ಭಾರತ ಮತ್ತು ವಿಶ್ವದಲ್ಲಿಯ ಕೆಲವು ಅತ್ಯಂತ ಕಠಿಣ ಪರೀಕ್ಷೆಗಳು
ಇವುಗಳಲ್ಲಿ ನೀವೆಷ್ಟನ್ನು ಬರೆದಿದ್ದೀರಿ?

ಸಿಸಿಐಇ(ಸಿಸ್ಕೋ ಸರ್ಟಿಫೈಡ್ ಇಂಟರ್‌ನೆಟ್ ವರ್ಕಿಂಗ್ ಎಕ್ಸ್‌ಪರ್ಟ್)
ಸಿಸ್ಕೋ ನೆಟ್‌ವರ್ಕ್ಸ್ ತನಗೆ ಅಗತ್ಯವಿರುವ ಅಂತರ್ಜಾಲ ನಿಪುಣ ರನ್ನು ನೇಮಕ ಮಾಡಿಕೊಳ್ಳಲು ಈ ಪರೀಕ್ಷೆಯನ್ನು ನಡೆಸುತ್ತದೆ. ಪರೀಕ್ಷೆಯು ಎರಡು ಹಂತಗಳಲ್ಲಿ ಆರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮಾತ್ರ ಎರಡನೆ ಹಂತದ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಅಂದ ಹಾಗೆ ಇದರಲ್ಲಿ ತೇರ್ಗಡೆಗೊಳ್ಳುವರ ಪ್ರಮಾಣ ಶೇ.1 ಮಾತ್ರ!
ಗೇಟ್(ಗ್ರಾಜ್ಯುಯೇಟ್ ಆ್ಯಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್)
ಗೇಟ್ ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿದ್ದು,ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗದ ದ್ವಾರಗಳನ್ನು ತೆರೆಯುತ್ತದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ದೇಶಾದ್ಯಂತದ ಏಳು ಐಐಟಿಗಳು ಜಂಟಿಯಾಗಿ ಈ ಪರೀಕ್ಷೆಯನ್ನು ನಡೆಸುತ್ತವೆ. ಪ್ರತಿವರ್ಷ ಸುಮಾರು 10 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದು, ಕೇವಲ ಶೇ.15ರಷ್ಟು ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾಗುತ್ತಾರೆ.ಐಐಟಿಯಲ್ಲಿ ಪ್ರವೇಶಾವಕಾಶ ಪಡೆಯಲು ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಶೇ.99ಕ್ಕಿಂತ ಅಧಿಕ ಅಂಕಗಳನ್ನು ಗಳಿಸುವುದು ಅನಿವಾರ್ಯವಾಗಿದೆ.
ಗವಕಾವೊ
ಚೀನಾದಲ್ಲಿ ಪ್ರತಿ ಹೈಸ್ಕೂಲ್ ವಿದ್ಯಾರ್ಥಿಗೂ ಗವಕಾವೊ ಪರೀಕ್ಷೆ ಕಡ್ಡಾಯವಾಗಿದೆ. ಎರಡು ದಿನಗಳ ಅವಧಿಯಲ್ಲಿ ಒಟ್ಟು ಒಂಬತ್ತು ಗಂಟೆಗಳ ಕಾಲ ನಡೆಯುವ ಈ ಪರೀಕ್ಷೆಯನ್ನು ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕು.ವಿಶ್ವದಲ್ಲಿ ಎಂಟನೆ ಅತ್ಯಂತ ಕಠಿಣ ಪರೀಕ್ಷೆಯಾಗಿರುವ ಗವಕಾವೊ ಹದಿಹರೆಯದ ಬಹಳಷ್ಟು ಚೀನಿ ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಉದ್ವೇಗಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಈ ಪರೀಕ್ಷೆ ವಿಶ್ವಾದ್ಯಂತ ಹಲವಾರು ಸಾಕ್ಷಚಿತ್ರ ತಯಾರಕರ ಗಮನವನ್ನು ಸೆಳೆದಿದೆ.
ಐಐಟಿ-ಜೀ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್)
ಭಾರತದ ಐಐಟಿಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಗತ್ಯವಾಗಿದೆ. ಪ್ರತಿ ವರ್ಷ ಸುಮಾರು ಐದು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅಂದಾಜು 10,000 ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ.
