‘‘ಕೊಲ್ಲಿರಿ... ಭಡ್ತಿ ಪಡೆಯಿರಿ’’
ಸಿಆರ್‌ಪಿಎಫ್ ಮಹಾ ನಿರೀಕ್ಷಕರ ಕಟುಸತ್ಯಗಳು

ಎನ್‌ಕೌಂಟರ್‌ಗಳು ಪ್ರಶಸ್ತಿ ಹಾಗೂ ಪದಕಗಳನ್ನು ಪಡೆಯಲು ಮತ್ತು ಇತರ ಪ್ರಯೋಜನ ಗಳಿಸಲು ಯೋಜಿಸುವ ವ್ಯವಸ್ಥಿತ ಪಿತೂರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಸೇನೆಯಲ್ಲಿ, ಘಟಕದ ಪ್ರಶಸ್ತಿಗಳು ಅಂಕಗಳ ಆಧರಿತವಾಗಿವೆ. ಉಗ್ರರನ್ನು ಹತ್ಯೆ ಮಾಡುವ ಮೂಲಕ ಅಥವಾ ಬಂಧಿಸುವ ಮೂಲಕ ಇದನ್ನು ಗಳಿಸಬಹುದು. ಅಥವಾ ನುಸುಳುವಿಕೆ ತಡೆ ಪ್ರದೇಶಗಳಲ್ಲಿ ಉಗ್ರರ ಶರಣಾಗತಿಯ ಆಧಾರದಲ್ಲೂ ಅಂಕಗಳು ಸಿಗುತ್ತವೆ.
ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಸದಾ ಗಿಜಿಗುಡುವ ಗುವಾಹತಿ ನಗರದಿಂದ ಅನತಿ ದೂರದಲ್ಲಿರುವ ಭೈಹತಾ ಚರಿಯಾಲಿ ವ್ಯವಸ್ಥಿತ ಎನ್‌ಕೌಂಟರ್‌ಗಳ ಸಂತ್ರಸ್ತರನ್ನು ವಿನಿಮಯ ಮಾಡಿಕೊಳ್ಳುವ ಕುಖ್ಯಾತ ತಾಣ. ಇಲ್ಲಿ ಕಾರ್ಯಾಚರಣೆ ಹೇಗೆ ನಡೆಯುತ್ತದೆ ಎನ್ನುವುದನ್ನು ಇದರ ಜತೆ ಹಾಸುಹೊಕ್ಕಾಗಿರುವವರು ವಿವರಿಸುತ್ತಾರೆ:
ಬಿಳಿ ಮಾರುತಿ ವ್ಯಾನ್ ಬಂದು ಪೆಟ್ರೋಲ್ ಬಂಕ್ ಬಳಿ ನಿಲ್ಲುತ್ತದೆ. ಪೊಲೀಸರು ದೂರದಲ್ಲೇ ನಿಂತು ಇದನ್ನು ಗಮನಿಸುತ್ತಾರೆ. ಎರಡನೆ ವಾಹನ ಆಗಲೇ ಅಲ್ಲಿರುತ್ತದೆ. ಅದು ಪರಿಚಿತ ವ್ಯಕ್ತಿಗಳ, ನಂಬರ್‌ಪ್ಲೇಟ್ ಬದಲಿಸಿದ ಕಾರು. ಅದು ಕೆಲವೊಮ್ಮೆ ಅಧಿಕಾರಿಯ ವೈಯಕ್ತಿಕ ವಾಹನವೂ ಆಗಿರುತ್ತದೆ. ಆದರೆ ಮೊದಲೇ ಸಿದ್ಧಪಡಿಸಿದ ನಕಲಿ ನಂಬರ್‌ಪ್ಲೇಟ್ ಹೊಂದಿರುತ್ತದೆ.
ಇಂತಹ ಸಂತ್ರಸ್ತರ ವಿನಿಮಯಕ್ಕೆ ಮಾರುತಿ ವ್ಯಾನ್ ಬಳಕೆಯಾಗಲು ಮುಖ್ಯ ಕಾರಣವೆಂದರೆ ಅದರ ಬಾಗಿಲು ಪಕ್ಕಕ್ಕೆ ಸರಿಸಲು ಅವಕಾಶ ಇರುತ್ತದೆ. ಇದು ಪ್ರಯಾಣಿಕರ ವಿನಿಮಯಕ್ಕೆ ಸುಲಭವಾಗುತ್ತದೆ.
ನಿದ್ರಾವಸ್ಥೆಯಲ್ಲಿರುವ ಸಂತ್ರಸ್ತನನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಲಾಗುತ್ತದೆ. ಹಣ ಕೂಡಾ ಕೈ ಬದಲಿಸುತ್ತದೆ. ತಕ್ಷಣ ಆತನನ್ನು ಸೇನಾ ಘಟಕಕ್ಕೆ ಒಯ್ಯಲಾಗುತ್ತದೆ. ವೈದ್ಯರು ಆತನನ್ನು ತಪಾಸಣೆ ಮಾಡಿ, ಕೆಲ ದಿನಗಳವರೆಗೆ ಅವರ ಸುಪರ್ದಿಯಲ್ಲಿ ಇಟ್ಟುಕೊಳ್ಳುತ್ತಾರೆ. ಈ ಮಧ್ಯೆ ಯಾರಾದರೂ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸುತ್ತಾರೆಯೇ ಎಂದು ಕಾಯಲಾಗುತ್ತದೆ.
ಈ ಭಾಗದಲ್ಲಿ ಕಾರ್ಯ ನಿರ್ವಹಿಸುವ ಭದ್ರತಾ ಪಡೆಗಳು ಸಾಮಾನ್ಯವಾಗಿ ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತವೆ. ಸಾಮಾನ್ಯವಾಗಿ ಸಂತ್ರಸ್ತ ಉಗ್ರಗಾಮಿಯಾಗಿರುತ್ತಾನೆ ಅಥವಾ ಸಣ್ಣ ಪುಟ್ಟ ಕಳ್ಳತನ ಮಾಡುವ ವ್ಯಕ್ತಿಯಾಗಿರುತ್ತಾನೆ; ಕೆಲವೊಮ್ಮೆ ಅಂತಾರಾಷ್ಟ್ರೀಯ ಗಡಿ ದಾಟಿ ಬರುವ ಅಕ್ರಮ ವಲಸಿಗನೂ ಆಗಿರುತ್ತಾನೆ. ಪೊಲೀಸರು ಆತನ ಪೂರ್ವಾಪರಗಳನ್ನು ಖಚಿತಪಡಿಸುತ್ತಾರೆ. ಸ್ಥಳ ಹಾಗೂ ಸಮಯವನ್ನು ಸೇನಾ ಘಟಕ ನಿರ್ಧರಿಸುತ್ತದೆ. ಬಳಿಕ ಸಂತ್ರಸ್ತನನ್ನು ಹತ್ಯೆ ಮಾಡಲಾಗುತ್ತದೆ.
ಹಲವು ವರ್ಷಗಳಿಂದ ಬ್ರಹ್ಮಪುತ್ರಾ ಉತ್ತರ ದಂಡೆಯ ಅಂದರೆ ಅಸ್ಸಾಂನ ಕೆಳ ಭಾಗದ ಜಿಲ್ಲೆಗಳ ಅಂದರೆ ಒಂದು ಕಡೆ ಭೂತಾನ್ ಹಾಗೂ ಮತ್ತೊಂದು ಕಡೆ ಬಾಂಗ್ಲಾದೇಶವನ್ನು ಗಡಿಯಾಗಿ ಹೊಂದಿರುವ ಪ್ರದೇಶ, ಗಡಿದಾಟಲು ಅತ್ಯಂತ ಸುಲಭ ಹಾಗೂ ಸುರಕ್ಷಿತ ಮಾರ್ಗ ಎಂದು ಪರಿಗಣಿತವಾಗಿದೆ. ಸಶಸ್ತ್ರ ಗುಂಪುಗಳ ಪ್ರಸರಣ ಮತ್ತು ಶಸ್ತ್ರಾಸ್ತ್ರಗಳ ಇರುವಿಕೆ, ನುಸುಳುವಿಕೆ ತಡೆ ಕಾರ್ಯಾಚರಣೆಯಲ್ಲಿ ಒಳಗೊಂಡಿರುವವರು ಸುಲಭವಾಗಿ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅರಾಜಕತೆ ಇಂಥ ನಕಲಿ ಎನ್‌ಕೌಂಟರ್‌ಗಳಿಗೆ ಮುಸುಕಿನ ಸುರಕ್ಷೆ ನೀಡುತ್ತದೆ.
ಈ ಸ್ಥಳದಲ್ಲೇ ಸಿಆರ್‌ಪಿಎಫ್, ಸೇನೆ, ಸಶಸ್ತ್ರ ಸೀಮಾ ಬಲ ಹಾಗೂ ಅಸ್ಸಾಂ ಪೊಲೀಸ್ ಪಡೆಯ ಜಂಟಿ ತಂಡ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಸೋಂಗ್‌ಬಿಜಿತ್) ಬಣದ ಇಬ್ಬರು ಉಗ್ರರನ್ನು ಪೂರ್ವಯೋಜಿತ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಹಾ ನಿರೀಕ್ಷಕ (ವಾಯವ್ಯ ವಿಭಾಗ)ರಾದ ರಜನೀಶ್ ರಾಯ್ ಅವರು ಆಪಾದಿಸಿದ್ದಾರೆ. ಅವರನ್ನು ಹತ್ಯೆ ಮಾಡಿದ ಬಳಿಕ ಶವಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಹೂಳಲಾಗಿದೆ ಎನ್ನುವುದು ಅವರ ಪ್ರತಿಪಾದನೆ.
ರಾಯ್ ಅವರ ಪ್ರತಿಪಾದನೆ ಅಲ್ಲಗಳೆಯುವಂಥದ್ದಲ್ಲ. ಏಕೆಂದರೆ ಅಸ್ಸಾಂನಲ್ಲಿ ಇದೇ ಬಗೆಯ ಎನ್‌ಕೌಂಟರ್ ಸಾವುಗಳು ಮುಂದುವರಿದಿವೆ.
ಹಲವು ಬಗೆಯ ಎನ್‌ಕೌಂಟರ್‌ಗಳು ಇಲ್ಲಿ ನಡೆಯುತ್ತವೆ. ಒಂದು ಬಗೆಯ ಎನ್‌ಕೌಂಟರ್‌ಗಳೆಂದರೆ, ಭದ್ರತಾ ಪಡೆಗಳು ಕ್ಷೇತ್ರದಿಂದ ಹೊರಹೋದಾಗ ನಡೆಯುತ್ತವೆ. ಅವರ ಕಡೆಗೆ ಗುಂಡುಹಾರಿಸಿದಾಗ, ಅವರು ಪ್ರತಿಯಾಗಿ ಗುಂಡುಹಾರಿಸುತ್ತಾರೆ. ‘ನಕಲಿ ಎನ್‌ಕೌಂಟರ್’ಗಳು ಎಂದರೆ, ನಿಜವಾದ ಉಗ್ರನನ್ನು ಹತ್ಯೆ ಮಾಡುವುದು. ಆದರೆ ಅದು ವಾಸ್ತವ ಎನ್‌ಕೌಂಟರ್ ಆಗಿರುವುದಿಲ್ಲ. ಮೂರನೆ ವರ್ಗದ ಎನ್‌ಕೌಂಟರ್ ಎಂದರೆ ಬಹುತೇಕ ಮಂದಿ ಹೇಳುವಂತೆ, ಸುಳ್ಳು ಎನ್‌ಕೌಂಟರ್ ಅಥವಾ ಪೂರ್ವಯೋಜಿತ ಎನ್‌ಕೌಂಟರ್. ಅಂದರೆ ಅಮಾಯಕರನ್ನು ಸಾರಾಸಗಟಾಗಿ ಕೊಲ್ಲುವುದು.
ಮೇಲಧಿಕಾರಿಗಳ ಒತ್ತಡ
ಸೇನಾ ಘಟಕದ ಅಥವಾ ಅರೆಸೇನಾ ಪಡೆಯ ಕೆಲಸವೆಂದರೆ, ಹಿಡಿಯುವುದು ಅಥವಾ ಕೊಲ್ಲುವುದು. ಇದು ಶಾಂತ ಅಥವಾ ಸಾಮರಸ್ಯದ ವಾತಾವರಣಕ್ಕೆ ಎಂದೂ ನೆರವಾಗುವುದಿಲ್ಲ. ಅವರು ಹತ್ಯೆಗಾಗಿಯೇ ಇರುವವರು. ಅದನ್ನು ಮಾಡಲು ಅವರು ವಿಫಲರಾದಾಗ, ಅವರನ್ನು ಪ್ರಶ್ನಿಸಲಾಗುತ್ತದೆ. ಜತೆಗೆ ತಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗುತ್ತದೆ; ಶಸ್ತ್ರಾಸ್ತ್ರ ವಶಪಡಿಸಿಕೊಂಡದ್ದನ್ನು ಕೂಡಾ ಹಾಜರುಪಡಿಸಬೇಕಾಗುತ್ತದೆ. ಪರಿಸ್ಥಿತಿಯ ಕಾರಣದಿಂದಲೇ ವ್ಯವಸ್ಥಿತ ಅಥವಾ ಪೂರ್ವಯೋಜಿತ ಎನ್‌ಕೌಂಟರ್‌ಗಳು ಸುಸ್ಥಿರವಾಗಿ ಮುಂದುವರಿಯುತ್ತಿವೆ.
ಮೇಲಧಿಕಾರಿಗಳ ಒತ್ತಡ ತಡೆಯಲಾರದೆ, ಈ ಏಜೆನ್ಸಿಗಳು ಪೊಲೀಸರ ನೆರವಿನೊಂದಿಗೆ ಉಗ್ರರನ್ನು ಸೃಷ್ಟಿಸುತ್ತವೆ. ಹೀಗೆ ಹತ್ಯೆಯಾಗುವ ಎಲ್ಲರೂ ಸಂಪೂರ್ಣ ಅಮಾಯಕರು ಅಲ್ಲದಿರಬಹುದು. ಆದರೆ ಇದು ಹತ್ಯೆ ಎನ್ನುವುದು ನಿರ್ವಿವಾದ.
ಈ ಪ್ರಕ್ರಿಯೆಯಲ್ಲಿ ಪೊಲೀಸರು ಕೂಡಾ ಅಪರಾಧಿಗಳನ್ನು ಮುಗಿಸಲು ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಇದರಿಂದ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ. ಬಹುತೇಕ ಅಪರಾಧಿಗಳನ್ನು ನಿರ್ಮೂಲನೆ ಮಾಡಲಾಗಿದೆ. ಇದರಲ್ಲಿ ಕೆಲ ಅಂಶಗಳ ದುರುದ್ದೇಶವೂ ಇರುತ್ತದೆ. ವೈಯಕ್ತಿಕ ಲೆಕ್ಕವನ್ನೂ ಚುಕ್ತಾ ಮಾಡಿಕೊಳ್ಳಲಾಗುತ್ತದೆ. ಪೊಲೀಸರು ಮತ್ತು ಸೇನೆಯ ಮೇಲೆ ಹೆಚ್ಚಿನ ಒತ್ತಡಗಳು ಬಂದಾಗ, ಗಡಿ ಬೇಲಿಯನ್ನು ಹಾರಿ ಬರುವ ಬಡ ಬಾಂಗ್ಲಾದೇಶಿಗರು, ಗುರುತು ಪರಿಚಯ ಇಲ್ಲದವರು ಸಂತ್ರಸ್ತರಾಗುತ್ತಾರೆ. ಹೀಗೆ ದುಷ್ಟಕೂಟ ಬೆಳೆಯುತ್ತದೆ.
ಇದಕ್ಕೆ ಕೆಲವರು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಪರಿಣಾಮವಾಗಿ, ಅವರು ಹಿಂಭಡ್ತಿ ಪಡೆಯಬೇಕಾಗುತ್ತದೆ.
ಪ್ರಶಸ್ತಿ- ಪದಕ
ಎನ್‌ಕೌಂಟರ್‌ಗಳು ಪ್ರಶಸ್ತಿ ಹಾಗೂ ಪದಕಗಳನ್ನು ಪಡೆಯಲು ಮತ್ತು ಇತರ ಪ್ರಯೋಜನ ಗಳಿಸಲು ಯೋಜಿಸುವ ವ್ಯವಸ್ಥಿತ ಪಿತೂರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಸೇನೆಯಲ್ಲಿ, ಘಟಕದ ಪ್ರಶಸ್ತಿಗಳು ಅಂಕಗಳ ಆಧರಿತವಾಗಿವೆ. ಉಗ್ರರನ್ನು ಹತ್ಯೆ ಮಾಡುವ ಮೂಲಕ ಅಥವಾ ಬಂಧಿಸುವ ಮೂಲಕ ಇದನ್ನು ಗಳಿಸಬಹುದು. ಅಥವಾ ನುಸುಳುವಿಕೆ ತಡೆ ಪ್ರದೇಶಗಳಲ್ಲಿ ಉಗ್ರರ ಶರಣಾಗತಿಯ ಆಧಾರದಲ್ಲೂ ಅಂಕಗಳು ಸಿಗುತ್ತವೆ. ಆದ್ದರಿಂದ ಇಂಥ ಪುರಸ್ಕಾರ ಪಡೆದ ಘಟಕಗಳು ವಿಶ್ವಸಂಸ್ಥೆಯ ಮಿಷನ್‌ಗೆ ಆಯ್ಕೆಯಾಗುತ್ತವೆ. ಇದು ಹೆಚ್ಚು ಹಣ ಪಡೆಯಲು ಮತ್ತು ಇತರ ಸೌಲಭ್ಯಗಳನ್ನು ಬಾಚಿಕೊಳ್ಳಲು ನೆರವಾಗುತ್ತವೆ.
ಇದು ಇವರು ಮಾಡಿರುವ ‘ಒಳ್ಳೆಯ ಕೆಲಸ’ಕ್ಕೆ ಸರಕಾರದಿಂದ ಬರುವ ಬೋನಸ್. ಇದರಲ್ಲಿ ನ್ಯಾಯಬಾಹಿರ ಹತ್ಯೆಗಳು, ಸಾಮಾನ್ಯ ಯುವಕ- ಯುವತಿಯರ ನಕಲಿ ಶರಣಾಗತಿಗೆ ವೇದಿಕೆ ಸಿದ್ಧಪಡಿಸುವುದು ಸೇರುತ್ತದೆ.
ಅದು ಕಾರ್ಯನಿರ್ವಹಿಸುವ ವಿಧಾನ ಹೀಗೆ: ಸಂಘರ್ಷ ಪ್ರದೇಶದಲ್ಲಿ ಇಂಥ ಉಗ್ರ ಸಂಘಟನೆಗಳು ಹುಟ್ಟಿಕೊಳ್ಳುವುದನ್ನು ತಡೆಯಲು ವಾಸ್ತವವಾಗಿ ಕಠಿಣ ಪರಿಶ್ರಮ ಬೇಕಾಗುತ್ತದೆ. ಅಲ್ಲಿಗೆ ನಿಯೋಜಿತವಾಗುವ ಸೇನಾ ಘಟಕಕ್ಕೆ ವಿಶೇಷ ವೃತ್ತಿಪರ ಕೌಶಲಗಳು ಬೇಕಾಗುತ್ತವೆ. ಆದರೆ ಇಲ್ಲಿ ಸುಲಭವಾಗಿ ಹತ್ಯೆಯ ಮೂಲಕ ಅದು ಸಿಗುತ್ತದೆ. ಆದ್ದರಿಂದಲೇ ಪ್ರತೀ ಹತ್ಯೆಯೊಂದಿಗೆ ಮತ್ತು ವ್ಯಕ್ತಿಗಳ ಶರಣಾಗತಿಯೊಂದಿಗೆ ಲಾಭಗಳನ್ನು ಪಡೆಯುತ್ತಾ ಹೋಗುತ್ತಾರೆ.
ಇಂತಹ ಪ್ರದೇಶಗಳಲ್ಲಿ ಸಹಜವಾಗಿಯೇ ಕಾನೂನುಬಾಹಿರ ಶಸ್ತ್ರಾಸ್ತ್ರ ಮಾರಾಟಗಾರರು ಬೆಳೆಯುತ್ತಾರೆ. ಏಕೆಂದರೆ, ಭದ್ರತಾ ಪಡೆಗಳೇ ಉಗ್ರರಿಂದ, ನಕಲಿ ಎನ್‌ಕೌಂಟರ್‌ಗಳಿಂದ ಅಥವಾ ಶರಣಾಗತರಾದವರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಎಂದು ತೋರಿಸುವ ಸಲುವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತವೆ. ಹೀಗೆ ಶರಣಾದ ಉಗ್ರರು ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳುವ ದೊಡ್ಡ ಸಮಾರಂಭಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಹಸ್ತಾಂತರಿಸುತ್ತಾರೆ. ಬಂಧಿತರಾದವರು ಮೂರು ತಿಂಗಳ ಜೈಲುವಾಸ ಅನುಭವಿಸುತ್ತಾರೆ. ಬಳಿಕ ಅವರು ಉಗ್ರರಾಗಿ ಮರುಬಳಕೆಯಾಗುತ್ತಾರೆ. ಇಲ್ಲವೇ ಇತರ ಸಶಸ್ತ್ರ ಸಂಘಟನೆಗಳ ಸಂಪರ್ಕ ವ್ಯಕ್ತಿಗಳಾಗಿ ಬಳಕೆಯಾಗುತ್ತಾರೆ. ಇವರನ್ನು ಹವ್ಯಾಸಿ ನಕಲಿ ಉಗ್ರರು ಎಂದು ಕರೆಯಬಹುದು. ಇವರು ಒಂದು ಬಗೆಯಲ್ಲಿ ಹಣ ಪಡೆದು ಬಂಧನಕ್ಕೆ ಒಳಗಾಗಲು ಇಚ್ಛಿಸುವ ಅಭ್ಯರ್ಥಿಗಳು. ಅವರು ಜೈಲಿನಲ್ಲಿದ್ದಷ್ಟು ಅವಧಿಗೆ ಅವರ ಕುಟುಂಬಗಳಿಗೆ ಪರಿಹಾರ ಧನ ಸಿಗುತ್ತದೆ. ಶರಣಾಗುವ ಕಾರ್ಯಾಚರಣೆಯನ್ನು ಸಾಮಾನ್ಯವಾಗಿ ಜಂಟಿ ಕಾರ್ಯಾಚರಣೆ ಎಂದು ದಾಖಲಿಸಲಾಗುತ್ತದೆ. ಇದರೊಂದಿಗೆ ಒಳ್ಳೆಯ ಕೆಲಸದ ಶಹಬಾಸ್‌ಗಿರಿಯಲ್ಲಿ ಅವರಿಗೂ ಪಾಲು ಸಿಗುತ್ತದೆ.
‘ಚಕ್ರ’ ಹೆಸರಿನಿಂದ ಕೊನೆಗೊಳ್ಳುವ ಬಗೆಬಗೆಯ ಶೌರ್ಯ ಪ್ರಶಸ್ತಿಗಳನ್ನು ನಿಗದಿತ ಅಂಕಗಳಿಗೆ ಅನುಗುಣವಾಗಿ ಪ್ರಶಸ್ತಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಒಬ್ಬ ಅಧಿಕಾರಿ ಹೇಗೆ ಚಕ್ರಗಳನ್ನು ಪಡೆಯಬಹುದು? ಜನರನ್ನು ಕೊಲ್ಲುವ ಮೂಲಕ. ಅಂಕ ಹೆಚ್ಚಿಸಿಕೊಳ್ಳಿ. ಭಡ್ತಿ ಪಡೆಯಿರಿ. ಇದರಲ್ಲಿ ಸಾಯುವುದು ಸತ್ಯ ಮಾತ್ರ.
ರಾಯ್ ಅವರು ಇತ್ತೀಚೆಗೆ ಬರೆದ ಪತ್ರದಿಂದ ಸರಕಾರಿ ಪ್ರಾಯೋಜಿತ ಹಿಂಸಾಚಾರದ ಸಾಂಸ್ಥಿಕ ಮಟ್ಟದಲ್ಲಿ ಯಾವ ಕಂಪನವೂ ಆಗಲಾರದು. ಇಂಥ ಗೊಂದಲಕಾರಿ ಹಿಂಸೆಯು ಅವರಿಗೆ ಇರುವ ವಿಶೇಷಾಧಿಕಾರ ವ್ಯವಸ್ಥೆಯ ಪರಿಣಾಮ ಹಾಗೂ ಇಂಥದ್ದನ್ನು ಬಯಲಿಗೆಳೆಯಲು ಮುಂದಾಗುವ ಅಧಿಕಾರಿ ಖಂಡಿತವಾಗಿಯೂ ಅದರ ಪರಿಣಾಮಗಳನ್ನು ಅರಿತಿರುತ್ತಾನೆ. ಇದು ತಮ್ಮ ವೃತ್ತಿ ಹಾಗೂ ಕಲ್ಯಾಣಕ್ಕೆ ಹಾನಿಕಾರಕ ಎನ್ನುವುದು ಸ್ಪಷ್ಟವಾಗಿ ತಿಳಿದಿರುತ್ತದೆ. ಖಂಡಿತವಾಗಿಯೂ ಇದು ಆತನಿಗೆ ‘ಚಕ್ರ’ ತಂದುಕೊಡುವುದಿಲ್ಲ.
ಕೃಪೆ: scroll.in