ಸಿಟಿಬಸ್ ಸಂಚಾರಕ್ಕೆ ಕೆಎಸ್ಸಾರ್ಟಿಸಿಯಿಂದ ನಿರ್ಲಕ್ಷ
ಇಂದು ಶಿವಮೊಗ್ಗ ನಗರಕ್ಕೆ ಸಚಿವ ರಾಮಲಿಂಗಾರೆಡ್ಡಿ

ಶಿವಮೊಗ್ಗ, ಜೂ.28: ನಗರದಲ್ಲಿ ಸಂಚರಿಸು ತ್ತಿರುವ ಜೆನರ್ಮ್ ಯೋಜನೆಯ ಸರಕಾರಿ ಸಿಟಿಬಸ್‌ಗಳ ಸಂಚಾರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಒಂದೆಡೆ ನಾಗರಿಕರು ತಮ್ಮ ಬಡಾವಣೆಗಳಿಗೆ ಸರಕಾರಿ ಸಿಟಿ ಬಸ್ ಓಡಿಸುವಂತೆ ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಜೆನರ್ಮ್ ಯೋಜನೆ ಅನುಷ್ಠಾನಕ್ಕೆ ಮೊದಲಿನಿಂದಲೂ ನಿರ್ಲಕ್ಷ್ಯ ತೋರುತ್ತಿರುವ ಕೆಎಸ್ಸಾರ್ಟಿಸಿ ಸಂಸ್ಥೆಯು, ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.
ಮತ್ತೊಂದೆಡೆ ಹಾಲಿ ಸಂಚರಿಸುತ್ತಿರುವ ಬೆರಳೆಣಿಕೆಯ ಸಕಾರಿ ಸಿಟಿ ಬಸ್‌ಗಳ ಓಡಾಟವನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸುವ ಕುತಂತ್ರವನ್ನು ಕೆಲ ಕಾಣದ ಕೈಗಳು ಮಾಡುತ್ತಿವೆ. ಈ ಮೂಲಕ ಮುಂದಿನ ದಿನಗಳಲ್ಲಿ ನಗರದಲ್ಲಿ ಸರಕಾರಿ ಸಿಟಿ ಬಸ್‌ಗಳು ರಸ್ತೆಗಿಳಿಯದಂತೆ ಮಾಡುವ ಹುನ್ನಾರಗಳು ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಇದೆಲ್ಲದರ ನಡುವೆ, ಬಹಳ ಅಪರೂಪಕ್ಕೆಂಬಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜೂ. 29ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಾದರೂ ಸಚಿವರು ಶಿವಮೊಗ್ಗ ನಗರದಲ್ಲಿ ವ್ಯವಸ್ಥಿತವಾಗಿ, ಪೂರ್ಣ ಪ್ರಮಾಣದಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಸೂಕ್ತ ಗಮನಹರಿಸಬೇಕಾಗಿದೆ. ಕೆಎಸ್ಸಾರ್ಟಿಸಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ ಎಂಬುವುದು ನಾಗರಿಕರ ಒಕ್ಕೊರಲ ಆಗ್ರಹ.
ಬೇರೆಲ್ಲೋ ಓಡುತ್ತಿವೆ!: ಜೆನರ್ಮ್ ಯೋಜನೆಯಡಿ ಪ್ರಥಮ ಹಂತದಲ್ಲಿ ನಗರಕ್ಕೆ 20 ಬಸ್‌ಗಳು ಮಂಜೂರಾಗಿವೆ. ಇದರಲ್ಲಿ ಕೇವಲ 10 ಬಸ್‌ಗಳನ್ನು ಮಾತ್ರ ನಗರದ ವಿವಿಧೆಡೆ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಉಳಿದ 10 ಬಸ್‌ಗಳ ಚಸ್ಸಿ ಉದ್ದವಾಗಿದೆ ಎಂಬ ಕುಂಟು ನೆಪವೊಡ್ಡಿ ಭದ್ರಾವತಿಗೆ ಓಡಿಸಲಾಗುತ್ತಿದೆ. ಭದ್ರಾವತಿ ನಗರಕ್ಕೆ ಸಾಕಷ್ಟು ಸರಕಾರಿ ಬಸ್‌ಗಳ ಓಡಾಟವಿದ್ದರೂ ಅನಗತ್ಯವಾಗಿ ಸರಕಾರಿ ಬಸ್‌ಗಳನ್ನು ಓಡಿಸುತ್ತಿರುವುದೇಕೆ? ಎಂಬ ನಾಗರಿಕರ ಪ್ರಶ್ನೆಗೆ ಕೆಎಸ್ಸಾರ್ಟಿಸಿ ಸಂಸ್ಥೆಯು ಸೂಕ್ತ ಉತ್ತರ ನೀಡುತ್ತಿಲ್ಲ.
