ಖುಷ್ವಂತ್ ಸಿಂಗ್ ಅವರ ‘ಟ್ರೇನ್ ಟು ಪಾಕಿಸ್ತಾನ್’

ಭಾಗ-5
ಆದರೆ ಈ ಮಧ್ಯದಲ್ಲಿ ಯಾರವನು ಹಗ್ಗಕಟ್ಟಿದ ಜಾಗದಲ್ಲಿ ಸರಿದಾಡುತ್ತಿರುವವನು? ನಮ್ಮವನೇ ಒಬ್ಬನಿರಬೇಕು. ಹಗ್ಗದ ಗಂಟನ್ನು ಪರೀಕ್ಷಿಸುತ್ತಿದ್ದಾನೆ ಎಂದು ಸಮಾಧಾನ ಪಟ್ಟುಕೊಳ್ಳಲು ಯತ್ನಿಸಿದರು. ಹಗ್ಗದ ಬಳಿ ಬಂದವನು ಹಗ್ಗಕ್ಕೆ ಮೈತಾಗಿಸಿಕೊಂಡು ಭದ್ರವಾಗಿ ಹಿಡಿದುಕೊಂಡಂತೆ ಕಂಡಿತು. ರೈಲು ಹತ್ತಿರ ಹತ್ತಿರ ಬರುತ್ತಿದೆ. ಈ ವ್ಯಕ್ತಿ ಮಾತ್ರ ಹಗ್ಗವನ್ನು ಬಿಡದೆ ಗಟ್ಟಿ ಹಿಡಿದುಬಿಟ್ಟಿದ್ದಾನೆ. ಯಾರವನು? ಏನು ಮಾಡುತ್ತಿದ್ದಾನೆ ಎಂದು ಅಚ್ಚರಿಪಡಲೂ ವೇಳೆ ಇಲ್ಲದಂತೆ ರೈಲು ಹತ್ತಿರ ಹತ್ತಿರವಾಗುತ್ತಿದೆ. ಮೇಲೆ ವ್ಯಕ್ತಿ ತನ್ನ ಕಿರ್ವಾನಿನಿಂದ ಹಗ್ಗವನ್ನು ಕತ್ತರಿಸುವಂತೆ ಬಲವಾಗಿ ತೀಡುತ್ತಿದ್ದಾನೆ. ‘‘ಕೆಳಗೆ ಇಳಿದು ಬಾರೋ ಏ ಕತ್ತೆ’’ ಎಂದರೂ ಲಕ್ಷಿಸದೆ ಹಗ್ಗವನ್ನು ಎಳೆ ಎಳೆಯಾಗಿ ಕತ್ತರಿಸುತ್ತಿದ್ದಾನೆ, ಬಿರುಸಾಗಿ.
ಕೆಳಗೆ ಕೂತು ಜನಗಳ ನಾಯಕ ತನ್ನ ಬಂದೂಕು ತೆಗೆದು, ವ್ಯಕ್ತಿಯತ್ತ ಗುಂಡು ಹಾರಿಸಿದ. ಹಾರಿದ ಗುಂಡು ಅವನ ಕಾಲುಗಳ ಕತ್ತರಿಸಿ ಹಗ್ಗದಿಂದ ಕೆಳಗೆ ಜೋತಾಡುವ ಸ್ಥಿತಿಗೆ ಬಂದಿತು. ಮತ್ತೊಂದು ಕಾಲು ಹಗ್ಗಕ್ಕೆ ಹೆಣೆದುಕೊಂಡು ಹಾಗೆಯೇ ಇದ್ದಿತು.
