ಯುದ್ಧ ಮುಂದುವರಿಸಿರುವ ತೇಜ್ ಬಹದ್ದೂರ್

ಇವರು ತೇಜ್ ಬಹದ್ದೂರ್ ಯಾದವ್. ಸೇನೆಯಲ್ಲಿ ಜವಾನರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆಪಾದಿಸುವ ಸೆಲ್ಫಿ ವೀಡಿಯೊ ಮೂಲಕ ಪರಿಚಿತರಾದವರು. ಬಿಎಸ್‌ಎಫ್‌ನಲ್ಲಿ ಹರಿದಾಡುತ್ತಿದ್ದ ಈ ವೀಡಿಯೊದಲ್ಲಿ ತೇಜ್‌ಬಹದ್ದೂರ್ ಅವರು, ನಾನು ಹಾಗೂ ನನ್ನಂಥ ಎಷ್ಟೋ ಮಂದಿ ಸೈನಿಕರು ಕೆಲವೊಮ್ಮೆ ಹಸಿದ ಹೊಟ್ಟೆಯಲ್ಲೇ ನಿದ್ದೆ ಹೋಗಬೇಕಾಗುತ್ತಿತ್ತು. ಏಕೆಂದರೆ ಸರಕಾರ ನೀಡಿದ ದವಸ ಧಾನ್ಯವನ್ನು ಹಿರಿಯ ಅಧಿಕಾರಿಗಳು ಮಾರಾಟ ಮಾಡುತ್ತಿದ್ದರು ಎಂದು ಆಪಾದಿಸಿದ್ದರು.

ಜತೆಗೆ ತಿನ್ನಲು ಸಾಧ್ಯವಿಲ್ಲದಷ್ಟು ಕಳಪೆ ಆಹಾರವನ್ನು ತಮಗೆ ನೀಡುತ್ತಿರುವುದನ್ನೂ ಅವರು ಬಹಿರಂಗಪಡಿಸಿದ್ದರು. ಕಠಿಣ ಪರಿಶ್ರಮದ ಕೆಲಸವನ್ನು ಸುಸ್ಥಿರವಾಗಿ ನಿರ್ವಹಿಸಬೇಕಾದ ಜವಾನರು, ಹಿಮಚ್ಛಾದಿತ ಪ್ರದೇಶದಲ್ಲಿ 11 ಗಂಟೆ ಕಾಲ ಕಾವಲು ಕಾಯುವುದೂ ಸೇರಿದಂತೆ ಕಠಿಣ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಈ ವೀಡಿಯೊವನ್ನು ತಾವು ವೀಕ್ಷಿಸಿದ್ದು, ಬಿಎಸ್‌ಎಫ್‌ನಿಂದ ಸೂಕ್ತ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾಗಿ ವಿವರಿಸಿದ್ದರು.
ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜೊತೆ ನೀಡಿ ಎಂದು ಕರೆ ನೀಡಿದ ನರೇಂದ್ರ ಮೋದಿಯ ಘೋಷಣೆ ತೇಜ್ ಬಹದ್ದೂರ್ ನೆರವಿಗೆ ಬರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿಯೇ ಅವರನ್ನು ಗಡಿಭದ್ರತಾ ಪಡೆಯಿಂದ ವಜಾ ಮಾಡಲಾಗಿತ್ತು. ಈಗ ಈತ ಎಲ್ಲಿದ್ದಾನೆ? ಎಂದು ಹುಡುಕುತ್ತಾ ಹೋದಾಗ, ಹರ್ಯಾಣದಲ್ಲಿ ಈತನ ಭೇಟಿಯಾಯಿತು.

ಕ್ಯಾಮೆರಾದ ಮುಂದೆ ಬರಲು ಅವರು ಅಂಜುತ್ತಿದ್ದರು. ಸಂಕೋಚವೂ ಅದರಲ್ಲಿ ಸೇರಿತ್ತೇನೋ.
ಅದರೆ ಫೋಟೊ ತೆಗೆಯಲು ಅನುಮತಿ ಕೋರಿದಾಗ ಒಪ್ಪಿಕೊಂಡರು. ಮೊಬೈಲ್‌ನಲ್ಲೇ ಫೋಟೊ ಸೆರೆ ಹಿಡಿದೆ.
