ಮಾದಕ ದ್ರವ್ಯದ ಬಲೆಯಲ್ಲಿ ದಿಲ್ಲಿಯ ಬೀದಿ ಮಕ್ಕಳು

ಮುಖದಲ್ಲಿ ಮುಗ್ಧ ನಗೆಯನ್ನು ಬೀರುತ್ತಾ, ಮೂಗಿನಲ್ಲಿ ಸಿಂಬಳ ಸುರಿಸುತ್ತಾ ಬಟ್ಟೆಯ ಮೇಲೆ ಮಣ್ಣು ಮೆತ್ತಿಕೊಂಡಿರುವ ಪರ್ಶು ದಿಲ್ಲಿಯ ಬೀದಿಗಳಲ್ಲಿ ವಾಸಿಸುವ ಎರಡು ಲಕ್ಷ ಮಕ್ಕಳ ಪೈಕಿ ಒಬ್ಬ. ಪರ್ಶು ಬಲೂನು ಮಾರುವ ಯುವದಂಪತಿಗೆ ಹುಟ್ಟಿದ. ತಂದೆ ತಾಯಿಗಳಿಬ್ಬರೂ ಮಾದಕದ್ರವ್ಯ ವ್ಯಸನಿಗಳು. ಆತನ ತಾಯಿಗೆ ಈಗ 20 ವರ್ಷವಾಗಿದ್ದರೆ ತಂದೆ ಅಮಲುಪದಾರ್ಥ ಅತಿಯಾದ ಕಾರಣ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ. ಪರ್ಶು ಕೂಡ ಈ ಚಟವನ್ನು ತನಗರಿವಿಲ್ಲದೆ ಅಂಟಿಸಿಕೊಂಡಿದ್ದ.
ದಿಲ್ಲಿಯಲ್ಲಿ ಕೇವಲ ಐದು ವ್ಯಸನಮುಕ್ತಿ ಕೇಂದ್ರಗಳಿವೆ. ಇವುಗಳಿಗೆ ಭಾಗಶಃ ಸರಕಾರದಿಂದ ಸಹಾಯ ದೊರಕುತ್ತಿದ್ದರೆ ಸರಕಾರೇತರ ಸಂಸ್ಥೆಗಳು ಇವುಗಳ ಮೇಲುಸ್ತುವಾರಿಯನ್ನು ನೋಡಿಕೊಂಡಿವೆ. ಪರ್ಶು ಹಳೆ ದಿಲ್ಲಿಯ ಪರ್ದಾ ಬಾಗ್‌ನಲ್ಲಿ ಇತ್ತೀಚೆಗೆ ಆರಂಭವಾದ ಆರನೆಯ ಮಹಿಳಾ ಮತ್ತು ಮಕ್ಕಳ ವ್ಯಸನಮುಕ್ತಿ ಕೇಂದ್ರದಲ್ಲಿರುವ ಏಕೈಕ ಹುಡುಗನಾಗಿದ್ದಾನೆ. ಕೆಲವು ಕೇಂದ್ರಗಳಲ್ಲಿ 15 ಹಾಸಿಗೆಗಳಿದ್ದರೆ ಇನ್ನು ಕೆಲವಲ್ಲಿ ದುಪ್ಪಟ್ಟಿವೆ. ಕಳೆದ ವರ್ಷ ಈ ಕೇಂದ್ರಗಳು ಸರಕಾರದಿಂದ ಹಣ ಪಾವತಿಯಾಗಿಲ್ಲ ಎಂದು ದೂರಿಕೊಂಡಿದ್ದವು. ದಿಲ್ಲಿ ಸರಕಾರ (ಬಂಡವಾಳ ಬಿಡುಗಡೆಗೆ ಅನುಮತಿ ಮತ್ತು ಪರಿಶೀಲನೆ ನಡೆಸುವ ನಾಡಲ್ ಸಂಸ್ಥೆ) ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂಬುದು ಅವರ ಆಕ್ರೋಶವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲಾಗಿದ್ದರೂ ಇದಕ್ಕೂ ದೊಡ್ಡ ವಿಷಯವೆಂದರೆ ಮಾದಕದ್ರವ್ಯ ವ್ಯಸನವು ಈಗಲೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತಿದೆ. ಆದರೆ ನಿಜವಾಗಿ ಅದು ಬಡತನದಲ್ಲಿ ಮೊಳಕೆಯೊಡೆದು ಏಕಾಂಗಿ ಮತ್ತು ದುರ್ಬಲ ನರಗಳಲ್ಲಿ ಕ್ಯಾನ್ಸರ್‌ನಂತೆ ಬೆಳೆಯುವ ಆರೋಗ್ಯ ಸಮಸ್ಯೆಯಾಗಿದೆ.