ಮಹಾತ್ಮಾ ಗಾಂಧಿಯ ಜಾತಿ ಮತ್ತು ಕಾಂಗ್ರೆಸ್ ಪ್ರತಿನಿಧಿತ್ವದ ಸುತ್ತ...

ಅಮಿತ್ ಶಾ ಹೇಳುತ್ತಿರುವುದು ಗಾಂಧಿ ಮತ್ತು ರಾಷ್ಟ್ರೀಯ ಚಳವಳಿಯ ಬಗ್ಗೆ ಹಿಂದೂ ರಾಷ್ಟ್ರೀಯವಾದಿಗಳಿಗಿರುವ ದ್ವೇಷದ ಮುಂದುವರಿಕೆಯಾಗಿದೆ. ಮುಸ್ಲಿಮರಿಗೆ ಧೈರ್ಯ ಬರುವಂತೆ ಮಾಡಿದ್ದಕ್ಕೆ, ಹಿಂದೂಗಳನ್ನು ದುರ್ಬಲಗೊಳಿಸಿದ್ದಕ್ಕೆ ಹಾಗೂ ದೇಶದ ವಿಭಜನೆಗೆ ಗಾಂಧೀಜಿ ಜವಾಬ್ದಾರಿ ಎನ್ನುವುದು ಈ ರಾಷ್ಟ್ರೀಯವಾದಿಗಳ ಅಭಿಮತ. ಇವರ ಸಂಘಟನೆ ಮತ್ತು ಮಹಾತ್ಮಾ ಗಾಂಧೀಜಿ ಬಗ್ಗೆ ಇವರಿಗಿದ್ದ ದ್ವೇಷವು ಇವರಲ್ಲೊಬ್ಬನಾದ, ನಾಥೂರಾಮ್ ಗೋಡ್ಸೆ, ಗಾಂಧೀಜಿಯ ಹತ್ಯೆಗೈಯಲು ಕಾರಣವಾಯಿತು. ಗಾಂಧೀಜಿಯ ಹತ್ಯೆಯ ಬಳಿಕ ಆರೆಸ್ಸೆಸ್ ಸಿಹಿತಿಂಡಿ ಹಂಚುವುದರಲ್ಲಿ ಈ ದ್ವೇಷ ಪ್ರಕಟಗೊಂಡಿತು.
ಗಾಂಧಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬಗ್ಗೆ ತುಂಬಾ ಬರೆಯಲಾಗಿದೆ; ಇವೆರಡರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಅಭಿಪ್ರಾಯಗಳನ್ನು ಕೊಡುವ ವ್ಯಕ್ತಿಯ ಸಿದ್ಧಾಂತಗಳನ್ನು ಅವಲಂಬಿಸಿ ಈ ಅಭಿಪ್ರಾಯಗಳಿವೆ. ಈಗಾಗಲೇ ಇರುವ ಅಭಿಪ್ರಾಯಗಳಿಗೆ ಬಿ.ಜೆ.ಪಿ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಇನ್ನೊಂದು ಅಭಿಪ್ರಾಯ ಸೇರಿಸಿ ಗಾಂಧಿಯನ್ನು ‘ಚತುರ್ ಬನಿಯಾ’ (ವ್ಯಾಪಾರಿ) ಎಂದು ಕರೆದರು. ಹೀಗೆ ಕರೆಯುವ ಮೂಲಕ ಅವರು ಗಾಂಧಿಯನ್ನು ಬನಿಯಾ ಎಂದು ಕರೆದಿದ್ದ ಜಿನ್ನಾರವರಂತಹ ಪ್ರಸಿದ್ಧರ ಸಾಲಿಗೆ ಸೇರಿದ್ದಾರೆ.
