ಶಾಲೆ ತೊರೆದವಳ ಸಾಧನೆ!
ಶಾಲೆ ತೊರೆದ 18ರ ಹರೆಯದ ಹುಡುಗಿಯ ವಿಶ್ವಸಂಸ್ಥೆಯೆಡೆಗಿನ ಪಯಣ

‘‘ಚಿಕಿತ್ಸೆಗೆ ಹಣ ತೆರಲಾರದ ಕನಿಷ್ಠ ಐದಾರು ರೋಗಿಗಳಿಗೆ ಪ್ರತೀದಿನ ನನ್ನ ತಾಯಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಆಕೆಗಿಂತ ಶ್ರೇಷ್ಠ ದಾನಿಯನ್ನು ನಾನು ಕಂಡಿಲ್ಲ. ಕಾಯಿಲೆಯಿಂದ ಗುಣವಾದ ಬಳಿಕ ರೋಗಿಗಳ ಮುಖದಲ್ಲಿ ಮುಗುಳ್ನಗೆ ಕಂಡಾಗ ನನ್ನ ಜೀವನದ ಗುರಿ ಏನೆಂದು ನಾನು ನಿರ್ಧರಿಸಿದೆ.’’
-ಪೂರ್ವಪ್ರಭಾ ಪಾಟೀಲ್
‘ಜ್ಞಾನದ ಏಕೈಕ ಮೂಲ ಅನುಭವ’
-ಅಲ್ಬರ್ಟ್ ಐನ್‌ಸ್ಟೀನ್
ತನ್ನ 18ರ ಹರೆಯದ ಮಗಳು ಪೂರ್ವಾಪ್ರಭಾ ಪಾಟೀಲ್, ಮಲ್ಟಿ-ಸ್ಟೇಕ್-ಹೋಲ್ಡರ್ ಫೋರಂ ಆನ್ ಸಯನ್ಸ್, ಟೆಕ್ನಾಲಾಜಿ ಆ್ಯಂಡ್ ಇನ್ನೊವೇಶನ್ (ಎಸ್‌ಟಿಐ) ಫಾರ್ ಸಸ್ಟೈನೇಬಲ್ ಡೆವಲಪ್‌ಮೆಂಟ್ ಗೋಲ್ಸ್ (ಎಸ್‌ಡಿಜಿಎಸ್)ನ ಪ್ರತಿನಿಧಿಯಾಗಿ ಈ ವರ್ಷ ಮೇ 15 ಮತ್ತು 16ರಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಪ್ರಶಂಸೆಗೆ ಪಾತ್ರಳಾದ ಡಾ. ರಾಧಾರಾಣಿ ಪಾಟೇಲ್‌ಗೆ ಅದೊಂದು ಹೆಮ್ಮೆಯ ಗಳಿಗೆಯಾಗಿತ್ತು.
ಪೂರ್ವಳ ಪಾಲಿಗೆ ಅದೊಂದು ದೀರ್ಘಪ್ರಯಾಣ. ಪೂರ್ವಳಿಗೆ ಹತ್ತು ವರ್ಷವಾದಾಗ ಅವಳ ಪೋಷಕರು ವಿಚ್ಛೇದನ ಪಡೆದರು. ರಾಧಾರಾಣಿಗೆ ತನ್ನ ಎರಡೂ ಮಕ್ಕಳ ಜವಾಬ್ದಾರಿ ದೊರಕಿತು. ತನ್ನ ವಯಸ್ಸಿಗೇ ತುಂಬಾ ಪ್ರತಿಭಾವಂತೆಯಾಗಿದ್ದ ಪೂರ್ವ ಹದಿಹರೆಯ ತಲುಪಿದಾಗ ಶಾಲೆಯಲ್ಲಿ ಅವಳಿಗೆ ಸಮಸ್ಯೆಗಳು ಎದುರಾದವು.
ತನ್ನ ಮೊದಲ ಶಾಲೆಯಲ್ಲಿ ತನಗಾದ ಅತ್ಯಂತ ಆಘಾತಕಾರಿ ಅನುಭವಗಳನ್ನು ಅವಳು ಹೀಗೆ ಬಿಚ್ಚಿಟ್ಟಿದ್ದಾಳೆ: ‘‘ಅದೊಂದು ಸರಕಾರಿ ಬೋರ್ಡ್‌ಶಾಲೆ. ಎಲ್ಲವೂ ನನಗೆ ಅತ್ಯಂತ ಸುಲಭ ಅನಿಸಿತು. ಶಿಕ್ಷಕರು ಮೊದಲ ಪ್ಯಾರಾ ವಿವರಿಸುತ್ತಿರುವಾಗಲೇ ನಾನು ಇಡೀ ಅಧ್ಯಾಯ ಓದಿ ಅರ್ಥಮಾಡಿಕೊಳ್ಳುತ್ತಿದ್ದೆ. 7ನೆ ತರಗತಿಯಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಶಿಕ್ಷಕಿ ನಮಗೆ ಬಾಲಿಂಗ್ ಪಾಂಟ್ ಮತ್ತು ಫ್ರೀಜಿಂಗ್ ಪಾಂಟ್ ಬಗ್ಗೆ ಪಾಠಮಾಡುತ್ತಿದ್ದರು. ಬಾಲಿಂಗ್ ಪಾಂಟ್‌ನಲ್ಲಿ ಪಾದರಸಕ್ಕೆ ಏನಾಗುತ್ತದೆಂದು ನಾನು ಅವರೊಡನೆ ಕೇಳಿದೆ. ಈ ಪ್ರಶ್ನೆಗೆ ಮುಂದಕ್ಕೆ ಅಧ್ಯಾಯದಲ್ಲಿ ಉತ್ತರ ಬರುತ್ತದೆ ಅಲ್ಲಿ ವರೆಗೆ ನಾನು ತಾಳ್ಮೆಯಿಂದಿರಬೇಕು ಎಂದು ಹೇಳಿ ಅವರು ನನ್ನನ್ನು ಕಡೆಗಣಿಸಿದರು. ನಾನು ಇಡೀ ಅಧ್ಯಾಯವನ್ನು ಓದಿಯಾಗಿದೆ, ಎಲ್ಲೂ ಉತ್ತರವಿಲ್ಲ ಎಂದೆ. ಆಕೆ ಕ್ರುದ್ಧರಾದರು, ನನ್ನನ್ನು ತರಗತಿಯಿಂದ ಹೊರಗೆ ನಡೆಯುವಂತೆ ಹೇಳಿದರು. ರೆಬೆಲ್ ಆಗಿದ್ದ ನಾನು, ನನಗೆ ಸರಿ ಅನ್ನಿಸಿದ್ದನ್ನು ಹೇಳಿದಕ್ಕೆ ಎಂದೂ ತಪ್ಪಾಯ್ತು ಎನ್ನಲಿಲ್ಲ.’’
ನಿಧಾನವಾಗಿ ಪೂರ್ವಳಿಗೆ ಶಾಲೆ ಇನ್ನಷ್ಟು ಕಠಿಣವಾಗತೊಡಗಿತು. ಅವಳ ತಲೆಕೂದಲು ಗಿಡ್ಡವಾಗಿದ್ದರೂ, ಪೊನಿ ಟೈಲ್ ಹಾಕಿಕೊಂಡಿಲ್ಲವೆನ್ನುವಂತಹ ಚಿಕ್ಕ-ಚಿಕ್ಕ ವಿಷಯಗಳಿಗಾಗಿ ಅವಳಿಗೆ ಶಿಕ್ಷೆ ಕೊಡಲಾಯಿತು. ಅವಳು ಒಳವಸ್ತ್ರ ಹಾಕಿಕೊಂಡಿದ್ದಾಳೋ ಇಲ್ಲವೋ ಎಂದು ಪರೀಕ್ಷಿಸಲು ಶಿಕ್ಷಕಿಯರು ಅವಳ ಸ್ಕರ್ಟ್ ಎತ್ತಿ ನೋಡುತ್ತಿದ್ದರು.
ಸ್ವಲ್ಪವೇ ಸಮಯದಲ್ಲಿ, ಪೂರ್ವ ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು. ದಿಢೀರ್ ಬದಲಾವಣೆಯಿಂದ ಅವಳು ತುಂಬಾ ನೊಂದುಕೊಂಡಳು.
