ಖುಷ್ವಂತ್ ಸಿಂಗ್ ಅವರ ‘ಟ್ರೇನ್ ಟು ಪಾಕಿಸ್ತಾನ್’

ಭಾಗ-4
ಈಗ ಇರುವ ಮಾರ್ಗ ಒಂದೇ. ಇಂದು ರಾತ್ರಿ ಇಲ್ಲಿಂದ ರೈಲಿನಲ್ಲಿ ನಿರಾಶ್ರಿತ ಶಿಬಿರಗಳಲ್ಲಿರುವ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೊರಟಿದ್ದಾರೆ. ರೈಲಿನ ಮೇಲೆ ಬಾಗಿಲ ಬಳಿ ಎಲ್ಲೆಂದರಲ್ಲಿ ಜನಕಿಕ್ಕಿರಿದು ತುಂಬಿಕೊಂಡಿರುತ್ತಾರೆ. ಗಾಡಿ ಹೊರಟ ಕೊಂಚ ಹೊತ್ತಿನಲ್ಲಿಯೇ ಅದರ ಹಾದಿಗೆ ಅಡ್ಡಲಾಗಿ ಒಂದು ದಪ್ಪನೆಯ ಹಗ್ಗ ಕಟ್ಟಿ ಜಗ್ಗಿದರೆ ಹೊರಟ ರೈಲು ಅಡ್ಡಾದಿಡ್ಡಿಯಾಗಿ ರೈಲಿನ ಮೇಲೆ, ಬಾಗಿಲಗಳ ಬಳಿ ನಿಂತಿರುವವರೆಲ್ಲಾ ಕೆಳಗೆ ಉರುಳುತ್ತಾರೆ. ಮುಗ್ಗರಿಸಿ ಬೀಳುತ್ತಾರೆ. ಅವರನ್ನು ಆಹುತಿ ತೆಗದುಕೊಂಡು ನಂತರ ಈ ಗೊಂದಲದಲ್ಲಿ ನಿಂತ ರೈಲಿನೊಳಗಿನ ಸಾಬರನ್ನೆಲ್ಲ ಮುಗಿಸಿಬಿಡಬಹುದು. ನಮ್ಮ ಈ ದಿಢೀರ್ ಹಲ್ಲೆಯನ್ನು ಎದುರಿಸುವುದಕ್ಕೆ ಅವರಲ್ಲಿ ಕೈ ಬೆರಳಷ್ಟೂ ಸೈನಿಕರಿಲ್ಲ ನಮ್ಮ ಕೈನಲ್ಲಿ ಸುಸೂತ್ರವಾಗಿ ಹತರಾದವರನ್ನೆಲ್ಲಾ ಸಟ್ಲೇಜ್‌ಗೆ ಬಿಸಾಕಿದರಾಯಿತು; ಇದು ನಾವು ಗುರುವಿಗೆ ಸಲ್ಲಿಸುವ ಸೇವೆ; ಈ ಯೋಜನೆಗೆ ಒಪ್ಪಿದವರೆಲ್ಲ ಒಟ್ಟಿಗೆ ಸೇರಿ ಅಂತಿಮ ನಿರ್ಣಯಗಳನ್ನು ಮಾಡೋಣ’’ ಎಂದು ಹೇಳಿ ಸತ್‌ಶ್ರೀ ಅಕಲ್‌ನೊಂದಿಗೆ ಹೊರನಡೆದ. ಬಾಗಿಲ ಬಳಿನಿಂತಿದ್ದ ಬಂಟಾಸಿಂಗ್‌ನನ್ನು ಉದ್ದೇಶಿಸಿ ‘‘ತಾವು ಪೋಲಿಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಬಹುದು’’ ಎಂದು ಚುಚ್ಚಿ ಹೇಳಿ ಅಲ್ಲಿಂದ ಮರೆಯಾದ.
ಇಷ್ಟ್ಟೆಲ್ಲವನ್ನೂ ಮೂಕನಾಗಿ ನೊಡುತ್ತಾ, ಕೇಳುತ್ತಾ, ಕೂತಿದ್ದ ಮೀತ್‌ಸಿಂಗ್‌ನಿಗೆ ಗೊತ್ತು-ಇವರೆಲ್ಲಾ ಯೋಜನೆ ಯಶಸ್ವಿಯಾದ ಕೂಡಲೇ ಗುರುದ್ವಾರಕ್ಕೆ ಬಂದು ಕೃತಜ್ಞತೆ ಸಲ್ಲಿಸುವ ಜನರೇ ಇವರು ಎಂದು.