ಯುಪಿಎಸ್ಸಿ (ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ)
ದೇಶದಲ್ಲಿಯ ಉನ್ನತ ಸರಕಾರಿ ಹುದ್ದೆಗಳಿಗೆ ನೇಮಕ ಮಾಡಲು ನಡೆಸಲಾಗುವ ಈ ಪರೀಕ್ಷೆ ಭಾರತದಲ್ಲಿ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದಾಗಿದೆ. ಐಐಟಿ ಮತ್ತು ಗೇಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೂ ಈ ಪರೀಕ್ಷೆ ಕಬ್ಬಿಣದ ಕಡಲೆಯಾಗಿದೆ. ಪ್ರತೀ ವರ್ಷ ಸುಮಾರು ಮೂರು ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದು, ಕೇವಲ 1,000 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ.
ಮೆನ್ಸಾ
ಮೆನ್ಸಾ ಸೊಸೈಟಿಯು ಅತ್ಯಂತ ಹೆಚ್ಚಿನ ಬುದ್ಧಿಮಟ್ಟ (ಐಕ್ಯೂ)ವನ್ನು ಹೊಂದಿರುವ ವ್ಯಕ್ತಿಗಳನ್ನೊಳಗೊಂಡ ಜಾಗತಿಕ ಸೊಸೈಟಿಯಾಗಿದೆ. ಪ್ರತಿಯೊಂದು ದೇಶವೂ ತನ್ನದೇ ಆದ ಮೆನ್ಸಾ ಸೊಸೈಟಿಯನ್ನು ಹೊಂದಿದ್ದು, ಇದು ವಿಶ್ವದ ಅತ್ಯಂತ ಹಳೆಯ ಮತ್ತು ಬೃಹತ್ ಐಕ್ಯೂ ಸಂಸ್ಥೆಯಾಗಿದೆ. ಮೆನ್ಸಾ ಐಕ್ಯೂ ಪರೀಕ್ಷೆಯು ವಿಶ್ವದ ಅತ್ಯಂತ ಕಠಿಣ ಐಕ್ಯೂ ಪರೀಕ್ಷೆಯಾಗಿದ್ದು,ಅತ್ಯಂತ ಹೆಚ್ಚಿನ ಐಕ್ಯೂ ಹೊಂದಿದವರಿಗೆ ಮಾತ್ರ ಸೊಸೈಟಿಯಲ್ಲಿ ಪ್ರವೇಶ ಸಿಗುತ್ತದೆ. ಈ ಪರೀಕ್ಷೆಗೆ ವಯೋಮಿತಿಯಿಲ್ಲ. ಸೊಸೈಟಿಯ ಅತ್ಯಂತ ಕಿರಿಯ ಸದಸ್ಯನ ವಯಸ್ಸು ಕೇವಲ ಎರಡು ವರ್ಷ!
ಜಿಆರ್‌ಇ(ಗ್ರಾಜ್ಯುಯೇಟ್ ರೆಕಾರ್ಡ್ ಎಕ್ಸಾಮಿನೇಷನ್ಸ್)
ವಿಶ್ವಾದ್ಯಂತ ಹೆಚ್ಚಿನ ಅಭ್ಯರ್ಥಿಗಳು ಹಾಜರಾಗುವ ಪರೀಕ್ಷೆಗಳಲ್ಲಿ ಒಂದಾಗಿರುವ ಜಿಆರ್‌ಇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿಯೂ ಒಂದಾಗಿದೆ. ಉನ್ನತ ಶಿಕ್ಷಣವನ್ನು ನೀಡುವ ಅಮೆರಿಕದ ಹೆಚ್ಚಿನ ವಿವಿಗಳು ಅಭ್ಯರ್ಥಿಗಳು ನಿರ್ದಿಷ್ಟ ಜಿಆರ್‌ಇ ಅಂಕ ಹೊಂದಿರುವುದನ್ನು ಕಡ್ಡಾಯಗೊಳಿಸಿವೆ.
ಸಿಎಫ್‌ಎ(ಚಾರ್ಟರ್ಡ್ ಫೈನಾನ್ಸಿಯಲ್ ಅನಲಿಸ್ಟ್)
ವಾಸ್ತವದಲ್ಲಿ ಸಿಎಫ್‌ಎ ಪರೀಕ್ಷಾ ಪದವಿಯಲ್ಲ,ಅದು ವೃತ್ತಿಪರ ಮೆರುಗು ನೀಡುವ ಪರೀಕ್ಷೆಯಾಗಿದೆ. ಇದು ವಿಶ್ವದಲ್ಲಿ ಅತ್ಯಂತ ಕಠಿಣ ಪರೀಕ್ಷೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಅಭಿಪ್ರಾಯಿಸಿದೆ. ಪ್ರತಿ ವರ್ಷ ಶೇ.20ಕ್ಕೂ ಕಡಿಮೆ ಅಭ್ಯರ್ಥಿಗಳು ತೇರ್ಗಡೆಯಾಗುತ್ತಾರೆ....ಅದೂ ಹಲವಾರು ಮರುಪ್ರಯತ್ನಗಳ ಬಳಿಕ!