ಅವಳಿಗೆ ಶಾಲೆಗೆ ಹೋಗುವ ಉತ್ಸಾಹವೇ ಇಲ್ಲವಾಯಿತು. ಇನ್ನೊಂದೆಡೆ ಅವಳ ತಾಯಿ ತುಂಬಾ ಸಾಲ ಮಾಡಿದ್ದರು. ಅವರು ಒಂದು ದಿನ ಕೂಡ ರಜೆ ಹಾಕುವಂತಿರಲಿಲ್ಲ. ಆದರೂ ಆಕೆ ಪೂರ್ವಳಿಗೆ ಬೆಂಬಲವಾಗಿ ನಿಂತು ಮನೆಯಲ್ಲೇ ಅವಳಿಗೆ ಪಾಠ ಹೇಳಲಾರಂಭಿಸಿದರು. ಪೂರ್ವ ಒಂದು ವಾರದ ಕೆಲಸವನ್ನು ಒಂದೇ ದಿನದಲ್ಲಿ ಮುಗಿಸುತ್ತಿದ್ದಳು. ಉಳಿದ ಸಮಯದಲ್ಲಿ ಸಂಸ್ಥೆಯೊಂದರಲ್ಲಿ ಗ್ರಾಫಿಕ್ ಡಿಸೈನ್ ಕಲಿಯುತ್ತಿದ್ದಳು. ಮೂರು ತಿಂಗಳ ಈ ಕೋರ್ಸ್‌ನ್ನು ಆಕೆ ಒಂದೇ ತಿಂಗಳಲ್ಲಿ ಪೂರೈಸಿದಳು. ಒಂದೇ ವರ್ಷದಲ್ಲಿ ತನ್ನ ಆತ್ಮ ವಿಶ್ವಾಸವನ್ನು ಮರಳಿ ಪಡೆದ ಪುರ್ವ ಪುನಃ ಶಾಲೆಗೆ ಹೋಗಲು ಸಿದ್ಧಳಾದಳು. ರತ್ನಗಿರಿಯಲ್ಲಿದ್ದ ಎರಡೂ ಶಾಲೆಗಳಲ್ಲಿ ಅವಳಿಗೆ ಪ್ರವೇಶ ಸಿಗದಿದ್ದುದರಿಂದ ಆಕೆಯನ್ನು ಕೊಲ್ಹಾಪುರದ ವಸತಿ ಶಾಲೆಯೊಂದಕ್ಕೆ ಕಳುಹಿಸಿ ಕೊಡಲಾಯಿತು. ಆ ಸಿಬಿಎಸ್‌ಇ ಶಾಲೆಯಲ್ಲಿ ಆಕೆ ಪಾಠ ಹಾಗೂ ಪಠ್ಯೇತರ-ಎರಡೂ ಚಟುವಟಿಕೆಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿದಳು.
ಹಲವಾರು ಸ್ಪರ್ಧೆಗಳಲ್ಲಿ, ಸಮಾರಂಭಗಳಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸಲಾರಂಭಿಸಿದ ಪೂರ್ವ 10ನೆ ತರಗತಿಯಲ್ಲಿ ಶೇ.95.02 ಅಂಕಗಳಿಸಿದಳು. ಆಗ ಅವಳಿಗೆ ತನ್ನ ಜೀವನದ ಗುರಿಗಳನ್ನು ತಲುಪುವ ಸಮಯ. ಆಕೆ ಕೋಚಿಂಗ್‌ಗೆ ಕೋಟಾಕ್ಕೆ ಹೋದಳು. ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲಿ ಕ್ಕಾಗಿ ಆಕೆ ಅಧ್ಯಯನದ ಮೇಲೆ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿದಳಾದರೂ, ಖಾಸಗಿ ವೈಯಕ್ತಿಕ ಬದುಕಿಗೆ ಸಮಯ ಸಿಗದೆ ಇದ್ದುದರಿಂದ ಅವಳು ಖಿನ್ನತೆಗೊಳಗಾದಳು. ಆದರೂ 12ನೆ ತರಗತಿಯಲ್ಲಿ ಆಕೆ ಶೇ.93 ಅಂಕಗಳಿಸಿದಳು. ಎಲ್ಲ ಪ್ರವೇಶ ಪರೀಕ್ಷೆಗಳಲ್ಲೂ ಆಕೆ ನಿಜವಾಗಿ ಉತ್ತಮ ಅಂಕಗಳನ್ನು ಪಡೆದಿದ್ದರೂ ಹಣದ ಕೊರತೆಯಿಂದಾಗಿ ಆಕೆಗೆ ವಿದೇಶದಲ್ಲಿ ಅಧ್ಯಯನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡ ಆಕೆ 32 ದಿನಗಳ ಕಾಲ ತನ್ನ ಮನೆಯಿಂದ ಹೊರಗೇ ಬರಲಿಲ್ಲ.
