ಜೋಗ ಜಲಪಾತ : ಸಹಜ ಸೌಂದರ್ಯಕ್ಕೆ ಕೃತಕ ಲೇಪನ ಬೇಕೆ?

ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿಸುವ ಹೆಸರಿನಲ್ಲಿ ಇಲ್ಲಿ ನೆಲೆಸಿರುವ ಸಾಕಷ್ಟು ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವುದಲ್ಲದೆ ಜಲಪಾತವು ತನ್ನ ಪ್ರಾಕೃತಿಕ ನೈಜತೆ ಹಾಗೂ ಅಸ್ತಿತ್ವವನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಪ್ರಕೃತಿಯು ಅದೆಷ್ಟೋ ರಹಸ್ಯಗಳು, ಅಪೂರ್ವ ಸೌಂದರ್ಯ, ರಮಣೀಯತೆ, ರೌದ್ರತೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಅಂತಹ ಅಪರೂಪದ ಸೌಂದರ್ಯರಾಶಿಯನ್ನು ಹಸಿರು ಪತ್ತಲದಲ್ಲಿ ಹೊದ್ದು ಶತ-ಶತಮಾನಗಳಿಂದ ನಿರಂತರವಾಗಿ ಕಾಪಾಡಿಕೊಂಡು ಬಂದಿರುವ ದಟ್ಟ ಕಾನನದ ನಡುವೆ ಶರಾವತಿ ಮೇಲಿನಿಂದ ಧುಮ್ಮ್ಮಿಕ್ಕುವ ಪಶ್ಚಿಮಘಟ್ಟದ ಮುಕುಟಮಣಿ ಎಂದೆನಿಸಿಕೊಂಡ ಸೌಂದರ್ಯದ ಗಣಿಯೇ ಈ ವಿಶ್ವವಿಖ್ಯಾತ ಜೋಗ ಜಲಪಾತ. ಒಮ್ಮೆ ಜಲಧಾರೆಯ ಸೌಂದರ್ಯ ಸವಿದವರು ಈ ರುದ್ರರಮಣೀಯತೆಯನ್ನು ಎಂದಿಗೂ ಮರೆಯಲಾರರು. ಸುಮಾರು ಇನ್ನೂರು ವರ್ಷಗಳ ಹಿಂದೆ ಇಂತಹ ದೊಂದು ಜಲಧಾರೆ ಇದೆಯೆಂದು ಯಾರಿಗೂ ತಿಳಿದಿರಲಿಲ್ಲ. ನಾಲ್ಕು ಕವಲುಗಳಾಗಿ ಭೋರ್ಗರೆವ ಇಂತಹ ಅಪರೂಪದ ಜಲಪಾತವನ್ನು ಕ್ರಿ.ಶ. 1800ರಲ್ಲಿ ಮೊತ್ತಮೊದಲು ಪ್ರಪಂಚಕ್ಕೆ ಬ್ರಿಟಿಷರು ಪರಿಚಯಿಸಿದರು. ನಾಲ್ಕು ಕವಲುಗಳಾಗಿ ಬೀಳುವ ಜಲಧಾರೆಯನ್ನು ರಾಜಾ, ರಾಣಿ, ರೋರರ್ ರಾಕೆಟ್ ಎಂದು ನಾಮಾಂಕಿತಗೊಳಿಸಿದರು. ಈ ಜಲಪಾತವನ್ನು ವೀಕ್ಷಿಸಲು ಹಿಂದೆ ಬ್ರಿಟಿಷರು ಸಮುದ್ರಯಾನದ ಮೂಲಕ ಕಾರವಾರ ಬಂದರಿಗೆ ಬಂದು ತಲುಪಿ ಅಲ್ಲಿಂದ ಕುದುರೆ, ಎತ್ತಿನ ಬಂಡಿಗಳ ಮೂಲಕ ಜೋಗ ಜಲಪಾತದ ವಿಹಂಗಮ ಸೌಂದರ್ಯ ಸವಿಯುತ್ತಿದ್ದರಂತೆ.
