ಬೆಂಗಳೂರು: ಹೆಚ್ಚಿದ ಲೈಂಗಿಕ ಕಿರುಕುಳ ಶಿಕ್ಷೆ ನಗಣ್ಯ

ಬೆಂಗಳೂರಿನ ಅಪರಾಧ ನ್ಯಾಯವ್ಯವಸ್ಥೆ ಭಾರತದ ಇತರ ಕಡೆಗಳಂತೆ ವಿಳಂಬಕ್ಕೆ ಹೆಸರುವಾಸಿ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ 4,241 ಪ್ರಕರಣಗಳ ಪೈಕಿ 2,248 ಪ್ರಕರಣಗಳು ಅಂದರೆ ಶೇ. 53ರಷ್ಟು ಪ್ರಕರಣಗಳ ತನಿಖೆ ಬಾಕಿ ಇದೆ ಎಂದು ಕಮಿಷನರೇಟ್ ಅಂಕಿ ಅಂಶ ಹೇಳುತ್ತದೆ.
ವಿಚಾರಣೆ ನಡೆದ ಪ್ರಕರಣಗಳ ಪೈಕಿ 523 ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿದ್ದರೆ ಕೇವಲ 16 ಪ್ರಕರಣಗಳಲ್ಲಷ್ಟೇ (ಶೇ. 0.37) ಶಿಕ್ಷೆಯಾಗಿದೆ.
2016ರ ವರೆಗಿನ ಒಂದು ದಶಕದಲ್ಲಿ ಬೆಂಗಳೂರಿನಲ್ಲಿ ಒಂದು ವಾರದಲ್ಲಿ ದಾಖಲಾದ ಲೈಂಗಿಕ ಕಿರುಕುಳ (ಭಾರತೀಯ ದಂಡಸಂಹಿತೆಯ ಸೆಕ್ಷನ್ 354) ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಿವೆ ಎಂದು ಪೊಲೀಸ್ ಕಮಿಷನರೇಟ್‌ನ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಆದಾಗ್ಯೂ ಪೊಲೀಸ್ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ, 2006ರಿಂದ 2016ರವರೆಗೆ 4,241 ಪ್ರಕರಣಗಳು ದಾಖಲಾಗಿವೆ. ಆದರೆ ಶಿಕ್ಷೆಗೆ ಒಳಗಾದವರ ಪ್ರಮಾಣ ಮಾತ್ರ ಶೇ. 0.37 ಅಂದರೆ ಕೇವಲ 16 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 354 (ಮಹಿಳೆಯ ಘನತೆಗೆ ಕುತ್ತು ತರುವ ರೀತಿಯ ದೌರ್ಜನ್ಯ)ರ ಅನ್ವಯ 2006ರಲ್ಲಿ ದಾಖಲಾದ ಪ್ರಕರಣಗಳು 150. ಇದು 2016ರಲ್ಲಿ 776ಕ್ಕೆ ಹೆಚ್ಚಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ದಾಖಲಿಸಲು ಮಹಿಳೆಯರು ಮುಂದೆ ಬರುತ್ತಿರುವುದು ಹೀಗೆ ಗಣನೀಯ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಲು ಮುಖ್ಯ ಕಾರಣ ಎಂಬ ವಿಶ್ಲೇಷಣೆ ತಜ್ಞರದ್ದು.
ಭಾರತದಲ್ಲಿ ದೊಡ್ಡ ನಗರಗಳಲ್ಲಿ ಪೊಲೀಸರು ಸಾರ್ವಜನಿಕ ಹಿತದೃಷ್ಟಿಯಿಂದ ಹೇಗೆ ಅಂಕಿ ಅಂಶಗಳನ್ನು ಬಹಿರಂಗಪಡಿಸಿ ಜಾಗೃತಿ ಮೂಡಿಸಬಹುದು ಎನ್ನುವುದಕ್ಕೆ ಈ ಅಂಕಿ ಅಂಶಗಳು ಒಳ್ಳೆಯ ನಿದರ್ಶನ.