ರೈಲುಗಾಡಿ ಗಜಗಳಷ್ಟೇ ದೂರವಿದೆಯಷ್ಟೆ. ನಾಯಕ ಬಂದೂಕಿನಿಂದ ಮತ್ತೊಂದು ಗುಂಡು ಹಾರಿಸಿದ. ವ್ಯಕ್ತಿಯ ದೇಹ ಹಗ್ಗದಿಂದ ಜಾರಿ ಬೀಳುವಂತೆ ಕಂಡಿತು. ಆದರೆ ಹಗ್ಗವನ್ನು ಮಾತ್ರ ಅವನು ಕೈ ಬಿಡಲಿಲ್ಲ. ಹಗ್ಗದ ಮೇಲೆ ತನ್ನ ಹಿಡಿತವನ್ನು ಬಲಗೊಳಿಸಲು ತನ್ನ ಕಂಕುಳಲ್ಲಿ ಹಗ್ಗವನ್ನು ಬಿಗಿಯಾಗಿ ಹಿಡಿದು ಕಿರ್ವಾನಿನಿಂದ ಹಗ್ಗ ಕತ್ತರಿಸುತ್ತಲೇ ಹೋದ. ಎಳೆ, ಎಳೆಯಾಗಿ ಹಗ್ಗ ಚೂರಾಗುವ ಸ್ಥಿತಿ ಮುಟ್ಟುತ್ತ ಬಂದಿತು. ರೈಲು ಗಾಡಿ ಹತ್ತಿರ ಹತ್ತಿರವಾಗುತ್ತಿತ್ತು. ವ್ಯಕ್ತಿ ತನ್ನ ಹಲ್ಲ್ಲುಗಳನ್ನು ಬಳಸಿ ಹಗ್ಗ ಕತ್ತರಿಸಲು ಶುರುಮಾಡಿದ. ಕೆಳಗಿನಿಂದ ಗುಂಡಿನ ಸುರಿಮಳೆಯೇ ಅವನ ಮೈಯ ಭಾಗಗಳನ್ನು ಚಿಂದಿ ಮಾಡುತ್ತಿತ್ತು. ವ್ಯಕ್ತಿ ಒಮ್ಮೆ ಮೈಯಾದ್ಯಂತ ಥರ ಥರ ಛಳುಕಿನಲ್ಲಿ ನಡುಗಿ ಎತ್ತರದಿಂದ ಕುಸಿದು ಬಿದ್ದ. ಅವನ ಜೊತೆಗೇ ಕತ್ತರಿಸಿ ಹೋದ ಹಗ್ಗವೂ ಕೆಳಗೆ ಬಿತ್ತು. ರೈಲು ಅವನ ಮೈ ಮೇಲೆ ಹರಿದು ಕೊಂಡು ಪಾಕಿಸ್ತಾನದತ್ತ ಧಾವಿಸಿತು.

***
ಇದು ‘ಟ್ರೇನ್ ಟು ಪಾಕಿಸ್ತಾನ್’ ಕಾದಂಬರಿ. ಸ್ವಾತಂತ್ರೋತ್ತರ ಭಾರತದ ವಿಭಜನೆಯ ಕಾಲದ ಮಹಾನ್ ಕೃತಿ. ಇತಿಹಾಸವೂ ಹೌದು. ಕಲಾಕೃತಿಯೂ ಹೌದು, ಈ ಕಾದಂಬರಿಯ ಮಹತ್ವ, ಪ್ರಸ್ತುತತೆ 1940ರ ದಶಕಕ್ಕೆ ಸೀಮಿತವಾಗದೆ ಎಲ್ಲ ಕಾಲಕ್ಕೂ ಮಹತ್ವದ ಕೃತಿಯಾಗಿ ಉಳಿದಿದೆ. ಒಂದರ್ಥದಲ್ಲಿ ಸ್ವಾತಂತ್ರೋತ್ತರ ಭಾರತದ ಕೋಮು ಮತ್ತು ಜಾತಿ ವೈಷಮ್ಯ, ಹಿಂಸೆ, ರಕ್ತಪಾತ ಇವುಗಳನ್ನೆಲ್ಲ ಗಮನಿಸಿದಾಗ ಈ ಕಾದಂಬರಿ ಒಂದು ಬಗೆ ಭಾರತದ ಇತಿಹಾಸಕ್ಕೆ ಒಂದು ದುರಂತದ ನಾಂದಿ ಪದ್ಯದ ಹಾಗೆ ಕಾಣುತ್ತದೆ. ಈ ಕೃತಿಯನ್ನು ಓದುತ್ತಿದ್ದಂತೆ ಓದುಗನಿಗೆ ಸ್ವತಂತ್ರ ಭಾರತದ ನಿನ್ನೆ ಮೊನ್ನೆಗಳ ಕೋಮುಗಲಭೆಗಳ ವಿವರ ಓದುತ್ತಿದ್ದಂತೆ ಅನ್ನಿಸುತ್ತದೆ. ಖುಷ್ವಂತ್ ಸಿಂಗ್ ಅವರು ಆ ಯುಗದ ಸಮಕಾಲೀನರಾಗಿ ಸ್ವತಃ ತಾವೇ ಮೂಲತಃ ಲಾಹೋರಿನ ನಾಗರಿಕರಾಗಿ, ತಾವು ಕಂಡ, ಕೇಳಿದ, ಅನುಭವಿಸಿದ, ಸಂಕಟ ನೋವು ಇವುಗಳು ಕಾದಂಬರಿಯಲ್ಲಿ ಕೊನೆಯವರೆಗೆ ಕೆಳಸ್ತರದ ಶ್ರುತಿಯಾಗಿ ಉಳಿಸಿಕೊಂಡು ನಮ್ಮನ್ನು ತಲ್ಲಣಕ್ಕೆ ಒಡ್ಡಿಬಿಡುತ್ತಾರೆ. ಈ ತಲ್ಲಣ ದಿನದಿಂದ ದಿನಕ್ಕೆ ಸಹಸ್ರ ಪಾಲು ಉಲ್ಬಣಗೊಳ್ಳುತ್ತಿದ್ದು, ಭವಿಷ್ಯದ ಕಲ್ಪನೆ ಹೆಚ್ಚು ಹೆಚ್ಚಾಗಿ ಮಂಕಾಗಿ ಕಾಣುತ್ತಿದ್ದು, ನಮ್ಮನ್ನು ಮತ್ತೆ ಭಯಂಕರ ಶೂನ್ಯ ಭಾವಕ್ಕೆ ತಳ್ಳುತ್ತದೆ.