***
ಎರಡು ರೈಲುಗಾಡಿಗಳಲ್ಲಿ ತುಂಬಿದ ಹೆಣಗಳಲ್ಲಿ ಒಂದನ್ನು ಸುಟ್ಟು ಬೂದಿ ಮಾಡಿ ಇನ್ನೊಂದನ್ನು ಮಣ್ಣು ಮಾಡಿ ಸಂಪೂರ್ಣ ಧೃತಿಗೆಟ್ಟು ಕಂಗಾಲಾಗಿ ಕೂತ ಹುಕುಮ್‌ಚಂದನಿಗೆ ಮುಂದೆ ಏನು ಮಾಡಬೇಕು ಎಂದು ತೋಚದೆ ವಿಹ್ವಲನಾದ ಸ್ಥಿತಿಯಲ್ಲಿ ಚಡಪಡಿಸುತ್ತಿದ್ದಂತೆಯೇ ಸಬ್‌ಇನ್‌ಸ್ಪೆಕ್ಟರ್ ಕೂಡ ಏನು ಮಾಡಬಹುದು ಎಂದು ಕೇಳಲು ಬರುತ್ತಾನೆ. ಸಿಖ್ಖರ ಯೋಜನೆಯ ಪ್ರಕಾರ ರೈಲುಗಾಡಿಯ ಹಳಿತಪ್ಪಿಸುವುದು ಅವರ ಉದ್ದೇಶವಾಗಿರಲಿಲ್ಲ. ಬದಲಿಗೆ ಹೆಣಗಳನ್ನು ತುಂಬಿಸಿಕೊಂಡು ಪಾಕಿಸ್ತಾನಕ್ಕೆ ಮುಟ್ಟಿಸಬೇಕು ಎಂದು ನಿರ್ಧರಿಸಿದ್ದರು. ಮನೋಮಾಜ್ರಾದ ಮುಸ್ಲಿಮರೆಲ್ಲಾ ಈ ರಾತ್ರಿ ಗಾಡಿಯಲ್ಲಿ ಹೊರಟಿದ್ದಾರೆ. ರಾತ್ರಿ ವೇಳೆಗೆ ರೈಲು ಪಾಕಿಸ್ತಾನಾಭಿಮುಖವಾಗಿ ಹೊರಡುತ್ತದೆ.
ಹುಕುಮ್‌ಚಂದ್‌ರಿಗೆ ಇದ್ದಕ್ಕಿದ್ದಂತೆ ಮಿಂಚಿನ ಹಾಗೆ ಯೋಚನೆಯೊಂದು ಹೊಳೆದು ಸಬ್‌ಇನ್‌ಸ್ಪೆಕ್ಟರ್‌ನನ್ನು ಕೇಳಿದರು: ‘‘ಈಗ ಹೊರಟಿರುವ ಮುಸ್ಲಿಮರಲ್ಲಿ ಊರು ಬಿಡುವ ಯೋಚನೆ ಇಲ್ಲದಿರುವವರು ಇದ್ದಾರೆಯೇ?’’ಎಂಬ ಪ್ರಶ್ನೆಗೆ ‘‘ಸದ್ಯಕ್ಕೆ ಎಲ್ಲರೂ ಹೊರಟ ಹಾಗೆ ಕಾಣುತ್ತದೆ’’ ಅನ್ನುತ್ತಾನೆ ಪೊಲೀಸ್. ‘‘ಆ ಜಗ್ಗನ ನೇಕಾರ ಹುಡುಗಿ ಏನು ಅವಳ ಹೆಸರು’’ ಎಂಬ ಪ್ರಶ್ನೆಗೆ ‘‘ನೂರಾನ್ ಸಾರ್’’ ‘‘ಈ ನೂರಾನ್ ಮುಸ್ಲಿಂ ನಾಯಕ ಚಾಚಾ ಇಮಾಮ್ ಭಕ್ಷ್ ಮಗಳು’’ ಎಂದೆನ್ನುತ್ತಾನೆ. ಜಗ್ಗ ಮತ್ತು ನಿಗೂಢವಾಗಿ ಅವನ ಜೊತೆಗೆ ಸೆರೆೆಯಾದವನು ಆ ರಾಜಕೀಯ ಕಾರ್ಯಕರ್ತ ಇಕ್ಬಾಲ್ ಎಂದು ತಿಳಿದು ‘‘ತಕ್ಷಣವೇ ಅವರಿಬ್ಬರನ್ನೂ ಸೆರೆಯಿಂದ ಬಿಡಿಸಿ ಆವಶ್ಯಕವಿದ್ದರೆ ಒಂದು ಟಾಂಗಾಮಾಡಿ ಮನೋ ಮಾಜ್ರಾ ತಲುಪಿಸಿ ಬಿಡಿ’’ ಎಂದು ಹೇಳಿದರು. ‘‘ನನ್ನ ಯೋಚನೆಯ ಪರಿಣಾಮ ಏನೆಂಬುದು ನಿನಗೆ ಶೀಘ್ರದಲ್ಲಿ ತಿಳಿಯುತ್ತದೆ’’ ಎಂದು ಹೆಗಲ ಮೇಲಿನ ಹೆಣಭಾರದ ಜವಾಬ್ದಾರಿ ಕಳೆದುಕೊಂಡವನಂತೆ ಸಮಾಧಾನದಲ್ಲಿ ನಿಟ್ಟ್ಟುಸಿರು ಬಿಟ್ಟ.