ಅಂದು ಗೇರಸೊಪ್ಪಜಲಪಾತದ ಅರ್ಧಭಾಗ ಉತ್ತರಕನ್ನಡ ಜಿಲ್ಲೆಗೂ ಇನ್ನರ್ಧ ಭಾಗ ಮೈಸೂರು ಪ್ರಾಂತಕ್ಕೆ ಸೇರಿತ್ತು. 1902ರಲ್ಲಿ ಲಾರ್ಡ್ ಕರ್ಬನ್ ಎಂಬವರು ಭಾರತದ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಜೋಗ ಜಲಪಾತದಲ್ಲಿ ವಿದ್ಯುತ್ ಉತ್ಪಾದನೆ ಕುರಿತು ಇಂಗ್ಲೆಂಡ್‌ಗೆ ಮೂರು ಪತ್ರಗಳನ್ನು ಬರೆದರೂ ಅಲ್ಲಿನ ಸರಕಾರ ಅನುಮತಿ ನೀಡಲಿಲ್ಲ. ಏಕೆಂದರೆ ಪ್ರಕೃತಿಯ ನೈಜ ಸೌಂದರ್ಯಕ್ಕೆ ಚ್ಯುತಿ ಬರುವುದೆಂದು ನಿರಾಕರಿಸಿದರು. ಪ್ರಸ್ತುತವಾಗಿಯೂ ಇದರ ಕುರಿತು ಉಲ್ಲೇಖವಿದೆ. 1902ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಘಟಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಲಿಂಗನಮಕ್ಕಿಯಲ್ಲಿಯೂ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಆರಂಭಿಸಬೇಕೆಂದು ಯೋಜನೆ ರೂಪಿಸಿದರು. 1945ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲು ಆರಂಭವಾಗಿ 1964ರಲ್ಲಿ ಅಣೆಕಟ್ಟಿನ ಯೋಜನೆ ಕಾಮಗಾರಿ ಕೊನೆಗೊಂಡು ಲಾಲ್‌ಬಹದ್ದೂರ್ ಶಾಸ್ತ್ರಿಯವರು ಈ ಲಿಂಗನಮಕ್ಕಿ ಅಣೆಕಟ್ಟನ್ನು ಲೋಕಾರ್ಪಣೆಗೊಳಿಸಿದರು. ಲಿಂಗನಮಕ್ಕಿ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಹಲವಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು.
ಮೊದಲನೆಯದಾಗಿ 1875ರಲ್ಲಿ ಮಡೆನೂರು ಅಣೆಕಟ್ಟು ಕಟ್ಟುವಾಗ 12 ಹಳ್ಳಿಗಳು ಮುಳುಗಡೆಯಾದವು. ಅಲ್ಲಿಂದ ವಲಸೆ ಬಂದ ಕುಟುಂಬಗಳು ಹಿರೇಬಚ್ಚಗಾರು ಎಂಬ ಪ್ರದೇಶದಲ್ಲಿ ನೆಲೆಸಿದರು. ಅಲ್ಲಿಯೂ ಕೂಡ ಹಿರೇಭಾಸ್ಕರ ಅಣೆಕಟ್ಟನ್ನು ಕಟ್ಟುವಾಗ 50 ಕುಟುಂಬಗಳ ಕೃಷಿಭೂಮಿ, ಮನೆಮಠಗಳು ಜಲಸಮಾಧಿಯಾಯಿತು. ನಂತರ ಕಂಗೆಟ್ಟ ಕುಟುಂಬಗಳು ಜೋಗಫಾಲ್ಸ್-ವಡನ್‌ಬೈಲ್ ಪ್ರದೇಶಗಳಲ್ಲಿ ವಾಸಿಸತೊಡಗಿದರು. ಆದರೆ ಮತ್ತೆ ಸೀತಾ ಅಣೆಕಟ್ಟು ಯೋಜನೆಯ ಮೂಲಕ ಇಲ್ಲಿನ ಜನರಿಗೆ ಮುಳುಗಡೆ ಎಂಬುದು ಶಾಪವಾಗಿ ಪರಿಣಮಿಸಿದೆ. ಏನಿದು ಶಾಪ?
ಸರಕಾರವು ಪ್ರವಾಸೋದ್ಯಮ-ಅಭಿವೃದ್ಧಿ ಹೆಸರಿನಲ್ಲಿ ಸೀತಾ ಅಣೆಕಟ್ಟನ್ನು ಕಟ್ಟಿ ಮತ್ತೊಮ್ಮೆ ಮುಳುಗಡೆಗೆ ಮುಂದಾಗುತ್ತಿರುವುದು ಇಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ನಾಡಿಗೆ ಬೆಳಕು ೀಡಿರುವ ಸಂತ್ರಸ್ತರನ್ನು ಮತ್ತೊಮ್ಮೆ ಬೀದಿಪಾಲು ಮಾಡಲು ರಾಜ್ಯ ಸರಕಾರ ಮುಂದಾಗಿದೆ. ರಾಜ್ಯ ಸರಕಾರ 450 ಕೋಟಿ ರೂ. ವೆಚ್ಚದಲ್ಲಿ ಕೃತಕ ಜಲಪಾತವನ್ನು ಸೃಷ್ಟಿಸಲು ಖಾಸಗಿ ಸಂಸ್ಥೆಯ ಜೊತೆ ಕೈಜೋಡಿಸಿದೆ. ಜೋಗ ಜಲಪಾತದಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನವರೆಗೂ ಮೈದುಂಬಿ ಹರಿಯುವ ಶರಾವತಿ ತನ್ನ ಸಹಜ ಸೌಂದರ್ಯವನ್ನು ಮೆರೆಯುತ್ತಿದೆ. ಆದರೆ ಇಂದು ಸರ್ವಋತುವಿನಲ್ಲೂ ಜೋಗ ಜಲಪಾತದ ಸವಿಯನ್ನು ಉಣಿಸುವ ಪ್ರಯತ್ನಕ್ಕೆ ನಮ್ಮ ಸರಕಾರದ ಈ ಕ್ರಮ ಅವೈಜ್ಞಾನಿಕವೆನಿಸುತ್ತಿದೆ. ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಪರಿವರ್ತಿಸಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವ ಯೋಜನೆ ಉದ್ದೇಶ ಸರಕಾರದ್ದು. ಜೋಗಫಾಲ್ಸ್-ವಡನ್‌ಬೈಲು ಸೀತಾ ಅಣೆಕಟ್ಟು ಯೋಜನೆ: ಮೇಲಿನಿಂದ ಕೆಳಗೆ ಧುಮ್ಮಿಕ್ಕುವ ಶರಾವತಿ ನದಿಯ ನೀರನ್ನು ಪುನರ್ ಬಳಸಿ ಸೀತಾಕಟ್ಟೆಗೆ ಸೇತುವೆಯನ್ನು ಕಟ್ಟಿ ಅಲ್ಲಿ ನೀರನ್ನು ಸಂಗ್ರಹಿಸುವುದು. ಈ ನೀರನ್ನು ಮತ್ತೆ ಜಲಪಾತಕ್ಕೆ ಬಿಡುವುದರಿಂದ ಸರ್ವಋತುವಿನಲ್ಲೂ ಜಲಪಾತ ಧುಮ್ಮಿಕ್ಕುವ ದೃಶ್ಯಕಾವ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರಿಗೆ ಒದಗಿಸಬೇಕು ಹಾಗೂ ಅನೇಕ ಅಭಿವೃದ್ಧಿ ಕೆಲಸಗಳು ಮಾಡಬೇಕೆಂಬುದು ಸರಕಾರದ ಯೋಜನೆ. ಆದರೆ ಇಂತಹ ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿ ನೆಲೆಸಿರುವ ಸಾಕಷ್ಟು ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಜಲಪಾತವು ತನ್ನ ಪ್ರಾಕೃತಿಕ ನೈಜತೆ ಹಾಗೂ ಅಸ್ತಿತ್ವವನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಕೃತಕ ಜಲಪಾತದ ಸೃಷ್ಟಿ ಹೇಗೆ?