ಆದರೆ ಗಾಂಧಿಯವರು ತನ್ನ ಚಿಂತನೆಗಳ ಮತ್ತು ಕ್ರಿಯೆಗಳ ಮೂಲಕ ತನ್ನ ಜಾತಿಯನ್ನು ಮೀರಿದ್ದರು. 1922ರಲ್ಲಿ ನ್ಯಾಯಾಲಯದಲ್ಲಿ ನ್ಯಾಯಾಧೀಶರೊಬ್ಬರು ಗಾಂಧಿಯ ಜಾತಿ ಯಾವುದೆಂದು ಕೇಳಿದಾಗ ನಾನು ಒಬ್ಬ ರೈತ ಮತ್ತು ನೇಕಾರನೆಂದು ಅವರು ಉತ್ತರಿಸಿದ್ದರು. ಅವರು ತಾತ್ವಿಕವಾಗಿ ವರ್ಣಾಶ್ರಮ ಧರ್ಮಕ್ಕೆ ಅಂಟಿಕೊಂಡಿದ್ದರಾದರೂ, ಆಚರಣೆಯಲ್ಲಿ ಅವರು ಎಲ್ಲ ಜಾತಿ ನಿಷೇಧ (ಟ್ಯಾಬೂ) ಗಳನ್ನು ಮೀರುವ ಮೂಲಕ ಎಲ್ಲ ಜಾತಿಗಳ ಜನರೊಂದಿಗೆ ಬೆರೆಯುವ ಮೂಲಕ, ತನ್ನ ಸಬರ್ಮತಿ ಆಶ್ರಮದಲ್ಲಿ ಅಸ್ಪಶ್ಯರ ಒಂದು ಕುಟುಂಬ ಉಳಿದುಕೊಳ್ಳಲೇ ಬೇಕೆಂದು ಹೇಳುವ ಮೂಲಕ ಮತ್ತು ದಿಲ್ಲಿಯಲ್ಲಿ ಸ್ವತಃ ತಾನೇ ಅಸ್ಪಶ್ಯರ ಕಾಲನಿಯಲ್ಲಿ ಉಳಿದುಕೊಂಡು ಪಾಯಿಖಾನೆಗಳನ್ನು ಸ್ವಚ್ಛಗೊಳಿಸುವ ಮೂಲಕ ಅವರು ಜಾತಿವ್ಯಸ್ಥೆಯನ್ನು ಮೀರಿದ ಓವ ರ್ ಮಹಾ ಮಾನವತಾವಾದಿಯಾಗಿದ್ದರು.
ಅಮಿತ್ ಶಾ ಹೇಳಿದ ಇನ್ನೊಂದು ಮಾತು ಕಾಂಗ್ರೆಸ್‌ನ ರಚನೆ ಹಾಗೂ ಸಾಂಸ್ಥಿಕ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ. ಅವರ ಹೇಳಿಕೆಯಂತೆ ‘‘ಕಾಂಗ್ರೆಸ್ ಪಕ್ಷವನ್ನು ಓರ್ವ ಬ್ರಿಟಿಷ್ ವ್ಯಕ್ತಿ ಒಂದು ಕ್ಲಬ್ ಆಗಿ ಸ್ಥಾಪಿಸಿದ. ತರುವಾಯ ಅದನ್ನು ಸ್ವಾತಂತ್ರ ಹೋರಾಟದಲ್ಲಿ ತೊಡಗಿದ ಒಂದು ಸಂಘಟನೆಯಾಗಿ ರೂಪಾಂತರಿಸಲಾಯಿತು’’. ವಸಾಹತುಶಾಹಿಯ ವಿರುದ್ಧ ಹೋರಾಡುವುದು ಎನ್ನುವುದು ಬಿಟ್ಟರೆ ಕಾಂಗ್ರೆಸ್ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದ ಒಂದು ಸಡಿಲು ಸಡಿಲಾದ ಸಂಸ್ಥೆಯಾಗಿತ್ತು ಎಂದೂ ಶಾ ಹೇಳಿದ್ದಾರೆ. ಆದರೆ ಇವರು ಹೇಳುವ ಎರಡೂ ಅಭಿಪ್ರಾಯಗಳು ರಾಷ್ಟ್ರೀಯ ಚಳವಳಿಗೆ ಕಾರಣವಾದ ಕಾಂಗ್ರೆಸ್‌ನ ಮೂಲ ಹಾಗೂ ಹೋರಾಟಗಳ ಸಂಕೀರ್ಣತೆಯನ್ನು ತಿರುಚಿದ, ವಿಷಯವನ್ನು ಆಳವಾಗಿ ವಿಶ್ಲೇಷಣೆ ಮಾಡದ ಹೇಳಿಕೆಗಳಾಗಿವೆ.
