ದೇಶದ ಮೊಟ್ಟಮೊದಲ ವೃತ್ತಿಪರ ಸ್ಟ್ಯಾಂಡಪ್ ಪೆಡಲ್ ರೇಸರ್ ತನ್ವಿ ಜಗದೀಶ್

ಮೊದಲ ಬಾರಿ ತನ್ವಿ ಜಗದೀಶ್ ಸರ್ಫಿಂಗ್ ಪ್ರಯತ್ನ ನಡೆಸಿದ್ದು ಚಾಕಚಕ್ಯತೆಯಿಂದ. ಎಲ್ಲ ಸ್ನೇಹಿತೆಯರು ಸ್ಥಳೀಯ ಬೀಚ್‌ನಲ್ಲಿ ಅಭ್ಯಾಸ ಮಾಡುತ್ತಿದ್ದುದನ್ನು ನೋಡಿದ ಈಕೆಯ ಮನಸ್ಸಿನಲ್ಲೂ ಆಸೆ ಕುಡಿಯೊಡೆಯಿತು. ಆದರೆ ಈಜುವುದು ಹೇಗೆ ಎಂದೇ ತಿಳಿಯದ, ಲಘು ಅಸ್ತಮಾದಿಂದ ಬಳಲುತ್ತಿದ್ದ 10 ವರ್ಷದ ಬಾಲಕಿಗೆ, ತನ್ನ ಪೋಷಕರು, ಮಂಗಳೂರಿನ ಮನೆಯ ಬಳಿ ಸಮುದ್ರದ ಅಲೆಗಳ ಮೇಲಿನ ಆಟಕ್ಕೆ ಅವಕಾಶ ನೀಡಲಾರರು ಎನ್ನುವುದು ಖಚಿತವಾಗಿ ತಿಳಿದಿತ್ತು. ಇದಕ್ಕಾಗಿಯೇ ಈ ಪುಟ್ಟ ಬಾಲಕಿ ತನಗೆ ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸದಿಂದ ಅಜ್ಜಿಯ ಬಳಿ ವಿಷಯ ಪ್ರಸ್ತಾಪಿಸಿದಳು.
ಒಂದು ವಾರದ ಆರಂಭಿಕ ಸರ್ಫ್ ಪಾಠದಿಂದ ಆಕೆಯ ಬದುಕು ಮಹತ್ವದ ಬದಲಾವಣೆ ಕಂಡಿತು. ಒಂದು ಲಾಭವೆಂದರೆ, ಅಸ್ತಮಾ ಹೇಳಹೆಸರಿಲ್ಲದಂತೆ ಮಾಯವಾಯಿತು. ಇನ್ನೊಂದು ಸಮುದ್ರ ಆಕೆಯ ಆಟದ ಮೈದಾನವಾಯಿತು. ‘‘ಮೊದಲ ಬಾರಿ ನೀರಿಗೆ ಇಳಿದಾಗ ಮುಳುಗುತ್ತೇನೆ ಎಂಬ ಹೆದರಿಕೆಯಾಗಲಿಲ್ಲವೇ?’’ ಎಂದು ಟೆಲಿಫೋನ್ ಸಂದರ್ಶನದಲ್ಲಿ ತನ್ವಿಗೆ ಕೇಳಿದೆ. ‘‘ಇಲ್ಲ ನನಗೆ ಎಂದೂ ಭಯವಾಗಲಿಲ್ಲ. ನನಗೆ ಸಮುದ್ರದ ಹುಚ್ಚು. ನೀರಲ್ಲೇ ಇರುವುದನ್ನು ಇಷ್ಟಪಡುತ್ತೇನೆ. ಆದ್ದರಿಂದ ಅದನ್ನು ಯೋಚಿಸಲೂ ಇಲ್ಲ’’ ಎಂದು 17 ವರ್ಷದ ಬಾಲಕಿ ಉತ್ಸಾಹದಿಂದ ನುಡಿದಳು. ಆಗಷ್ಟೇ ತೀವ್ರ ಸರ್ಫ್ ಅಭ್ಯಾಸ ಮಾಡಿದ್ದ ಆಕೆ ಸಂಜೆಯ ದೈಹಿಕ ತರಬೇತಿಗೆ ಸಜ್ಜಾಗುತ್ತಿದ್ದಳು.
