ಬೆಳೆಗಾರರಿಗೆ ವರವಾದ ಕಾಫಿ ತೋಟದ ಸಿಲ್ವರ್‌ಮರ

ಚಿಕ್ಕಮಗಳೂರು, ಜೂ.12: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿಯಾದರೂ ಉಪಬೆಳೆ ಮಾದರಿಯಲ್ಲಿ ಬೆಳೆಯುತ್ತಿರುವ ಸಿಲ್ವರ್ ಮರಗಳು ಬೆಳೆಗಾರರಿಗೆ ಲಾಭದಾಯಕವಾಗಿದೆ.
ಕಾಫಿ ಗಿಡಗಳ ನೆರಳಿಗೆಂದು ಬೆಳೆಯುತ್ತಿರುವ ಸಿಲ್ವರ್ ಮರಗಳು ಇಂದು ಕಾಫಿ ಬೆಳೆಗಾರರಿಗೆ ವರವಾಗಿದೆ. ಚಿಕ್ಕಮಗಳೂರು ದೇಶದಲ್ಲೇ ಅತಿಹೆಚ್ಚು ಸಿಲ್ವರ್ ಬೆಳೆಯುವ ಜಿಲ್ಲೆ ಎನ್ನುವ ಪ್ರಸಿದ್ಧಿ ಪಡೆದಿದೆ. ವಾರ್ಷಿಕ ನೂರಾರು ಕೋಟಿಯಷ್ಟು ವಹಿವಾಟು ನಡೆಸುವ ಸಿಲ್ವರ್ ಮರಗಳು ಸಂಕಷ್ಟವನ್ನು ಎದುರಿಸುತ್ತಿರುವ ಕಾಫಿ ಬೆಳೆಗಾರರಿಗೆ ಕೈತುಂಬಾ ಹಣ ಏಣಿಸಲು ಕೊಡುವ ಮೂಲಕ ಲಾಭ ತಂದು ಕೊಡುತ್ತಿದೆ.
ಹೌದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಸಿಲ್ವರ್ ಮರಗಳನ್ನು ಬೆಳೆಯಲಾಗುತ್ತಿದೆ. ಕಾಫಿ ಗಿಡಗಳ ನೆರಳಿಗಾಗಿ ಬೆಳೆಯುತ್ತಿದ್ದ ಸಿಲ್ವರ್ ಮರಗಳಿಂದು ಕಾಫಿಗಿಂತ ಹೆಚ್ಚು ಲಾಭದಾಯಕ ಬೆಳೆಯಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಕಾಫಿಯಿಂದಾಗುವ ನಷ್ಟವನ್ನು ಸಿಲ್ವರ್ ಮರಗಳು ತುಂಬುತ್ತಿವೆ. ಇಲ್ಲಿನ ಸಿಲ್ವರ್ ಮರಗಳಿಂದ ತಯಾರಾಗುವ ಫ್ಲೈವುಡ್‌ಗಳಿಗೆ ಹೊರರಾಜ್ಯಗಳಲ್ಲೂ ಭಾರೀ ಬೇಡಿಕೆ. ಕಾಫಿನಾಡಲ್ಲಿ ಸಿಲ್ವರ್ ಮರಗಳ ವ್ಯಾಪಾರ ಕೂಡ ಎಗ್ಗಿಲ್ಲದೇ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 56,995 ಹೆಕ್ಟೇರ್‌ಗಳಲ್ಲಿ ಅರೇಬಿಕಾ ಹಾಗೂ 31,565 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯುತ್ತಿದೆ. ಕಾಫಿ ಜೊತೆ ಏಲಕ್ಕಿ, ಕಾಳುಮೆಣಸನ್ನು ಬೆಳೆಯಲಾಗಿದೆ. ನೆರಳಿಗಾಗಿ ಇತರ ಮರಗಳ ಬದಲು ಶೀಘ್ರದಲ್ಲೇ ಬೆಳೆಯುವ ಸಿಲ್ವರ್ ಮರಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಎಕರೆಯಲ್ಲಿ 350ರಿಂದ 400 ಮರಗಳನ್ನು ಬೆಳೆಯಬಹುದು.