ಆಧುನಿಕ ಸಾರಿಗೆ, ಆಧುನಿಕ ಶಿಕ್ಷಣ ಮತ್ತು ಕೈಗಾರಿಕೀಕರಣವನ್ನು ಬ್ರಿಟಿಷರು ಭಾರತಕ್ಕೆ ಪರಿಚಯಿಸಿದಾಗ ಸಮಾಜವು ತ್ವರಿತ ಗತಿಯಲ್ಲಿ ಬದಲಾಗತೊಡಗಿತು. ಉದ್ಯಮಿಗಳ, ಔದ್ಯಮಿಕ ನೌಕರರ ಹಾಗೂ ಆಧುನಿಕ ಶಿಕ್ಷಣ ಪಡೆದವರ ಹೊಸ ಸಾಮಾಜಿಕ ವರ್ಗಗಳು ಮೂಡಿ ಬರತೊಡಗಿದವು. ಬ್ರಿಟಿಷರ ನೀತಿಗಳು ಈ ದೇಶದ ಸಂಪತ್ತನ್ನು ದೋಚಿ ಇಂಗ್ಲೆಂಡ್ ಅನ್ನು ಶ್ರೀಮಂತಗೊಳಿಸುವ ಗುರಿ ಹೊಂದಿವೆ ಎನ್ನುವುದು ಈ ಗುಂಪುಗಳಿಗೆ ನಿಧಾನವಾಗಿ ಅರಿವಾಗತೊಡಗಿತು. ಪರಿಣಾಮವಾಗಿ ದಾದಾ ಬಾಯಿ ನೌರೋಜಿಯವರ ಈಸ್ಟ್ ಇಂಡಿಯಾ ಅಸೋಸಿಯೇಶನ್ (1866), ನ್ಯಾಯಮೂರ್ತಿ ರಾನಡೆಯವರ ಪುಣೆ ಸಾರ್ವಜನಿಕ್ ಸಭಾ (1870) ಮತ್ತು ವೀರರಾಘವಾಚಾರಿಯವರ ಮದ್ರಾಸ್ ಮಹಾಜನ್ ಸಭಾ (1884)ದಂತಹ ಹಲವು ಸಂಘಟನೆಗಳು ಆರಂಭಗೊಂಡವು. ಅದೇ ವೇಳೆ ಓರ್ವ ಬ್ರಿಟಿಷ್ ಅಧಿಕಾರಿಯಾಗಿದ್ದ ಲಾರ್ಡ್ ಒ.ಎ ಹ್ಯೂಮ್ ಎಂಬಾತನಿಗೆ ಭಾರತೀಯರಿಗೆ ಅಖಿಲ ಭಾರತ ಮಟ್ಟದ ಸಂಘಟನೆಯೊಂದರ ಅಗತ್ಯವಿದೆ ಎನ್ನುವ ಯೋಚನೆ ಬಂತು. ಪರಿಣಾಮವಾಗಿ, ಮೇಲೆ ಹೇಳಿದ ಹಲವು ಸಂಘಟನೆಗಳು ಕಾಂಗ್ರೆಸ್ ರಚನೆಯಲ್ಲಿ ಹ್ಯೂಮ್ ಜೊತೆ ಕೈ ಜೋಡಿಸಿದವು. ಇತಿಹಾಸಕಾರ ಬಿಪಿನ್ ಚಂದ್ರ ಹೇಳುವಂತೆ ಈ ಸಂಘಟನೆಗಳ ಭಾರತೀಯ ರಾಷ್ಟ್ರೀಯವಾದಿಗಳು ಕಾಂಗ್ರೆಸ್ ಸಮಗ್ರ ಭಾರತದ ಒಂದು ವೇದಿಕೆಯಾಗುವಂತೆ ಮಾಡಲು ಹ್ಯೂಮ್‌ರನ್ನು ಬಳಸಿಕೊಂಡರು.