ಈ ಸಮಸ್ಯೆಯನ್ನು ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಭಾಯಿಸಬೇಕು ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಫೆಬ್ರವರಿಯ ಕೊನೆಯ ವಾರದಲ್ಲಿ ದಿಲ್ಲಿಯ ಸರಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಅಂರ್‌ವಲಯ ಸಮನ್ವಯ ಸಮಿತಿಯ ಸಭೆ ನಡೆಯಿತು. ‘ಅಂತರ್‌ವಲಯ’ ಎಂಬ ಪದ ಬಳಕೆಯೇ ಈ ಸಮಸ್ಯೆಯನ್ನು ನಿಭಾಯಿಸಲು ಅಗತ್ಯವಿರುವ ಸ್ಪಂದನೆಯ ಬಗ್ಗೆ ಸರಕಾರಕ ತಿಳುವಳಿಕೆಗೆ ಮೊದಲ ಸಾಕ್ಷಿಯಾಗಿದೆ.

ದಿಲ್ಲಿ ಏಡ್ಸ್ ನಿಯಂತ್ರಣ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ಮಾದಕದ್ರವ್ಯವನ್ನು ಸೇವಿಸಿದ್ದ ಬೀದಿ ಮಕ್ಕಳ ಸಂಖ್ಯೆ 23,240 ಆಗಿತ್ತು. ಆದರೆ ಶೇ.95 ನಿಖರ ಅಂದಾಜಿನ ಪ್ರಕಾರ ಈ ಸಂಖ್ಯೆ 19,320ರಿಂದ 27,240ರ ಮಧ್ಯೆಯಿತ್ತು. ತಂಬಾಕನ್ನು ಹೊರತುಪಡಿಸಿದ ನಂತರವೂ 15,470 ಮಕ್ಕಳು ಈ ಪಟ್ಟಿಯಲ್ಲಿದ್ದರು. ಅಧ್ಯಯನದ ಪ್ರಕಾರ ತಂಬಾಕು ಸೇವಿಸುವ ಬೀದಿಮಕ್ಕಳ ಸಂಖ್ಯೆ 20,000 ಆಗಿದ್ದು ಕೂಡಲೇ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಮದ್ಯಪಾನ ಮಾಡುವ ಬೀದಿಮಕ್ಕಳ ಸಂಖ್ಯೆ 9,450, ಉಸಿರಿನ ಮೂಲಕ ಅಮಲು ಪದಾರ್ಥ ಸೇವಿಸುವ ಮಕ್ಕಳ ಸಂಖ್ಯೆ 7,910, ಗಾಂಜಾ ಮುಂತಾದುವನ್ನು ಸೇವಿಸುವ ಬೀದಿಮಕ್ಕಳ ಸಂಖ್ಯೆ 5,600, ಹೆರೋಯಿನ್ ಸೇವಿಸುವ ಮಕ್ಕಳ ಸಂಖ್ಯೆ 840 ಮತ್ತು ಔಷಧಿರೂಪದ ಓಪಿಯಾಡ್ಸ್ ಮತ್ತು ಅಮಲುವಸ್ತುಗಳನ್ನು ಬಳಸುವ ಮಕ್ಕಳ ಸಂಖ್ಯೆ 210. ಕೆಲವು ಬೀದಿ ಮಕ್ಕಳು ಇಂಜೆಕ್ಷನ್ ರೂಪದ ಡ್ರಗ್ಸ್‌ಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಎಐಐಎಂಎಸ್ 2016ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಿಲ್ಲಿಯ ಬೀದಿಗಳಲ್ಲಿ 70,000 ಮಾದಕದ್ರವ್ಯ ವ್ಯಸನಿಗಳಿದ್ದಾರೆ ಮತ್ತು ಒಂಬತ್ತು ವರ್ಷ ಪ್ರಾಯದಲ್ಲೇ ಅವರಲ್ಲಿ ಬಹುತೇಕರು ಈ ಚಟಕ್ಕೆ ಬಿದ್ದಿದ್ದಾರೆ.
