ಬೆಂಗಳೂರು ಶಾಲೆಗಳಲ್ಲೂ ಮಾದಕ ವ್ಯಸನ ದಂಧೆ

ಬೆಂಗಳೂರು ದೊಡ್ಡ ಸಮಸ್ಯೆಯನ್ನು ಹೊತ್ತುನಿಂತಿದೆ. ಇದರ ಪರಿಹಾರಕ್ಕೆ ಪೊಲೀಸರು, ಪೋಷಕರು ಮತ್ತು ಶಾಲೆಗಳ ಜಂಟಿ ಪ್ರಯತ್ನ ಅನಿವಾರ್ಯ. 11 ಅಥವಾ 12 ವರ್ಷದ ಮಕ್ಕಳೂ ಡ್ರಗ್ಸ್ ದಂಧೆಗೆ ಬಲಿಯಾಗುತ್ತಿದ್ದಾರೆ.
ಸ್ಟ್ರಾಬೆರಿ ಕ್ವಿಕ್ ಅಥವಾ ಸ್ಟ್ರಾಬೆರಿ ಪಾಪ್ ರಾಕ್ಸ್ ಎಂಬ ಜನಪ್ರಿಯ ಮಾದಕ ವಸ್ತುಗಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂಬ ಎಚ್ಚರಿಕೆಯ ಸಂದೇಶ ಕೆಲ ಕಾಲದಿಂದ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇದು ಬಹುಶಃ ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಹಚ್ಚಿರುವ ಸುತ್ತೋಲೆಯಾಗಿದ್ದು, ಇದನ್ನು ಬೆಂಗಳೂರು, ಮುಂಬೈ ಹಾಗೂ ದಿಲ್ಲಿಯಲ್ಲಿ ಕೂಡಾ ಹಲವು ಪತ್ರಿಕೆಗಳು ವರದಿ ಮಾಡಿವೆ. ಬಹುಶಃ ಇದು ಹುಸಿ ಸುತ್ತೋಲೆ. ಆದರೆ ಈ ಲೇಖನ ವಾಟ್ಸ್‌ಆ್ಯಪ್ ಸಂದೇಶದ ಬಗೆಗೆ ಖಂಡಿತಾ ಅಲ್ಲ.
ವಾಸ್ತವವಾಗಿ ಈ ಲೇಖನ ಶಾಲೆಗಳಲ್ಲಿ ಬೇರು ಬಿಡುತ್ತಿರುವ ಮಾದಕ ವ್ಯಸನ ದಂಧೆ ಬಗ್ಗೆ; ಮಾದಕ ವ್ಯಸನಿಗಳಾಗಿ ಪರಿವರ್ತನೆ ಗೊಂಡ ಮಕ್ಕಳ ಬಗ್ಗೆ ಹಾಗೂ ಮಾದಕ ವಸ್ತುಗಳ ಮೇಲಿನ ಅವಲಂಬನೆ ಹೆಚ್ಚಲು ಕಾರಣವಾಗುತ್ತಿದೆ. ಪ್ರತಿದಿನ ಕನಿಷ್ಠ ಇಬ್ಬರಿಂದ ಮೂವರು ಪ್ರೌಢ ರೋಗಿಗಳನ್ನು (11-12 ವರ್ಷದವರೂ ಸೇರಿ) ನಿಮ್ಹಾನ್ಸ್‌ನ ವ್ಯಸನ ಮುಕ್ತಿ ಕೇಂದ್ರದ ಹೊರರೋಗಿ ವಿಭಾಗಕ್ಕೆ ಕಳುಹಿಸಿಕೊಡಲಾಗುತ್ತಿದೆ. ವಾರ್ಷಿಕ ಕನಿಷ್ಠ 300 ಮಾದಕ ವ್ಯಸನಿಗಳನ್ನು ನಿಮ್ಹಾನ್ಸ್‌ಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಉತ್ತರ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು ಇತ್ತೀಚೆಗೆ ಶಿಕ್ಷಕರಿಗೆ ಮಾದಕ ವಸ್ತು ಪತ್ತೆ ಮಾಡುವ ತಂತ್ರಗಳನ್ನು ಹೇಳಿಕೊಡುವ ಸಲುವಾಗಿ ಪೊಲೀಸರ ನೆರವು ಪಡೆಯಲಾಗಿತ್ತು. ಈ ಮೂಲಕ ಮಕ್ಕಳ ಕೈಯಲ್ಲಿರುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಬಹುದು ಎನ್ನುವುದು ಉದ್ದೇಶ.
