ಸಮಾನ ಸಿವಿಲ್ ಕೋಡ್ ಇನ್ನೂ ಹಡೆಯದ ಶಿಶು

ದೇಶದಲ್ಲಿರುವ ಮಸೀದಿಗಳಿಗೆ ಪರ್ಸನಲ್ ಲಾ ಬೋರ್ಡ್ ಸುತ್ತೋಲೆಗಳನ್ನು ರವಾನಿಸಿ ಸಮಾನ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಸೀದಿಗಳ ಒಕ್ಕೂಟವನ್ನು ಅಖಿಲ ಭಾರತಮಟ್ಟದಲ್ಲಿ ರಚಿಸುವುದರ ಮೂಲಕ ಶರಿಅತ್ ಮತ್ತು ಸಾಮಾಜಿಕ, ಶೈಕ್ಷಣಿಕವಾದ ಅನೇಕ ಸಮಸ್ಯೆಗಳನ್ನು ಸಾದ್ಯಂತ ಪರಿಹರಿಸಲು ಸಾಧ್ಯವಾದೀತು.
ಭಾರತೀಯ ಮುಸ್ಲಿಮ್ ಸಮಾಜವು ಈ ಬಗ್ಗೆ ವಿವೇಚಿಸಿ ಮುನ್ನಡೆಯುವ ಕಾಲಘಟ್ಟವು ಸನ್ನಿಹಿತವಾಗಿದೆ.
ಸಮಾನ ಸಿವಿಲ್ ಕೋಡ್‌ನ ಬಗ್ಗೆ ಆರೆಸ್ಸೆಸ್ ಪ್ರಮುಖ ಎಮ್. ಎಸ್. ಗೋಳ್ವಾಲ್ಕರ್ ಅವರ ಪ್ರತಿಪಾದನೆಯು ಮೇಲ್ನೋಟಕ್ಕೆ ಸಕಾರಾತ್ಮಕವಾಗಿ ಕಂಡು ಬರುತ್ತದೆ. ಅವರು 1972ರಲ್ಲಿ ದಿಲ್ಲಿಯಲ್ಲಿ ಮಾಡಿದ ಭಾಷಣದಂತೆ ‘‘ರಾಷ್ಟ್ರೀಯ ಭಾವನೆಯನ್ನು ಮೂಡಿಸಲಿಕ್ಕಾಗಿ ಸಮಾನ ನಾಗರಿಕ ಸಂಹಿತೆಯ ಆವಶ್ಯಕತೆಯಿದೆ ಎಂಬುದು ನನ್ನ ಅಭಿಮತವಲ್ಲ. ನಮ್ಮದು ವೈವಿಧ್ಯತೆಯ ದೇಶವಾಗಿದೆ. ಅನೇಕಾರು ವರ್ಷಗಳಿಂದ ನಮ್ಮದು ಶಕ್ತಿಶಾಲಿ ಹಾಗೂ ಏಕತೆಯಿಂದ ಕೂಡಿದ ರಾಷ್ಟ್ರವಾಗಿದೆ. ಇದಕ್ಕೆ ಸೌಹಾರ್ದದ ಅಗತ್ಯವಿದೆ ಅಲ್ಲದೆ ಏಕರೂಪತೆಯಲ್ಲ. ಪ್ರಕೃತಿಯು ಏಕತೆಯನ್ನು ಒಪ್ಪುವುದಿಲ್ಲ. ಬದುಕಿನುದ್ದಕ್ಕೂ ಅನುಭವವಾಗಿರುವುದೇನೆಂದರೆ ವಿವಿಧತೆ ಮತ್ತು ಏಕತೆ ಜೊತೆಯಾಗಿರಲು ಸಾಧ್ಯವಿದೆ. ಅದರಂತೆ ದೇಶದ ಸಂವಿಧಾನದಲ್ಲಿ ಸಮಾನ ನಾಗರಿಕತೆಯ ಕಾನೂನು ಪರಿಚ್ಛೇದವಿದೆ. ಅದನ್ನು ಸಂವಿಧಾನದಲ್ಲಿ ಬರೆದಿಟ್ಟ ಮಾತ್ರಕ್ಕೆ ಅದು ಮೆಚ್ಚುವಂತಹದಲ್ಲ. ಪರಕೀಯರ ಅನೇಕ ವಿಚಾರಗಳಿಂದ ಪ್ರೇರಿತವಾದ ಸಂವಿಧಾನ ಅದು ಭಾರತೀಯ ಅನುಭವಗಳಲ್ಲಿ ಬರೆಯಲಾಗಿಲ್ಲ.’’
ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಮರು ವಿರುದ್ಧವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ಗೋಳ್ವಾಲ್ಕರ್‌ರ ಅಭಿಪ್ರಾಯದಂತೆ ‘‘ಪ್ರತ್ಯೇಕ ಅನನ್ಯತೆಯನ್ನು ಬಯಸುವವರು ಅದರಲ್ಲಿ ರಾಷ್ಟ್ರ ಪ್ರೇಮದ ಭಾವನೆಗಳು ಕ್ಷೀಣಿಸದೆ ಇರುವ ತನಕ ನನ್ನ ಆಕ್ಷೇಪವಿಲ್ಲ. ಮುಸ್ಲಿಮರಿಗೆ ಅವರ ಜೀವನ ವಿಧಾನದ ಮೇಲೆ ನಡೆಯುವ ಪೂರ್ಣ ಹಕ್ಕು ಇದೆಯಾದರೂ ಅವರು ದೇಶ ಹಾಗೂ ಅದರ ಸಂಸ್ಕೃತಿಯನ್ನು ಪ್ರೀತಿಸಬೇಕು.’’
‘‘ಏಕರೂಪ ಸಿವಿಲ್ ಕಾನೂನು ಶಾಸ್ತ್ರೀಯವೆಂದು ಕಾಣಬಹುದು. ಆದರೆ ಈ ಏಕರೂಪತೆಯು ಕೋಮುಗಳಿಗಾಗಿ ಮರಣದ ಸಂಕೇತವೆಂದು ನಾನೂ ತಿಳಿಯುತ್ತೇನೆ. ನಿಸರ್ಗವು ಏಕರೂಪತೆಯನ್ನು ಬಯಸುವುದಿಲ್ಲ. ನನ್ನ ದೃಷ್ಟಿಯಲ್ಲಿ ಎಲ್ಲ ಜೀವನ ವಿಧಾನಗಳನ್ನು ರಕ್ಷಿಸಬೇಕು. ಒಂದೇ ಮಾತಿನಲ್ಲಿ ರಾಷ್ಟ್ರೀಯ ಏಕತೆಯ ಕಾರ್ಯದಲ್ಲಿ ಸಹಾಯಕವಾಗಬೇಕು.’’ (Golwalkar on uniform civil law Aug 20- 201972)
ಗೋಳ್ವಾಲ್ಕರ್‌ರ ಈ ವಿಶ್ಲೇಷಣೆಯಲ್ಲಿ ಸತ್ಯಾಂಶವಿದ್ದರೂ ಅವರು ಪ್ರತಿಪಾದಿಸುವ ಶ್ರೇಣಿ ಪದ್ಧತಿ, ವರ್ಣಾಶ್ರಮ ಪದ್ಧತಿಗೂ ಸಮಾನ ನಾಗರಿಕ ಸಂಹಿತೆಯಿಂದಾಗಿ ಧಕ್ಕೆಯುಂಟಾಗಬಹುದೇ ಎಂಬ ಭಯ ವಿಹ್ವಲತೆ ಕೂಡಾ ಎದ್ದು ಕಾಣುತ್ತಿದೆ.
ಸಂವಿಧಾನದ 44ನೆ ಪರಿಚ್ಛೇದದಂತೆ ಸರಕಾರಗಳು ನಾಗರಿಕ ಕಾನೂನು ತರಲು ಶ್ರಮಿಸುವುದು ಮೂಲಭೂತ ವಿಷಯವಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದಂತೆ ‘‘ಪಾನ ನಿಷೇಧದ ವಿಷಯಗಳು ನನೆಗುದಿಗೆ ಬಿದ್ದಿರುವಾಗ ಸಮಾನ ನಾಗರಿಕ ಕಾನೂನು ಸಂಹಿತೆಯನ್ನು ಜಾರಿಗೊಳಿಸುವುದು ಮೂರ್ಖ ಸರಕಾರದ ಕಾಯಕವಾಗಬಹುದೇ ಹೊರತು ಆ ಯೋಜನೆ ಗುರಿಮುಟ್ಟಲಸಾಧ್ಯ.’’ ಅಂಬೇಡ್ಕರ್‌ರ ಈ ಮಾತಿಗೆ ಫ್ಯಾಶಿಸ್ಟರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಅದರಂತೆ ಆರೆಸ್ಸೆಸ್ ಗರಡಿಯಲ್ಲಿ ಪಳಗಿದ ಮೋದಿ ಸರಕಾರವು ಸಮಾನ ನಾಗರಿಕ ಕಾಯ್ದೆಯ ಬಗ್ಗೆ ಆಮೂಲಾಗ್ರ ಚಿಂತನೆ ನಡೆಸದೆ ಮತ್ತು ಅದರಲ್ಲುಂಟಾಗುವ ಸಾಮಾಜಿಕ ಗೊಂದಲದ ಬಗ್ಗೆ ತಲೆ ಕೆಡಿಸದೆ ಕೇವಲ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೇರಲು ನಿರ್ಧರಿಸಿದಂತೆ ಭಾಸವಾಗುತ್ತದೆ. ಮುಸ್ಲಿಮರಲ್ಲಿರುವ ಮೂರು ತಲಾಖ್ ಹೇಳುವ ವಿಷಯವನ್ನು ಕೆದಕಿ ತೇಜೋವಧೆಗೈಯುವ ಸಂಕಲ್ಪದಲ್ಲಿದೆ. ಏತನ್ಮಧ್ಯೆ ಭಾರತೀಯ ಹಿಂದೂ ಸಮಾಜದಲ್ಲಿದ್ದ ಕೆಲವು ಅನಿಷ್ಟ ಸಂಪ್ರದಾಯಗಳನ್ನು ನಿಸ್ತೇಜಗೊಳಿಸಿದ ಕೀರ್ತಿಯು ಈ ದೇಶದ ಪ್ರಗತಿಪರ ದಲಿತ ಮತ್ತು ಹಿಂದುಳಿದ ಸಂಘಟನೆಗಳಿಗೆ ಸಲ್ಲ ತಕ್ಕದ್ದು. ಚಂದ್ರಗುತ್ತಿಯ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ-ಜೀತಪದ್ಧತಿ ಈ ತರದ ಕೆಲವೊಂದು ಅನಿಷ್ಟ ಸಂಪ್ರದಾಯಗಳು ಪೂರ್ಣವಾಗಿ, ಕೆಲವು ಆಂಶಿಕವಾಗಿ ನಿರ್ಮೂಲನಗೊಂಡಿವೆ. ಮಹಿಳೆಯರನ್ನು ವೈಚಾರಿಕವಾಗಿ ಶೋಷಣೆಗೀಡಾಗಿಸುವ ಅನಿಷ್ಟಗಳ ನಿರ್ಮೂಲನದ ಬಗ್ಗೆ ಮೂಲಭೂತ ಹಿಂದುತ್ವವಾದಿ ಸಂಘಟನೆಗಳಿಗೆ ಸಾಕಷ್ಟು ಕಾಳಜಿ ಕಂಡು ಬರುವುದಿಲ್ಲ.
ಈ ದೃಷ್ಟಿಯಲ್ಲಿ ಶರಿಅತ್ ವಿರೋಧಿಗಳು ಅಭಿಪ್ರಾಯಪಟ್ಟಂತೆ ಇಸ್ಲಾಮ್ ಧರ್ಮದ ವಿಧಿ-ವಿಧಾನಗಳು, ಸಾಮಾಜಿಕ ಮತ್ತು ನೈತಿಕ ಅರಾಜಕತೆಗೆ ಪೂರಕವಾಗಿ ರೂಪುಗೊಂಡಿಲ್ಲ. ಸಾಮಾಜಿಕ ಜಾಯಮಾನವನ್ನು ಪರಿಗಣಿಸಿಕೊಂಡು ಸಾಕಷ್ಟು ದೂರದೃಷ್ಟಿಯಿಂದಲೇ ಕ್ರೋಡೀಕರಿಸಲಾಗಿದೆ.