ಇಕ್ಬಾಲ್ ಮತ್ತು ಜಗ್ಗ ಇಬ್ಬರನ್ನೂ ಸೆರೆಯಿಂದ ಬಿಡಿಸಿ ಟಾಂಗಾ ಗೊತ್ತು ಪಡಿಸಿ ಗ್ರಾಮ ಸೇರಿಸುವ ಏರ್ಪಾಟಾಗುತ್ತದೆ. ಹಾಗೆ ಅವರನ್ನು ಕಳಿಸಿಕೊಡುವಾಗ ಗ್ರಾಮದ ಕುರಿತಾಗಿ ಮಾಹಿತಿಯಂತೆ, ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೊರಟುನಿಂತಿರುವ ವಿಷಯವನ್ನು ತಿಳಿಸುತ್ತಾನೆ. ಪ್ರತಿಯೊಬ್ಬರೂ ಹೊರಡದಿದ್ದರೆ ಅವರಿಗೆ ಜೀವಾಪಾಯವಿರುತ್ತಿತ್ತು...ಮಲ್ಲಿ ಮತ್ತು ಗ್ಯಾಂಗ್ ಅವರನ್ನು ಮುಗಿಸಿ ಬಿಡುತ್ತಿದ್ದರು.. ಎಂದೆಲ್ಲ ವಿವರಿಸುತ್ತಾನೆ. ‘‘ಆಯಿತು ಸಾಹೇಬರೇ ನೋಡುತ್ತಿರಿ, ಆ ಮಲ್ಲಿ ಗೋಳಿಡುತ್ತಾ ನನ್ನಿಂದ ಬಚಾವು ಮಾಡಿರೆಂದು ನಿಮ್ಮ ಕಾಲು ಕಟ್ಟಲು ಅವನ ಪಡೆಯಜೊತೆ ಬರದಿದ್ದರೆ ಆಗ ಕೇಳಿ ನಮಗೆ ಜಗತ್ ಸಿಂಗನೆಂದರೆ ಕೇವಲ ಬಡಬಡಿಕೆಯ ಮನುಷ್ಯ ಅಲ್ಲ’’ ಎಂದು ಹೇಳಿ ಹೊರಟು ಬಿಡುತ್ತಾನೆ.