ಪ್ರಪಂಚದಲ್ಲಿ ಬಹಳಷ್ಟು ದೊಡ್ಡ ದೊಡ್ಡ ಜಲಪಾತಗಳಿವೆ. ಮೇಲಿನಿಂದ ಕೇಳಕ್ಕೆ ಬೀಳುವ ನೀರಿನ ವಿಭಿನ್ನ ವೈಶಿಷ್ಟತೆ ಹೊಂದಿದ ಪ್ರಪಂಚದ ಏಕೈಕ ಜಲಪಾತವೆಂದರೆ ಜೋಗ ಜಲಪಾತ. ಸರ್ವಋತು ಜಲಪಾತದ ಸೃಷ್ಟಿಗೆ ಮೇಲಿನಿಂದ ಧುಮುಕುವ ಜಲಪಾತದಡಿಯಲ್ಲಿ ನೀರನ್ನು ಸಂಗ್ರಹಿಸಿ ಸಂಗ್ರಹಗಾರದಿಂದ 2,630 ಮೀ. ಉದ್ದದ ಸುರಂಗವನ್ನು ಡಿ. ಆಕೃತಿಯಲ್ಲಿ ಕೊರೆಯುತ್ತಾರೆ. ಈ ಸುರಂಗಗಳಿಗೆ ಪೈಪ್‌ಗಳನ್ನು ಅಳವಡಿಸಿ ನೀರನ್ನು ಮೇಲೆತ್ತಿ ಸೀತಾ ಅಣೆಕಟ್ಟಿನಲ್ಲಿ ಸಂಗ್ರಹಿಸುವುದು. ಸಂಗ್ರಹಿಸಿದ ನೀರನ್ನು ಮತ್ತೆ ಜಲಪಾತಕ್ಕೆ ಬಿಡುವುದು. ಹೀಗೆ ಪುನರಾವರ್ತನೆ ಆಗುತ್ತಿರುತ್ತದೆ. ಇದರಿಂದ ವರ್ಷವಿಡೀ ಭೋರ್ಗರೆವ ಜಲಪಾತದ ದೃಶ್ಯವನ್ನು ಕಾಣಬಹುದು. ಇದೊಂದು ಕೃತಕ ಜಲಪಾತ ನಿರ್ಮಿಸುವ ಸರಕಾರದ ಯೋಜನೆ.
ಪರಿಣಾಮ: ಕೃತಕ ಜಲಪಾತದ ಸೃಷ್ಟಿಗೆ 2 ಗುಡ್ಡಗಳು ಆವಶ್ಯಕ. ಜಲಪಾತದಡಿಯಲ್ಲಿ ಸಂಗ್ರಹಿದ ನೀರನ್ನು ಮೆಲೆಕ್ಕೆತ್ತಲು ಸುರಂಗ ನಿರ್ಮಿಸಬೇಕು. ಈ ಸುರಂಗ ಕೊರೆಯಲು ದೊಡ್ಡ ದೊಡ್ಡ ಡೈನಮೈಟ್‌ಗಳಿಂದ ಬಂಡೆಗಳನ್ನು ಸಿಡಿಸುತ್ತಾರೆ. ಈ ಸ್ಪೋಟದ ಕಂಪನದಿಂದ ಜಲಪಾತಕ್ಕೆ ಹಾನಿಯಾಗುವುದಲ್ಲದೆ, ಸಾಕಷ್ಟು ಪ್ರದೇಶಗಳ ವ್ಯಾಪ್ತಿಗಳ ಗುಡ್ಡಗಳು ಸಡಿಲವಾಗಿ ಕುಸಿಯಲಾರಂಭಿಸುತ್ತವೆೆ. ಹಾಗೂ ಸಹಜ ಸೌಂದರ್ಯ ಕಣ್ಮರೆಯಾಗುವುದಲ್ಲದೆ, ನೀರಿನ ಹರಿವನ್ನು ತಡೆಯುವುದರಿಂದ ಜಲಾನಯನ ಪ್ರದೇಶದಿಂದ ಶರಾವತಿಗೆ ಬಂದು ಸೇರುವ ಉಪ ನದಿಗಳು ದಿಕ್ಕು ತಪ್ಪುತ್ತದೆ. ಅನೇಕ ಜೀವರಾಶಿಗಳ ಆವಾಸಕ್ಕೆ ನೀರಿನ ಕೊರತೆಯುಂಟಾಗುತ್ತದೆ.