ಆದರೂ ಹೆಚ್ಚಿನಂಶ ದುರುಪಯೋಗವಾಗುತ್ತಲೂ ಇದೆ. ಇದರಲ್ಲಿ ಹೆಚ್ಚಾಗಿ ಕೆಳಸ್ತರದ ಬಡ ಅಜ್ಞಾನಿಗಳಲ್ಲಿ ನಡೆಯುತ್ತದೆ. ಇನ್ನೊಂದೆಡೆ ಧರ್ಮನಿಷ್ಠೆಯಿಲ್ಲದ ಸುಶಿಕ್ಷಿತರು ವಿಚ್ಛೇದನದ ಸವಲತ್ತನ್ನು ದುರುಪಯೋಗ ಪಡಿಸುತ್ತಿದ್ದಾರೆ. 1984ರ ಶಾಬಾನು ಪ್ರಕರಣದಲ್ಲಿ ಮುಹಮ್ಮದ್ ಅಹ್ಮದ್ ಖಾನ್ ಎಂಬ ವಕೀಲರು ಈ ಧರ್ಮ ಕಾನೂನನ್ನು ದುರುಪಯೋಗಪಡಿಸಿದರು. ಸ್ಥಳೀಯ ಮಟ್ಟದಲ್ಲೂ (ಉತ್ತರ ಕೇರಳದ ಮುಸ್ಲಿಮ್ ಸಮಾಜ ಸುಧಾರಕ ಕುಟುಂಬದ) ವೈದ್ಯಕೀಯ ಪದವೀಧರರೊಬ್ಬರು ಆರು ಬಾರಿ ಬೇರೆ ಬೇರೆ ಕಾರಣಗಳನ್ನು ನೀಡಿ ತಲಾಖ್ ನೀಡಿದ ಪ್ರಕರಣವು ದಶಕಗಳ ಹಿಂದೆ ನಡೆದಿದೆ. ಇದಕ್ಕೆ ಸಡಿಲವಾದ ಸಾಮಾಜಿಕ ನೀತಿ ಮತ್ತು ಸ್ವಚಿತ್ತತೆ ಇಲ್ಲದ ಮಸೀದಿ ನೇತೃತ್ವಗಳು ಕಾರಣವಾಗಿವೆ ಎಂದರೆ ಮಾತು ಬಾಲಿಶವೆನಿಸದು.
ದಾಂಪತ್ಯದಲ್ಲಿ ವಿರಸವುಂಟಾದಾಗ ವಿವಾಹ ವಿಚ್ಛೇದನದ ವಿಧಿ ವಿಧಾನಗಳನ್ನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ಪ್ರಖ್ಯಾಪಿಸಲಾಗಿದೆ. ಅದರಂತೆ ಅನಿವಾರ್ಯ ಸಂದರ್ಭಗಳಲ್ಲಿ ಸರ್ವ ಸಂಧಾನ ಪ್ರಕ್ರಿಯೆಗಳು ವಿಫಲವಾದ ಪರಿಸ್ಥಿತಿಯಲ್ಲಿ ಕೊನೆಯದಾಗಿ ಮೂರು ಸರ್ತಿ ತಲಾಖ್ ಹೇಳುವ ಅಂತಿಮ ರೂಪವನ್ನು ಧರ್ಮ ಪರಿಣಿತರು ಸಿಂಧುಗೊಳಿಸಿದ್ದಾರೆ. ಆದರೂ ತಂದೆ-ತಾಯಿ ಅಥವಾ ಇನ್ನಿತರರ ಒತ್ತಾಯಕ್ಕೆ ಮಣಿದು ನೀಡುವ ತಲಾಖ್. ಅಮಲುಕೋರ, ಬುದ್ಧಿ ಭ್ರಮಣೆಗೊಂಡವನ ತಲಾಖ್, ಕೋಪದ ಭರದಲ್ಲಿ ಪೂರ್ತಿಪರ ವಿವೇಚಿಸದೆ ನೀಡುವ ತಲಾಖ್ ಸಿಂಧುವಾಗದೆಂದು ಪ್ರವಾದಿ ಮುಹಮ್ಮದ್(ಸ)ರ ವಚನಗಳಲ್ಲಿ ಸ್ಪಷ್ಟವಾಗುತ್ತದೆ.
ಕೋಪೋದ್ರೇಕದಲ್ಲಿ ಹೇಳಿದ ತಲಾಖ್‌ನಿಂದ ವಿವಾಹ ವಿಚ್ಛೇದನವಾಗುವುದಿಲ್ಲ ಎಂದು ಶರಹುತಲ್ಕೀನ್(ಶರೀಅ ಉಪದೇಶಗಳು) ಎಂಬ ಅಧಿಕೃತ ಗ್ರಂಥದಲ್ಲಿ ವ್ಯಕ್ತಪಡಿಸಲಾಗಿದೆ. ಆದುದರಿಂದ ಯಾವುದೇ ಸಂದರ್ಭದಲ್ಲೂ ಸಕಾರಣವಿದ್ದರೆ ಮಾತ್ರ ತಲಾಖ್ ಸಿಂಧುವಾಗುತ್ತದೆ.