ಆರು ಆಸ್ಪತ್ರೆಗಳಲ್ಲಿ 30 ಹಾಸಿಗೆಗಳನ್ನು ಕೇವಲ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆಂದೇ ಮೀಸಲಿಡಲಾಗಿದೆ ಆದರೆ ಈ ಕೇಂದ್ರಗಳಲ್ಲಿ ಸಿಬ್ಬಂದಿಯ ಕೊರತೆಯಿದೆ. ಸದ್ಯವಿರುವ ಐದು ನಶೆಮುಕ್ತಿ ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ಹೆಚ್ಚಿಸಲು ಈಗಾಗಲೇ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಸರಕಾರಿ ಆಸ್ಪತ್ರೆಗಳ ಮಾದಕದ್ರವ್ಯ ಮುಕ್ತಿ ಕೇಂದ್ರಗಳಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಒಳರೋಗಿಗಳನ್ನು ನೋಡಿಕೊಳ್ಳಲು ಪ್ರತೀ ಕೇಂದ್ರಗಳಲ್ಲಿ ಒಂದರಿಂದ ಮೂರು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಕ ಮಾಡಬೇಕೆಂಬ ಹೊಸ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಮುಸ್ಕಾನ್ ಪ್ರತಿಷ್ಠಾನ ದ್ವಾರ್ಕಾದ ಅಂಬೆರಾಯ್ ಎಂಬಲ್ಲಿ ನಶೆಮುಕ್ತಿ ಕೇಂದ್ರವನ್ನು ನಡೆಸುತ್ತಿದೆ. ಇದನ್ನು ನಡೆಸುತ್ತಿರುವ ವೈದ್ಯರಾದ ಡಾ.ಭರತ್ ಭೂಷಣ್ ತಿಳಿಸುವಂತೆ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚುಗೊಳಿಸುವುದು ಬಹಳ ಮುಖ್ಯವಾಗಿದೆ ಯಾಕೆಂದರೆ ಈ ಚಿಕಿತ್ಸೆಯನ್ನು ಕೇವಲ ಮೂರು ವಾರಗಳ ನಶೆಮುಕ್ತಿಗೆ ಸೀಮಿತಗೊಳಿಸಲಾಗುವುದಿಲ್ಲ, ಅದು ಮತ್ತೆ ಮರುಕಳಿಸದಂತೆ ತೀವ್ರವಾದ ಮತ್ತು ದೀರ್ಘವಾದ ಚಿಕಿತ್ಸೆಯ ಅಗತ್ಯವೂ ಇರುತ್ತದೆ. ಸದ್ಯ 60ರಿಂದ 90 ಶೇಕಡಾ ಜನರು ಮರುಚಟಕ್ಕೆ ಬೀಳುತ್ತಿದ್ದು ಇದು ಅವರು ಮತ್ತೆಂದೂ ಈ ವ್ಯಸನದಿಂದ ಮುಕ್ತಗೊಳ್ಳದಂತೆ ಮಾಡುತ್ತಿದೆ. ನಶೆಮುಕ್ತಿಯ ಬಗ್ಗೆ ದೃಷ್ಟಿಕೋನವನ್ನು ಕ್ರೋಡೀಕರಿಸಲು ದಿಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯು ಹೆಚ್ಚುವರಿ ಮೌಖಿಕ ಪರ್ಯಾಯ ಚಿಕಿತ್ಸೆ ಕೇಂದ್ರಗಳು, ಉದ್ದೇಶಿತ ಮಧ್ಯಸ್ಥಿಕೆಗಾಗಿ, ವ್ಯಸನಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಲ್ಲಿ ಸಾಮರ್ಥ್ಯ ಹೆಚ್ಚಿಸಲು ಮತ್ತು ತರಬೇತಿ ಬೆಂಬಲ ಹಾಗೂ ಮಧ್ಯಸ್ಥಿಕೆ ಪ್ರಯತ್ನಗಳಿಗಾಗಿ ವಿಶೇಷ ಸಮಾಲೋಚನಾ ಕೇಂದ್ರಗಳ ನಿರ್ಮಾಣದ ಪ್ರಸ್ತಾಪವನ್ನಿಟ್ಟಿದೆ. ಈ ಎಲ್ಲಾ ಪ್ರಸ್ತಾಪಿತ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ವಾರ್ಷಿಕ ರೂ. ಹತ್ತು ಕೋಟಿ ತೆಗೆದಿಡಬೇಕಾಗುತ್ತದೆ ಎಂದು ಪ್ರಸ್ತಾಪದಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ, ಏಮ್ಸ್ ಪ್ರತೀ ವರ್ಷ ಐದು ಮದ್ಯವ್ಯಸನ ತಜ್ಞರನ್ನು ಸೃಷ್ಟಿಸುವ ಸಲುವಾಗಿ ವಿಶೇಷ ಕೋರ್ಸ್ ಒಂದನ್ನು ಆರಂಭಿಸಿತು. ಏಮ್ಸ್ ತ್ರಿಲೋಕ್‌ಪುರಿ ಮತ್ತು ಸುಂದರನಗರಿಯಲ್ಲಿ ಎರಡು ಸಮುದಾಯ ಚಿಕಿತ್ಸಾ ಕೇಂದ್ರಗಳನ್ನು ನಡೆಸುತ್ತಿದೆ. ಇವುಗಳು ಆರಂಭಿಕ ರೋಗಿಗಳನ್ನು ನಿಭಾಯಿಸುತ್ತವೆ. ಮಾದಕದ್ರವ್ಯ ವ್ಯಸನ ಸಮಸ್ಯೆಯನ್ನು ಸಾಮಾನ್ಯ ಮನೋಶಾಸ್ತ್ರದ ಭಾಗವಾಗಿ ನೋಡಲಾಗುತ್ತದೆ ಆದರೆ ಇದು ಅತ್ಯಂತ ಗಂಭೀರ ಮತ್ತು ನಿರ್ದಿಷ್ಟ ಸಮಸ್ಯೆಯಾಗಿದೆ ಎಂದು ಏಮ್ಸ್‌ನ ರಾಷ್ಟ್ರೀಯ ಮಾದಕದ್ರವ್ಯ ಅವಲಂಬನೆ ಚಿಕಿತ್ಸಾ ಕೇಂದ್ರದ ಡಾ. ಅತುಲ್ ಅಂಬೆಕರ್ ತಿಳಿಸುತ್ತಾರೆ.