ಗಾಡಿ ಮನೋಮಾಜ್ರಾ ಗ್ರಾಮ ಮುಟ್ಟುತ್ತಿದ್ದಂತೆ ತನ್ನ ಗಾಢ ಚಿಂತನೆಯಿಂದ ಎಚ್ಚೆತ್ತವನಂತೆ ಗಾಡಿಯಿಂದ ಹಾರಿ ಕತ್ತಲಲ್ಲಿ ಕಾಣದಾಗುತ್ತಾನೆ. ಜನಗಳ ಜೊತೆಗೆ ಮಾತನಾಡಬೇಕು. ಅವರನ್ನು ಸಮಾಜವಾದದ ಕಡೆಗೆ ಗಮನಹರಿಸುವಂತೆ ಮಾಡಬೇಕು ಎಂದೆಲ್ಲಾ ಯೋಚನೆಯಲ್ಲಿ ಇದ್ದ. ಇಕ್ಬಾಲ್‌ನಿಗೆ ಈ ಹಿಂಸಾ ವಾತಾವರಣದಲ್ಲಿ ಮಾತಿನಿಂದ ಪ್ರಯೋಜನವೇ ಇಲ್ಲ. ಬಂದೂಕುಗಳಿಗೆ ಬಂದೂಕೇ ಉತ್ತರ. ಇದು ತನ್ನ ಸಮಯವಲ್ಲ ಎಂದು ಜಾಣತನದ ನಾಜೂಕಿನ ಆತ್ಮಸಮರ್ಥನೆಯಲ್ಲಿ ತೊಡಗಿಕೊಂಡು ಸಹಜವಾಗಿ ತನ್ನ ಮದಿರಾಪಾನಕ್ಕೆ ಶರಣಾಗುತ್ತಾನೆ. ಈಗ ಮಾಡಬಹುದಾದ್ದೆಂದರೆ ಒಂದು ಉದಾತ್ತ ಉದಾಸೀನ ಭಾವವನ್ನು ಬೆಳಸಿಕೊಳ್ಳುವುದು ಅಷ್ಟೇ. ಮತ್ತೇನೂ ಪ್ರಯೋಜನವಿಲ್ಲ ಎಂದು ಗೊಣಗಿಕೊಳ್ಳುತ್ತಾ ಒಂದು, ಮತ್ತೊಂದು, ಮಗದೊಂದು ಎಂಬಂತೆ ತನ್ನ ಕುಡಿತದಲ್ಲಿ ಮುಳುಗಿ, ತನ್ನ ಕೈಯಲ್ಲಿ ಇನ್ನೂ ತುಂಬಿದ ಬಟ್ಟಲು ಇರುವಂತೆಯೇ ನಿದ್ರೆಗೆ ಜಾರಿದ.
***
ಗುರುದ್ವಾರದಲ್ಲಿ ಮೀತ್‌ಸಿಂಗ್ ತನ್ನ ನಿತ್ಯದ ಎಲ್ಲ ಕೆಲಸ ಮುಗಿಸಿ ಪೊರಕೆ ಹಿಡಿದು ಧೂಳೆಲ್ಲಾ ಗುಡಿಸುತ್ತಿದ್ದಂತೆ ಬಾಗಿಲು ದಢ ದಢ ಬಡಿದ ಶಬ್ದವಾಗಿ, ತೆಗೆದುನೋಡಿದರೆ ಜಗತ್ ಸಿಂಗ್ ನಿಂತಿರುವುದು ಕಂಡಿತು. ‘‘ಏನು ಈ ಹೊತ್ತಿನಲ್ಲಿ’ ಎಂದು ಕೇಳಿದ ಮೀತ್ ಸಿಂಗ್‌ನಿಗೆ ಅತ್ಯಂತ ಪ್ರಾಮಾಣಿಕ ವಿನಯದಲ್ಲಿ ‘‘ಧರ್ಮಗ್ರಂಥದ ಗುರುವಾಣಿಯೊಂದು ದಯವಿಟ್ಟು ಓದಿರಿ’’ ಎಂದು ವಿನಂತಿಸುತ್ತಾನೆ. ಎಂದೂ ಗುರುದ್ವಾರಕ್ಕೆ ಬಾರದವನು ಇಂದು ಧರ್ಮಗ್ರಂಥವನ್ನು ಮಡಚಿಟ್ಟು ಆದಮೇಲೆ ಇಂಥಹ ಕೋರಿಕೆಯಿಂದ ಬಂದಿದ್ದಾನೆ. ಮುಂಜಾನೆಯ ಪ್ರಾರ್ಥನೆಯ ಒಂದು ಭಾಗವನ್ನು ಓದುತ್ತೇನೆ ಎಂದು ಮೀತ್‌ಸಿಂಗ್ ಓದಲು ಆರಂಭಿಸುತ್ತಾನೆ.
