ಸಾಮಾಜಿಕ ಲಾಭಕ್ಕಾಗಿ ಇತಿಹಾಸವನ್ನು ತಿರುಚುವಿಕೆ
ರಾಷ್ಟ್ರೀಯತೆ ಮತ್ತು ಅಫೀಮು ವ್ಯಸನಿಗಳು!

ಧಾರ್ಮಿಕ ನೆಲೆಯಲ್ಲಿ ಸಮುದಾಯಗಳನ್ನು ಧ್ರುವೀಕರಿಸುವುದು ಹಾಗೂ ತನ್ನ ಪರಿಧಿಯೊಳಗೆ ತಂದು ಕೆಳ ಜಾತಿಗಳನ್ನು ನಿಯಂತ್ರಿಸುವುದೇ ಹಿಂದೂ ರಾಷ್ಟ್ರೀಯತೆಯ ಕಾರ್ಯಸೂಚಿ (ಅಜೆಂಡಾ) ಆಗಿದೆ. ಮುಸ್ಲಿಮ್ ದೊರೆಗಳನ್ನು ವಿದೇಶಿಯರೆಂದು ಕರೆದು ಅವರನ್ನು ದಾಳಿಕೋರರು ಕೆಡುಕಿಗಳೆಂದು ಚಿತ್ರಿಸುವುದು ಈ ರಾಜಕಾರಣದ ಮೊದಲ ಗುರಿಯಾಗಿತ್ತು. ಮುಸ್ಲಿಮೇತರರನ್ನು ಮತಾಂತರಿಸಲು ಆ ದೊರೆಗಳು ಪ್ರಯತ್ನಿಸಿದರು ಮತ್ತು ಆದರಿಂದಾಗಿಯೇ ಜಾತಿ ವ್ಯತ್ಯಾಸಗಳು ಹುಟ್ಟಿಕೊಂಡವು ಎಂದು ಹೇಳಲಾಯಿತು.
ಅವರ ಎರಡನೆಯ ಗೀಳು ಅಥವಾ ವ್ಯಸನ, ಆರ್ಯರನ್ನು ವೈಭವೀಕರಿಸಿ ಹಿಂದೂ ಪುರಾಣಗಳನ್ನು ಇತಿಹಾಸವೆಂದು ವಾದಿಸುವುದು. ದಲಿತರನ್ನು ಮತ್ತು ಒಬಿಸಿಗಳನ್ನು ತಮ್ಮ ತೆಕ್ಕೆಯೊಳಗೆ ತರಲಿಕ್ಕಾಗಿ ತಮ್ಮ ಮೂರ್ತಿ (ಐಕಾನ್)ಗಳ ಹಾಗೂ ಹೊಸ ಐಕಾನ್‌ಗಳ ಮೂಲಕ ವೈದಿಕ ವೌಲ್ಯಗಳನ್ನು ಪ್ರಚಾರಪಡಿಸಲು ಇತ್ತೀಚೆಗೆ ಹೊಸ ಹಾದಿಗಳನ್ನು ಹುಡುಕಲಾಗುತ್ತಿದೆ.