ಮಾದಕವ್ಯಸನ ಮುಕ್ತಿ ಸೇವೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಿ ದಿಲ್ಲಿಯ ಸರಕಾರಿ ಆಸ್ಪತ್ರೆಗಳಿಗೆ ಮೇ 2016ರಂದು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಫ್ಪರ್‌ಜಂಗ್ ಆಸ್ಪತ್ರೆ ಮತ್ತು ವಿಎಂಎಂಸಿಯಲ್ಲಿ ಈ ಸೇವೆಯನ್ನು ನಿರಾಕರಿಸಲಾಗಿದೆ ಮತ್ತು ಲೇಡಿ ಹರ್ದಿಂಗ್ ವೈದ್ಯಕೀಯ ಕಾಲೇಜು ಮತ್ತು ಎಸ್‌ಎಸ್‌ಕೆ ಆಸ್ಪತ್ರೆಯಲ್ಲಿ 2024-25ರ ಅವಧಿಯಲ್ಲಿ ಕೇವಲ ಒಂದು ಮಗುವನ್ನು ನಶೆಮುಕ್ತಿಗಾಗಿ ದಾಖಲಿಸಿದ್ದರೆ 2015-16ರಲ್ಲಿ ಈ ಸಂಖ್ಯೆ ಶೂನ್ಯವಾಗಿದೆ ಎಂದು ತಿಳಿಸಲಾಗಿತ್ತು. ಈ ಎರಡೂ ಅವಧಿಗಳಲ್ಲಿ ಯಾವುದೇ ಮಹಿಳೆಯರನ್ನು ನಶೆಮುಕ್ತಿಗಾಗಿ ದಾಖಲಿಸಲಾಗಿರಲಿಲ್ಲ. ಪರ್ದಾ ಬಾಗ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ನಶೆಮುಕ್ತಿ ಕೇಂದ್ರಕ್ಕೆ ತೆರಳಿದರೆ ಅಲ್ಲಿರುವ ಮಹಿಳೆಯರು ಕೇವಲ ರೂ.60ಕ್ಕೆ ಒಂದು ಬಾಟಲಿ ಮಾದಕದ್ರವ್ಯವನ್ನು (ರಾಸಾಯನಿಕ ಔಷಧಿ) ಹೇಗೆ ದಿನನಿತ್ಯ ಸುಲಭದಲ್ಲಿ ಪಡೆದುಕೊಳ್ಳುತ್ತಾರೆ ಎಂಬುದನ್ನು ವಿವರಿಸುತ್ತಾರೆ. ಮೀನಾ ಬಝಾರ್, ಹನುಮಾನ್ ಮಂದಿರ್, ಜಂಡೆವಲನ್ ಮುಂತಾದೆಡೆಗಳಲ್ಲಿರುವ ಮಕ್ಕಳು ಈ ಮಾದಕ ವ್ಯಾಪಾರಿಳಿಗೆ ಸುಲಭ ಗುರಿಯಾಗುತ್ತಾರೆ. 7 ಮತ್ತು 15ರ ಹರೆಯದ ಒಳಗಿನ ಹೆಣ್ಮಕ್ಕಳು ಹೇಳುವಂತೆ ಅವರು ಮೊದಲು ಜಗಿಯುವ ತಂಬಾಕಿನಿಂದ ಆರಂಭಿಸಿದರು ಮತ್ತು ನಂತರ ‘ಬಯ್ಯಾ’ (ಸಹೋದರರು) ಅವರಿಗೆ ಕುಡಿಯುವ ದ್ರಾವಣಗಳನ್ನು ನೀಡಲು ಆರಂಭಿಸಿದರು. ಇದೇ ಆರ್‌ಟಿಐ ಪತ್ರಕ್ಕೆ ಉತ್ತರಿಸಿದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ 2014ರ ಅವಧಿಯಲ್ಲಿ ಕೇವಲ 6 ಮಂದಿ ಮಾದಕದ್ರವ್ಯ ಮುಕ್ತಿ ಕೇಂದ್ರಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದರೆ 2015ರಲ್ಲಿ ಈ ಸಂಖ್ಯೆ 22 ಆಗಿದೆ ಎಂದು ತಿಳಿಸಿತ್ತು. ಈ ಆಸ್ಪತ್ರೆಗಳಲ್ಲಿ ಮಾದಕದ್ರವ್ಯ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಆರೋಗ್ಯ ಮತ್ತು ಕಲ್ಯಾಣ ಇಲಾಖೆಗೆ ನೀಡುವುದಾಗಿ ಅಂತಿಮವಾಗಿ ಪ್ರಸ್ತಾಪಿಸಲಾಯಿತು.
