ನಾವೆಲ್ಲರೂ ವಲಸಿಗರು!

ಭಾಗ-2
ಒಟ್ಟಿನಲ್ಲಿ ನಾವು ಬಹು-ಮೂಲದ ಒಂದು ನಾಗರಿಕತೆ, ಏಕ-ಮೂಲದ ನಾಗರಿಕತೆಯಲ್ಲ; ಈ ನಾಗರಿಕತೆ ಹಲವಾರು ವಂಶಾವಳಿ ಮತ್ತು ವಲಸೆ ಇತಿಹಾಸಗಳಿಂದ ತನ್ನ ಸಾಂಸ್ಕೃತಿಕ ಪ್ರೇರಣೆ, ಪರಂಪರೆ ಹಾಗೂ ಆಚರಣೆಗಳನ್ನು ಪಡೆದುಕೊಂಡಿದೆ.
ತಮ್ಮನ್ನು ಆರ್ಯರೆಂದು ಕರೆದುಕೊಂಡು, ಇಂಡೋ-ಯುರೋಪಿಯನ್ ಭಾಷೆ ಮಾತಾಡುತ್ತಿದವರು ಕಂಚಿನಯುಗದಲ್ಲಿ ಭಾರತಕ್ಕೆ ವಲಸೆ ಬಂದರು ಎಂಬ ವಾದಕ್ಕೆ ಸಂಬಂಧಿಸಿ ನಡೆದ ಸಂಶೋಧನೆಯನ್ನು ನಮ್ಮ ಮಾಧ್ಯಮಗಳು ಹೇಗೆ ಸ್ವೀಕರಿಸಿದವು?
ನಿಜ ಸಂಗತಿಗಳು
ಮಾಧ್ಯಮಗಳು ಈ ಸಂಶೋಧನೆಯನ್ನು ತಮಗೆ ಬೇಕಾದಂತೆ ವರದಿ ಮಾಡಿದವು: 2009 ಸೆಪ್ಟಂಬರ್ 25ರಂದು ವರ್ತಮಾನ ಪತ್ರಿಕೆಯೊಂದು ದಪ್ಪಕ್ಷರಗಳಲ್ಲಿ ‘‘ಆರ್ಯರು-ದ್ರಾವಿಡರು ಎಂಬ ವಿಭಜನೆ ಒಂದು ಮಿಥ್: ಅಧ್ಯಯನ’’ ಎಂದು ಬರೆಯಿತು. ಅಧ್ಯಯನದ ಸಹಲೇಖಕ ಲಾಲ್‌ಜಿ ಸಿಂಗ್‌ರವರ ಮಾತನ್ನು ಉಲ್ಲೇಖಿಸಿ ‘‘ಈ ಪ್ರಬಂಧವು ಇತಿಹಾಸವನ್ನು ಪುನರ್‌ಲೇಖಿಸುತ್ತದೆ...ಉತ್ತರ-ದಕ್ಷಿಣ ವಿಭಜನೆ ಎಂಬುದಿಲ್ಲ’’ ಎಂದು ಹೇಳಿತು. ಅಲ್ಲದೆ ‘‘ಆರಂಭಿಕ ವಲಸೆ ನಡೆದದ್ದು 65,000 ವರ್ಷಗಳ ಹಿಂದೆ ಅಂಡಮಾನ್ ದ್ವೀಪಗಳಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ...’’ ಎಂಬಂತಹ ಹೇಳಿಕೆಗಳೂ ಆ ವರದಿಯಲ್ಲಿದ್ದವು. ಸಂಶೋಧನೆ ಹೀಗೆ ಹೇಳಿರಲೇ ಇಲ್ಲ.