ಓಣಂ ಹಬ್ಬದ ವೇಳೆ ಈ ಹಬ್ಬವು ವಿಷ್ಣುವಿನ ಐದನೆಯ ಅವತಾರವೆಂದು ಟ್ವೀಟ್ ಮಾಡುವ ಮೂಲಕ ವೈದಿಕ ವೌಲ್ಯಗಳನ್ನು ತುಂಬಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೇರಳದ ಜನತೆಗೆ ಶುಭ ಹಾರೈಸಿದ್ದು ನಿಮಗೆ ನೆನಪಿರಬಹುದು. ಅದೇ ವೇಳೆ ವಾಮನನು ಮಹಾ ಬಲಿಯನ್ನು ಪಾತಾಳಕ್ಕೆ ತಳ್ಳಿದನೆಂಬುದಕ್ಕೆ ಪುರಾಣಗಳಲ್ಲಿ ಯಾವುದೇ ಉಲ್ಲೇಖ ಅಥವಾ ವಿವರಣೆಗಳಿಲ್ಲವೆಂದು ಆರೆಸ್ಸೆಸ್ ಮುಖವಾಣಿ ‘ಕೇಸರಿ’ ಒಂದು ಲೇಖನವನ್ನು ಪ್ರಕಟಿಸಿತು. ಈ ಹಿಂದುತ್ವವಾದಿಗಳ ಪ್ರಕಾರ ಮಲಯಾಳಂ ತಿಂಗಳು ಚಿಂಗಮ್‌ನಲ್ಲಿ ಪ್ರತೀ ವರ್ಷ ಮಹಾಬಲಿಯು ಮನೆಗೆ ಮರಳುವ ಪ್ರಸ್ತಾಪವೇ ಇಲ್ಲ. ಜನಪ್ರಿಯ ದೊರೆ ಮಹಾಬಲಿಯ ವಾರ್ಷಿಕ ಭೇಟಿಯ ನೆನಪಿಗಾಗಿ ಓಣಂ ಆಚರಿಸಲಾಗುತ್ತದೆಂಬ ಸಾಮಾನ್ಯ ಪರಿಜ್ಞಾನಕ್ಕೆ ಇದು ವ್ಯತಿರಿಕ್ತವಾಗಿದೆ. ಕೇರಳದಲ್ಲಿ ಓಣಂ ಎಲ್ಲ ಸಮುದಾಯಗಳ ಸಾಮರಸ್ಯವನ್ನು ಸಾರುವ ಒಂದು ಹಬ್ಬದ ಆಯಾಮ ಪಡೆದಿದೆ. ಆದರೆ ವಿಷ್ಣುವಿನ ಅವತಾರವಾದ ವಾಮನನ್ನು ಉಲ್ಲೇಖಿಸುವ ಮೂಲಕ ಈ ಹಬ್ಬಕ್ಕೆ ಮೇಲ್ಜಾತಿಯ ಒಂದು ವಾಲಿಕೆ (ಟಿಲ್ಟ್) ನೀಡುವುದು ಆರೆಸ್ಸೆಸ್‌ನ ಪ್ರಯತ್ನವಾಗಿದೆ.
ಸಮಕಾಲೀನ ಭಾರತದಲ್ಲಿ ಆರೆಸ್ಸೆಸ್ ಮಿತ್ರಕೂಟವು ಇತಿಹಾಸದ ಬಳಕೆಗೆ ಇನ್ನೂ ಒಂದು ಆಯಾಮ ನೀಡಿದೆ: ಉತ್ತರ ಪ್ರದೇಶದಲ್ಲಿ ಹೊಸದಾಗಿ ನವೀಕರಿಸಲಾದ ಬಿಜೆಪಿ ಕಚೇರಿಯಲ್ಲಿ ರಜಪೂತ ದೊರೆ ಮಹಾ ರಾಣಾ ಪ್ರತಾಪನನ್ನು ಹೋಲುವ ಒಂದು ಚಿತ್ರವಿದೆ, ಆದರೆ ವಾಸ್ತವಿಕವಾಗಿ ಅದು ಹನ್ನೊಂದನೆ ಶತಮಾನದ ದೊರೆ ರಾಜ ಸುಹೇಲ್ ದೇವ್‌ನ ಚಿತ್ರ. ಈತ ಪಾರ್ಸಿ ಮತ್ತು ರಾಜ್‌ಭರ್ ಸಮುದಾಯಗಳು ತಮ್ಮ ದೊರೆ ಎಂದು ಹೇಳಿಕೊಳ್ಳುವ ಅಷ್ಟೇನು ಪ್ರಸಿದ್ಧನಲ್ಲದ ಒಬ್ಬ ರಾಜ. ಈಗ, ಈತನನ್ನು ಸ್ವಾತಂತ್ರಕ್ಕಾಗಿ ಹೋರಾಡಿದ ಓರ್ವ ರಾಷ್ಟ್ರೀಯ ನಾಯಕ (ಹೀರೋ) ಎಂದು ಚಿತ್ರಿಸಲಾಗುತ್ತಿದೆ. ಈತನ ಹೆಸರಿನಲ್ಲಿ ಸುಹೇಲ್ ದೇವ್ ಎಕ್ಸ್‌ಪ್ರೆಸ್ ಎಂಬ ಒಂದು ರೈಲನ್ನು ಕೂಡ ಆರಂಭಿಸಲಾಗಿದೆ.