ಕೆಲ ಖಾಸಗಿ ಬಸ್‌ಗಳ ಚಸ್ಸಿ ಉದ್ದವಾಗಿದ್ದರೂ ನಗರದ ವಿವಿಧ ರಸ್ತೆಗಳಲ್ಲಿ ಆರಾಮಾಗಿ ಸಂಚರಿಸುತ್ತಿವೆ. ಅವುಗಳಿಂದಾಗದ ಸಂಚಾರ ದಟ್ಟಣೆ ಕೇವಲ ಸರಕಾರಿ ಸಿಟಿ ಬಸ್‌ಗಳಿಂದಾಗುವುದಾದರೂ ಹೇಗೆ? ತಮ್ಮ ಏರಿಯಾಗಳಿಗೆ ಸರಕಾರಿ ಸಿಟಿ ಬಸ್ ಓಡಿಸಿ ಎಂದು ನಾಗರಿಕರು ಪಟ್ಟು ಹಿಡಿದಿದ್ದರೂ ಬಸ್ ಓಡಿಸದಿರುವುದೇಕೆ? ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಹಾಲಿ ಜೆನರ್ಮ್ ಯೋಜನೆಯ ಸಿಟಿ ಬಸ್‌ಗಳನ್ನು 20 ಕಿ.ಮೀ.ವರೆಗೂ ಓಡಿಸಬಹುದಾಗಿದೆ. ಉದ್ದದ ಚಸ್ಸಿ ಬಸ್‌ಗಳನ್ನು ವಿವಿಧ ಬಡಾವಣೆಗಳ ಮೂಲಕ ಹೊರವಲಯದಲ್ಲಿರುವ ಗ್ರಾಮಾಂತರ ಪ್ರದೇಶಗಳಿಗೆ ಓಡಿಸಬಹುದು. ಇದರಿಂದ ಗ್ರಾಮೀಣ ಭಾಗದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಇವುಯಾವ ಪರ್ಯಾಯ ಚಿಂತನೆಗಳನ್ನು ಕೆಎಸ್ಸಾರ್ಟಿಸಿ ಮಾಡುತ್ತಿಲ್ಲ ಎಂದು ನಾಗರಿಕರು ದೂರುತ್ತಾರೆ.
65 ಬಸ್‌ಗಳ ಸಂಚಾರ ಯಾವಾಗ?
ಜೆನರ್ಮ್ ಯೋಜನೆಯಡಿ ಒಟ್ಟಾರೆ ನಗರಕ್ಕೆ 65 ಬಸ್‌ಗಳು ಮಂಜೂರಾಗಿವೆ. ಯೋಜನೆ ಮಂಜೂರಾಗಿ ಮೂರು ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಪೂರ್ಣ ಪ್ರಮಾಣವಿರಲಿ, ಕಾಲು ಭಾಗದಷ್ಟು ಬಸ್‌ಗಳ ಸಂಚಾರ ಕೂಡ ಆರಂಭವಾಗಿಲ್ಲ. ಸರಕಾರ ಮಂಜೂರು ಮಾಡಿರುವ ಬಸ್‌ಗಳನ್ನು ಕೆಎಸ್ಸಾರ್ಟಿಸಿ ಸಮರ್ಪಕವಾಗಿಯೂ ಓಡಿಸುತ್ತಿಲ.
‘ಪಾಸ್ ವ್ಯವಸ್ಥೆ ಜಾರಿಗೊಳಿಸಿ’
ಬೆಂಗಳೂರು ನಗರದಲ್ಲಿರುವ ಬಿಎಂಟಿಸಿ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಸರಕಾರಿ ಸಿಟಿ ಬಸ್ ಓಡಿಸಬೇಕು. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಲು ದಿನ, ವಾರ, ಮಾಸಿಕ, ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಚಾರ ಕೂಡ ನಡೆಸಬೇಕು ಎನ್ನುವುದು ನಾಗರಿಕರ ಆಗ್ರಹ.
ಹಣ, ಜಾಗ ಮಂಜೂರಾಗಿದೆ; ಕೆಲಸವಾಗುತ್ತಿಲ್ಲವೇಕೆ?
ಸರಕಾರಿ ಸಿಟಿ ಬಸ್ ವರ್ಕ್‌ಶಾಪ್, ಡಿಪೊ ಹಾಗೂ ಟರ್ಮಿನಲ್ ನಿರ್ಮಾಣಕ್ಕೆ ನಗರದ ಹೊರವಲಯ ಸಂತೆಕಡೂರು ಗ್ರಾಮದಲ್ಲಿ ಜಿಲ್ಲಾಡಳಿತ ಸುಮಾರು 7 ಎಕರೆ ಜಾಗ ಮಂಜೂರು ಮಾಡಿದೆ. ಜಿಲ್ಲಾಡಳಿತ ನಿಗದಿ ಮಾಡಿದ್ದ ರಿಯಾಯ್ತಿ ಮೊತ್ತ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಕೆಎಸ್ಸಾರ್ಟಿಸಿ ಸಂಸ್ಥೆ ಹೇಳಿದ್ದರಿಂದ ರಾಜ್ಯ ಸರಕಾರ ಉಚಿತವಾಗಿಯೇ ಜಾಗ ಮಂಜೂರುಗೊಳಿಸಿದೆ.
ಇನ್ನೊಂದೆಡೆ ವರ್ಕ್‌ಶಾಪ್, ಡಿಪೊ ಹಾಗೂ ಟರ್ಮಿನಲ್ ನಿಮಾಣರ್ಕ್ಕೆ ಜೆನರ್ಮ್ ಯೋಜನೆಯಡಿ ಪ್ರತ್ಯೇಕ ಅನುದಾನ ಕೂಡ ಬಿಡುಗಡೆಯಾಗಿದೆ. ಇಷ್ಟೆಲ್ಲದರ ಹೊರತಾಗಿಯೂ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿಲ್ಲ. ಕಾರಣ ಏನೆನ್ನುವುದು ತಿಳಿಯದಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.