‘‘ಸಂಸ್ಥೆಯ ಗೌರವದ ಹೆಸರಿನಲ್ಲಿ ಸಾಮಾನ್ಯವಾಗಿ ಇಂಥ ಶಾಲೆಗಳು ಮಾದಕ ವಸ್ತು ಪ್ರಕರಣಗಳನ್ನು ಪೊಲೀಸರಿಂದ ಮುಚ್ಚಿಡುತ್ತವೆ. ಆದರೆ ನಾವು ಈಗ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಕಳೆದ ಡಿಸೆಂಬರ್‌ನಲ್ಲಿ ತರಬೇತಿ ಶಿಬಿರ ನಡೆಸಿ, ವಿದ್ಯಾರ್ಥಿಗಳ ನಡುವೆ ಹರಿದಾಡುತ್ತಿರುವ ಮಾದಕ ವಸ್ತುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಇ- ಸಿಗರೇಟಿನಿಂದ ಹಿಡಿದು ಮಾದಕವಸ್ತುಗಳ ವರೆಗೆ ಮಾಹಿತಿ ನೀಡಿ ಶಿಕ್ಷಕರನ್ನು ಜಾಗೃತಿಗೊಳಿಸಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸುತ್ತಾರೆ.
‘‘ಬಹುತೇಕ ಯುವಕರು ಪಾಲ್ಗೊಂಡ ಪ್ರಕರಣಗಳಲ್ಲಿ ಗಾಂಜಾ ಬಳಕೆ ವ್ಯಾಪಕವಾಗಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳು ಕೃತಕ ಮಾದಕವಸ್ತುಗಳಾದ ಎಲ್‌ಎಸ್‌ಡಿಯಂಥ ವಸ್ತುಗಳನ್ನೂ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ವೈದ್ಯಕೀಯ, ಕಾನೂನು ಜಾರಿ, ಶಿಕ್ಷಕರು ಮತ್ತು ಪೋಷಕರನ್ನು ಒಳಗೊಂಡ ಪ್ರಮುಖ ಬಹುಶಿಸ್ತೀಯ ದೃಷ್ಟಿಕೋನ ಅನುಷ್ಠಾನಗೊಳಿಸಬೇಕಾಗಿದೆ’’ ಎಂದು ಮಾದಕ ವ್ಯಸನ ತಜ್ಞ ಡಾ.ವಿವೇಕ್ ಬೆನೆಗಲ್ ಹೇಳುತ್ತಾರೆ.
‘‘ಈ ಮೊದಲು ಮಕ್ಕಳು ಮಾದಕ ವಸ್ತುವಿನೊಂದಿಗೆ ಸಿಕ್ಕಿಹಾಕಿಕೊಂಡರೆ, ಸಂಸ್ಥೆಯ ಘನತೆ ದೃಷ್ಟಿಯಿಂದ ಅಂಥ ವಿದ್ಯಾರ್ಥಿಗಳ ಬಗ್ಗೆ ಸಂಸ್ಥೆಗಳು ಅನುಕಂಪ ತೋರುತ್ತಿರಲಿಲ್ಲ. ಪೋಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುತ್ತಿದ್ದರು. ಆದರೆ ಈಗ ಸ್ವಲ್ಪಮಟ್ಟಿನ ಸುಧಾರಣೆಯಾಗಿದೆ. ಕೆಲ ಸಂಸ್ಥೆಗಳು ಇಂಥ ಪ್ರಕರಣಗಳನ್ನು ನಮ್ಮ ಗಮನಕ್ಕೆ ತರುತ್ತಿವೆ ಎಂದು ಡಾ.ಬೆನಗಲ್ ಹೇಳುತ್ತಾರೆ.