ಇಷ್ಟೇ ಅಲ್ಲದೆ, ಅಂಬೇಡ್ಕರ್ ಉದ್ಯಾನದಲ್ಲಿ ಈಗಾಗಲೇ ಇರುವ ಛತ್ರಪತಿ ಸಾಹು, ಜ್ಯೋತಿ ರಾವ್ ಫುಲೆ, ಅಂಬೇಡ್ಕರ್, ಕಾನ್ಶಿರಾಮ್ ಮತ್ತು ಮಾಯಾವತಿ ಪ್ರತಿಮೆಗಳ ಜೊತೆಗೆ ಸುಹೇಲ್ ದೇವ್‌ನ ಪ್ರತಿಮೆಯನ್ನು ಸ್ಥಾಪಿಸಲಾಗುದೆಂದು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮೂರ್ತಿಗಳ ಸ್ಥಾಪನೆಯನ್ನು ಮಾಯಾವತಿ ತುಸು ಅತಿಯಾಗಿಯೇ ಮಾಡಿದ್ದರಾರೂ, ಇದು ದಲಿತ ಅಸ್ತಿತ್ವಕ್ಕೆ ಸಾರ್ವಜನಿಕರ ನೆನಪಿನಲ್ಲಿ ಗೌರವದ ಸ್ಥಾನ ನೀಡುವ ಒಂದು ಪ್ರಯತ್ನವಾಗಿತ್ತು. ಆದರೆ ಆದಿತ್ಯನಾಥ್‌ರ ಉದ್ದೇಶವು ಹಿಂದೂ ರಾಷ್ಟ್ರೀಯತೆಗೆ ಹೊಂದಿಕೆಯಾಗುವ ಇತಿಹಾಸದ ಒಂದು ಆವೃತಿಯನ್ನೇ ನೀಡುವುದಾಗಿದೆ. ಉದಾಹರಣೆಗೆ, ಸುಹೇಲ್ ದೇವ್, ಘಜನಿ ಮುಹಮ್ಮದನ ಅಳಿಯ ಸಾಲಾರ್ ಮಹಮೂದ್ (ಗಾಜಿಮಿಯಾ)ನ ವಿರುದ್ಧ ಕಾದಾಡಿದ ಎಂದು ಪ್ರಚಾರ ಮಾಡಲಾಗುತ್ತಿದೆ.
ಪ್ರೊ. ಬದರಿ ನಾರಾಯಣ್ (ಫ್ಯಾಸಿನೇಟಿಂಗ್ ಹಿಂದುತ್ವ, ಸೇಜ್) ಹೇಳುವ ಪ್ರಕಾರ, ಸುಹೇಲ್ ದೇವ್ ಮುಸ್ಲಿಮರ ಹಾಗೂ ದಲಿತರ ಮೇಲೆ ದಬ್ಬಾಳಿಕೆ ನಡೆಸಿದ ಎನ್ನುವುದು ಜನಪ್ರಿಯ ಕಥಾನಕ. ಸ್ಥಳೀಯರ ಒತ್ತಾಯದ ಮೇರೆ ಸಾಲಾರ್ ಮಹಮೂದ್ ಸುಹೇಲ್ ದೇವ್‌ನ ಮೇಲೆ ದಾಳಿ ನಡೆಸಿದ ಮತ್ತು ಯುದ್ಧದಲ್ಲಿ ಇಬ್ಬರೂ ದೊರೆಗಳು ಸಾವನ್ನಪ್ಪಿದರು. ಗಾಜಿ ಮಿಯಾನ ದರ್ಗಾಕ್ಕೆ ಹಿಂದೂ, ಮುಸ್ಲಿಂ ಎರಡೂ ಸಮುದಾಯಗಳವರು ಹೋಗುತ್ತಾರೆ. ಇಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿ, ಪ್ರಾರ್ಥಿಸಿಕೊಂಡರೆ ಕಾಯಿಲೆ ಗುಣವಾಗುತ್ತದೆಂದು ಜನ ನಂಬುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಆರೆಸ್ಸೆಸ್ ಪ್ರಚಾರಕರು ಜನಪ್ರಿಯಗೊಳಿಸುತ್ತ್ತಿರುವ ಕತೆ ಹೀಗಿದೆ; ಗಾಜಿಮಿಯಾ ಒಬ್ಬ ವಿದೇಶಿ ದಾಳಿಕೋರ. ಸುಹೇಲ್ ದೇವ್ ಹಿಂದೂ ಧರ್ಮ ರಕ್ಷಿಸುವುದಕ್ಕಾಗಿ ಅವನ ವಿರುದ್ಧ ಯುದ್ಧ ಮಾಡಿ ತನ್ನ ಪ್ರಾಣ ಕಳೆದುಕೊಂಡ. 2016 ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ ಕೂಡ ಸುಹೇಲ್ ದೇವ್‌ನನ್ನು ಪ್ರಸ್ತಾಪಿಸಿ ‘‘ಆತ ಹಸುಗಳನ್ನು ರಕ್ಷಿಸಿದ ಹಾಗೂ ತನ್ನ ಸೇನೆೆಯ ಮುಂದುಗಡೆ ಹಸುಗಳನ್ನು ಇಟ್ಟು ಯುದ್ಧದಲ್ಲಿ ಅವುಗಳನ್ನು (ತಡೆಗೋಡೆಯಂತೆ) ಬಳಸಿದ’’ ಎಂದು ಪ್ರಶಂಸಿದರು.
ಇಲ್ಲಿ ಕೂಡ ಉಭಯ ಸಮುದಾಯಗಳವರಿಗೂ ಜನಪ್ರಿಯವಾಗಿರುವ, ಆ ಮೂಲಕ ಕೋಮು ಮೈತ್ರಿ ಹಾಗೂ ಸಾಮರಸ್ಯಕ್ಕೆ ಕಾರಣವಾಗಿರುವ ಗಾಜಿಮಿಯಾನ ಜನಪ್ರಿಯ ಕಥಾನಕವನ್ನು ಹಿಂದೂ ವರ್ಸಸ್ ಮುಸ್ಲಿಂ ಚೌಕಟ್ಟಿನಲ್ಲಿ ಹಿಂದುತ್ವ-ಪರ ದೃಷ್ಟಿಕೋನಕ್ಕೆ ಬದಲಾಯಿಸಲಾಗಿದೆ.
ಸುಹೇಲ್ ದೇವ್‌ನ ಪ್ರಕರಣದಲ್ಲಿ ದ್ವಿಮುಖ ತಂತ್ರ ಕಾಣಿಸುತ್ತದೆ: ಒಂದೆಡೆ ಇಸ್ಲಾಂಗೆ ವಿರುದ್ಧವಾಗಿ ಆತನನ್ನು ಓರ್ವ ಹಿಂದೂ ಹೀರೊ ಆಗಿ ಚಿತ್ರಿಸುವುದು, ಮತ್ತು ಇನ್ನೊಂದೆಡೆ ಚುನಾವಣಾ ಹಾಗೂ ಸಾಮಾಜಿಕ ಉದ್ದೇಶಗಳಿಗಾಗಿ ಪಾರ್ಸಿ-ರಾಜ್‌ಭರ್ ಸಮುದಾಯಗಳ ಹೀರೋ ಆಗಿ ಆತನನ್ನು ಬಿಂಬಿಸುವುದು. ದಲಿತರ ಪ್ರತೀ ಉಪಜಾತಿಗೆ ಹೀರೊಗಳನ್ನು ಸೃಷ್ಟಿಸುವುದು ಮತ್ತು ದಲಿತರ ಒಗ್ಗಟನ್ನು ವಿಭಜಿಸುವುದು ಈ ಂತ್ರದ ಹಿಂದಿರುವ ಗುರಿ.