ಅನಿವಾರ್ಯ ಪರಿಸ್ಥಿತಿಯ ಹೊರತು ವಿವಾಹ ವಿಚ್ಛೇದನ ನಿಷಿದ್ಧವಾಗಿದೆ. ಇನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿದ್ದರೂ ಅವಸರದಿಂದ ತಲಾಖ್ ನೀಡ ಕೂಡದು. ಉಭಯ ಕಡೆಯ ಸಂಧಾನಕಾರದ ಸಂಧಾನ ಸಾಮರಸ್ಯದ ಸರ್ವ ಪ್ರಯತ್ನಗಳು ವಿಫಲಗೊಂಡ ಬಳಿಕವೇ ಅದಕ್ಕಾಗಿ (ವಿಚ್ಛೇದನಕ್ಕಾಗಿ) ಸೂಕ್ತ ಸಂದರ್ಭವನ್ನು ಆಯ್ದುಕೊಳ್ಳಬೇಕು.
ನಾಲ್ಕನೆ ಖಲೀಫರಾದ ಹಝ್ರತ್ ಅಲಿ(ರ)ರವರು ವಿವಾಹ ವಿಚ್ಛೇದನ ನಡೆಸಿದವರೊಂದಿಗೆ ಕೇಳಿದರು, ‘‘ನೀವು ವಿಚ್ಛೇದನ ಪಡೆಯುವಾಗ ದೇವ ವಿಧಿಯಂತೆ ಇಬ್ಬರು ಸಾಕ್ಷಿಗಳನ್ನು ನಿಲ್ಲಿಸಿದ್ದೀರಾ’’ ಆ ವ್ಯಕ್ತಿ ಇಲ್ಲವೆಂದು ಉತ್ತರಿಸಿದರು. ‘‘ಹಾಗಾದರೆ ನೀವು ಇಲ್ಲಿಂದ ಹೋಗಬಹುದು. ನಿಮ್ಮ ತಲಾಖ್ ಸಿಂಧುವಾಗುವುದಿಲ್ಲ’’ ಎಂದು ಹೇಳಿದರು. ನಿಖಾಹ್ (ವಿವಾಹ) ಇಬ್ಬರು ಸಾಕ್ಷಿಗಳ ಮುಂದೆ ಆಗಬೇಕೋ ಅದೇ ರೀತಿ ತಲಾಖ್ ಕೂಡಾ ಇಬ್ಬರು ಸಾಕ್ಷಿಗಳ ಸಮಕ್ಷಮ ಆಗಬೇಕು.
ದಾಂಪತ್ಯದಲ್ಲಿ ವಿರಸವುಂಟಾಗಿ ಅಥವಾ ಇನ್ನಿತರ ಅನಿವಾರ್ಯ ಕಾರಣದಿಂದ ಮತ್ತು ಎಲ್ಲ ಸಂಧಾನ ಪ್ರಕ್ರಿಯೆಗಳು ವಿಫಲವಾದ ಪರಿಸ್ಥಿತಿಯಲ್ಲಿ ವಿಚ್ಛೇದಿತಳಿಗೆ ಉಭಯ ಕಡೆಯ ಸಂಧಾನಕಾರರು ತೀರ್ಮಾನಿಸಿದಂತೆ ಒಂದು ತೃಪ್ತಿಕರವಾದ ವಿಚ್ಛೇದನ ಪರಿಹಾರ ಮೊತ್ತವನ್ನು ನೀಡಬೇಕಾಗುತ್ತದೆ. ಮಾತ್ರವಲ್ಲ, ಆಕೆಯಿಂದ ಹುಟ್ಟಿದ ಸಂತಾನವಿದ್ದರೆ ಅದರ ಜೀವನಾಂಶವನ್ನು ನೀಡಬಹುದಾಗಿದೆ. ಆದರೆ ಪರಿತ್ಯಕ್ತಳಾದ ನಂತರ ಆಕೆಯನ್ನು ಪರಸ್ತ್ರೀಯೆಂದು ಪರಿಗಣಿಸಲಾಗುತ್ತದೆ. ಆಕೆಗೆ ಜೀವನಾಂಶ ಕೊಡುವುದನ್ನು ಇಸ್ಲಾಮೀ ಶರೀಅ ಮಾನ್ಯ ಮಾಡುವುದಿಲ್ಲ. ಮಾತ್ರವಲ್ಲ, ಆಕೆ ಇನ್ನೋರ್ವನೊಂದಿಗೆ ವಿವಾಹ ಮಾಡಿಕೊಳ್ಳಲು ಸ್ವತಂತ್ರಳಾಗಿದ್ದಾಳೆ. ಅದರಂತೆ ದಾಂಪತ್ಯದಲ್ಲಿ ಸಕಾರಣವಾಗಿ ವಿರಸವುಂಟಾದಾಗ ಅಥವಾ ಇನ್ನಿತರ ಅನಿವಾರ್ಯ ಕಾರಣಗಳಲ್ಲಿ ಪತ್ನಿಯಾದವಳಿಗೂ ಖುಲಾ-ಫಸ್ಕ್‌ನಂತಹ ವಿಧಿಗಳನ್ನು ಅನುಸರಿಸಿ ವಿವಾಹ ಬಂಧನದಿಂದ ಬಿಡುಗಡೆಗೊಳ್ಳಬಹುದಾಗಿದೆ.