ಈಗ ನಾವು ವಿಜ್ಞಾನಿ ಪ್ರೊ. ರೀಕ್ ಭಾರತದ ಬಗ್ಗೆ ಹೇಳಿರುವ ಈ ಮಾತುಗಳನ್ನು ಗಮನಿಸೋಣ: ‘‘ಭಾರತದಲ್ಲಿ 2,000ದಿಂದ 4,000 ವರ್ಷಗಳ ಹಿಂದೆ ಜನ ಸಮುದಾಯಗಳ ಮಿಶ್ರಣ ನಡೆದಿದೆ. ಇದು ಸುಮಾರಾಗಿ ವಿಶ್ವದಲ್ಲಿ ಅತ್ಯಂತ ಹಳೆಯ ಸಾಹಿತ್ಯ ರಚನೆಗಳಲ್ಲಿ ಒಂದಾದ ಋಗ್ವೇದ ರಚನೆಯ ಕಾಲವೂ ಹೌದು.’’
‘ಜನಸಮುದಾಯಗಳ ಮಿಶ್ರಣ’ವನ್ನು ಉಲ್ಲೇಖಿಸುವ ಸಂಶೋಧನಾ ಪ್ರಬಂಧ 2013ರಲ್ಲಿ ‘ಅಮೆರಿಕನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್’ನಲ್ಲಿ ಪ್ರಕಟವಾಯಿತು. ಈ ಅಧ್ಯಯನದ ನೇತೃತ್ವ ವಹಿಸಿದವರು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರಿಯಾ ಮುರ್ಜಾನಿ ಮತ್ತು ಸಹ ಲೇಖಕರು ರೀಕ್ ಮತ್ತು ಲಾಲ್ ಜಿ ಸಿಂಗ್. ಈ ಅಧ್ಯಯನವನ್ನು ಕೂಡ ಮಾಧ್ಯಮಗಳು ಇಂಡೋ-ಯುರೋಪಿಯನ್ ಭಾಷೆ ಮಾತಾಡುವವರ ವಲಸೆಗಳ ವಿರುದ್ಧ ಬಳಸಿಕೊಂಡವು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂಡೋ-ಯುರೋಪಿಯನ್ ಭಾಷಿಕರ ಕಂಚಿನಯುಗದ ವಲಸೆಗಳ ವಿರುದ್ಧ ವಾದಿಸಲು ಬಳಸಿದ ಎಲ್ಲ ವಂಶವಾಹಿ ವಾದಗಳನ್ನು ಈಗ ತಪ್ಪೆಂದು ಸಾಬೀತು ಪಡಿಸಲಾಗಿದೆ:
1. ಕಳೆದ 12,500 ವರ್ಷಗಳಲ್ಲಿ ಭಾರತದ ಹೊರಗಿನಿಂದ ಭಾರತದ ಒಳಕ್ಕೆ ಯಾವುದೇ ಪ್ರಮುಖ ವಂಶವಾಹಿಗಳ ಹರಿವು ನಡೆದಿಲ್ಲ. ಯಾಕೆಂದರೆ ಇಂತಹ ಹರಿವು ಎಮ್‌ಟಿ-ಡಿಎನ್‌ಎ ದತ್ತಾಂಶದಲ್ಲಿ ಕಂಡು ಬಂದಿಲ್ಲ. ವೈ-ಡಿಎನ್‌ಎ ಇಂತಹ ಹರಿವು ನಡೆದಿರುವುದಕ್ಕೆ ಪುರಾವೆ ಎಂದಾಗ ಈ ವಾದ ದೋಷಪೂರಿತವೆಂದು ಸಾಬೀತಾಯಿತು.
2. ಆರ್1ಎ ವಂಶವಾಹಿಯ ಇತರೆಡೆಗಳಿಂದ ಭಾರತದಲ್ಲಿ ಹೆಚ್ಚಿನ ವೈವಿಧ್ಯವನ್ನು ವ್ಯಕ್ತಪಡಿಸಿರುವುದರಿಂದ ಭಾರತವೇ ಅದರ ಮೂಲವಾಗಿದ್ದಿರಬೇಕು, ಅದು ಇಲ್ಲಿಂದ ಹೊರಗೆ ಹೋಗಿ ಹರಡಿರಬೇಕು ಎಂಬ ವಾದವನ್ನು ಕೂಡ ಅದರ ಹ್ಯಾಪ್ಲೋಗ್ರೂಪ್‌ನ ಜಾಗತಿಕ ಅಧ್ಯಯನ ಸುಳ್ಳಾಗಿಸಿದೆ.