‘‘ಕೆಳ ಮಧ್ಯಮವರ್ಗ, ಮಧ್ಯಮವರ್ಗ ಮತ್ತು ಶ್ರೀಮಂತ ಕುಟುಂಬಗಳು ಹೀಗೆ ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳು ವ್ಯಸನಮುಕ್ತಿ ಕೇಂದ್ರಕ್ಕೆ ಬರುತ್ತಿದ್ದಾರೆ’’ ಎಂದು ವಿವರಿಸುತ್ತಾರೆ.
ನಗರದ ಶಾಲೆಗಳು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡುತ್ತಿವೆ; ಜತೆಗೆ ಕೆಲ ಸಂಸ್ಥೆಗಳಲ್ಲಂತೂ ವಿದ್ಯಾರ್ಥಿಗಳು ಡ್ರಗ್ಸ್ ಹೊಂದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ನಿಯತ ತಪಾಸಣೆಗಳನ್ನೂ ನಡೆಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ಕಳೆದ ಡಿಸೆಂಬರ್‌ನಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಅರಿವು ಮೂಡಿಸುವ ಶಿಬಿರದಲ್ಲಿ ಇ-ಸಿಗರೇಟ್ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾಗಿ ಪೊಲೀಸರು ಹೇಳುತ್ತಾರೆ. ಮಾದಕವಸ್ತು ಮತ್ತು ಇ- ಸಿಗರೇಟ್‌ನ ಕೆಟ್ಟ ಪರಿಣಾಮಗಳ ಬಗ್ಗೆ ಪೋಷಕರನ್ನು ಎಚ್ಚರಿಸುವ ಸುತ್ತೋಲೆಗಳನ್ನು ಕೂಡಾ ಹೊರಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.
‘‘ಇವುಗಳನ್ನು ಸಾಮಾನ್ಯವಾಗಿ ಜೇಬುಗಳಲ್ಲಿ ಇಟ್ಟುಕೊಂಡಿ ರುತ್ತಾರೆ. ಕಪ್ಪುಬಣ್ಣದ ಫೌಂಟೇನ್‌ಪೆನ್ ಎಂದೇ ಮೇಲ್ನೋಟಕ್ಕೆ ಇದು ಗೋಚರವಾಗುತ್ತದೆ. ಇದರಲ್ಲಿ ನಿಕೋಟಿನ್ ದ್ರವರೂಪದಲ್ಲಿ ಇರುತ್ತದೆ. ಇದು ಬ್ಯಾಟರಿಚಾಲಿತ. ಇದು ಶಾಲಾಮಕ್ಕಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ’’ ಎಂದು ತರಬೇತಿ ಶಿಬಿರ ನಡೆಸಿಕೊಟ್ಟ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
ಭೀತಿ ಅಗತ್ಯವೇ?
ಸ್ಟ್ರಾಬೆರಿ ಮೆಥ್ ಅಥವಾ ಸ್ಟ್ರಾಬೆರಿ ಕ್ವಿಕ್ ಕುರಿತ ವಾಟ್ಸ್‌ಆ್ಯಪ್ ಸಂದೇಶ ಹುಸಿ ಎಂಬ ಬಗ್ಗೆ ಬಹುತೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯನ್ನು ಸೂಕ್ತವಾಗಿ ಪರಿಹರಿಸುವ ಅಗತ್ಯ ಹೆಚ್ಚುತ್ತಿದೆ ಎಂದು ಬೆಂಗಳೂರಿನ ನರೋಟಿಕ್ ಕಂಟ್ರೋಲ್ ಬ್ಯೂರೋ ಪ್ರಾದೇಶಿಕ ನಿರ್ದೇಶಕ ಎಸ್.ಕೆ.ಸಿನ್ಹಾ ಅಭಿಪ್ರಾಯಪಡುತ್ತಾರೆ. ಮಾದಕವಸ್ತು ವ್ಯಾಪಾರಿಗಳಿಗೆ ವಿದ್ಯಾರ್ಥಿಗಳು ಮುಖ್ಯ ಗುರಿಯಾಗಿರುವ ಹಿನ್ನೆಲೆಯಲ್ಲಿ ಹಲವು ಜಾಗೃತಿ ಶಿಬಿರಗಳನ್ನು ಶಿಕ್ಷಣಸಂಸ್ಥೆಗಳಲ್ಲಿ ನಡೆಸಲಾಗಿದೆ ಎನ್ನುವುದು ಅವರ ವಿವರಣೆ.