ತಿಲಕ್ ವಿಹಾರ್ ಪ್ರದೇಶದಲ್ಲಿ 30 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸುವ ಪ್ರಸ್ತಾಪವಿದೆ. ಇಲ್ಲಿ ಪ್ರತೀ ಮನೆಯಲ್ಲಿ ಒಬ್ಬ ಮಾದಕದ್ರವ್ಯ ವ್ಯಸನಿಯಿದ್ದಾನೆ. ಇನ್ನು ತುರ್ತಾಗಿ ಪರಿಹಾರ ಬಯಸುವ ಇತರ ಪ್ರದೇಶಗಳೆಂದರೆ ನ್ಯೂ ಸೀಲಂಪುರ್ ಮತ್ತು ಸೀಮಾಪುರಿ ಇಲ್ಲಿ ಆಶಾ ಮತ್ತು ಪರಿವರ್ತನ್‌ನಂಥಾ ಸರಕಾರೇತರ ಸಂಸ್ಥೆಗಳು ಶಿಕ್ಷಣ ಮತ್ತು ಸುಧಾರಣೆಗೆ ತಮ್ಮಿಂದಾಗುವ ಕೆಲಸವನ್ನು ಮಾಡುತ್ತಿವೆ. ಕಳೆದ ವರ್ಷ ನ್ಯೂ ಸೀಲಂಪುರ್ ಶಾಸಕ ಹಾಜಿ ಇಶ್ರಕ್ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ನಶೆ ಮುಕ್ತಿ ಕೇಂದ್ರವನ್ನು ನಿರ್ಮಿಸಲು ಎಂಸಿಡಿ ಸರಕಾರಿ ಜಾಗವನ್ನು ನೀಡುತ್ತಿಲ್ಲ ಎಂದು ದೂರಿದ್ದರು. ಇದು ಪೊಲೀಸ್ ಠಾಣೆಗಳ ಹೊರಗೆಯೂ ಕೂಡಾ ವ್ಯಸನಿಗಳು ಹೆಣಗಳಂತೆ ಬಿದ್ದಿರುವುದಕ್ಕೆ ಕಾರಣವನ್ನು ಸೂಚಿಸುತ್ತಿದೆ. ಆ ಆರು ಸರಕಾರಿ ಕೇಂದ್ರಗಳ ಹೊರತಾಗಿ ಅನೇಕ ಖಾಸಗಿ ನಶೆಮುಕ್ತಿ ಕೇಂದ್ರಗಳು ರಾಜಧಾನಿಯಾದ್ಯಂತ ಕಾರ್ಯಾಚರಿಸುತ್ತಿವೆ. ಕೆಲವು ತಮ್ಮನ್ನು ನರಸಂಬಂಧಿ ಮನೋಶಾಸ್ತ್ರ ಕೇಂದ್ರಗಳೆಂದು ಬಿಂಬಿಸಿದರೆ ಇನ್ನು ಕೆಲವು ಕ್ಷೇಮ ಆಶ್ರಯಧಾಮಗಳೆಂದು ಹೇಳಿಕೊಳ್ಳುತ್ತವೆ. ಇದೇ ಮೊದಲ ಬಾರಿ ಸರಕಾರ ಈ ಖಾಸಗಿ ನಶೆಮುಕ್ತಿ ಕೇಂದ್ರಗಳ ಮೇಲೆ ಕಣ್ಣಿಡುವಂತೆ ಸೂಚಿಸಿದೆ. ಮಾದಕದ್ರವ್ಯ ಪರಿಹಾರಕ್ಕಾಗಿ ಪ್ರಮಾಣೀಕೃತ ಪ್ರಕ್ರಿಯೆಯನ್ನು ಪರಿಚಯಿಸಬೇಕು. ಸರಕಾರಿ ವೈದ್ಯರು ಹೇಳುವಂತೆ ದಿಲ್ಲಿಯಾದ್ಯಂತವಿರುವ 150ಕ್ಕೂ ಅಧಿಕ ಖಾಸಗಿ ಎನ್‌ಜಿಒಗಳನ್ನು ಯಾವುದೇ ಸರಕಾರಿ ಇಲಾಖೆ ಪರಿಶೀಲಿಸಿಲ್ಲ ಮತ್ತು ಇವುಗಳಲ್ಲಿ ಚಟವನ್ನು ಮತ್ತಷ್ಟು ದೀರ್ಘವಾಗುವಂತೆ ಮಾಡಲು ಹೆಚ್ಚು ಪ್ರಭಾವದ ಪರ್ಯಾಯ ಔಷಧಿಯನ್ನು ನೀಡುವ ಮತ್ತು ದೈಹಿಕವಾಗಿ ಪೀಡಿಸುವ ವಿಧಾನಗಳು ನಡೆಯುತ್ತವೆ.