ಆಲ್ ಸೋಲ್ಸ್ ಪ್ರೈಝ್ ಫೆಲೊಶಿಪ್ ಪರೀಕ್ಷೆ
ಆಕ್ಸ್‌ಫರ್ಡ್ ವಿವಿಯ ಆಲ್ ಸೋಲ್ಸ್ ಕಾಲೇಜು ನಡೆಸುವ ಈ ಪರೀಕ್ಷೆ ವಿಶ್ವದಲ್ಲಿ ಎರಡನೆ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲ್ಪಟ್ಟಿದೆ. ಇತ್ತೀಚಿನವರೆಗೂ ಅಭ್ಯರ್ಥಿಗಳು ಕೇವಲ ಒಂದು ಶಬ್ದವನ್ನು ಆಧರಿಸಿ ಪ್ರಬಂಧವೊಂದನ್ನು ಬರೆಯಬೇಕಾಗಿತ್ತು. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಾಸ್ತವಾಂಶಗಳ ಬೃಹತ್ ಜ್ಞಾನ ಮತ್ತು ಅತ್ಯಂತ ಹೆಚ್ಚು ಕಲ್ಪನಾಶಕ್ತಿ ಅಗತ್ಯವಾಗಿದೆ. ಪ್ರತಿವರ್ಷ ಈ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪೈಕಿ ಕೇವಲ ಇಬ್ಬರು ಫೆಲೊಶಿಪ್‌ಗೆ ಆಯ್ಕೆಯಾಗುತ್ತಾರೆ.
ಮಾಸ್ಟರ್ ಸಮೆಲಿಯರ್ ಡಿಪ್ಲೋಮಾ ಪರೀಕ್ಷೆ
ಈ ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ಅಭ್ಯರ್ಥಿಗಳು 5-6 ಪ್ರಯತ್ನಗಳ ನಂತರ ಪರೀಕ್ಷೆಗೆ ದೊಡ್ಡ ನಮಸ್ಕಾರ ಹಾಕಿಬಿಡುತ್ತಾರೆ. ಥಿಯರಿ, ಸರ್ವಿಸ್ ಮತ್ತು ಬ್ಲೈಂಡ್ ಟೆಸ್ಟಿಂಗ್ ಹೀಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಇದು ತಜ್ಞ ವೈನ್ ತಯಾರಕರ ಪರೀಕ್ಷೆಯಾಗಿರುವುದರಿಂದ ಅಭ್ಯರ್ಥಿಯು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ವೈನಿನ ರುಚಿಯ ಜೊತೆಗೆ ಅದು ತಯಾರಾದ ಪ್ರದೇಶ ಮತ್ತು ಇಸವಿಯನ್ನು ಗುರುತಿಸಬೇಕಾ ಗುತ್ತದೆ. 1940ರಲ್ಲಿ ಈ ಪರೀಕ್ಷೆ ಆರಂಭಗೊಂಡಾಗಿನಿಂದ ಈವರೆಗೆ ಕೇವಲ 200 ಅಭ್ಯರ್ಥಿಗಳು,ಅದೂ ತಮ್ಮ 3 ಅಥವಾ 4ನೆ ಪ್ರಯತ್ನದಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಅತ್ಯಂತ ಸವಾಲಿನ ಪರೀಕ್ಷೆಯನ್ನು ತಾನು ಎದುರಿಸಿದ್ದೇನೆಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾವಿಸಿರಬಹುದು. ಆದರೆ ಕೆಲವು ಪರೀಕ್ಷೆಗಳು ಇತರೆಲ್ಲ ಪರೀಕ್ಷೆಗಳಿಗಿಂತ ಹೆಚ್ಚು ಕಠಿಣವಾಗಿರುತ್ತವೆ ಎನ್ನುವುದು ನಮಗೆ ಗೊತ್ತು. ಇಲ್ಲಿದೆ ವಿಶ್ವದ 10 ಅತ್ಯಂತ ಕಠಿಣ ಪರೀಕ್ಷೆಗಳ ಪಟ್ಟಿ. ಒಮ್ಮೆ ಓದಿಕೊಳ್ಳಿ. ಈ ಪಟ್ಟಿ ಯಾವುದೇ ನಿರ್ದಿಷ್ಟ ಕ್ರಮದಲ್ಲಿಲ್ಲ.