ಅಂತಿಮವಾಗಿ, ಮನೋವೈದ್ಯ ರೊಬ್ಬರ ನೆರವಿನಿಂದ ಆರು ತಿಂಗಳೊಳ ಗಾಗಿ ಪೂರ್ವ ಚೇತರಿಸಿಕೊಂಡಳು. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಆಕೆ ಪ್ರವೇಶ ಪರೀಕ್ಷೆ ಬರೆದಳಾದರೂ ಕೆಲವೇ ದಿನಗಳಲ್ಲಿ ಅದು ಸಿಂಧುವಲ್ಲ ಎಂದು ಆಕೆಗೆ ತಿಳಿಸಲಾಯಿತು. ಕೊನೆಗೆ ನೀಟ್ ಪರೀಕ್ಷೆ ಬರೆದು ಆಕೆ ಕೆಎಂಸಿ ಸೇರಿದಳು.
ಈಗ ಎಂಬಿಬಿಎಸ್‌ನ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಯಾಗಿ ರುವ ಪೂರ್ವ, ಕೆಎಂಸಿಯ ಸ್ಟೂಡೆಂಟ್ ರಿಸರ್ಚ್ ಫೋರಂನ ರಿಸರ್ಚ್ ಇಂಟರ್ನ್, ವಲಂಟಿಯರ್ ಸರ್ವಿಸ್ ಆರ್ಗನೈಜೇಶನ್, ಕಿಡ್-ಎಕ್ಸ್, ಕಟಿಂಗ್ ಎಜ್, ಬಯೋಎಥಿಕ್ಸ್ ಕಮಿಟಿ ಇತ್ಯಾದಿ ಹಲವಾರು ಸಂಘ, ಸಂಘಟನೆಗಳ ಹಾಗೂ, ಕೆಎಂಸಿ ವಿದ್ಯಾರ್ಥಿ ಸಂಘದ ಸದಸ್ಯೆ ಆಗಿದ್ದಾಳೆ. ಅನೇಕ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿ ಕೊಂಡಿರುವ ಪೂರ್ವ ಅನೇಕ ಎನ್‌ಜಿಒಗಳಲ್ಲಿ ಸಕ್ರಿಯಳಾಗಿದ್ದಾಳೆ. ಆರೋಗ್ಯ, ನೈರ್ಮಲ, ಹಸಿವು, ಬಡತನ, ಶಿಶು ಕಲ್ಯಾಣ, ಲಿಂಗ ಸಮಾನತೆ, ವನ್ಯ ಜೀವಿ ಸಂರಕ್ಷಣೆ ಹಾಗೂ ಹವಾಮಾನ ಬದಲಾವಣೆ ಗೆ ಸಂಬಂಧಿಸಿ ಕಾರ್ಯವೆಸಗುವ ಸಂಘಟನೆಗಳಲ್ಲೂ ಆಕೆ ತನ್ನನ್ನು ತೊಡಗಿಸಿಕೊಂಡಿದ್ದಾಳೆ.
ಈ ವರ್ಷ, ಮೇ ತಿಂಗಳಲ್ಲಿ ಪೂರ್ವ, ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ಭಾರತದ ಪ್ರತಿನಿಧಿಯಾಗಿ ದೇಶ ಹೆಮ್ಮೆಪಡುವಂತೆ ಮಾಡಿದಳು.
‘‘ಮುಂಬೈಯಲ್ಲಿ ನಾನು ಮಗುವಾಗಿದ್ದಾಗ ವೈದ್ಯರೊಬ್ಬರು ನನ್ನ ಐಕ್ಯೂ ಟೆಸ್ಟ್ ಮಾಡಿದರು. ಅದರಲ್ಲಿ ನನಗೆ 145 ಅಂಕ ದೊರಕಿತು. ನಾನು ಸಾಮಾನ್ಯ ಶಾಲೆಗೆ ಹೊಂದುವವಳಲ್ಲ ಎಂದು ಅವರು ನನ್ನ ತಾಯಿಗೆ ಹೇಳಿದ್ದರು.’’ ಎನ್ನುತ್ತಾಳೆ ಪೂರ್ವ.
ಕೃಪೆ: ದಿ ಬೆಟರ್ ಇಂಡಿಯಾ.ಕಾಮ್







