‘ತಪ್ಪು ಮಾಹಿತಿಯಿಂದ ಕಾರ್ಯಾಚರಿಸಿದ ಪೊಲೀಸರಿಂದ ಕ್ಷಮೆಯಾಚನೆ’
ಹೆಬ್ರಿಯಲ್ಲಿ ಕರವೇ ಮುಖಂಡನಿಗೆ ಪೊಲೀಸ್ ದೌರ್ಜನ್ಯ

ಉಡುಪಿ, ಜೂ.8: ಕಾಸರಗೋಡು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಡುಪಿಗೆ ಬರುವ ಮಾರ್ಗದಲ್ಲಿ ಹೆಬ್ರಿ ಲಾಡ್ಜ್‌ನಲ್ಲಿ ತಂಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷ ಸತೀಶ್ ಪಾಟೀಲ್ ಎಂಬವರಿಗೆ ಮಂಡ್ಯ ಪೊಲೀಸರು ಸುಳ್ಳು ಆರೋಪದಲ್ಲಿ ದೌರ್ಜನ್ಯ ಎಸಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಕಾಸರಗೋಡು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ನಾನು ಸೇರಿದಂತೆ ನಮ್ಮ ಕಾರ್ಯಕರ್ತರು ರಾತ್ರಿ ಹಾಸನದಿಂದ ಹೊರಟು ಬೆಳಗಿನ ಜಾವ 5:30ಕ್ಕೆ ಹೆಬ್ರಿ ತಲುಪಿದೆವು. ಅಲ್ಲಿ ನಮ್ಮ ಕಾರ್ಯಕರ್ತರು ತಂಗಿದ್ದ ಲಾಡ್ಜ್‌ಗೆ ಹೋಗಿ ರೂಮ್ ಬಗ್ಗೆ ವಿಚಾರಿಸಿದೆವು. ಆಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮೂರು ವಾಹನಗಳಲ್ಲಿ ಆಗಮಿಸಿದ 12 ಮಂದಿ ಮಂಡ್ಯ ಪೊಲೀಸರು ಏಕಾಏಕಿ ಲಾಡ್ಜ್‌ಗೆ ನುಗ್ಗಿದರು. ಅಲ್ಲಿ ನನ್ನ ಕೈ ಹಿಡಿದು ಎಳೆದುಕೊಂಡು ಹೋದ ಅವರು ಮುಖಕ್ಕೆ ಹಲ್ಲೆ ನಡೆಸಿ ತಲೆಗೆ ಗನ್ ಇಟ್ಟು ಬೆದರಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು ಎಂದು ಸತೀಶ್ ಪಾಟೀಲ್ ದೂರಿದರು.
ಕೊಲೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತ ಹೇಳಿದರೂ ಕೇಳದೆ ದೌರ್ಜನ್ಯ ಎಸಗಿದರು. ಆಗ ಅಲ್ಲಿಗೆ ಬಂದ ಕರವೇ ಬೆಂಗಳೂರು ಸಂಚಾಲಕ ಲೋಕೇಶ್ ಅವರಿಗೂ ಹಲ್ಲೆ ನಡೆಸಿ ನಿಂದನೆ ಮಾಡಿದರು. ಬಳಿಕ ಅದೇ ಲಾಡ್ಜ್‌ನಲ್ಲಿ ತಂಗಿದ್ದ ನಮ್ಮ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಇತರ ಕಾರ್ಯಕರ್ತರೆಲ್ಲ ಬಂದು ಪೊಲೀಸರ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದರು ಎಂದು ಅವರು ತಿಳಿಸಿದರು.