3. ಭಾರತದಲ್ಲಿ, ಸಾವಿರಾರು ವರ್ಷಗಳ ಹಿಂದೆ ನೆಲೆನಿಂತ ಎಎನ್‌ಐ ಮತ್ತು ಎಎಸ್‌ಐ ಎಂಬ ಎರಡು ಗುಂಪುಗಳಿದ್ದವು ಎನ್ನುವುದು ಮೂರನೆಯ ವಾದ. ಎಎನ್‌ಐ ಹಲವು ವಲಸೆಗಳ ಒಂದು ಮಿಶ್ರಣವಾದ್ದರಿಂದ ಮೂಲದಲ್ಲೇ ಈ ವಾದ ಸುಳ್ಳು.
ಬಿಂದುಗಳನ್ನು ಜೋಡಿಸುವುದು
ಈ ಎಲ್ಲಾ ಪುರಾವೆಗಳನ್ನು ಗಮನಿಸುವಾಗ ನಾವು ಎರಡು ವಿಷಯಗಳನ್ನು ಮರೆಯಕೂಡದು.
ಮೊದಲನೆಯದು: ವಿವಿಧ ಜ್ಞಾನ ಕ್ಷೇತ್ರಗಳಲ್ಲಿ ನಡೆದ ಬಹು ಮುಖ್ಯ ಅಧ್ಯಯನಗಳು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿ ಹೇಗೆ ಒಂದು ನಿರ್ದಿಷ್ಟ ಕಾಲವನ್ನು ನಿರ್ಣಯಿಸಿವೆ: ಸುಮಾರಾಗಿ ಕ್ರಿ.ಪೂ.2000 ಎನ್ನುವುದೇ ಈ ಕಾಲ ಅಥವಾ ಯುಗ. ಪ್ರಿಯಾ ಮುರ್ಜಾನಿ ಮತ್ತು ಇತರ ಸಹ ಲೇಖಕರ ಅಧ್ಯಯನದ ಪ್ರಕಾರ ಬೃಹತ್ ಪ್ರಮಾಣದಲ್ಲಿ ಜನ ಸಂಖ್ಯೆಯ ಸಂಕರ ಆರಂಭವಾದದ್ದು ಇದೇ ಸಮಯದಲ್ಲಿ. ಪ್ರಾಯಶಃ ಒಂದು ಅಲ್ಲೋಲಕಲ್ಲೋಲ ಕಾಲವಾಗಿದ್ದ ಈ ಅವಧಿಯಲ್ಲಿ ಯಾವುದೇ ಸಂಕರದಿಂದ ಅಬಾಧಿತವಾಗಿ ಉಳಿದವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಓಂಗೆಗಳು ಮಾತ್ರ... ಕೊನೆಯದಾಗಿ ಈಗಾಗಲೇ ದೃಢಪಡಿಸಲಾಗಿರುವ ಪ್ರಾಚ್ಯ ಸಂಶೋಧನಾ ಅಧ್ಯಯನಗಳ ಪ್ರಕಾರ ಸಿಂಧೂ ಕಣಿವೆಯ ನಾಗರಿಕತೆಯ ಅವನತಿ ಆರಂಭವಾದದ್ದು ಕೂಡ ಸುಮಾರು ಕ್ರಿ.ಪೂ.2000ದ ವೇಳೆಗೆ ಎಂದೂ ನಮಗೆ ತಿಳಿದಿದೆ. ಈ ಎಲ್ಲಾ ದತ್ತಾಂಶಗಳನ್ನು ವಸ್ತುನಿಷ್ಠವಾಗಿ ನೋಡಿದಾಗ, ಭಾರತದ ಐತಿಹಾಸಿಕ ಒಗಟಿನ ಕಳೆದು ಹೋದ ಭಾಗಗಳು, ತುಣುಕುಗಳು ಅಂತಿಮವಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ಥಾನಪಡೆಯುತ್ತಿವೆ ಎಂಬ ಭಾವನೆ ಮೂಡುತ್ತದೆ.
ಎರಡನೆಯದು: ಈ ಅಧ್ಯಯನದಲ್ಲಿ ಉಲ್ಲೇಖಿಸಲಾದ ಹಲವು ಅಧ್ಯಯನಗಳು, ಅವುಗಳು ಎತ್ತುವ ಪ್ರಶ್ನೆಗಳು ಹಾಗೂ ಅವುಗಳು ಬಳಸುವ ಮಾದರಿ ಮತ್ತು ಸಂಶೋಧನಾ ವಿಧಾನ-ಎರಡರಲ್ಲೂ, ಜಾಗತಿಕ ಮಟ್ಟದ ಅಧ್ಯಯನಗಳು. ಉದಾಹರಣೆಗೆ, ಆರ್1ಎ ಝಡ್93 ವಂಶವಾಹಿ ಗುಂಪಿನ ಚದುರುವಿಕೆ 4,000-4,500 ಸಾವಿರ ವರ್ಷಗಳ ಹಿಂದೆ ನಡೆಯಿತೆಂದು ನಿರ್ಧರಿಸುವ ದಿ ಪೋಜ್ನಿಕ್ ಅಧ್ಯಯನವು ಭಾರತದಲ್ಲಷ್ಟೆ ಅಲ್ಲ, ಬದಲಾಗಿ ಭೂ ಖಂಡದ ಇತರ ನಾಲ್ಕು ಜನ ಸಮುದಾಯಗಳಲ್ಲೂ ನಡೆದ ವಂಶವಾಹಿ ಸಂಕರಗಳನ್ನು ಪರಿಗಣಿಸಿತು... ಜಾಗತಿಕ ವಲಸೆಯ ಚಿತ್ರದ ಖಾಲಿ ಜಾಗಗಳು ಹೆಚ್ಚು ಹೆಚ್ಚು ಭರ್ತಿಯಾದಂತೆ ಜಗತ್ತು ಹೇಗೆ ಜನಸಂಖ್ಯೆಯಿಂದ ತುಂಬಿತು ಎನ್ನುವ ಬಗ್ಗೆ ಮೂಡುವ ಒಮ್ಮತವನ್ನು ತಳ್ಳಿಹಾಕುವುದು ಹೆಚ್ಚು ಹೆಚ್ಚು ಕಷ್ಟವಾಗುತ್ತದೆ. ಇಷ್ಟರ ವರೆಗೆ, ನಾವು ಇಂಡೋ-ಯುರೋಪಿಯನ್ ಭಾಷೆ ಮಾತಾಡುವವರ ವಲಸೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ. ಯಾಕೆಂದರೆ ಈ ವಲಸೆಗಳು ಐತಿಹಾಸಿಕವಾಗಿ ಅತೀ ಹೆಚ್ಚು ಚರ್ಚಿತ ಹಾಗೂ ವಿವಾದಿತ ವಿಷಯವಾಗಿದೆ. ಆದರೆ ನಾವು ಇದಕ್ಕಿಂತ ದೊಡ್ಡದಾದ ಚಿತ್ರವನ್ನು ನೋಡಲು ಮರೆಯಬಾರದು: ಆರ್1ಎ ವಂಶಾವಳಿಗಳು ಭಾರತಿಯ ಪುರುಷ ವಂಶಾವಳಿಯ ಕೇವಲ ಶೇ.17.5 ಮಾತ್ರ ಮತ್ತು ಸ್ತ್ರೀಯರ ವಂಶಾವಳಿ ಇದಕ್ಕಿಂತಲೂ ಕಡಿಮೆ. ಭಾರತೀಯರಲ್ಲಿ ಬಹುಸಂಖ್ಯಾತ ಭಾರತೀಯರ ಪೂರ್ವಜರು ಪ್ರಾಯಶಃ ಇತರ ವಲಸೆಗಳಿಂದ ಬಂದವರು. ಈ ವಲಸೆಗಳು ಸುಮಾರು 55,000ದಿಂದ 65,000 ವರ್ಷಗಳ ಹಿಂದೆ ಆರಂಭವಾದ ಜಾಟ್ ಆಫ್ ಆಫ್ರಿಕಾದ ವಲಸೆಗಳು; ಅಥವಾ ಕ್ರಿ.ಪೂ. 10,000ದ ಬಳಿಕ ನಡೆದ, ಪಶ್ಚಿಮ ಏಶ್ಯಾದಿಂದ ಬಂದ ಬೇಸಾಯ-ಸಂಬಂಧಿ ವಲಸೆಗಳು.
ಒಟ್ಟಿನಲ್ಲಿ ನಾವು ಬಹು-ಮೂಲದ (ಮಲ್ಟಿ-ಸೋರ್ಸ್) ಒಂದು ನಾಗರಿಕತೆ, ಏಕ-ಮೂಲದ ನಾಗರಿಕತೆಯಲ್ಲ; ಈ ನಾಗರಿಕತೆ ಹಲವಾರು ವಂಶಾವಳಿ ಮತ್ತು ವಲಸೆ ಇತಿಹಾಸಗಳಿಂದ ತನ್ನ ಸಾಂಸ್ಕೃತಿಕ ಪ್ರೇರಣೆ, ಪರಂಪರೆ ಹಾಗೂ ಆಚರಣೆಗಳನ್ನು ಪಡೆದುಕೊಂಡಿದೆ. ಈ ಬಹು-ಮೂಲಗಳು ಹೀಗಿವೆ: ಮೊದಲಾಗಿ ಈ ದೇಶವನ್ನು ಕಂಡು ಹಿಡಿದ ನಿರ್ಭಯ ಭೂಖಂಡ ಶೊಧಕರಾದ ಆಫ್ರಿಕಾದಿಂದ ಹೊರ ಬಂದ (ದಿ ಔಟ್ ಆಫ್ ಆಫ್ರಿಕಾ) ವಲಸಿಗರು; ಆ ಬಳಿಕ ಬೇಸಾಯದ ತಂತ್ರಗಳನ್ನು ತಮ್ಮ ಜೊತೆ ತಂದಿರಬಹುದಾದ ಪೂರ್ವ ಏಷ್ಯಾದ ವಲಸಿಗರು; ಇವರ ಬಳಿಕ ಸಂಸ್ಕೃತ ಎಂದು ಕರೆಯಲ್ಪಡುವ ಒಂದು ಭಾಷೆಯೊಂದಿಗೆ ಒಂದು ಸಮಾಜವನ್ನು ಮೂಲಭೂತವಾದ ಹಲವು ರೀತಿಗಳಲ್ಲಿ ಪುನರ್‌ರೂಪಿಸಿದ ವಲಸಿಗರು; ಮತ್ತು ಇವರಿಗಿಂತ ತುಂಬ ವರ್ಷಗಳ ತರುವಾಯ ವ್ಯಾಪಾರ ಅಥವಾ ದಿಗ್ವಿಜಯಕ್ಕಾಗಿ ಬಂದು ಇಲ್ಲಿಯೇ ನೆಲೆನಿಂತವರು -ಇವರೆಲ್ಲರೂ ಭಾರತೀಯರು ಎಂದು ನಾವು ಕರೆಯುವ ನಾಗರಿಕತೆಗೆ ತಮ್ಮ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ನಾವೆಲ್ಲರೂ ವಲಸಿಗರು.
ಕೃಪೆ: thehindu







