ಸಿಬಿಎಸ್‌ಇ: ಮೌಲ್ಯಮಾಪನದ ಎಡವಟ್ಟುಗಳು

ಸಿಬಿಎಸ್‌ಇ ಕ್ಲಾಸ್ 12 ಪರೀಕ್ಷೆಗೆ ಈ ಸಲ ಒಟ್ಟು 10,98,420 ವಿದ್ಯಾರ್ಥಿಗಳು 3,503 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
2016ರಲ್ಲಿ ಸಿಬಿಎಸ್‌ಇ ತನ್ನ ಬೋರ್ಡ್ ಪರೀಕ್ಷೆ ಉತ್ತರ ಪತ್ರಿಕೆಗಳು ಲಗಾಯ್ತಿನಿಂದ ನಡೆದುಕೊಂಡು ಬಂದಿದ್ದ ಮರುವೌಲ್ಯಮಾಪನ ವ್ಯವಸ್ಥೆಯನ್ನು ರದ್ದುಪಡಿಸಿತು -ಮರುವೌಲ್ಯಮಾಪನಕ್ಕೆ ಕೆಲವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂಬ ಕಾರಣಕ್ಕಾಗಿ. ಅಂಕಗಳನ್ನು ಕೊಡಿಸುವಾಗ ಸಿಬಿಎಸ್‌ಇ ಕೂಡಾ ತಪ್ಪುಗಳನ್ನು ಮಾಡುವುದರಿಂದ ಅದು ಉತ್ತರ ಪತ್ರಿಕೆಗಳ ಮರುವೌಲ್ಯಮಾಪನವನ್ನು ರದ್ದುಗೊಳಿಸಬಾರದಿತ್ತು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್(ಸಿಬಿಎಸ್‌ಇ) 2017ರ 12ನೆ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಮೇ 28ರಂದು ಪ್ರಕಟಿಸಿತು. ಆದರೆ ಹೀಗೆ ಫಲಿತಾಂಶಗಳನ್ನು ಪ್ರಕಟಿಸುವಾಗ ಅದು ನ್ಯಾಯಯುತವಾಗಿ ನಡೆದುಕೊಂಡಿಲ್ಲ ಅಥವಾ ಅದು ಮೇಲಿನ ಅಧಿಕಾರಿಗಳ ಒತ್ತಡದಲ್ಲಿ ಪ್ರಕಟಿಸಿದೆ ಅನ್ನಿಸುತ್ತದೆ. ಅದು ಅಂಕಗಳ ಎಣಿಕೆಯಲ್ಲಿ ತಪ್ಪುಗಳನ್ನು ಮಾಡಿದೆ ಎಂದು ಹಲವು ವರದಿಗಳು ಹೇಳುತ್ತಿರುವಾಗ, ದೇಶದ ಅತ್ಯಂತ ದೊಡ್ಡ ಪರೀಕ್ಷಾ ಮಂಡಳಿಯ ಸಾಚಾತನದ ಬಗ್ಗೆ ಒಂದು ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಇತ್ತೀಚೆಗೆ ಸಿಬಿಎಸ್‌ಇ ಬೋರ್ಡ್‌ನ ಪರೀಕ್ಷೆಗೆ ಹಾಜರಾದ ಹಲವಾರು ವಿದ್ಯಾರ್ಥಿಗಳು ತಮಗೆ ದೊರೆತ ಅಂಕಗಳ ಬಗ್ಗೆ ನಿರಾಶರಾಗಿದ್ದಾರೆ. ದಿಲ್ಲಿಯ ಓರ್ವ ವಿದ್ಯಾರ್ಥಿನಿ ಸೋನಾಲಿ ತನಗೆ ಬೋರ್ಡ್ ಪರೀಕ್ಷೆಯಲ್ಲಿ ಗಣಿತದಲ್ಲಿ 68 ಅಂಕಗಳು ಬಂದಿವೆ ಎಂದು ತಿಳಿದಾಗ ಆಘಾತಕ್ಕೊಳಗಾದಳು.
ದಿಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರವೇಶ ಬಯಸಿದ್ದ ಇನ್ನೋರ್ವ ವಿದ್ಯಾರ್ಥಿನಿ ಸಮೀಕ್ಷಾ ಶರ್ಮರಿಗೆ, ತನಗೆ ಗಣಿತದಲ್ಲಿ ಕೇವಲ 42 ಅಂಕಗಳು ದೊರೆತಿವೆ ಎಂದು ತಿಳಿದಾಗ ಆಘಾತವಾಯಿತು.
ಬಳಿಕ ಈ ಇಬ್ಬರು ವಿದ್ಯಾರ್ಥಿನಿಯರು ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು.
ಪರಿಣಾಮವಾಗಿ ಅವರ ಅಂಕಗಳು ಹೀಗೆ ದ್ವಿಗುಣಗೊಂಡವು:
ಸೊನಾಲಿ: 68 ಅಂಕಗಳಿಂದ 95 ಅಂಕಗಳಿಗೆ. ಸಮೀಕ್ಷಾ: ಕೇವಲ 42 ಅಂಕಗಳಿಂದ 90 ಅಂಕಗಳಿಗೆ.
ಎಣಿಕೆಯ ಹೆಚ್ಚಿನ ತಪ್ಪುಗಳು ಗಣಿತ ಮತ್ತು ಅರ್ಥಶಾಸ್ತ್ರದ ವಿಷಯದಲ್ಲಿ ಆಗಿದ್ದವು.
ವರದಿಗಳ ಪ್ರಕಾರ ಅಂಕಗಳ ಮರುಎಣಿಕೆಗೆ ಈ ಬಾರಿ (ಮೊತ್ತ ಮೊದಲ) ದಾಖಲೆ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸಿಬಿಎಸ್‌ಇ ಉತ್ತರ ಪತ್ರಿಕೆಗಳನ್ನು ಪರೀಕ್ಷಿಸುವಾಗ ಕೂಡಾ ತಪ್ಪುಗಳಾಗುತ್ತದೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿರುವಂತೆ, ಸಿಬಿಎಸ್‌ಇ ತನ್ನ ಮರುವೌಲ್ಯಮಾಪನ ನೀತಿಯನ್ನು ರದ್ದು ಮಾಡಬಾರದಾಗಿತ್ತು. ಏಕೆಂದರೆ ಅದು ಮರುವೌಲ್ಯಮಾಪನದಲ್ಲಿ ಕೂಡಾ ತಪ್ಪುಗಳನ್ನು ಮಾಡುತ್ತದೆಂದು ದಿಲ್ಲಿ ಹೈಕೋರ್ಟ್ ಹೇಳಿದೆ. ‘‘ನೀವು (ಸಿಬಿಎಸ್‌ಇ) ಹಾಗೆ ರದ್ದು ಮಾಡಬಾರದಾಗಿತ್ತು. ನೀವು ಕೂಡ ತಪ್ಪುಗಳನ್ನು ಮಾಡುತ್ತೀರಿ’’ ಎಂದಿದ್ದಾರೆ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್.
2016ರಲ್ಲಿ ಉತ್ತರ ಪತ್ರಿಕೆಗಳ ಮರುವೌಲ್ಯಮಾಪನವನ್ನು ರದ್ದುಪಡಿಸಿದ ಸಿಬಿಎಸ್‌ಇ ತನ್ನ ಈ ಕ್ರಮಕ್ಕೆ ಕೆಲವೇ ವಿದ್ಯಾರ್ಥಿಗಳು ಮರುವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವುದೇ ಕಾರಣ ಎಂದಿತು. ಈಗ ಅದು ಕೇವಲ ಅಂಕಗಳ ‘ವೆರಿಫಿಕೇಶನ್’ ಮಾಡುತ್ತದೆಯೆ ಹೊರತು ‘ರೀ ವ್ಯಾಲ್ಯುವೇಶನ್’’ ಮಾಡುವು ದಿಲ್ಲ.
ಆದ್ದರಿಂದ ಇಲ್ಲಿ ಎರಡು ಬಹಳ ಮುಖ್ಯ ಪ್ರಶ್ನೆಗಳು ಏಳುತ್ತಿದೆ: ಭಾರತದ ಶಿಕ್ಷಣ ಪದ್ಧತಿಯಲ್ಲಿ ಏನಾಗುತ್ತಿದೆ? ಮತ್ತು ಭಾರತದ ರಾಷ್ಟ್ರೀಯ ಮಂಡಲಿಯಾಗಿರುವ ಸಿಬಿಎಸ್‌ಇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇ?