ಶಾಲಾ ಮಕ್ಕಳು ಸುಲಭದ ತುತ್ತಾಗಿದ್ದಾರೆ ಮತ್ತು ಇವರು ಗುಂಪಿನಲ್ಲಿ ಈ ಚಟವನ್ನು ಬರಮಾಡಿಕೊಳ್ಳುತ್ತಾರೆ. ದಿಲ್ಲಿಯಲ್ಲಿ 1,240 ಶಾಲೆಗಳಿದ್ದು ಅವುಗಳಲ್ಲಿ 6ರಿಂದ 12ರ ತರಗತಿಯಲ್ಲಿ ಕಲಿಯುವ 13.5ಲಕ್ಷ ಮಕ್ಕಳಿದ್ದಾರೆ. ಈ ಮಕ್ಕಳನ್ನು ಮಾದಕದ್ರವ್ಯ ವ್ಯಸನಕ್ಕಾಗಿ ಪರಿಶೀಲನೆ ನಡೆಸುವ ಪ್ರಸ್ತಾಪವೂ ಇದೆ. ಪೂರ್ವ ಮತ್ತು ದಕ್ಷಿಣ ದಿಲ್ಲಿಯ ಪಾಲಿಕೆಗಳು ತಮ್ಮ ಸಿಬ್ಬಂದಿಯನ್ನು ಈ ಕೆಲಸಕ್ಕಾಗಿ ತರಬೇತುಗೊಳಿಸಿದ್ದು ಅದರೊಂದಿಗೆ ಶಾಲಾ ಪರಿಸರದಲ್ಲಿರುವ ಮೊಹಲ್ಲಾ ಚಿಕಿತ್ಸಾ ಕೇಂದ್ರಗಳು ಕೂಡಾ ವಿದ್ಯಾರ್ಥಿಗಳ ನಿಯಮಿತ ಪರೀಕ್ಷೆ ನಡೆಸಲಿದೆ. ಇವೆಲ್ಲದರ ಜೊತೆಗೆ ಕೊನೆಗೂ ಸರಕಾರವು ಸಮಸ್ಯೆಯ ವ್ಯಾಪ್ತಿಯನ್ನು ತಿಳಿಯಲು ಸಮೀಕ್ಷೆಯನ್ನು ನಡೆಸುವ ಅಗತ್ಯವನ್ನು ಒಪ್ಪಿಕೊಂಡಿದೆ. ಸದ್ಯ ಶಾಲಾ ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನದ ಬಗ್ಗೆ ಕ್ರೋಡೀಕೃತ ಸಮೀಕ್ಷೆಯು ಲಭ್ಯವಾಗಿಲ್ಲ.
ದಿಲ್ಲಿ ಪೊಲೀಸರು, ಮಾದಕದ್ರವ್ಯ ಮಂಡಳಿ ಮತ್ತು ಮಾದಕದ್ರವ್ಯ ನಿಯಂತ್ರಣ ಇಲಾಖೆಯು ಅಮಲು ಪದಾರ್ಥ ಪೂರೈಕೆ ಮೇಲೆ ನಿಯಂತ್ರಣ ಮತ್ತು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ತನಿಖಾ ಸಂಸ್ಥೆಗಳಿಂದ ಮಾದಕದ್ರವ್ಯ ಮತ್ತು ಮಾದಕ ವಸ್ತು ಕಾಯಿದೆ (ಎನ್‌ಡಿಪಿಎಸ್) ಯಡಿಯಲ್ಲಿ ನಿಷೇಧಿಸಲ್ಪಟ್ಟಿರುವ ಔಷಧಿಗಳ ಬಗ್ಗೆ ಪಡೆದ ಮಾಹಿತಿಯ ಪ್ರಕಾರ ದಿಲ್ಲಿಯಲ್ಲಿ ಮ್ಯಾಂಡ್ರೆಕ್ಸ್, ಸಿರಪ್ ಮತ್ತು ಮಾತ್ರೆಯಂಥಾ ರಸಾಯನಿಕ ಆಧಾರಿತ ಅಮಲುಪದಾರ್ಥಗಳು ಅತೀಹೆಚ್ಚು