ಸರ್ವಋತು ಜಲಪಾತದ ಸೌಂದರ್ಯ ಸವಿಯಲು 200 ರೂ.ಗಳ ಟಿಕೇಟ್ ದರವನ್ನು ಕೂಡ ನಿಗದಿಪಡಿಸಿದ್ದಾರೆ. ಇದು ಪ್ರಕೃತಿ ಪ್ರಿಯರ ಆಕ್ರೋಶಕ್ಕೆ ಎಡೆಮಾಡಿದೆ. ತಮ್ಮೂರಿನ ಜಲಪಾತ ಸವಿಯಲು 200 ರೂ.ಗಳನ್ನು ನೀಡಬೇಕೇ..? ಎಂಬ ಜಿಜ್ಞಾಸೆಗೆ ಅವರು ಒಳಗಾಗಿದ್ದಾರೆ. ಊರಿಗೆ ಯಾರೇ ಅತಿಥಿಗಳು ಬಂದರೆ ಹೆಮ್ಮೆಯಿಂದ ಜೋಗ ಜಲಪಾತಕ್ಕೆ ಕರೆದೊಯ್ಯುವ ಆತಿಥ್ಯಕ್ಕೆ ತಡೆ ಒಡ್ಡಿದಂತಾಗಿದೆ... ಇದು ಎಷ್ಟು ಸಮಂಜಸ?
ಪ್ರಕೃತಿಯಲ್ಲಿನ ನೈಜ ಸೌಂದರ್ಯಕ್ಕೆ ಸರ್ವಋತು ಕೃತಕ ಜಲಪಾತವೆಂಬ ಮಸಿಯನ್ನು ಬಳಿಯುವುದು ಬೇಡ. ಉದಾಹರಣೆಗೆ ಅಮರನಾಥ ದೇವಾಲಯ ದರ್ಶನ ವರ್ಷದ ಮೂರೇ ತಿಂಗಳಾದರೂ ದೇಶದಾದ್ಯಂತ ಯಾತ್ರಿಕರು ಹೋಗುವುದಿಲ್ಲವೇ...? ಹಾಗಾದರೆ ಜೋಗಜಲಪಾತ ವೀಕ್ಷಣೆಗೆ ನಾಲ್ಕೈದು ತಿಂಗಳುಗಳು ಸಾಲದೇ...?
ಪ್ರಕೃತಿ ವಿರುದ್ಧ ನಮಗೆ ಸರಸ ಸಲ್ಲ. ಆದ್ದರಿಂದ ಶರಾವತಿ ಅಭಯಾರಣ್ಯ, ವಿಶ್ವ ಪರಂಪರೆಯ ಅಗ್ರತಾಣವಾದ ಪಶ್ಚಿಮಘಟ್ಟಗಳ ನಡುವೆ ಇರುವ ಜೋಗ ಜಲಪಾತದ ನೈಜತೆಗೆ ಪ್ರಾಶಸ್ತ್ಯವನ್ನು ನೀಡಿ ಪ್ರಕೃತಿ ನಮಗೆ ನೀಡಿದ ಜೋಗ ಜಲಪಾತವೆಂಬ ಅಮೂಲ್ಯ ಐಸಿರಿಯನ್ನು ಸಂರಕ್ಷಿಸಲು ಮುಂದಾಗೋಣವೇ...?