‘‘ಬಹುತೇಕ ಮಾದಕವಸ್ತುಗಳಿಗೆ ರುಚಿ ಇಲ್ಲ. ಆದ್ದರಿಂದ ಅವುಗಳನ್ನು ದ್ರವರೂಪಕ್ಕೆ ಪರಿವರ್ತಿಸಿದರೆ ಇತರ ತಿನಿಸುಗಳ ಜತೆ ಬೆರೆಸಿ ನೀಡಲು ಸುಲಭ. ಆದರೆ ದ್ರವರೂಪದ ಗಾಂಜಾ (ಹ್ಯಾಷ್ ಆಯಿಲ್)ಗೆ ವಿಶಿಷ್ಟ ರುಚಿ ಇದ್ದು, ಇದನ್ನು ಕ್ಯಾಂಡಿ, ಚಾಕಲೇಟ್ ಅಥವಾ ಐಸ್‌ಕ್ರೀಂ ರೂಪದಲ್ಲಿ ಸೇವಿಸಿದ ವ್ಯಕ್ತಿಗಳಿಗೆ ತಕ್ಷಣ ಏನೋ ಎಡವಟ್ಟಾಗಿದೆ ಎನ್ನುವುದು ಮನವರಿಕೆಯಾಗುತ್ತದೆ’’ ಎಂದು ಸಿನ್ಹಾ ಹೇಳುತ್ತಾರೆ.
ಕೃತಕ ಮಾದಕವಸ್ತುಗಳಾದ ಎಲ್‌ಎಸ್‌ಡಿಯಂಥ ಡ್ರಗ್ಸ್ ತೀರಾ ದುಬಾರಿ. ಆದ್ದರಿಂದ ಮಾರಾಟಗಾರರು ಕ್ಯಾಂಡಿ ಅಥವಾ ಇತರ ರೂಪದಲ್ಲಿ ಶಾಲಾ ಕ್ಯಾಂಪಸ್‌ಗಳಿಗೆ ಕಳುಹಿಸುವ ಸಾಧ್ಯತೆ ಕಡಿಮೆ. ಒಬ್ಬ ವ್ಯಕ್ತಿ ಒಂದು ಬಾರಿ ಎಲ್‌ಎಸ್‌ಡಿ ರುಚಿ ನೋಡಿದರೆ ಆತ ಅದರ ವ್ಯಸನಿಯಾಗುತ್ತಾನೆ ಎನ್ನುವುದು ತಪ್ಪುಕಲ್ಪನೆ. ಎಲ್‌ಎಸ್‌ಡಿ ಬಳಕೆ ಅಗತ್ಯತೆಯನ್ನು ಆಧರಿಸಿದ್ದು ಯಾವ ವ್ಯಾಪಾರಿ ಯೂ ಉಚಿತ ಕ್ಯಾಂಡಿ ನೀಡಲಾರ ಎನ್ನುವುದು ತಜ್ಞರ ಅಭಿಮತ.
ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಮಾಹಿತಿ ನೀಡುವ ಮೂಲಕ ಸಹಕರಿಸುತ್ತಿವೆ. ಕೆಲ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಪ್ರಮುಖವಾಗಿ ಕಾಲೇಜುಗಳು ನೀಡಿದ ಮಾಹಿತಿಯ ಅನ್ವಯ ಹಲವು ಮಂದಿ ಮಾದಕವಸ್ತು ಮಾರಾಟಗಾರರನ್ನು ಹಿಡಿಯುವುದು ಸಾಧ್ಯವಾಗಿದೆ ಎಂದು ಸಿನ್ಹಾ ವಿವರಿಸುತ್ತಾರೆ.
