ಚಿಕ್ಕಮಗಳೂರು: ಮೂತ್ರಪಿಂಡ ರೋಗಿಗಳ ನರಳಾಟ
ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ತಪ್ಪದು ಪರದಾಟ!

♦ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆ
ಚಿಕ್ಕಮಗಳೂರು, ಜೂ.10: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆಯಿರುವ ಕಾರಣ ಕಿಡ್ನಿ ತೊಂದರೆಯುಳ್ಳ ರೋಗಿಗಳಿಗೆ ತೀವ್ರ ತೊಂದರೆ ಎದುರಾಗಿದೆ.
ಇಲ್ಲಿ ಕಿಡ್ನಿ ಸಮಸ್ಯೆಯುಳ್ಳವರು ಡಯಾಲಿಸಿಸ್‌ಗೆ ಬಂದರೆ ಒಬ್ಬರಿಗೆ ಚಿಕಿತ್ಸೆ ನಿಲ್ಲಿಸಿದರೆ ಮಾತ್ರ ಮತ್ತೊಬ್ಬರಿಗೆ ಅವಕಾಶ ಸಿಗುತ್ತಿದೆ. ಇದರಿಂದ ಅನೇಕರು ಸರದಿ ಸಾಲಿನಲ್ಲಿಯೇ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ಎದುರಾಗಿದೆ.
ಜಿಲ್ಲಾಸ್ಪತ್ರೆ ುಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ 43 ಮಂದಿ ರೋಗಿಗಳಲ್ಲಿ ಯಾರದರೂ ಒಬ್ಬರಿಗೆ ಚಿಕಿತ್ಸೆ ನಿಲ್ಲಿಸಿದರೆ ಮಾತ್ರ ಇನ್ನೊಬ್ಬರಿಗೆ ಅವಕಾಶ ಸಿಗುತ್ತದೆ. ಹಣ ಇರುವವರು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ. ಆದರೆ ಹಣ ಇಲ್ಲದ ಬಡವರು ಅನಿವಾರ್ಯ ವಾಗಿ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆ ನಿವಾರಣೆ ಾಗಬಹುದು ಎಂಬ ಆಸೆಯಿಂದ ಒಳಕ್ಕೆ ಹೋದರೆ ಅಲ್ಲಿನ ವಾಸ್ತವ ಪರಿಸ್ಥಿತಿ ಕಂಡು ಭೀತಿಗೊಳ್ಳದಿರಲಾರರು. ಒಳಗೆ ಹೋದ ನಂತರ ಅಲ್ಲಿನ ನೈಜ ಸ್ಥಿತಿ ಒಂದೊಂದಾಗಿ ತಮ್ಮ ಅರಿವಿಗೆ ಬರುತ್ತದೆ.
ಈ ಆಸ್ಪತ್ರೆಯಲ್ಲಿ ಕೇವಲ 7 ಡಯಾಲಿಸಿಸ್ ಯಂತ್ರಗಳು ಮಾತ್ರ ಇವೆ. ಅದರಲ್ಲಿ 2 ಯಂತ್ರಗಳು ಕೆಟ್ಟು ಹೋಗಿವೆ. ಹೀಗಾಗಿ ಜಿಲ್ಲೆಯ ವಿವಿಧ ಭಾಗಗಳ ಸುಮಾರು 43 ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ಸಾಲಿನಲ್ಲೆ ಕಾಯಬೇಕು. ಈಗ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಯಾರಾದರೂ ಮೃತರಾದರೆ ಮಾತ್ರ ಮತ್ತೊಬ್ಬರಿಗೆ ಅವಕಾಶ ಲಭಿಸುತ್ತದೆ. ಹೀಗೆ ಸಮಸ್ಯೆಯ ಆಗರದಲ್ಲಿರುವ ಜಿಲ್ಲಾಸ್ಪತ್ರೆಯಿಂದ ಬೇಸತ್ತ ರೋಗಿಗಳು ಸಾಲ ಮಾಡಿ ಪಕ್ಕದ ಶಿವಮೊಗ್ಗ, ಮಂಗಳೂರು, ಹಾಸನ, ಬೆಂಗಳೂರು ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಡಯಾಲಿಸಿಸ್ ಮಾಡಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಕಟ್ಟಡದಲ್ಲಿಯೇ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಡಯಾಲಿಸಿಸ್ ಮಾಡುವುದು ಮಾತ್ರ 43 ರೋಗಿಗಳಿಗೆ ಮಾತ್ರ, ಅದರಲ್ಲಿ ಯಾರಾದರೂ ಒಬ್ಬರು ಆ ಸ್ಥಾನವನ್ನು ಬಿಟ್ಟು ಕೊಟ್ಟರೆ ಮಾತ್ರ ಇನ್ನೊಬ್ಬರಿಗೆ ಅವಕಾಶ ಸಿಗುತ್ತದೆ. ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಕೊಡಲೇ ಕ್ರಮ ಕೈ ಗೊಳ್ಳಲು ಮುಂದಾಗಬೇಕಿದೆ.
ಮೂತ್ರಪಿಂಡದ ಸಮಸ್ಯೆಯಿಂದ ನರಳುವವರ ಬಗ್ಗೆ ಸರಕಾರ ಮುತುವರ್ಜಿ ವಹಿಸಬೇಕು. ಜಿಲ್ಲಾಸ್ಪತ್ರೆಗೆ ಹೆಚ್ಚಿನ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಬೇಕು. ಗ್ರಾಮೀಣ ಭಾಗದ ಜನರು ಜಿಲ್ಲಾಸ್ಪತ್ರೆಗೆ ಬರುವುದರಿಂದ ಸಮಸ್ಯೆ ಪ್ರಬಲವಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲೂ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಬೇಕು
ಬಿ.ಅಮ್ಜದ್, ಸಂಚಾಲಕರು
ಜನದನಿ ಸಂಘಟನೆ
ಕಿಡ್ನಿ ತೊಂದರೆಯಿಂದ ಬಳಲುತ್ತಾ ಇರುವವರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಡಯಾಲಿಸಿಸ್ ಯಂತ್ರಗಳ ಅಗತ್ಯವನ್ನು ಪೂರೈಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಈ ತನಕ ಸರಕಾರದಿಂದ ಡಯಾಲಿಸಿಸ್ ಯಂತ್ರಗಳು ಬಂದಿಲ್ಲ. ಇರುವ ಯಂತ್ರಗಳಲ್ಲಿ ಡಯಾಲಿಸಿಸ್‌ಗೆ ಜನರಿದ್ದಾರೆ. ಸಾಲಿನಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ.
ದೊಡ್ಡಮಲ್ಲಪ್ಪ, ಜಿಲ್ಲಾ ಸರ್ಜನ್, ಚಿಕ್ಕಮಗಳೂರು.