ನಿಷ್ಠಾವಂತ ಉಲೆಮಾಗಳು ಈ ಸಂದರ್ಭಗಳಲ್ಲಿ ಧರ್ಮ ವಿಧಿಗೆ ಬದ್ಧವಾಗಿ ಕಾರ್ಯಶೀಲರಾಗುತ್ತಾರೆ. ಅದರಲ್ಲೂ ಸಮಾಜದ ಸಂದು ಗೊಂದುಗಳಲ್ಲಿರುವ ಜುಜುಬಿ ಪುರೋಹಿತಶಾಹಿ ಪ್ರತಿಗಾಮಿ ಕೂಟವು ತಲಾಖ್ ವಿಧಿಯ ಉಲ್ಲಂಘನೆಯನ್ನು ಪ್ರೋತ್ಸಾಹಿಸುತ್ತಿರುವುದು ಖೇದಾಸ್ಪದ.
ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರವು ನೀಡಿರುವ ಪಂಥಾಹ್ವಾನವನ್ನು ಅಭಿಮುಖೀಕರಿಸಲು ದೇಶೀಯ ಮುಸ್ಲಿಮರಲ್ಲಿ ಸರ್ವಾದರಣೀಯವಾದ ಮತ್ತು ಅಧಿಕಾರಿಕ ಸಂಘಟನೆಯ ಕೊರತೆಯಿದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಈ ಬಗ್ಗೆ ಕ್ರಿಯೋನ್ಮುಖವಾಗಿದೆ. ಆದರೂ ಅದು ಇನ್ನೂ ಸಲಹೆ ಮತ್ತು ವಿಜ್ಞಾಪನೆಯ ಹಂತದಾಟಿ ತಾಕೀತು ಮತ್ತು ಎಚ್ಚರಿಕೆಕೊಡುವ ಹಂತವನ್ನು ತಲಪಿಲ್ಲ. ದೇಶದಲ್ಲಿರುವ ಮಸೀದಿಗಳಿಗೆ ಪರ್ಸನಲ್ ಲಾ ಬೋರ್ಡ್ ಸುತ್ತೋಲೆಗಳನ್ನು ರವಾನಿಸಿ ಸಮಾನ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಸೀದಿಗಳ ಒಕ್ಕೂಟವನ್ನು ಅಖಿಲ ಭಾರತಮಟ್ಟದಲ್ಲಿ ರಚಿಸುವುದರ ಮೂಲಕ ಶರಿಅತ್ ಮತ್ತು ಸಾಮಾಜಿಕ, ಶೈಕ್ಷಣಿಕವಾದ ಅನೇಕ ಸಮಸ್ಯೆಗಳನ್ನು ಸಾದ್ಯಂತ ಪರಿಹರಿಸಲು ಸಾಧ್ಯವಾದೀತು.
ಭಾರತೀಯ ಮುಸ್ಲಿಮ್ ಸಮಾಜವು ಈ ಬಗ್ಗೆ ವಿವೇಚಿಸಿ ಮುನ್ನಡೆಯುವ ಕಾಲಘಟ್ಟವು ಸನ್ನಿಹಿತವಾಗಿದೆ.