ಐಪಿಸಿ ಸೆಕ್ಷನ್ 354ರಲ್ಲಿ ಪ್ರಮುಖವಾಗಿ ಲೈಂಗಿಕ ಕಿರುಕುಳ (354ಎ), ಮಹಿಳೆಯರನ್ನು ಅೀರಗೊಳಿಸುವ ಸಲುವಾಗಿ ಅಪರಾಧ ಬಲಪ್ರಯೋಗ (354ಬಿ), ಲೈಂಗಿಕ ದರ್ಶನ (354 ಸಿ), ದಿಟ್ಟಿಸಿ ನೋಡುವುದು (354ಡಿ) ಸೇರುತ್ತದೆ. ಬೆಂಗಳೂರು ಕಮಿಷನರೇಟ್‌ನಿಂದ ಪಡೆದ ಅಂಕಿ ಅಂಶಗಳ ಅನ್ವಯ ಇವೆಲ್ಲವನ್ನೂ ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರು 2017ಕ್ಕೆ ಪ್ರವೇಶಿಸಿರುವುದೇ ಸಾಮೂಹಿಕವಾಗಿ ಮಹಿಳೆಯರಿಗೆ ಲೈಂಗಿಕ ಚೇಷ್ಟೆ ಮಾಡುವ ಮೂಲಕ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಪ್ರದೇಶದಲ್ಲಿ ಸಾವಿರಾರು ಮಂದಿ ಪೊಲೀಸರನ್ನು ನಿಯೋಜಿಸಿದ್ದರೂ, ಅವರ ಸಮ್ಮುಖದಲ್ಲೇ ಇಂಥ ಚೇಷ್ಟೆಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಮಹಿಳೆಯರ ಪಾಲಿಗೆ ಸುರಕ್ಷಿತ ನಗರ ಎಂಬ ನಂಬಿಕೆಯನ್ನು ಹುಸಿಗೊಳಿಸುವಂಥ ಇಂಥ ವರದಿಗಳು ನಗರದ ನಾಗರಿಕರಿಗೂ ಆಘಾತ ತಂದಿದ್ದವು.
ಕಾವ್ಯ (24) ಎಂಬ ಯುವತಿ ಕೆಲಸಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲೇ ಆಗಂತುಕನೊಬ್ಬ ಸಾರ್ವಜನಿಕರ ಎದುರೇ ಆಕೆಯ ಮೇಲೆ ಎರಗಿದ್ದ. ‘‘ಬೆಳಗ್ಗೆ 8.30ರ ಸುಮಾರಿಗೆ ಹಾಡಹಗಲಿನಲ್ಲೇ ಕೋರಮಂಗಲದಲ್ಲಿರುವ ಕಚೇರಿಗೆ ನಾನು ತೆರಳುತ್ತಿದ್ದೆ. ಒಬ್ಬ ಆಗಂತುಕ ನೂರಾರು ಮಂದಿಯ ಎದುರೇ ನನ್ನನ್ನು ಬರಸೆಳೆದುಕೊಂಡು ಚುಂಬಿಸಲು ಪ್ರಯತ್ನಿಸಿದ. ಆದರೆ ಯಾರೂ ನನ್ನ ನೆರವಿಗೆ ಬರಲಿಲ್ಲ. ಆದರೆ ನಾನು ಕೂಗಿಕೊಂಡು ಆತನನ್ನು ಝಾಡಿಸಿದಾಗ, ರಂಪಾಟ ನಡೆಸಿ ಬಿಟ್ಟುಬಿಡುವಂತೆ ನನಗೇ ತಾಕೀತು ಮಾಡಿದರು’’ ಎಂದು ಕಾವ್ಯ ನೆನಪಿಸಿಕೊಂಡರು.
ಕಾವ್ಯ ತಕ್ಷಣ ಐಪಿಸಿ ಸೆಕ್ಷನ್ 354ರ ಅನ್ವಯ ದೂರು ದಾಖಲಿಸಿದರು. ಅದರೆ ಮನೆ ಬದಲಿಸಿದ ಬಳಿಕ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ‘‘ಪೊಲೀಸ್ ಅಕಾರಿಗಳು ಸೂಕ್ತವಾಗಿ ಸಹಕರಿಸಿದರು. ಆದರೆ ನಾನು ಮನೆ ಹಾಗೂ ಉದ್ಯೋಗ ಬದಲಿಸಿದ ಕಾರಣ ಪ್ರಕರಣವನ್ನು ಫಾಲೊಅಪ್ ಮಾಡಲು ಸಾಧ್ಯವಾಗಲಿಲ್ಲ’’ ಎನ್ನುತ್ತಾರೆ ಕಾವ್ಯ.
‘‘ಕಾವ್ಯರ ಪ್ರಕರಣದಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಹಿಳೆಯರಿಗೆ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ’’ ಎಂದು ಬೆಂಗಳೂರು ಪೊಲೀಸರು ಹೇಳುತ್ತಾರೆ. ‘‘ಮಹಿಳೆಯರ ವಿರುದ್ಧ ಅಪರಾಧಗಳು ನಡೆಯಲು ಕುಖ್ಯಾತವಾಗಿರುವ ಪ್ರದೇಶಗಳ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಇಂಥ ಪ್ರದೇಶಗಳ ಮೇಲೆ ನಿಗಾ ಇಡುವ ಸಲುವಾಗಿ 51 ತಿಳಿಗೆಂಪು ಹೊಯ್ಸಳ ಸಂಚಾರಿ ಘಟಕಗಳನ್ನು ಸಜ್ಜುಗೊಳಿಸಿದ್ದೇವೆ. ಇದು ಮಹಿಳೆಯರಿಗೆ ರಕ್ಷಣೆ ನೀಡಲು ಸೀಮಿತವಾದ ವ್ಯವಸ್ಥೆ. ಎಪ್ರಿಲ್ ಎರಡನೆ ವಾರದಲ್ಲಿ ‘ಸುರಕ್ಷಾ’ ಎಂಬ ಮೊಬೈಲ್ ಅಪ್ಲಿಕೇಶನ್ ಕೂಡಾ ಆರಂಭಿಸಿದ್ದೇವೆ. ಮಹಿಳೆಯರು ಅಪಾಯದ ಬಗ್ಗೆ ಯಾವಾಗ ಕರೆ ಮಾಡಿದರೂ ಹತ್ತು ನಿಮಿಷಗಳ ಒಳಗೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸುತ್ತದೆ’’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಿವರಿಸುತ್ತಾರೆ.

ಬೆಂಗಳೂರಿನ ಅಪರಾಧ ನ್ಯಾಯವ್ಯವಸ್ಥೆ ಭಾರತದ ಇತರ ಕಡೆಗಳಂತೆ ವಿಳಂಬಕ್ಕೆ ಹೆಸರುವಾಸಿ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ 4,241 ಪ್ರಕರಣಗಳ ಪೈಕಿ 2,248 ಪ್ರಕರಣಗಳು ಅಂದರೆ ಶೇ. 53ರಷ್ಟು ಪ್ರಕರಣಗಳ ತನಿಖೆ ಬಾಕಿ ಇದೆ ಎಂದು ಕಮಿಷನರೇಟ್ ಅಂಕಿ ಅಂಶ ಹೇಳುತ್ತದೆ.
ವಿಚಾರಣೆ ನಡೆದ ಪ್ರಕರಣಗಳ ಪೈಕಿ 523 ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿದ್ದರೆ ಕೇವಲ 16 ಪ್ರಕರಣಗಳಲ್ಲಷ್ಟೇ (ಶೇ. 0.37) ಶಿಕ್ಷೆಯಾಗಿದೆ. ತನಿಖೆ ನಡೆಸಿದ ಬಳಿಕ ಪೊಲೀಸರು ಶೇ. 97ರಷ್ಟು ಪ್ರಕರಣಗಳಲ್ಲಿ ನಿಜಾಂಶವಿದೆ ಎಂದು ಪರಿಗಣಿಸಿದ್ದರೂ ಶಿಕ್ಷೆಯಾಗಿರುವ ಆರೋಪಿಗಳ ಪ್ರಮಾಣ ನಗಣ್ಯ. ಒಂದು ದಶಕದ ಹಿಂದೆ, ನಿಜ ಪ್ರಕರಣಗಳ ಪ್ರಮಾಣ ಶೇ. 84 ಆಗಿತ್ತು. ಆದರೆ ಈಗ ವಾಸ್ತವ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು, ಪೊಲೀಸರ ಉತ್ತಮ ಪ್ರಯತ್ನಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಆದಾಗ್ಯೂ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳ ಆರೋಪಿಗಳು ಖುಲಾಸೆಯಾಗಲು ಮುಖ್ಯ ಕಾರಣವೆಂದರೆ, ಕಳಪೆ ತನಿಖೆ ಎನ್ನುವುದು ಹೋರಾಟಗಾರರು ಮತ್ತು ವಕೀಲರ ಅಭಿಪ್ರಾಯ. ‘‘ಮಹಿಳೆಯರ ವಿರುದ್ಧದ ಬಹುತೇಕ ಅಪರಾಧ ಪ್ರಕರಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಾರೆ ಅಥವಾ ಹಲವು ವರ್ಷಗಳ ಕಾಲ ಪ್ರಕರಣಗಳು ನನೆಗುದಿಗೆ ಬಿದ್ದಿರುತ್ತವೆ’’ ಎಂದು ಖ್ಯಾತ ವಕೀಲೆ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಮೀಳಾ ನೇಸರ್ಗಿ ಅಭಿಪ್ರಾಯಪಡುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಪೊಲೀಸರ ನಿರ್ಲಕ್ಷ್ಯ ಹಾಗೂ ಸೂಕ್ತ ಪುರಾವೆಗಳನ್ನು ಪಡೆಯಲು ವಿಫಲರಾಗಿರುವುದು
‘‘ಬೆಂಗಳೂರಿನಲ್ಲಿ ಸಂಭವಿಸುವ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿರುವುದು ಇಡೀ ದೇಶದಲ್ಲಿರುವ ಸಮಸ್ಯೆ. ಕೆಲ ಮಹಿಳೆಯರು ಮಾತ್ರ ಲೈಂಗಿಕ ಕಿರುಕುಳಗಳನ್ನು ಮೀರಿ, ನ್ಯಾಯದ ಹಾದಿಯಲ್ಲಿ ತಮ್ಮ ಭೀಕರ ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧರಿರುತ್ತಾರೆ’’ ಎನ್ನುವುದು ‘ಹ್ಯೂಮನ್ ರೈಟ್ಸ್ ವಾಚ್’ ಎಂಬ ಸ್ವಯಂಸೇವಾ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರ ಅಭಿಮತ.
‘‘ಸರಕಾರ ಮಹಿಳೆಯರ ದೃಷ್ಟಿಕೋನದಿಂದ ಚಿಂತನೆ ನಡೆಸುವ ಅಗತ್ಯವಿದೆ’’ ಎಂದು ವನಿತಾ ಸಹಾಯವಾಣಿಯ ಸಂಚಾಲಕಿ ರಾಣಿ ಶೆಟ್ಟಿ ಹೇಳುತ್ತಾರೆ. ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಬರುವ ಈ ವ್ಯವಸ್ಥೆ ಪೊಲೀಸ್ ಕಮಿಷನರೇಟ್‌ನಲ್ಲೇ ಕಾರ್ಯನಿರ್ವಹಿಸುತ್ತದೆ. ‘‘ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ, ಪ್ರಕರಣಗಳು ಹಲವು ವರ್ಷಗಳಿಂದ ಬಾಕಿ ಇರುವ ಹಲವು ಸಂತ್ರಸ್ತೆಯರನ್ನು ಭೇಟಿ ಮಾಡಿದ್ದೇನೆ. ಕಾನೂನು ವ್ಯವಸ್ಥೆಯನ್ನು ಬಲಗೊಳಿಸುವ ಅಗತ್ಯವಿದೆ. ಮಹಿಳೆಯರಿಗೆ ಸಂಬಂಸಿದ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯ ವ್ಯವಸ್ಥೆ ಅಗತ್ಯ’’ ಎಂದು ಅವರು ಪ್ರತಿಪಾದಿಸುತ್ತಾರೆ.
‘‘ಕಾನೂನಿನ ಪ್ರಕಾರ, ಅಪರಾಧ ವರದಿಯಾದ 90 ದಿನಗಳ ಒಳಗಾಗಿ ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು. ಆದರೆ ಬಹುತೇಕ ಪ್ರಕರಣಗಳಲ್ಲಿ ಪೊಲಿಸರು ಈ ಗಡುವಿನೊಳಗೆ ಆರೋಪಪಟ್ಟಿ ಸಲ್ಲಿಸಲು ವಿಫಲರಾಗುತ್ತಾರೆ. ಇದು ನ್ಯಾಯಾಲಯ ಕಲಾಪ ವಿಳಂಬಕ್ಕೆ ಕಾರಣವಾಗುತ್ತದೆ’’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತಡೆಗೆ ಇರುವ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪಅಭಿಪ್ರಾಯಪಡುತ್ತಾರೆ.
ನ್ಯಾಯಾಂಗ ವ್ಯವಸ್ಥೆಯ ವಿಳಂಬವು ಆರೋಪಿಗಳು ಜಾಮೀನು ಪಡೆಯಲು ಸುಲಭ ಮಾಡಿಕೊಡುತ್ತದೆ. ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪಾಲಿಗೆ ತೀರಾ ಅಪಾಯಕಾರಿ. ಒಂದು ಪ್ರಕರಣದಲ್ಲಿ 9ನೆ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು 25 ವರ್ಷದ ನೆರೆಮನೆಯ ಯುವಕ ಲೈಂಗಿಕವಾಗಿ ಶೋಷಿಸಿದ್ದ. ಆಕೆಯ ಕುಟುಂಬ ಪೀಣ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿತ್ತು. ತಕ್ಷಣ ಆರೋಪಿಯನ್ನು ಬಂಧಿಸಲಾಯಿತು. ನಾಲ್ಕು ತಿಂಗಳಲ್ಲಿ ಆತ ಜಾಮೀನಿನ ಮೇಲೆ ಬಿಡುಗಡೆಯಾದ. ತಕ್ಷಣ ಆತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ. ಮತ್ತೆ ಆತನನ್ನು ಜೈಲಿಗೆ ತಳ್ಳಲಾಗಿದೆ.
‘‘ನನಗೆ ಏನಾಯಿತೋ ಅದು ಬೇರೆ ಯಾವ ಬಾಲಕಿಯರಿಗೂ ಆಗಬಾರದು; ಆತನಿಗೆ ಕಠಿಣ ಶಿಕ್ಷೆಯಾಗಬೇಕು.’’ ಎಂದು ಸಂತ್ರಸ್ತ ಬಾಲಕಿ ಹೇಳುತ್ತಾರೆ. ‘‘ಆತ ಮೊದಲ ಅಪರಾಧ ಎಸಗಿದ ತಕ್ಷಣ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಎರಡನೆ ಘಟನೆ ನಡೆಯುತ್ತಿರಲಿಲ್ಲ. ಆತ ಈಗ ಜೈಲಿನಲ್ಲಿದ್ದಾನೆ. ಆದರೆ ಆತ ಹೊರಬಂದಾಗ ಮತ್ತೆ ಅಂಥದ್ದೇ ಅಪರಾಧ ಎಸಗುವ ಅಪಾಯವಿದೆ’’ ಎಂದು ಆಕೆಯ ತಂದೆ ಹೇಳುತ್ತಾರೆ.
‘‘ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಅದರಲ್ಲೂ ಬೇರೆ ಕಡೆಗಳಿಂದ ಆಗಮಿಸುವ ವಲಸೆ ಮಂದಿಯಿಂದಾಗಿ ಇಂಥ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಹೊಸ ವರ್ಷದ ಮುನ್ನಾ ದಿನ ನಡೆದ ಘಟನೆಗೆ ಬಹುಶಃ ಇದೇ ಕಾರಣ ಇರಬಹುದು’’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು 2017ರ ಮಾರ್ಚ್‌ನಲ್ಲಿ ಖಾಸಗಿ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದರು. 2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನ ಜನಸಂಖ್ಯೆ 84.4 ಲಕ್ಷ. 2016ರ ವೇಳೆಗೆ ಇದು 1.15 ಕೋಟಿಗೆ ಹೆಚ್ಚಿದೆ. ‘‘ಇವರು ಒಬ್ಬರೇ ಬರುತ್ತಾರೆ. ಒಬ್ಬಂಟಿಯಾಗಿಯೇ ಇರುತ್ತಾರೆ. ಅವರಿಗೆ ಪುರುಷ ಸಹಜ ಬಯಕೆಗಳು ಇದ್ದೇ ಇರುತ್ತವೆ’’ ಎಂದು ವಲಸಿಗರ ಬಗೆಗಿನ ಚರ್ಚೆಯಲ್ಲಿ ತಿಳಿಸಿದ್ದರು. ಈ ಜನದಟ್ಟಣೆಯ ನಗರದಲ್ಲಿ ಅನಾಮಧೇಯತೆ ಇರುವುದು ಅವರಿಗೆ ತಮ್ಮ ವಿಕ್ಷಿಪ್ತ ಬಯಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗುತ್ತಾರೆ. ಜತೆಗೆ ನೈತಿಕತೆ ಕಡಿಮೆಯಾಗಿರುವುದು ಕೂಡಾ ಇದಕ್ಕೆ ಇನ್ನೊಂದು ಕಾರಣ
ಕೃಪೆ: ಇಂಡಿಯಾಸ್ಪೆಂಡ್.ಕಾಂ