ನಿವೃತ್ತಿಯನ್ನು ಆಸ್ವಾದಿಸುತ್ತಿದ್ದೇನೆ ಎಂದು ಹೇಳುವ ಯಾದವ್, ತನ್ನ ಹಕ್ಕಿಗಾಗಿ ಹೋರಾಟವನ್ನು ಮುಂದುವರಿಸಲಿದ್ದೇನೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಭ್ರಷ್ಟಾಚಾರದ ಘಟನೆಗಳು ಗಮನಕ್ಕೆ ಬಂದರೆ ತಕ್ಷಣ ಅದನ್ನು ನಾಗರಿಕರು ಹಂಚಿಕೊಳ್ಳಬೇಕು ಎಂದು ಮೋದಿಯವರು ಹೇಳಿದ್ದರು. ಅದಕ್ಕೆ ಅನುಸಾರವಾಗಿ ನಾನು ಸೆಲ್ಫಿ ವೀಡಿಯೊ ಸಿದ್ಧಪಡಿಸಿದ್ದೆ. ಅವರಿಗೆ ನೆರವಾಗುವುದು ನನ್ನ ಉದ್ದೇಶವಾಗಿತ್ತು. ಆದರೆ ನನ್ನನ್ನು ವಜಾಮಾಡಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಈ ವಿವಾದದ ಬಳಿಕ ದಿಢೀರನೆ ಕಣ್ಮರೆಯಾದ ಬಗ್ಗೆ ಅವರನ್ನು ಕೇಳಿದೆ. ಈ ಪ್ರಶ್ನೆಯನ್ನು ನಿರೀಕ್ಷಿಸಿದ್ದಂತೆ ಅವರು ನಸುನಕ್ಕರು. ಮಾಧ್ಯಮದ ಗಮನ ಸೆಳೆಯುವುದು ನನಗೆ ಬೇಕಿಲ್ಲ. ಅದರಿಂದ ದೂರ ಇದ್ದುಕೊಂಡೇ ನಾನು ಖುಷಿಯಾಗಿದ್ದೇನೆ. ನಾನು ಏನನ್ನೂ ಕೇಳಿಲ್ಲ. ನಾನು ಸರಳ ವ್ಯಕ್ತಿ. ಹೆಚ್ಚು ವಿದ್ಯಾವಂತನೂ ಅಲ್ಲ. ನಾನು ಚೆನ್ನಾಗಿದ್ದೇನೆ ಎಂದಷ್ಟೇ ಹೇಳಿದರು.
ಈ ಘಟನೆಯ ಬಳಿಕ ಸಂಬಂಧಿಕರು ತಮ್ಮಿಂದ ದೂರವಾಗುತ್ತಿದ್ದಾರೆ. ಏಕೆಂದರೆ ನನ್ನ ಜತೆಗೆ ಸಂಪರ್ಕ ಹೊಂದಿದ್ದರೆ, ಅವರಿಗೂ ತೊಂದರೆಯಾಗಬಹುದು ಎಂಬ ಭೀತಿ ಅವರಲ್ಲಿದೆ. ಮೌತ್ ತೋ ಆನಿ ಹೈ ತೋ ಆಯೇಗಿ ಹೈ, ದರ್ ದರ್‌ಕೇ ಉಸ್ಸೇ ದಿನ್ ಕಾ ಇಂತಿಝಾರ್ ಕರ್ತೆ ರಹೇನ್ ಕ್ಯಾ? ದೇಶವನ್ನು ಧರ್ಮ ಅಥವಾ ಜಾತಿ ಭಿನ್ನತೆ ಆಧಾರದಲ್ಲಿ ವಿಭಜಿಸುತ್ತಿರುವುದಕ್ಕೆ ಯಾದವ್ ಅವರ ತೀವ್ರ ವಿರೋಧವಿದೆ. ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸಮಾನ ಎಂದು ಅವರು ಅಭಿಪ್ರಾಯಪಟ್ಟರು.
ನಾನು ರೇವಾರಿಯಲ್ಲಿರುವಾಗ ಹಲವು ಬಾರಿ ನಾವಿಬ್ಬರು ಭೇಟಿಯಾದೆವು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡೆವು; ಚಿಕ್ಕ ಪುಟ್ಟ ಚರ್ಚೆ ನಡೆಸಿದೆವು; ಆದರೆ ಗ್ರಾಮದ ಸರಪಂಚ ಸುರೇಶ್ ಚೌಹಾಣ್ ಅವರ ನಿವಾಸದಲ್ಲಿ ಮಧ್ಯಾಹ್ನದೂಟಕ್ಕೆ ಸೇರಿದ್ದಾಗ ಗಂಭೀರ ಚರ್ಚೆ ನಡೆಸಿದೆವು.
ಇದಕ್ಕೂ ಮುನ್ನ ನಡೆದಿದ್ದ ಸಂಕ್ಷಿಪ್ತ ಭೇಟಿಯಲ್ಲಿ, ಯಾದವ್ ಮಾತು ತೋರಿಕೆಯದ್ದಲ್ಲ ಎಂದು ನನಗೆ ಖಚಿತವಾಯಿತು. ನನ್ನ ಮನಸ್ಸಿನಲ್ಲಿರುವುದನ್ನು ನಾನು ಮಾತನಾಡುತ್ತೇನೆ. ಭ್ರಷ್ಟಾಚಾರ ಎಲ್ಲೇ ಇದ್ದರೂ, ಅದನ್ನು ಗಮನಕ್ಕೆ ತರುವುದು ನನ್ನ ಉದ್ದೇಶ ಎಂದು ಹೇಳಿದರು.