ನೀರ ಮೇಲಿನ ಆಟ
ಪಕ್ಕದಲ್ಲೇ ಇದ್ದ ದೇಶದ ಮೊಟ್ಟಮೊದಲ ಸರ್ಫಿಂಗ್ ಶಾಲೆಗಳಲ್ಲೊಂದಾದ ‘ಮಂತ್ರ ಸರ್ಫ್ ಕ್ಲಬ್’ನಲ್ಲಿ ತನ್ವಿ ಈಜು ಹಾಗೂ ಸರ್ಫಿಂಗ್ ಕಲಿಕೆ ಆರಂಭಿಸಿದಳು. ಆಕೆ ಈ ಮೂಲಕ ನೀರ ಮೇಲಿನ ಆಟ ಆರಂಭಿಸಿದರು. ಆದರೆ ಸಮುದ್ರ ಆಕೆಗೆ ಕೇವಲ ಅಷ್ಟನ್ನೇ ನೀಡಲಿಲ್ಲ. ತನ್ವಿ 12 ವರ್ಷದವಳಿದ್ದಾಗ, ಮಂತ್ರಕ್ಕೆ ಅತಿಥಿಯಾಗಿ ಆಗಮಿಸಿದ್ದ ಅರ್ಪಿ ಎಂಬವರು ಆಕೆಗೆ ಸ್ಟ್ಯಾಂಡಪ್ ಪೆಡಲಿಂಗ್ ಪರಿಚಯಿಸಿದರು. ಅಂದರೆ ನೀರಿನ ಪಯಣಕ್ಕೆ ನೀವು ಆ ದೊಡ್ಡ ಬೋರ್ಡ್ ಮೇಲೆ ನಿಲ್ಲಬೇಕು. ನಿಂತುಕೊಂಡು ಪೆಡಲ್ ಮಾಡುತ್ತಾ ಮುಂದುವರಿಯಬೇಕು.
‘‘ಅಂತದ್ದನ್ನು ನಾನು ಆ ಮೊದಲು ನೋಡಿರಲೇ ಇಲ್ಲ. ಮಂತ್ರದಲ್ಲಿ ಇಂಥ ಬೋರ್ಡ್‌ಗಳು ಇದ್ದರೂ ನಾವು ಪ್ರಯತ್ನ ಮಾಡಿರಲಿಲ್ಲ. ಅದನ್ನು ನೋಡಿದ ಬಳಿಕ ಅದನ್ನೂ ಕಲಿಯುವ ಮನಸ್ಸಾಯಿತು. ಆ ಕ್ಷಣ ತನ್ವಿಯನ್ನು ಹೊಸ ಲೋಕಕ್ಕೆ ಕರೆದೊಯ್ದದ್ದು ಮಾತ್ರವಲ್ಲದೇ ಅದರಲ್ಲೇ ಈಗ ಆಕೆ ವೃತ್ತಿಜೀವನ ಕಂಡುಕೊಂಡಿದ್ದಾಳೆ. ಇದೀಗ ತನ್ವಿ ದೇಶದ ಮೊಟ್ಟಮೊದಲ ವೃತ್ತಿಪರ ಎಸ್‌ಯುಪಿ ರೇಸರ್. ತನ್ವಿ ರಾಷ್ಟ್ರೀಯ ಎಸ್‌ಯುಪಿ ರೇಸಿಂಗ್ ಚಾಂಪಿಯನ್ ಕೂಡಾ. ಅಂತಾರಾಷ್ಟ್ರೀಯ ಎಸ್‌ಯುಪಿ ರೇಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆಯೂ ಆಕೆಯದ್ದು.