ಕಾಂಗ್ರೆಸ್ ಮತ್ತು ರಾಷ್ಟ್ರೀಯ ಚಳವಳಿ ಆಗತಾನೆ ಮೂಡಿಬರುತ್ತಿದ್ದ ಎಲ್ಲ ಹೊಸ ಸಾಮಾಜಿಕ ವರ್ಗಗಳ ಆಕಾಂಕ್ಷೆಗಳನ್ನು ಆಧರಿಸಿದ ಒಂದು ಚಳವಳಿಯಾಗಿದ್ದರೆ ಕೋಮು ಸಂಘಟನೆಗಳ ಬೇರುಗಳು ಆಗ ಪತನಗೊಳ್ಳುತ್ತಿದ್ದ ಭೂಮಾಲಕರ ಹಾಗೂ ರಾಜ-ನವಾಬ್‌ಗಳ ಅಧಿಕಾರ ವ್ಯವಸ್ಥೆಯಲ್ಲಿದ್ದುವು. ಆದ್ದರಿಂದ ಅಮಿತ್ ಶಾ ಹೇಳುವಂತೆ ಕಾಂಗ್ರೆಸ್ ಒಬ್ಬ ಬ್ರಿಟಿಷ್ ಅಧಿಕಾರಿಯ ಫ್ಯಾಂಟಸಿಯಾಗಿರದೆ ಅದು ಭಾರತ ರಾಷ್ಟ್ರೀಯವಾದಿಗಳ ರಾಜಕೀಯ ಆಕಾಂಕ್ಷೆಗಳನ್ನು ಅಭಿವ್ಯಕ್ತಿಸಲು ಇದ್ದ ಒಂದು ಅತ್ಯುತ್ತಮ ಆಯ್ಕೆಯಾಗಿತ್ತು. ಕಾಂಗ್ರೆಸ್‌ನ ಮೂಲಕ ಸಾಧ್ಯವಾದ ರಾಷ್ಟ್ರೀಯ ಚಳವಳಿಯು ಸ್ವಾತಂತ್ರ, ಸಮಾನತೆ, ಮತ್ತು ಭ್ರಾತೃತ್ವದ ತತ್ವಗಳನ್ನಾಧರಿಸಿತ್ತು. ಪರಿಣಾಮವಾಗಿ ಎಲ್ಲ ಧರ್ಮಗಳ, ಜಾತಿಗಳ ಹಾಗೂ ಪ್ರದೇಶಗಳ ಜನರು ಕಾಂಗ್ರೆಸ್‌ನೊಂದಿಗೆ ಅತ್ಯುತ್ಸಾಹದಿಂದ ಸೇರಿಕೊಂಡರು. ಅಮಿತ್ ಶಾ ಹೇಳುವಂತೆ ಕಾಂಗ್ರೆಸ್ ತತ್ವಗಳಿಲ್ಲದ ಒಂದು ಸಂಘಟನೆಯಾಗಿರಲಿಲ್ಲ. ಬದಲಾಗಿ ಭಾರತದ ರಾಷ್ಟ್ರೀಯ ಚಳವಳಿ ಮತ್ತು ಕಾಂಗ್ರೆಸ್, ರಾಷ್ಟ್ರೀಯತೆ ಧರ್ಮ ನಿರಪೇಕ್ಷತೆ ಮತ್ತು ಪ್ರಜಾಪ್ರಭುತ್ವದ ಭದ್ರವಾದ ತಳಹದಿಯ ಮೇಲೆ ನಿಂತಿದ್ದವು. ಹಿಂದೂ ಕೋಮುವಾದಿಗಳಿಗೆ (ಶಾರವರ ಪೂರ್ವಾಧಿಕಾರಿಗಳು ಯಾನೆ ಪ್ರಿಡಿಸರ್ಸ್) ಮತ್ತು ಮುಸ್ಲಿಂ ಕೋಮುವಾದಿಗಳಿಗೆ (ಜಿನ್ನಾ ಮತ್ತು ಕಂಪೆನಿ) 1934ರ ವರೆಗೆ ಕಾಂಗ್ರೆಸ್‌ನಲ್ಲಿರಲು ಅವಕಾಶ ನೀಡಲಾಗಿತ್ತು: ಆ ಬಳಿಕ ಶಾ ಮತ್ತು ಜಿನ್ನಾರಂತವರನ್ನು ಪಕ್ಷದಿಂದ ೊರಗಿಡಲು ಕಾಂಗ್ರೆಸ್ ತೀರ್ಮಾನಿಸಿತು.