ಕಾದಂಬರಿಯ ಆ ಆವೃತ್ತಿಯ ವಿಶೇಷವೆಂದರೆ (ಲೋಟಸ್, ರೋಲಿ, 2007 ಏಳನೆ ಆವೃತ್ತಿ) ಮಾರ್ಗರೆಟ್ ಬರ್ಕ್ ವ್ಹೈಟ್ ಅವರ ಅದ್ಭುತ ಛಾಯಚಿತ್ರಗಳನ್ನು ಒಳಗೊಂಡಿರುವುದು. ನ್ಯೂಯಾರ್ಕ್‌ನಲ್ಲಿ ಜನಿಸಿದ ಈಕೆ, 1940ರಲ್ಲಿ ಭಾರತದ ಸ್ವಾತಂತ್ರ ಅತೀ ಹತ್ತಿರವೇ ಇದೆ ಅನ್ನುವ ಹೊತ್ತಿಗೆ ಅಮೆರಿಕದ ‘ಟೈಂ’ ಮತ್ತು ‘ಲೈಫ್’ ಎಂಬ ಖ್ಯಾತ ಪ್ರಕಟನೆಗಳ ಸಂಪಾದಕರು ಈಕೆಯನ್ನು ಭಾರತಕ್ಕೆ ಕಳಿಸಿಕೊಡುತ್ತಾರೆ. ಆಕೆ ಈ ಜವಾಬ್ದಾರಿಯನ್ನು ಕೇವಲ ವೃತ್ತಿಪರತೆಯಂತೆ ಮಾತ್ರ ನೋಡದೆ, ದಿನಗಳು ಕಳೆದ ಹಾಗೆ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ತಾನು ಕಾಣುತ್ತಿದ್ದ ದೃಶ್ಯಗಳು, ಜನಗಳ ನೋವು, ಸಂಕಟ, ಏಕಾಂಗಿತನ ಮತ್ತು ಸುತ್ತಲೂ ನಡೆಯುತ್ತಿದ್ದ ಹಿಂಸಾತ್ಮಕ ಘಟನೆಗಳು, ತರಗೆಲೆಗಳಂತೆ ಉರುಳುತ್ತಿದ್ದ ದೇಹಗಳು ಇವುಗಳಲ್ಲಿ ತನ್ನ ಮನಸ್ಸು, ವ್ಯಕ್ತಿತ್ವಗಳನ್ನು ಸಂಪೂರ್ಣ ಒಳಪಡಿಸಿಕೊಂಡು ಚಿತ್ರಗಳನ್ನು ತೆಗೆದಿದ್ದಾಳೆ. ಎಪ್ಪತ್ತು ವರ್ಷಗಳಿಗೆ ಮೀರಿದ ಈ ಚಿತ್ರಾವಳಿಗಳು ಇಂದಿಗೂ ಕೂಡ ಓದುಗರನ್ನು ಬೆಚ್ಚಿ ಬೀಳಿಸುತ್ತದೆ. ಮನುಷ್ಯರಾದ ನಾವು ಯಾವ ಮಟ್ಟ ಮುಟ್ಟ್ಟಿದ್ದೇವೆ, ಮುಟ್ಟಬಲ್ಲೆವು ಎಂಬುದರ ಕಲ್ಪನೆಯೇ ನಮ್ಮನ್ನು ನಡುಗಿಸಿ ಬಿಡುತ್ತದೆ. ಈ ಚಿತ್ರಗಳು ತೆಗೆದದ್ದು 1946-1947ರಲ್ಲಿ. ಕಾದಂಬರಿ ರಚಿತವಾದದ್ದು 1956ರಲ್ಲಿ. ಆದರೆ ಇಂದಿಗೂ ಕೂಡ ಚಿತ್ರ ಮತ್ತು ಶಬ್ದ ಒಂದಕ್ಕೊಂದು ಪೂರಕವಾಗಿ, ಒಂದಕ್ಕೊಂದು ಕಾವ್ಯಮಯತೆಯ ಆಯಾಮವನ್ನು ಕೊಟ್ಟುಕೊಂಡು, ಒಟ್ಟಾಗಿ ನಮಗೆ ಹೊಸ ಕಾಣ್ಕೆಯನ್ನೇ ನೀಡುತ್ತದೆ. ಖುಷ್ವಂತ್ ಸಿಂಗರು ಹೇಳುವ ಹಾಗೆ ಈ ಚಿತ್ರಗಳು ಕಾದಂಬರಿಗೆ ಹೊಸ ರೂಪು, ಹೊಸ ಜನ್ಮವನ್ನೇ ಕೊಟ್ಟ ಹಾಗಿದೆ.
(ಮುಗಿಯಿತು)