ಭಾರತದಲ್ಲಿ ಸರ್ಫಿಂಗ್ ಇನ್ನೂ ಹೊಸ ಕ್ರೀಡೆ. ದೇಶದ ಬಿಸಿ ನೀರು ಹಾಗೂ ಸಹಜವಾದ ಸರ್ಫ್ ತಾಣಗಳು, ಹೊಸಬರಿಗೆ ತಮ್ಮ ಹೆಜ್ಜೆಯೂರಲು ಹಾಗೂ ವೃತ್ತಿಪರರಿಗೆ ತಮ್ಮ ಕೌಶಲ ಪರೀಕ್ಷೆಗೆ ಅವಕಾಶ ಮಾಡಿಕೊಡುತ್ತವೆ. ಗೋವಾ, ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಳೆದೊಂದು ದಶಕದಿಂದ ಸರ್ಫಿಂಗ್ ಶಾಲೆಗಳಿವೆ. ಆದರೆ ಜನರು ಮಾತ್ರ ಸರ್ಫಿಂಗ್ ಕ್ರೀಡೆಯನ್ನು ತಮ್ಮ ರಿವರ್ ರ್ಯಾಫ್ಟಿಂಗ್ ಅಥವಾ ಸ್ಕೂಬಾ ಡೈವಿಂಗ್‌ನಂಥ ಸಾಹಸ ಕ್ರೀಡೆಯಂತೆ ಜೀವನಶೈಲಿಯಾಗಿ ಪರಿಗಣಿಸಿರುವುದು ಇತ್ತೀಚೆಗೆ.
ಆದಾಗ್ಯೂ ಸರ್ಫಿಂಗ್‌ಗೆ ಹೋಲಿಸಿದರೆ, ಎಸ್‌ಯುಪಿ ಅಪರಿಚಿತ ಕ್ರೀಡೆ. ಆದರೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮ್‌ಮೋಹನ್ ಪರಾಂಜಪೆ ಅವರು ಈ ಕ್ರೀಡೆಯ ಭವಿಷ್ಯದ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ಸರ್ಫಿಂಗ್‌ನಂತೆ ಇದು ಕೂಡಾ ಜನಪ್ರಿಯವಾಗಲು ಕೆಲ ಸಮಯ ತೆಗೆೆದುಕೊಳ್ಳಬಹುದು. ಆದರೆ ಇದರಲ್ಲಿ ವಿಪುಲ ಅವಕಾಶಗಳಿವೆ. ಇದನ್ನು ಯಾರು ಬೇಕಾದರೂ, ಯಾವುದೇ ಜಲರಾಶಿಯಲ್ಲೂ ಕೈಗೊಳ್ಳಬಹುದಾಗಿದೆ.
ಸರ್ಫ್ ಶಾಲೆಗಳು ಸಾಮಾನ್ಯವಾಗಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುತ್ತವೆ. ದೇಶದ ವಿವಿಧೆಡೆಗಳಿಂದ ಉತ್ಸಾಹಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಎಸ್‌ಯುಪಿ ರೇಸ್‌ಗೆ ಸಂಘಟಕರು ನೀರಿನಲ್ಲಿ ಟ್ರ್ಯಾಕ್‌ಗಳನ್ನು ಹೋಲುವ ಕೋರ್ಸ್‌ಗಳನ್ನು ನಿರ್ಮಿಸುತ್ತಾರೆ. ಇದು ತೀವ್ರ ತಿರುವು ಹಾಗೂ ಸವಾಲಿನ ದಾರಿಯನ್ನು ಒಳಗೊಂಡಿರುತ್ತದೆ. ಆಯಾ ಹಂತದ ಸ್ಪರ್ಧೆಗಳಿಗೆ ಅನುಗುಣವಾಗಿ 1ರಿಂದ 18 ಕಿಲೋಮೀಟರ್ ವರೆಗಿನ ಅಂತರದ ಕೋರ್ಸ್ ಅನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪೂರ್ತಿ ಮಾಡಬೇಕಾಗುತ್ತದೆ. ಈ ಮಾರ್ಗದಲ್ಲಿ ತೆರೆಗಳು, ಪ್ರವಾಹ, ಗಾಳಿ ಹಾಗೂ ಸೂರ್ಯನ ಶಾಖ ಸವಾಲಾಗುತ್ತದೆ.
ಇಂತಹ ಸ್ಪರ್ಧೆಗಳಲ್ಲಿ ತನ್ವಿ ತನ್ನ ಕೌಶಲ ಪ್ರದರ್ಶಿಸಿ, ಭಾರತದ ಸರ್ಫಿಂಗ್ ಹಾಗೂ ಎಸ್‌ಯುಪಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಮೊಟ್ಟಮೊದಲ ಎಸ್‌ಯುಪಿ ಸ್ಪರ್ಧೆಯಲ್ಲೇ ಅಗ್ರಸ್ಥಾನ ಗಳಿಸಿದ ಹೆಗ್ಗಳಿಕೆ ಆಕೆಯದ್ದು. 2015ರಲ್ಲಿ ಕೊವೆಲಾಂಗ್ ಪಾಯಿಂಟ್ ಸರ್ಫ್ ಕ್ಲಾಸಿಕ್‌ನಲ್ಲಿ ಈ ಸಾಧನೆ ಮಾಡಿದ ಅವರು, ಮುಂದೆ ಮನಪದ್ ಕ್ಲಾಸಿಕ್ ಸರ್ಫ್ ಹಾಗೂ ಸೈಲ್ ಫೆಸ್ಟಿವಲ್ ಮತ್ತು 2016ರಲ್ಲಿ ನಡೆದ ಇಂಡಿಯಾ ಓಪನ್ ಆಫ್ ಸರ್ಫಿಂಗ್ ಫೆಸ್ಟ್‌ನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ವಾಟರ್ ಚಾಂಪಿಯನ್
ಈ ಸ್ಪರ್ಧೆಗಳಿಗೆ ತಯಾರಿ ಅತ್ಯಂತ ಕಠಿಣ ಶ್ರಮವನ್ನು ಬಯಸುತ್ತದೆ. ತನ್ವಿ ಹಾಗೂ ಮಂತ್ರದ ಅವರ ತಂಡ ಇಂಥ ಸ್ಪರ್ಧೆಗಳಿಗಾಗಿ ಉಸಿರಾಟ, ಸಹಿಷ್ಣುತೆ, ಸ್ಪ್ರಿಂಟ್ ಹಾಗೂ ಬಲ ಹೀಗೆ ವಿವಿಧ ಮಜಲುಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ‘‘ಸಾಮಾನ್ಯವಾಗಿ ನಾನು ಎಸ್‌ಯುಪಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಸ್ಪರ್ಧೆಗೆ ಮುನ್ನ ವೀಕ್ಷಿಸುತ್ತೇನೆ. ಅದರಿಂದ ಕೆಲ ತಂತ್ರಗಳನ್ನು ಕಲಿಯುತ್ತೇನೆ’’ ಎಂದು ತನ್ವಿ ಹೇಳುತ್ತಾರೆ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸಲು ನೆರವಾಗುವಂತೆ ಮಂತ್ರ ಸಿಬ್ಬಂದಿ ಅವರಿಗಾಗಿ ಪ್ರಾಯೋಜಕತ್ವ ಹುಡುಕುತ್ತದೆ.
2016ರಲ್ಲಿ ತನ್ವಿ ಅಂತಾರಾಷ್ಟ್ರೀಯವಾಗಿ ಎಸ್‌ಯುಪಿ ರೇಸ್‌ನಲ್ಲಿ ಸ್ಪರ್ಧಿಸಲು ಆರಂಭಿಸಿದರು. ಅಮೆರಿಕದಲ್ಲಿ ನಡೆದ ವೆಸ್ಟ್ ಮೆರೈನ್ ಕರೋಲಿನಾ ಕ್ಲಬ್ ಸ್ಟಾಂಡಪ್ ಪೆಡಲ್ ಬೋರ್ಡ್ ರೇಸ್‌ನಲ್ಲಿ ಮೂರನೆ ಸ್ಥಾನ ಪಡೆದರು. ವಿಶ್ವ ಎಸ್‌ಯುಪಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದರ ಜತೆಗೆ ಫ್ಯೂಜಿಯಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಶನ್ ನಡೆಸಿದ ಪೆಡಲ್‌ಬೋರ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ 26 ದೇಶಗಳ ಅಥ್ಲೀಟ್‌ಗಳು ಎಸ್‌ಯುಪಿ ದೂರದ ಓಟ (18 ಕಿಲೋಮೀಟರ್) ಹಾಗೂ ಎಸ್‌ಯುಪಿ ತಾಂತ್ರಿಕ ಓಟ (3 ಕಿಲೋಮೀಟರ್) ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
‘‘ಫ್ಯೂಜಿಯಲ್ಲಿ ಸುಡುಬಿಸಿಲು ಹಾಗೂ ಪ್ರಬಲ ಸೆಳೆತದಲ್ಲಿ 18 ಕಿಲೋಮೀಟರ್ ರೇಸ್ ಇತ್ತು. ಇಲ್ಲಿ ಯಾವ ನಿರೀಕ್ಷೆ ಇಟ್ಟುಕೊಳ್ಳಬೇಕು ಎಂದು ತಿಳಿಯದಾಗಿತ್ತು. ನನ್ನ ಪ್ರತಿಸ್ಪರ್ಧಿ ಗಳು ರೋಬೋಟ್‌ನಂತಿದ್ದರು. ಅವರು ಅಷ್ಟು ಶಕ್ತಿಶಾಲಿಗಳು’’ ಎಂದು ವಿಶ್ವದ ಅತ್ಯುತ್ತಮ ಎಸ್‌ಯುಪಿ ರೇಸರ್‌ಗಳ ಜತೆ ಸ್ಪರ್ಧಿಸಿದ ಅನುಭವ ಹಂಚಿಕೊಂಡರು. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸಲು ಮತ್ತಷ್ಟು ಕಲಿಯಬೇಕಿದೆ ಎನ್ನುವುದನ್ನು ಆಕೆ ಇದರಿಂದ ಅರ್ಥ ಮಾಡಿಕೊಂಡರು.
ತನ್ವಿಯ ಮುಂದೆ ತಕ್ಷಣಕ್ಕೆ ಇರುವುದು ಮಂಗಳೂರಿನಲ್ಲಿ ಮೇ 26ರಿಂದ ಆರಂಭವಾಗುವ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಮತ್ತು 2017ರ ಐಎಸ್‌ಎ ವಿಶ್ವ ಎಸ್‌ಯುಪಿ ಮತ್ತು ಪೆಡಲ್‌ಬೋರ್ಡ್ ಚಾಂಪಿಯನ್‌ಶಿಪ್. ಇದು ಮುಂದಿನ ಸೆಪ್ಟಂಬರ್‌ನಲ್ಲಿ ಡೆನ್ಮಾರ್ಕ್‌ನಲ್ಲಿ ನಡೆಯಲಿದೆ. ಆಕೆಯ ಮುಂದಿನ ಹಾದಿ ಕಠಿಣ. ಆದರೆ ಸವಾಲು ಸ್ವೀಕರಿಸಲು ಸದಾ ಆಕೆ ಸಜ್ಜಾಗಿದ್ದಾರೆ. ಪೋಷಕರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಆಕೆಗೆ ಹಣಕಾಸು ನೆರವು ನೀಡುವ ಹೊಸ ಪ್ರಾಯೋಜಕರನ್ನೂ ಪಡೆದಿದ್ದಾರೆ. ಅತ್ಯಾಧುನಿಕ ಸಾಧನಗಳು ಹಾಗೂ ಪ್ರವೃತ್ತಿಗಳ ಬಗ್ಗೆ ಆಕೆಗೆ ಒಲವು ಇಲ್ಲ. ‘‘ಸಮುದ್ರದ ಜತೆಗೇ ಸಂಪರ್ಕ ಹೊಂದಿರುವಾಗ ಅದೆಲ್ಲ ಯಾರಿಗೆ ಬೇಕು?’’ ಎಂದು ಮಾರ್ಮಿಕವಾಗಿ ಕೇಳುತ್ತಾರೆ.
ಕೃಪೆ: scroll.in