ಗತಕಾಲದ ರಾಜರು ಶ್ರೇಣೀಕರಣವನ್ನಾಧರಿಸಿದ ಸಮಾಜದ ಒಂದು ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದರೇ ಹೊರತು, ಅಂಬೇಡ್ಕರ್ ಉದ್ಯಾನದಲ್ಲಿ ಯಾರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆಯೋ ಆ ನಾಯಕರು ಪ್ರತಿನಿಧಿಸುವ ವ್ಯವಸ್ಥೆಯನ್ನು ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕಾಗಿದೆ. ಅಂಬೇಡ್ಕರ್ ಉದ್ಯಾನದಲ್ಲಿರುವ ಈ ಹೀರೊಗಳು ದಲಿತ ಸಮುದಾಯವನ್ನು ಜಾತಿ ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು, ಸಮಾಜದಲ್ಲಿ ಸಮಾನತೆಗಾಗಿ ಈ ಸಮುದಾಯಗಳು ನಡೆಸಿದ ಹೋರಾಟಕ್ಕೆ ಶಕ್ತಿ ನೀಡಲು ಶ್ರಮಿಸಿದ ಹೀರೊಗಳು, ಐಕಾನ್‌ಗಳು.
ಹಿಂದೂ ರಾಷ್ಟ್ರೀಯತೆಗೆ ಇತಿಹಾಸವು ಬಹಳ ಮುಖ್ಯವಾಗಿರುವುದರಿಂದ ಹಿಂದೂ ರಾಷ್ಟ್ರೀಯ ವಾದಿಗಳು ಹಿಂದೂ ದೊರೆಗಳನ್ನು ವೈಭವೀಕರಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ರಾಜ ಪ್ರಭುತ್ವದ ರಾಜಕೀಯ ವ್ಯವಸ್ಥೆಯನ್ನು ಇವತ್ತು ನಾವು ಎತ್ತಿ ಹಿಡಿಯಲು ಸಾಧ್ಯವಿಲ್ಲವಾದರೂ, ಪಂಥೀಯ ಅಥವಾ ವಿಭಾಜಕ ರಾಷ್ಟ್ರೀಯತೆಗಾಗಿ ಅವರು ರಾಜರ ಆಳ್ವಿಕೆಯ ಕಾಲವನ್ನು ಮರು ಸ್ಥಾಪಿಸಲು ಬಯಸುತ್ತಾರೆ. ಇಷ್ಟೇ ಸಾಲದೆಂಬಂತೆ ರಾಜಸ್ಥಾನದ ಶಿಕ್ಷಣ ಸಚಿವ ವಾಸುದೇವ್ ದೇವ್‌ನಾನಿ ಹಲ್ದೀಮ ಘಾಟ್ ಯುದ್ಧದಲ್ಲಿ ಗೆದ್ದವ ರಾಣಾ ಪ್ರತಾಪ್ ಎಂದು ಹೇಳುತ್ತಾರೆ. ಇಷ್ಟರವರೆಗೆ ಘಟನೆಗಳ ಅರ್ಥೈಸುವಿಕೆ ನಡೆಸಲಾಗುತ್ತಿತ್ತು: ಈಗ ದೇವುನಾನಿಯಂಥವರು ಹೇಳುವುದನ್ನು ಗಮನಿಸಿದರೆ ರಾಜಕೀಯ ಗುರಿಗಳ ಸಾಧನೆಗಾಗಿ ಘಟನೆಗಳನ್ನು ಕೂಡ ತಿರುಚಬಹುದಾಗಿದೆ!
‘‘ಅಫೀಮು ವ್ಯಸನಿಗೆ ಪಾಪ್ಪಿ (ಮತ್ತು ಬರಿಸುವ ಸಸ್ಯ) ಹೇಗೋ ಹಾಗೆಯೇ ರಾಷ್ಟ್ರೀಯತೆಗೆ ಇತಿಹಾಸ !’’ ಎಂದು ಎರಿಕ್ ಹಾಬ್ಸ್‌ಬಾಮ್ ಸರಿಯಾಗಿಯೇ ಹೇಳಿದ್ದಾನೆ.
ಗತಕಾಲದ ರಾಜರು ಶ್ರೇಣೀಕರಣವನ್ನಾಧರಿಸಿದ ಸಮಾಜದ ಒಂದು ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದರೇ ಹೊರತು, ಅಂಬೇಡ್ಕರ್ ಉದ್ಯಾನದಲ್ಲಿ ಯಾರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆಯೋ ಆ ನಾಯಕರು ಪ್ರತಿನಿಧಿಸುವ ವ್ಯವಸ್ಥೆಯನ್ನು ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕಾಗಿದೆ.