ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಆಗಲಿರುವ ಮುಸ್ಲಿಮರು!
ರಮಝಾನ್ ನನ್ನ ಅನುಭವ

ಟಿವಿಗಳ ಮೇಲೆ ಪರದೆ ಬೀಳುತ್ತದೆ. ಕುರ್‌ಆನ್, ನಮಾಝಿನ ಚಾಪೆ ಕೈಗೆಟುಕುವಲ್ಲಿಗೆ ಬರುತ್ತದೆ. ಸಿನೆಮಾ, ಜೂಜು, ದುಂದುವೆಚ್ಚ, ಅನಾಚಾರಗಳಲ್ಲಿ ಮುಳುಗಿದ್ದ ಯುವಕರು ಮಸೀದಿಗಳತ್ತ ಮುಖ ಮಾಡುತ್ತಾರೆ. ಗೆಳೆಯರ ಗುಂಪುಗಳ ನಡುವೆ ಆಕಸ್ಮಾತ್ ಯಾರಾದರೂ ಕೆಟ್ಟದ್ದು ಮಾತನಾಡಿದರೆ ‘‘ಹೇ ನೋಂಬಲ್ಲೆಲಾ’’ (ಉಪವಾಸವಲ್ಲವಾ) ಎಂದು ಎಚ್ಚರಿಸುತ್ತಾರೆ. ದಾನ ಧರ್ಮಗಳಲ್ಲಿ, ಇತರರನ್ನು ಸತ್ಕರಿಸುವುದರಲ್ಲಿ, ಹಂಚಿ ತಿನ್ನುವುದರಲ್ಲಿ ಅತೀವ ಶ್ರದ್ಧೆ ವಹಿಸುತ್ತಾರೆ. ಹಗಲು ರಾತ್ರಿ ಗಳು ನಮಾಝ್, ದೇವಸ್ಮರಣೆಗಳಿಗೆ ನಾಲಗೆ- ಹೃದಯವನ್ನು ಸಣ್ಣ ಸಣ್ಣ ಕೆಡುಕುಗಳಿಂದಲೂ ಜಾಗ್ರತೆ ವಹಿಸಲಾಗುತ್ತದೆ. ಇಂತಹ ಕ್ಷಣ ಮಾತ್ರದಲ್ಲೇ ಅದ್ಭುತ ಬದಲಾವಣೆಗೆ ಜಾರಿಬಿಡುವ ಮುಸ್ಲಿಮರ ರಮಝಾನ್ ನನಗೆ ಮುಸ್ಲಿಮರೆಲ್ಲರೂ ನಿಗಾ ಘಟಕಕ್ಕೆ ಸೇರಿಬಿಟ್ಟ ಹಾಗೆ ಕಾಣುತ್ತದೆ. ಅರ್ಥಾತ್ ದೇಹವೆಂಬ ದುರಾಸೆ, ಲೋಭ, ಅನೈತಿಕತೆ, ಅನಾಚಾರ, ಅಕ್ರಮಗಳ ಅಪಾಯಕಾರಿ ಕೆಡುಕಿನ ಕೊಂಪೆಯನ್ನು ಕ್ಷಣ ಕ್ಷಣವೂ ಗಮನಿಸುತ್ತಾ ಅದನ್ನು ಒಳಿತಿನಲ್ಲಿ ಸುಸ್ಥಿರವಾಗಿಡಲು ಹೆಣಗಾಡುವ ಮಹಾ ಯಜ್ಞದಂತೆ. ಇಲ್ಲಿ ನನ್ನನ್ನು ಚಿಂತನೆಗೆ ಹಚ್ಚುವುದು, ಮೇಲೆ ತಿಳಿಸಿದ ಸಕಲ ಒಳಿತುಗಳಿಗೆ ರಮಝಾನ್ ಬಂದ ತಕ್ಷಣ ಮುಗಿ ಬೀಳುವ ಮುಸ್ಲಿಮರಾದ ನಾವು ಹೇಗೆ ಬದುಕಬೇಕಾದವರು ಎಂಬುವುದನ್ನು ಚೆನ್ನಾಗಿ ಅರಿತುಕೊಂಡಿರುವವರು. ಇಲ್ಲವಾದರೆ ರಮಝಾನಿನ ಪ್ರಾರಂಭ ದಂದೇ ನಾವು ಹೀಗೆ ಬದಲಾಗಿಬಿಡಲು ಸಾಧ್ಯವಿಲ್ಲ. ಹಾಗಾದರೆ ಉಳಿದ ಹನ್ನೊಂದು ತಿಂಗಳು ನಾವು ತಿಳಿದು ತಿಳಿದೇ ಅಶ್ರದ್ಧರಾಗಿರುವವರೇ?. ದಾನವೇ ಇರಲಿ, ಪರದೂಷಣೆಯಿಂದ ದೂರವಿರುವುದೇ ಇರಲಿ, ಪ್ರತಿಯೊಂದರ ಬಗ್ಗೆಯೂ ರಮಝಾನನ್ನು ಹನ್ನೆರಡು ತಿಂಗಳೂ ಆಚರಿಸುವ ಮುಸ್ಲಿಮನೊಬ್ಬ ಎಂದಿಗೂ ಸಮಾಜದಲ್ಲಿ ಅಪರಾಧಿಯಾಗಬೇಕಿರಲಿಲ್ಲ. ಈ ರಮಝಾನ್ ನಮ್ಮನ್ನು ಅಂತಹ ಶ್ರದ್ಧೆಯೆಡೆಗೆ ಕೊಂಡೊಯ್ಯಲಿ. ಸಮಾಜದಲ್ಲಿ ಅದ್ಭುತಗಳನ್ನು ಸೃಷ್ಟಿಸಬಲ್ಲದು ಅದು. ಪಂಪ್‌ವೆಲ್ ತಖ್ವಾ ಮಸ್ಜಿದ್‌ನ ಸುಂದರ ಕುರ್‌ಆನ್ ಪಾರಾಯಣ ಕೇಳುವ ರಮಝಾನ್ ಒದಗಿಸಿದ ಅಲ್ಲಾಹನಿಗೆ ಕೃತಜ್ಞತೆಗಳು.