ಹಗಲು ರಾತ್ರಿ ಮಾಡಿದವನು ವಾರದ ದಿನಗಳು ವರ್ಷದ ಋತುಗಳು ಬೀಸುವ ತಂಗಾಳಿ, ಹರಿವ ನೀರು
ಉರಿವ ಬೆಂಕಿ, ಪಾತಾಳದ ಲೋಕಗಳು
ಈ ಎಲ್ಲ ಮಾಡಿದವನು ಭೂಮಿ ಸೃಷ್ಟಿಸಿ
ಅಸಂಖ್ಯ ಹೆಸರುಗಳ ಧರ್ಮದ ಗುಡಿ ನಿರ್ಮಿಸಿದವನು ವೈವಿಧ್ಯಮಯ ಜೀವಿಗಳ ಸೃಷ್ಟಿಸಿ
-----------
ದೇವರೆಂದರೆ ಸತ್ಯ. ಸತ್ಯವನ್ನೇ ದಯಪಾಲಿಸುವವನು
ಇಂಥವನ ಆಸ್ಥಾನದಲ್ಲಿ ಅವನ ಆಪ್ತರು ಅಲಂಕರಿಸುತ್ತಾರೆ
ದೇವರ ಕ್ರಿಯೆಯನ್ನು ಆದರಿಸುತ್ತಾರೆ.
ಇಷ್ಟು ಓದಿಗ್ರಂಥವನ್ನು ಮುಚ್ಚುತ್ತಾ, ಗಾಳಿ, ನೀರು, ಭೂಮಿ
ಇವುಗಳಿಂದ ಮಾಡಲ್ಪಟ್ಟವರು ನಾವು
ಗುರುವಿನ ವಚನದಂತೆ ಗಾಳಿ ನಮಗೆ ಜೀವದ ಮೂಲ ಉಸಿರು ನೀಡುತ್ತದೆ.
ಈ ಮಹಾನ್ ಭೂಮಿ ತಾಯಿಯ ಕೂಸಾಗಿ ಹುಟ್ಟುವುದು ಈ ನದಿಗಳಿಂದ ಪೋಷಿಸಲ್ಪಡುತ್ತಿರುವೆವು ......
ಎಂದು ಅತ್ಯಂತ ಕ್ಷೀಣ ದನಿಯಲ್ಲಿ ಉಸುರುತ್ತಾನೆ. ಈ ಪವಿತ್ರ ಮಾತುಗಳನ್ನು ಕೇಳಿ ಹಣೆಯನ್ನು ನೆಲಕ್ಕೆ ತಾಗಿಸಿ ಜಗ್ಗ ಏಳುತ್ತಾನೆ ‘ಸತ್‌ಶ್ರೀ ಅಕಲ್’ಎಂದು ಹಿರಿಯ ಮೀತ್‌ಸಿಂಗನಿಗೆ ಹೇಳಿ ಕತ್ತಲಲ್ಲಿ ಕರಗಿ ಹೋಗುತ್ತಾನೆ. ರಾತ್ರಿ ಹನ್ನೊಂದರ ಸಮಯ ರೈಲು ನಿಲ್ದಾಣ ಬಳಿ ಕಪ್ಪು ನೆರಳು ಮಾತ್ರ ಹರಡಿಕೊಂಡಿತ್ತು. ರೈಲು ಹಳಿಯ ಇಕ್ಕೆಲಗಳಲ್ಲಿ ಮರಳು ಮೂಟೆಗಳ ಮಧ್ಯದಲ್ಲಿ ಮೆಷಿನ್ ಗನ್ನುಗಳು ಸಿದ್ಧವಾಗಿ ನಿಂತಿದ್ದವು. ಉದ್ದೇಶ ಈಡೇರಿಸಲು ಬಂದವರೆಲ್ಲ ಸಿದ್ಧರಾಗಿ ಕಾಯುತ್ತಿದ್ದರು. ರೈಲು ಹಳಿಗೆ ಕಿವಿತಾಗಿಸಿ ಕೂತು ರೈಲುಗಾಡಿ ಬರುವುದನ್ನೇ ನಿರೀಕ್ಷಿಸುತ್ತಿದ್ದರು.
ಕೊನೆಗೂ ಬಂದಿತು ರೈಲು, ದೂರದಲ್ಲಿ ನಿಲ್ದಾಣ ಬಿಟ್ಟು ಹೊರಟ ಸೂಚನೆ ಸಿಕ್ಕಿತು. ತುದಿಗಾಲ ಮೇಲೆ ನಿಂತು ಕಾದರು. ಮಿಣುಕು ದೀಪವಾಗಿ ಕಂಡು ಕ್ರಮೇಣ ಬೆಳಕು ಮತ್ತು ದೀಪ ಎರಡೂ ಸ್ಪಷ್ಟವಾಗಿ ಕಾಣಲಾಂಭಿಸಿತು.