ರಾಷ್ಟ್ರೀಯ ಚಳವಳಿಯು ರಾಷ್ಟ್ರೀಯ ಭಾವನೆಗಳನ್ನು ಉದ್ದೀಪನಗೊಳಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಇದು ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ, ಆರೆಸ್ಸೆಸ್‌ಗಳು ಪ್ರಚೋದಿಸುತ್ತಿದ್ದ ಪಂಥೀಯ ಭಾವನೆಗಳಿಗಿಂತ ಭಿನ್ನವಾಗಿತ್ತು; ಅಂಥಹ ಭಾವನೆಗಳಿಗೆ ವಿರುದ್ಧವಾಗಿತ್ತು. ಧಾರ್ಮಿಕ ಪ್ರಾದೇಶಿಕ ಮತ್ತು ಜಾತೀಯ ಗಡಿಗಳನ್ನು ಮೀರಿ ರಾಷ್ಟ್ರವನ್ನು ಒಗ್ಗೂಡಿಸುವುದು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ (ಐಎನ್‌ಸಿ)ನ ನೇತೃತ್ವದಲ್ಲಿ ನಡೆದ ಚಳವಳಿಯ ಸಕ್ರಿಯ ಭಾಗವಾಗಿತ್ತು. ಆದರೆ ಮುಸ್ಲಿಂ ಲೀಗ್ ಕೇವಲ ಮುಸ್ಲಿಮರನ್ನು ಓಲೈಸಿತು; ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ಗಳು ಹಿಂದೂಗಳ ಒಂದು ವರ್ಗವನ್ನು ಒಂದುಗೂಡಿಸಿದವು.
ರಾಷ್ಟ್ರೀಯ ಚಳವಳಿಯು ಸಾಮಾಜಿಕ ಸುಧಾರಣೆಗಳ ಪ್ರಮುಖ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡಿತು. ಅಸ್ಪಶ್ಯತೆಯ ವಿರುದ್ಧ ಗಾಂಧೀಜಿ ನಡೆಸಿದ ಅಭಿಯಾನ ಒಂದು ಅರ್ಥದಲ್ಲಿ, ಜಾತಿ ಆಧಾರಿತ ಆಚರಣೆಗಳ ಅಡಿಪಾಯವನ್ನೇ ಅಲುಗಾಡಿಸಿತು. ಗಾಂಧಿ ಕಾಂಗ್ರೆಸ್ ನಡೆಸಿದ ಈ ಚಳವಳಿಯ ಪ್ರಕ್ರಿಯೆ ‘‘ಭಾರತವು ರೂಪುಗೊಳ್ಳುತ್ತಿರುವ ಒಂದು ರಾಷ್ಟ್ರ’’ದ ಪ್ರಕ್ರಿಯೆಯಾಗಿತ್ತು. ಇದು ‘‘ಮುಹಮ್ಮದ್ ಬಿನ್ ಕಾಸಿಂನ ಕಾಲದಿಂದ ನಾವು ಒಂದು ಮುಸ್ಲಿಂ ರಾಷ್ಟ್ರ’’ ಎನ್ನುವ ಮುಸ್ಲಿಂ ಲೀಗ್‌ನ ಹೇಳಿಕೆ ಮತ್ತು ‘‘ಅನಾದಿ ಕಾಲದಿಂದ ನಾವು ಹಿಂದೂ ರಾಷ್ಟ್ರ’’ ಎನ್ನುವ ಹಿಂದೂ ಮಹಾಸಭಾ-ಆರೆಸ್ಸೆಸ್ ಪ್ರತಿಪಾದನೆಗಿಂತ ವ್ಯತಿರಿಕ್ತವಾಗಿತ್ತು.
ಹೀಗಿರುವಾಗ, ಅಮಿತ್ ಶಾ ಹೇಳುತ್ತಿರುವುದು ಗಾಂಧಿ ಮತ್ತು ರಾಷ್ಟ್ರೀಯ ಚಳವಳಿಯ ಬಗ್ಗೆ ಹಿಂದೂ ರಾಷ್ಟ್ರೀಯವಾದಿಗಳಿಗಿರುವ ದ್ವೇಷದ ಮುಂದುವರಿಕೆಯಾಗಿದೆ. ಮುಸ್ಲಿಮರಿಗೆ ಧೈರ್ಯ ಬರುವಂತೆ ಮಾಡಿದ್ದಕ್ಕೆ, ಹಿಂದೂಗಳನ್ನು ದುರ್ಬಲಗೊಳಿಸಿದ್ದಕ್ಕೆ ಹಾಗೂ ದೇಶದ ವಿಭಜನೆಗೆ ಗಾಂಧೀಜಿ ಜವಾಬ್ದಾರಿ ಎನ್ನುವುದು ಈ ರಾಷ್ಟ್ರೀಯವಾದಿಗಳ ಅಭಿಮತ. ಇವರ ಸಂಘಟನೆ ಮತ್ತು ಮಹಾತ್ಮಾ ಗಾಂಧೀಜಿ ಬಗ್ಗೆ ಇವರಿಗಿದ್ದ ದ್ವೇಷವು ಇವರಲ್ಲೊಬ್ಬನಾದ, ನಾಥೂರಾಮ್ ಗೋಡ್ಸೆ, ಗಾಂಧೀಜಿಯ ಹತ್ಯೆಗೈಯಲು ಕಾರಣವಾಯಿತು. ಗಾಂಧೀಜಿಯ ಹತ್ಯೆಯ ಬಳಿಕ ಆರೆಸ್ಸೆಸ್ ಸಿಹಿತಿಂಡಿ ಹಂಚುವುದರಲ್ಲಿ ಈ ದ್ವೇಷ ಪ್ರಕಟಗೊಂಡಿತು. (1948 ಸೆಪ್ಟಂಬರ್ 11, ಸರ್ದಾರ್ ಪಟೇಲರ ಪತ್ರ). ಇಂದು ಚುನಾವಣಾ ಕಾರಣಗಳಿಗಾಗಿ ಆರೆಸ್ಸೆಸ್‌ನವರು ಅಷ್ಟೊಂದು ಮುಕ್ತವಾಗಿ ಗೋಡ್ಸೆಯ ಭಾಷೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಆದರೂ ಭಾರತೀಯ ರಾಷ್ಟ್ರೀಯತೆಯನ್ನು ಮತ್ತು ಸ್ವಾತಂತ್ರ ಚಳವಳಿಯ ಜೊತೆಗೇ ನಡೆದ ಜಾತಿಪದ್ದತಿಯ ಬದಲಾವಣೆಯ ಪ್ರಕ್ರಿಯೆಯನ್ನು ಅಮುಖ್ಯಗೊಳಿಸಲು ಅಮಿತ್ ಶಾ ನೀಡಿದಂತಹ ಸೂಜಿ ಚುಚ್ಚುಗಳನ್ನು (ಪಿನ್ ಫ್ರಿಕ್ಸ್) ನೀಡುತ್ತಲೇ ಬಂದಿದ್ದಾರೆ.