ಉದಾಹರಣೆಗೆ ನಮ್ಮ ಸರಪಂಚರು ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಮೊತ್ತವನ್ನು ಖರ್ಚು ಮಾಡಿರಬಹುದು ಎಂದು ಪಕ್ಕದಲ್ಲೇ ಕುಳಿತಿದ್ದ ಸರಪಂಚರತ್ತ ಬೆಟ್ಟು ಮಾಡಿದರು. ಅವರು ಮುಖ ಸಿಂಡರಿಸಿಕೊಂಡು, ನನ್ನ ಸ್ವಂತ ಹಣದಿಂದಲೇ ಪಂಚಾಯತ್ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಅರೆ, ನಾನು ಉದಾಹರಣೆಯಷ್ಟೇ ನೀಡುತ್ತಿದ್ದೇನೆ. ಸ್ಥಳೀಯ ರಾಜಕಾರಣಿ ಚುನಾವಣೆ ಗೆಲ್ಲಲು ಹಣ ಹೂಡಿದರೆ, ಆತ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೆಲಸ ಮಾಡುತ್ತಾನೆಯೇ ಅಥವಾ ಆ ಬಜೆಟ್‌ನಿಂದ ತನ್ನ ಖರ್ಚನ್ನು ಹಿಂದಿರುಗಿ ಪಡೆದುಕೊಳ್ಳಲು ಮುಂದಾಗುತ್ತಾನೆಯೇ? ಎಂದು ಯಾದವ್ ವಿವರಿಸಿದರು. ಇಷ್ಟಲ್ಲದೇ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಅವರಿಗೆ ಹಣ ಬೇಕು. ಈ ಹಣ ಎಲ್ಲಿಂದ ಬರುತ್ತದೆ? ಹೌದು; ನೀವು ಊಹಿಸಿರಬಹುದು ಎಂದು ಖಂಡತುಂಡವಾಗಿ ಯಾದವ್ ಹೇಳಿದರು.
ಸರಪಂಚ್ ಬೇರೆಡೆಗೆ ದೃಷ್ಟಿ ಹರಿಸಿದರು. ಗ್ರಾಮದಲ್ಲಿ ಯಾದವರು ಹಾಗೂ ಠಾಕೂರರ ನಡುವಿನ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿ ಯಾದವ್ ವಿವರಿಸಿದರು. ಶಾಂತಿಸ್ಥಾಪನೆ ನನ್ನ ಉದ್ದೇಶ. ನಿಧಾನವಾಗಿ ಹಾಗೂ ಹಂತಹಂತವಾಗಿ ಇತರ ಜಾತಿ, ಧರ್ಮ ಹಾಗೂ ನಂಬಿಕೆಗಳನ್ನೂ ಸೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳುವಾಗ ಯಾದವ್ ಕಣ್ಣು ಹೆಮ್ಮೆ ಮತ್ತು ಬದ್ಧತೆಯಿಂದ ಮಿನುಗುತ್ತಿತ್ತು.

ಒಂದಷ್ಟು ಗಾಸಿಪ್ ಹರಟಿದೆವು. ದೇಸಿ ಆಹಾರದ ಥಾಲಿಯಿಂದ ನಮ್ಮ ಬಂಧ ಬೆಳೆಯಿತು. ಕೆನೆಭರಿತ ಚಾಯ್ ಹಾಗೂ ಲಸ್ಸಿಯೊಂದಿಗೆ ಗಾಢವಾಯಿತು. ಯೆ ಲಸ್ಸಿ ಹೈ ಆಪ್ಕೊ ಹರ್ಯಾಣೇ ಕೀ ಗರ್ಮಿ ಮೈನ್ ಥಂಡ ರಖೇಗಿ ಎಂದು ನಗುತ್ತಲೇ ಹೇಳಿದರು.
ಸೈನಿಕರು ಎಂದೂ ಕರ್ತವ್ಯದಲ್ಲೇ ಇರುತ್ತಾರೆ ಎನ್ನುವಂತೆ, ಇಂದಿಗೂ ಯಾದವ್ ಸ್ಪಷ್ಟವಾಗಿ ತಮ್ಮ ಗುರಿಯತ್ತ ಮುನ್ನಡೆದಿದ್ದಾರೆ.
ಕೃಪೆ : thequint.com