ಐದೇ ವರ್ಷಕ್ಕೆ ಕಟಾವಿಗೆ ಬಂದರೂ 10 ವರ್ಷಗಳ ತರುವಾಯ ಕಡಿದರೆ ಮರವೊಂದರಿಂದ 8,000 ದಿಂದ 10,000 ರೂ. ಲಾಭ ಬರುತ್ತದೆ. ಕಟಾವಿಗೆ ಮುನ್ನವೇ ಮರದ ಬುಡದಡಿ ಇನ್ನೊಂದು ಗಿಡವನ್ನು ಬೆಳೆಸಬಹುದು. ಹವಾಮಾನ ವೈಪರೀತ್ಯದಿಂದ ಕಾಫಿ ಇಳುವರಿ ಕಡಿಮೆಯಾದಾಗ ಅಥವಾ ಕಾಫಿಗೆ ರೋಗಗಳು ಹೆಚ್ಚಾದಾಗ ಸಿಲ್ವರ್ ಮರಗಳು ಕಾಫಿ ಬೆಳೆಗಾರಿಗೆ ಸಹಾಯ ಮಾಡುತ್ತಿರುವುದು ಸುಳ್ಳಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿವರ್ಷ ಒಂದಿಲ್ಲೊಂದು ರೀತಿಯ ಸಂಕಷ್ಟದಲ್ಲಿ ಸಿಲುಕುತ್ತಿರುವ ಕಾಫಿ ಬೆಳೆಗಾರರಿಗೆ ಸಿಲ್ವರ್ ಮರಗಳು ಆಸರೆಯಾಗಿವೆ. ಕೇವಲ ಕಾಫಿ ಗಿಡಗಳಿಗಷ್ಟೇ ಅಲ್ಲ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೂ ನೆರಳು ನೀಡುವ ಕಾರ್ಯ ಈ ಸಿಲ್ವರ್ ಮರಗಳಿಂದಾಗುತ್ತಿದೆ. ಆದರೆ ಸಿಲ್ವರ್ ಮರಗಳು ಮಣ್ಣಿನ ಸಾರವನ್ನು ಹೀರಿ ಫಲವತ್ತತೆಯನ್ನು ಹಾಳುಗೆಡವುತ್ತದೆ. ಹೀಗಾಗಿ ಕಾಫಿ ತೋಟಗಳಲ್ಲಿ ಸಿಲ್ವರ್ ಬೆಳೆಗಳು ಲಾಭದಾಯಕವಾದರೂ ಕಾಫಿ ಗಿಡಗಳಿಗೆ ಮಾರಕವಾಗಿದೆ ಎನ್ನುವುದು ವಿಜ್ಞಾನಿಗಳ ಅಂಬೋಣ.
ಭೀಕರ ಬರಗಾಲದಿಂದ ತತ್ತರಿಸುತ್ತಿರುವ ಬೆಳೆಗಾರರಿಗೆ ಸಿಲ್ವರ್ ಮರಗಳು ಉತ್ತಮ ಉಪಬೆಳೆಯಾಗಿ ಲಾಭ ತಂದು ಕೊಡುತ್ತಿವೆ. ಸಣ್ಣಪುಟ್ಟ ಮರಗಳಿಂದ ಹಿಡಿದು ದಪ್ಪವಾಗಿ ಬೆಳೆಯುವ ಮರಗಳು ಲಕ್ಷಾಂತರ ರೂ.ನ್ನು ಜೇಬು ತುಂಬಿಸಲು ನೆರವಾಗುತ್ತಿವೆ. ಕಾಫಿ ಬೆಳೆಯಲ್ಲಿ ನಷ್ಟ ಉಂಟಾದರೂ ಉಪಬೆಳೆಯಲ್ಲಿನ ಲಾಭವು ಸಂಕಷ್ಟವನ್ನು ಕನಿಷ್ಠ ಮಟ್ಟಕ್ಕೆ ಇಳಿಸುತ್ತದೆ. ಕಾಫಿ ಬೆಳೆ ಕೈಕೊಟ್ಟಾಗ ನಮ್ಮನ್ನು ಕೈ ಹಿಡಿಯುವುದು ಸಿಲ್ವರ್ ಮರಗಳಾಗಿವೆ.
ರಮೇಶ್, ಸಿಲ್ವರ್ ಬೆಳೆಗಾರ, ಚಿಕ್ಕಮಗಳೂರು