್ನಿವೇಶ ನಿರ್ಮಾಣವಾಗಿದೆ. ಅನಿಲ್ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಶಕ್ತಿಗಳ ಕೈಗೊಂಬೆಯಾಗಿರುವ ಬಿಜೆಪಿ ನೇತೃತ್ವದ ಸರಕಾರದ ಹಿಡಿತದಲ್ಲಿರುವ ಬಿಎಂಎಸ್‌ನಿಂದ ಕಾರ್ಮಿಕರು ನ್ಯಾಯ ಬಯಸುವುದು ಹೇಗೆ ಸಾಧ್ಯ?
ಭಾರತದ ಕಾರ್ಮಿಕ ಚಳವಳಿಯ ಅತೀ ದೊಡ್ಡ ದುರಂತ ವೆಂದರೆ, ಇಂದು ಕಾರ್ಮಿಕ ಸಂಘಟನೆಗಳೆಲ್ಲವೂ ನಿರ್ದಿಷ್ಟ ರಾಷ್ಟ್ರೀಯ ಪಕ್ಷಗಳ ಘಟಕಗಳಿಗೆ ಸೀಮಿತ ವಾಗಿರುವುದು. ತಮ್ಮ ತಮ್ಮ ಸರಕಾರಕ್ಕೆ ಪೂರಕವಾಗಿ ಅವುಗಳು ಬಳಸಲ್ಪಡುತ್ತಿವೆ. ಇಂದು ಕಾರ್ಮಿಕರ ಬಿಡುಗಡೆ ಸಾಧ್ಯವಾಗಬೇಕಾದರೆ ಮೊತ್ತ ಮೊದಲು ರಾಜಕೀಯಪಕ್ಷಗಳ ಹಿಡಿತದಿಂದ ಕಾರ್ಮಿಕ ಸಂಘಟನೆಗಳು ಸ್ವತಂತ್ರವಾಗ ಬೇಕಾಗಿದೆ. ಕಾರ್ಮಿಕ ಧ್ವನಿಗಳು ಪಕ್ಷದ ಹಿತಾಸಕ್ತಿಗೆ ಪೂರಕವಾಗಿ ಮೊಳಗದೇ, ಕಾರ್ಮಿಕರ ಹಿತಾಸಕ್ತಿಗೆ ಪೂರಕವಾಗಿ ಬೀದಿಯಲ್ಲಿ ಮೊಳಗುವಂತಹ ಸನ್ನಿವೇಶ ನಿರ್ಮಾಣವಾಗಬೇಕು. ಕಾರ್ಮಿಕರು ವಿವಿಧ ಪಕ್ಷಗಳು, ಚಿಂತನೆಗಳಿಂದ ವಿಭಜನೆಗೊಂಡಿದ್ದಾರೆ. ಆದುದರಿಂದಲೇ, ಪಕ್ಷೇತರವಾಗಿ ಎಲ್ಲ ಕಾರ್ಮಿಕರೂ ಭಾರತೀಯ ಸಾಮಾಜಿಕ ಅಸಮಾನತೆಗೆ ಪೂರಕವಾಗಿ ಮರು ಸಂಘಟನೆಗೊಳ್ಳಬೇಕಾಗಿದೆ. ಹಾಗೆಯೇ ಕಾರ್ಮಿಕರ ವ್ಯಾಖ್ಯಾನಗಳೂ ಬದಲಾಗಬೇಕಾಗಿದೆ. ಬೇರೆ ಬೇರೆ ವರ್ಗಗಳ ಕಾರ್ಮಿಕರು ಸ್ವತಂತ್ರ ಛತ್ರಿಯಡಿಯಲ್ಲಿ ಒಂದಾಗಿಕಾರ್ಮಿಕರ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಬೀದಿಗಿಳಿ ದರೆ ಮಾತ್ರ ಸರಕಾರ ಕಾರ್ಮಿಕರಿಗೆ ನಡುಗು ವಂತಹ ಸನ್ನಿವೇಶ ನಿರ್ಮಾಣವಾಗಬಹುದು. ಮೇ 1 ನಿರ್ದಿಷ್ಟ ಪಕ್ಷವೊಂದರ ಆಚರಣೆಯಾಗಿ ಉಳಿಯದೆ ಭಾರತದ ಎಲ್ಲ ತಳಸ್ತರದ ಕಾರ್ಮಿಕರ ದಿನವಾಗಿ ಪರಿವರ್ತನೆಯಾಗುವುದು ಇಂದಿನ ಅಗತ್ಯ ವಾಗಿದೆ. ಅವರೆಲ್ಲರನ್ನೂ ಮರು ಸಂಘಟಿಸಿ, ಹೋರಾಟದ ದಾರಿಯನ್ನು ಮರು ವಿಮರ್ಶಿಸಿ ಮುಂದೆ ಹೋಗುವುದಕ್ಕೆ ಮೇ ದಿನ ಸ್ಫೂರ್ತಿಯಾಗಬೇಕು. ಮೇ ಮರಗಳಲ್ಲಿ ಮತ್ತೆ ಕೆಂಪು ಹೂವುಗಳು ಅರಳಬೇಕು.