ನಗರ ಪೊಲೀಸರು ಈ ಪಿಡುಗು ನಿಯಂತ್ರಿಸಲು ಮುಂದಾಗಿದ್ದಾಗಿ ಪೊಲೀಸ್ ಮೂಲಗಳು ಹೇಳುತ್ತವೆ. ಆದರೆ ಕರ್ನಾಟಕದ ಇಂಗ್ಲಿಷ್ ಮಾಧ್ಯಮ ಶಾಲೆ ಆಡಳಿತ ಮಂಡಳಿಗಳ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಹೇಳುವಂತೆ, ಕಾನೂನು ಜಾರಿಗೊಳಿಸುವ ಇಲಾಖೆ ಶಿಕ್ಷಣ ಸಂಸ್ಥೆಗಳ 100 ಮೀಟರ್ ಸರಹದ್ದಿನಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿರ್ಬಂಧಿಸಲು ಕೂಡಾ ವಿಫಲವಾಗಿವೆ.
ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮತ್ತು ಶಾಲೆಯಿಂದ ತೆರಳುವ ವೇಳೆ ಕ್ಯಾಂಪಸ್‌ಗಳ ಬಳಿ ನಿಯತವಾಗಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡುವ ಮೂಲಕ, ಸಮಾಜ ಘಾತುಕ ಶಕ್ತಿಗಳು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಆಸೆ ಹುಟ್ಟಿಸದಂತೆ ತಡೆಯಬಹುದು. ಆದ್ದರಿಂದ ಗಸ್ತು ವ್ಯವಸ್ಥೆ ಮಾಡುವಂತೆ ನಗರ ಪೊಲೀಸರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಎಂದೂ ಅವರು ಹೇಳುತ್ತಾರೆ,
‘‘ಶಾಲಾ ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂಥ ಮಾದಕ ವಸ್ತುಗಳನ್ನು ನಿರ್ಬಂಧಿಸಲು ಪೊಲೀಸ್ ಇಲಾಖೆ ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ’’ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್.ರವಿ ವಿವರಿಸುತ್ತಾರೆ. ‘‘ಇಂಥ ದಂಧೆಯಲ್ಲಿ ತೊಡಗಿರುವ ಅಂಗಡಿ ಮುಂಗಟ್ಟುಗಳ ಲೈಸನ್ಸ್‌ಗಳನ್ನು ಖಾಯಂ ಆಗಿ ರದ್ದುಪಡಿಸುವಂತೆ ಮಾಡಲು ಬಿಬಿಎಂಪಿ ಜತೆಗೆ ಮಾತುಕತೆ ನಡೆಸಲಾಗುತ್ತಿದೆ’’ ಎನ್ನುತ್ತಾರೆ.
ಆರೋಗ್ಯ ಸಮಸ್ಯೆಯೇ?
ಕೆಲ ವಾರಗಳ ಹಿಂದೆ ನರೋಟಿಕ್ ಕಂಟ್ರೋಲ್ ಬ್ಯೂರೊಗೆ ಜಯನಗರ ಬಳಿಯ ವ್ಯಕ್ತಿಯೊಬ್ಬರಿಂದ ಇ-ಮೇಲ್ ಬಂದಿತ್ತು. ಗಾಂಜಾ ಸೇವನೆ ವ್ಯಸನಕ್ಕೆ ತುತ್ತಾದ ಹದಿಹರೆಯದ ಇಬ್ಬರು ಬಾಲಕರನ್ನು ಸರಿ ಮಾಡುವಂತೆ ಮತ್ತು ಈ ವ್ಯಸನಕ್ಕೆ ಕಾರಣರಾದ ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ವ್ಯಕ್ತಿ ಕೋರಿದ್ದರು. ಮಾದಕವಸ್ತು ಸರಬರಾಜುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಹದಿಹರೆಯದ ಯುವಕರಿಗೆ ವೈದ್ಯಕೀಯ ಸಲಹೆ ನೀಡುವ ಬಗ್ಗೆ ಗಮನ ಹರಿಸಬೇಕೇ ಎಂಬ ದ್ವಂದ್ವ ಅಧಿಕಾರಿಗಳನ್ನು ಕಾಡಿತು.