ಸಂಖ್ಯೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲಿ ಲೋಕಸಭೆಯಲ್ಲಿ ಒಪ್ಪಿಸಲಾದ ಅಂಕಿಅಂಶಗಳ ಪ್ರಕಾರ ಮಾದಕದ್ರವ್ಯ ವಿರೋಧಿ ಸಂಸ್ಥೆಗಳು 23,519ಕೆಜಿ ಮ್ಯಾಂಡ್ರೆಕ್ಸ್, 98,480ಕೆಜಿ ಸಿರಪ್ ಮತ್ತು 1.77 ಲಕ್ಷ ಮಾತ್ರೆಗಳನ್ನು 2016ರಲ್ಲಿ ದಿಲ್ಲಿಯಲ್ಲಿ ವಶಪಡಿಸಿಕೊಂಡಿದೆ. ಮಾದಕದ್ರವ್ಯ ನಿಯಂತ್ರಣ ಮಂಡಳಿ ಕಾನೂನುಬಾಹಿರ ಮಾದಕದ್ರವ್ಯ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ 18 ಔಷಧಾಲಯಗಳ ಪರವಾನಿಗೆ ರದ್ದು ಮಾಡಿದ್ದರೂ ತಿಲಕ್ ವಿಹಾರ್, ಸೀಮಾಪುರಿ ಮತ್ತು ಸೀಲಾಂಪುರ್‌ನ ನಿವಾಸಿಗಳು ಹೇಳುವಂತೆ ಅವಿಲ್ (ನೋವು ನಿವಾರಕ), ಸಿಯಾಝೆಪಲ್ (ಸ್ನಾಯು ಸೆಳೆತವನ್ನು ಕಡಿಮೆ ಮಾಡುವ), ನೈಟ್ರಜ್‌ಪಾಮ್ (ಆತಂಕ ಮತ್ತು ನಿದ್ರಾಹೀನತೆಯಿಂದ ತಾತ್ಕಾಲಿಕ ಪರಿಹಾರ), ಅಲ್ಪ್ರಾಕ್ಸ್ (ಸಂಮೋಹನ ಅಥವಾ ನಿದ್ದೆ ಬರಿಸುವ) ಮತ್ತು ಫೆನೆಗ್ರನ್ (ವಾಕರಿಕೆಗೆ) ಮುಂತಾದ ಔಷಧಿಗಳನ್ನು ಈಗಲೂ ಸುಲಭವಾಗಿ ಪಡೆಯಬಹುದಾಗಿದೆ. ದೊಡ್ಡ ಅಂಗಡಿಯಲ್ಲಿ ಸಿಗದಿದ್ದರೆ ಸಣ್ಣ ಅಂಗಡಿಗಳಲ್ಲಿ ಖಂಡಿತವಾಗಿಯೂ ಸಿಗುತ್ತದೆ. ಇಲ್ಲದಿದ್ದರೆ ‘ಬಯ್ಯ್’ (ಅಣ್ಣಾ) ತಂದುಕೊಡುತ್ತಾನೆ ಎಂದು ಹೇಳುತ್ತಾನೆ ಕನೌಟ್ ಪ್ಲೇಸ್‌ನ ಹನುಮಾನ್ ಮಂದಿರದ ಹೊರಗಿರುವ ಮದ್ಯವ್ಯಸನಿ ಭೀಮಾ.
ಇದು ಕೇವಲ ಡ್ರಗ್ಸ್‌ನ ಪೂರೈಕೆ ಮತ್ತು ಬೇಡಿಕೆಯ ಸರಪಳಿಯನ್ನು ತುಂಡರಿಸುವ ಪ್ರಶ್ನೆ ಮಾತ್ರವಲ್ಲ ಈ ಅಗ್ಗದ ವಿಷಕ್ಕೆ ಪ್ರತಿನಿತ್ಯ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವ ಆ 70,000 ಬಾಲ್ಯಗಳನ್ನು ರಕ್ಷಿಸುವ ಪ್ರಶ್ನೆಯಾಗಿದೆ.







