ಶಿವಮೊಗ್ಗ: ಗಾಂಜಾ ದಂಧೆ ವಿರುದ್ಧ ಪೊಲೀಸ್ ಇಲಾಖೆ ಸಮರ
ಶಿವಮೊಗ್ಗ ನಗರದಲ್ಲಿ ವಿಪರೀತ ಮಟ್ಟಕ್ಕೆ ತಲುಪಿರುವ ಗಾಂಜಾ ಮಾರಾಟ ದಂಧೆಯ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಅಕ್ಷರಶಃ ಸಮರ ಸಾರಿದೆ! ಇತ್ತೀಚೆಗಷ್ಟೆ ಗಾಂಜಾ ಮಾರಾಟ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿ, 24 ಜನರನ್ನು ಬಂಧಿಸುವ ಮೂಲಕ ಗಾಂಜಾ ದಂಧೆಕೋರರ ನಿದ್ದೆಗೆಡುವಂತೆ ಮಾಡಿದ್ದ ಪೊಲೀಸರು, ಈಗ ಗಾಂಜಾದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಗಾಂಜಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆಯು ಕರಪತ್ರ ಮುದ್ರಿಸಿ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದೆ. ಹೊಟೇಲ್, ಅಂಗಡಿ-ಮುಂಗಟ್ಟು, ಬಸ್ ನಿಲ್ದಾಣ, ಆಟೊ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಈ ಕರಪತ್ರವನ್ನು ಪೊಲೀಸರೇ ಖುದ್ದು ಅಂಟಿಸುವುದರ ಜೊತೆಗೆ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದಾರೆ.
ಸಾಮಾಜಿಕ ಸಂಪರ್ಕ ಜಾಲತಾಣಗಳ ಮೂಲಕವೂ ಪೊಲೀಸ್ ಇಲಾಖೆ ಕರಪತ್ರ ರವಾನಿಸುತ್ತಿದೆ. ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತಿತರ ಸಂಪರ್ಕ ತಾಣಗಳಲ್ಲಿ ಕರಪತ್ರಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ.
ನಗರದಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದ್ದ ಗಾಂಜಾ ಮಾರಾಟ ದಂಧೆಗೆ ಕಳೆದ ಕೆಲ ದಿನಗಳಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ಕಡಿವಾಣ ಬೀಳುವಂತಾಗಿದೆ. ದಂಧೆಯಲ್ಲಿ ತೊಡಗಿದ್ದ ಕೆಲವರು ಬಂಧನ ಭೀತಿಯಿಂದ ತಲೆಮರೆಸಿಕೊಳ್ಳಲಾರಂಭಿಸಿದ್ದಾರೆಂಬ ಮಾಹಿತಿಯನ್ನು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ಅವ್ಯಾಹತ
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಗಾಂಜಾ ಮಾರಾಟ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ದೊಡ್ಡ ಜಾಲವೇ ಕಾರ್ಯಾನಿರ್ವಹಣೆ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿತ್ತು. ಯುವಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಭಾರೀ ದೊಡ್ಡ ಸಂಖ್ಯೆಯಲ್ಲಿ ಗಾಂಜಾ ದುಶ್ಚಟಕ್ಕೆ ಬಲಿಯಾಗಿದ್ದರು. ನಗರದ ಕೆಲ ಬಡಾವಣೆಗಳಲ್ಲಿ ಹೋಟೆಲ್, ಅಂಗಡಿಗಳಲ್ಲಿಯೂ ಗಾಂಜಾ ಪೊಟ್ಟಣಗಳ ಮಾರಾಟ ನಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಉಳಿದಂತೆ ದಂಧೆಕೋರರೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸೆಳೆದು, ಗಾಂಜಾ ಮಾರಾಟ ನಡೆಸುತ್ತಿದ್ದರು. ಈ ದಂಧೆ ಅತ್ಯಂತ ವ್ಯವಸ್ಥಿತವಾಗಿ, ಗುಪ್ತವಾಗಿ ನಡೆದುಕೊಂಡು ಬಂದಿತ್ತು. ಇತ್ತೀಚೆಗೆ ಪೊಲೀಸ್ ಇಲಾಖೆಯ ವಿಶೇಷ ತಂಡಗಳು ನಗರದ ವಿವಿಧೆಡೆ ಗಾಂಜಾ ಮಾರಾಟ ಅಡ್ಡೆಗಳ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿ, 24 ಜನರ ಸೆರೆ ಹಿಡಿದಿತ್ತು. ಈ ದಂಧೆಯ ವಿರುದ್ಧ ಸಮರ ಸಾರಿತ್ತು.
ಬಡಾವಣೆಗಳಲ್ಲಿ ಸಭೆ
ಬಡಾವಣೆಗಳಲ್ಲಿ ಸಾರ್ವಜನಿಕ ಸಭೆೆ ನಡೆಸಿ, ‘‘ನಿಮ್ಮ ಪ್ರದೇಶದ ಸುತ್ತಮುತ್ತ ಗಾಂಜಾ ಮಾರಾಟ ನಡೆಯುತ್ತಿದ್ದರೆ, ಇದರ ಬಗ್ಗೆ ಮಾಹಿತಿ ನೀಡಿ. ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು’’ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಜನಹಿತವಾದ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮ್ಮ ವ್ಯಾಪ್ತಿಯಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಗಾಂಜಾ ದಂಧೆಯ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಲಾರಂಭಿಸಿದ್ದಾರೆ.
ಏನಿದೆ ಕರಪತ್ರದಲ್ಲಿ?
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಮನವಿ ಮಾಡಿಕೊಂಡಿರುವ ಕರಪತ್ರದಲ್ಲಿ ‘‘ಶಿವಮೊಗ್ಗ ನಗರದಲ್ಲಿ ಗಾಂಜಾ ನಿಯಂತ್ರಣದ ಬಗ್ಗೆ ಕರಪತ್ರ ಆರಂಭಿಸಿದೆ. ನಿಮ್ಮ ಸುತ್ತಮುತ್ತಲಿನಲ್ಲಿ ಯಾರಾದರೂ ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಅಥವಾ ಸೇವನೆ ಮಾಡುವುದು ಕಂಡುಬಂದಲ್ಲಿ ತಕ್ಷಣವೇ ಶಿವಮೊಗ್ಗದ ಪೊಲೀಸ್ ಅಧೀಕ್ಷಕರಿಗೆ ಈ ಕೆಳಕಂಡ ದೂರವಾಣಿ ಮೂಲಕ ಅಥವಾ ವ್ಯಾಟ್ಸ್‌ಆ್ಯಪ್ ಮುಖಾಂತರ ತಿಳಿಸಬೇಕಾಗಿ ವಿನಂತಿ. ದೂರವಾಣಿ ಸಂಖ್ಯೆ-9480803300, 9480803301ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ತಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು’’ ಎಂದು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ತಿಳಿಸಿದೆ.