‘‘ವಿದ್ಯಾರ್ಥಿಗಳು ಒಂದು ಬಾರಿ ಈ ವ್ಯವಸನದ ಬಲೆಗೆ ಬಿದ್ದರೆ ಅದಕ್ಕೆ ಅಗತ್ಯವಾದ ಹಣಕಾಸು ಬೆಂಬಲಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಸಾಮಾನ್ಯ. ಇವರು ನೇರವಾಗಿ ಮಾರಾಟ ಗಾರರಿಂದ ಇಂಥ ವಸ್ತುಗಳನ್ನು ಪಡೆಯದೆ ತಮ್ಮ ಸಹಪಾಠಿಗಳ ಮೂಲಕ ಪಡೆಯುತ್ತಾರೆ ಎನ್ನುವುದು’’ ಡಾ.ಬೆನಗಲ್ ಅವರ ಅನುಭವ. ಮಾದಕವಸ್ತು ದಂಧೆಯನ್ನು ಮಟ್ಟಹಾಕುವಲ್ಲಿ ಎದುರಾಗುವ ದೊಡ್ಡ ಸವಾಲು ಎಂದರೆ, ಇದನ್ನು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಎಂದು ಪರಿಗಣಿಸಬೇಕೇ ಅಥವಾ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಬೇಕೇ ಎಂಬ ದ್ವಂದ್ವ. ಆದರೆ ವಾಸ್ತವವಾಗಿ ಈ ಬಗ್ಗೆ ಅನುಕಂಪದ ದೃಷ್ಟಿಕೋನ ಹೊಂದಿ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎನ್ನುವುದು ಅವರ ಸಲಹೆ.
‘‘ಎನ್‌ಡಿಪಿಎಸ್ ಕಾಯ್ದೆಯಡಿ ಇರುವ ಆರೋಗ್ಯ ಹಾಗೂ ಕಾನೂನು ಸಮಸ್ಯೆಗಳ ಬಗ್ಗೆ ಜನ ತಿಳಿದುಕೊಳ್ಳುವಂತೆ ಮಾಡುವುದು ಅಗತ್ಯ, ಡ್ರಗ್ಸ್ ದಂಧೆ ವಿರುದ್ಧದ ಸಮರ ಯಶಸ್ವಿಯಾಗಬೇಕಾದರೆ ಪೊಲೀಸರು ಇಂಥ ವಸ್ತುಗಳ ಸರಬರಾಜು ತಡೆಯಬೇಕು ಮತ್ತು ಬೇಡಿಕೆ ಕಡಿಮೆಯಾಗುವಂತೆಯೂ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ’’ ಎಂದು ವಿವರಿಸುತ್ತಾರೆ.
‘‘ಸಾಮಾನ್ಯವಾಗಿ ಇರುವ ತಪ್ಪುಕಲ್ಪನೆಗೆ ವಿರುದ್ಧವಾಗಿ, ಪ್ರೌಢಾವಸ್ಥೆಯ ಯುವಜನತೆ ಇಂಥ ವ್ಯಸನದ ಗಂಭೀರ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರೆ, ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಇದರೊಂದಿಗೆ ಸಾಮಾಜಿಕ ಜೀವನದ ಮೇಲಾಗುವ ಪರಿಣಾಮದ ಬಗ್ಗೆಯೂ ಮನವರಿಕೆ ಮಾಡಿ ಕೊಡುವ ಅಗತ್ಯವಿದೆ’’ ಎಂದು ಡಾ.ಬೆನಗಲ್ ಹೇಳುತ್ತಾರೆ.
ಕೃಪೆ: Bangalore Mirror