‘‘ನಾಟ್ ಇನ್ ಮೈ ನೇಮ್’’

ಭಾರತದ ಹೆಮ್ಮೆಯ ಪ್ರಜೆಯಾಗಿ, ಸಕ್ರಿಯ ಅಥವಾ ನಿಷಕ್ರೆಿಯವಾಗಿ ಹತ್ಯೆಯನ್ನು ಬೆಂಬಲಿಸುವ ಯಾರ ಅಭಿಪ್ರಾಯವನ್ನೂ ನಾನು ಅನುಮೋದಿಸುವುದಿಲ್ಲ.
ನನ್ನ ನಿಷ್ಠೆ ಇರುವುದು ಭಾರತದ ಸಂವಿಧಾನಕ್ಕೆ.
ಸರಕಾರ ಅಥವಾ ಇತರ ಯಾವುದೇ ಸಂಘ ಸಂಸ್ಥೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲತತ್ವವನ್ನು ಕಡೆಗಣಿಸಿದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತೇನೆ.
ಕ್ರೂರ ವ್ಯಕ್ತಿಗಳ ಗುಂಪು ಜುನೈದ್ ಅವರನ್ನು ಹತ್ಯೆ ಮಾಡಿದೆ. ಹಂತಕರು ಯಾವ ಧರ್ಮಕ್ಕೆ ಸೇರಿದ್ದರೂ ನಾನು ಲೆಕ್ಕಿಸುವುದಿಲ್ಲ. ಜುನೈದ್ ಯಾವ ಧರ್ಮಕ್ಕೆ ಸೇರಿದವ ಎನ್ನುವುದೂ ನನಗೆ ಮುಖ್ಯವಲ್ಲ. ಒಂದು ಅಂಶದ ಬಗ್ಗೆ ಮಾತ್ರ ನನ್ನ ಕಳಕಳಿ. ತೀರಾ ಸಂಕುಚಿತ, ಕ್ರೂರ ಮನುಷ್ಯರ ಒಂದು ಗುಂಪು ಹದಿಹರೆಯದ ವ್ಯಕ್ತಿಯನ್ನು ಹತ್ಯೆ ಮಾಡಿ, ಇತರ ಮೂವರು ಯುವಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದೆ!
ಜುನೈದ್‌ಗೆ 16 ವರ್ಷ.
ಜುನೈದ್ ತಾಯಿಗಾಗಿ ನನ್ನ ಹೃದಯ ಒಡೆಯುತ್ತದೆ.
ಆ ಕ್ರೂರ ಮನುಷ್ಯರ ಗುಂಪು ಜುನೈದ್‌ನನ್ನು ಹತ್ಯೆ ಮಾಡಿರುವುದು ಮಾತ್ರವಲ್ಲ, ಮತ್ತೊಂದು ಕ್ರೂರಿಗಳ ಗುಂಪು ಅವರನ್ನು ಪ್ರಚೋದಿಸಿದೆ. ಆ ಮತಿಗೇಡಿ ಕೃತ್ಯಕ್ಕೆ ಸಾಕ್ಷಿಯಾಗಿಯೂ ಮೌನವಾಗಿ ಉಳಿದ ಕ್ರೂರಿಗಳ ಗುಂಪು ಕೂಡಾ ಜುನೈದ್ ಹತ್ಯೆಯಲ್ಲಿ ಶಾಮೀಲಾಗಿದೆ.
ಮತ್ತೆ ಕೆಲ ಕ್ರೂರ ವ್ಯಕ್ತಿಗಳು ಈ ಹತ್ಯೆಯನ್ನು ಸಮರ್ಥಿಸುತ್ತಿದ್ದಾರೆ.
ಹೌದು! ದ್ವೇಷ ಎಲ್ಲ ಬಗೆಯ ಸಮರ್ಥನೆಗೂ ಅವಕಾಶ ಕೊಡುತ್ತದೆ. ಹತ್ಯೆಯ ಸುದೀರ್ಘ ಪಟ್ಟಿಯೇ ಇದೆ. ಅದು ಎಷ್ಟು ಮಾಮೂಲಾಗಿಬಿಟ್ಟಿದೆ ಎಂದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಆ ಕೃತ್ಯ ಎಸಗಿದವರಿಗೆ ಏನಾಯಿತು ಎಂದು ಯಾರೂ ಪ್ರಶ್ನಿಸುವುದಿಲ್ಲ. ಅವರನ್ನು ಬಂಧಿಸಲಾಗಿದೆಯೇ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗಿದೆಯೇ ಅಥವಾ ಮತ್ತಷ್ಟು ಘೋರ ಹಿಂಸೆ ಅನಾವರಣ ಮಾಡುವ ಸಲುವಾಗಿ ಅವರನ್ನು ಬಿಡುಗಡೆ ಮಾಡಲಾಗಿದೆಯೇ!
ಒಬ್ಬ ವ್ಯಕ್ತಿ, ಅಮಾಯಕ, ಶಸ್ತ್ರರಹಿತ ಮನುಷ್ಯನನ್ನು ಹೇಗೆ ಕೊಲ್ಲಲು ಸಾಧ್ಯ ಎನ್ನುವುದು ನನಗಿನ್ನೂ ಅರ್ಥವಾಗುತ್ತಿಲ್ಲ!
ಈ ಭೀಕರ ಹಿಂಸೆಯನ್ನು ಜನ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದೂ ಊಹೆಗೆ ನಿಲುಕದ್ದು!

ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವ ಬದಲು, ಅವರು ಪೊಲೀಸರಿಗೆ ಏಕೆ ದೂರು ನೀಡಿಲ್ಲ?
ಏಕೆಂದರೆ, ತಾವು ಎಸಗಿದ ಕೃತ್ಯಕ್ಕೆ ಯಾವ ಸಕಾರಣವೂ ಇಲ್ಲ ಎನ್ನುವುದು ಈ ಹತ್ಯೆ ಮಾಡಿದ ಗುಂಪಿಗೆ ಸ್ಪಷ್ಟವಾಗಿ ತಿಳಿದಿತ್ತೇ?
ಅವರ ಬಯಕೆ ದ್ವೇಷದ ಹೆಸರಿನಲ್ಲಿ ಹತ್ಯೆ ಮಾತ್ರ.
ಯಾವ ಧರ್ಮ, ಸಿದ್ಧಾಂತ, ಭಾಷೆ, ಜನಾಂಗಕ್ಕೆ ಸೇರಿದವರೇ ಆಗಿರಲಿ, ಯಾವುದೇ ಹೆಸರಿನಲ್ಲಿ ಮಾಡಿದ ಹತ್ಯೆ, ಕ್ಷಮೆಗೆ ಅರ್ಹವಲ್ಲ!
ಹಲವು ದಂಗೆ, ಭಯೋತ್ಪಾದಕ ದಾಳಿ, ಅಶಾಂತಿ, ಹತ್ಯೆಗಳಿಂದ ಸಾಕಷ್ಟು ವೇದನೆಗೆ ಒಳಗಾದರೂ ನಾವು ಅದರಿಂದ ಪಾಠ ಕಲಿತಿಲ್ಲ. ಅಡಿಶೀರ್ಷಿಕೆ ಎಂದರೆ ಅಮಾಯಕ ಜನ ದ್ವೇಷದ ಗುರಿಯಾಗುತ್ತಿದ್ದಾರೆ. ಅವರು ಸಾಮಾನ್ಯವಾಗಿ ಬಡವರು; ಸಾಮಾನ್ಯವಾಗಿ ತಿರುಗೇಟು ನೀಡಲು ಅಸಮರ್ಥರು. ಇದು ನಿಜವಾಗಿಯೂ ತೀರಾ ತೀರಾ ಹೃದಯವಿದ್ರಾವಕ.
ದ್ವೇಷದ ಆಳ್ವಿಕೆಯಲ್ಲಿ ಅಮಾಯಕತೆ ಸಾಯುತ್ತದೆ.

ನಾನು ದ್ವೇಷವನ್ನು ಪ್ರೋತ್ಸಾಹಿಸುವ ಭಾಗವಾಗಲಾರೆ
ಎಲ್ಲ ನಂಬಿಕೆಗಳ ಸಹ ನಾಗರಿಕರ ನಡುವೆ ಭ್ರಾತೃತ್ವವನ್ನು ಬೆಳೆಸುವ ಸಲುವಾಗಿ 1993ರ ಹೇಯ ಕೃತ್ಯವಾದ ಮುಂಬೈ ಸ್ಫೋಟ ಹಾಗೂ ನಂತರ ನಡೆದ ಬೀಭತ್ಸ ದೊಂಬಿಯ ಬಳಿಕ ‘‘ಹಮ್ ಹೋಂಗೇ ಕಾಮ್ಯಾಬ್..’’ ಎಂದು ಹಾಡುತ್ತಾ ಪರೇಲ್‌ನಿಂದ ಆಝಾದ್ ಮೈದಾನದವರೆಗೆ ಜಾಥಾ ತೆರಳಿದ ಏಕತಾ ಮಂಚ್ ಜತೆ ನಾನಿದ್ದೆ. 26/11ರ ಘಟನೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾದ, 2008ರಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ನಾನು ಗೇಟ್‌ವೇ ಆಫ್ ಇಂಡಿಯಾಗೆ ಕಾಲ್ನಡಿಗೆಯಲ್ಲಿ ತೆರಳಿದ್ದೆ.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ-2 ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದ ಅಣ್ಣಾ ಹಝಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಬೆಂಬಲಿಸಿದ್ದೆ.
ಜ್ಯೋತಿ ಸಿಂಗ್ ಹಾಗೂ ಪಲ್ಲವಿ ಪುರಕಾಯಸ್ಥ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, ಬೆಚ್ಚಿ ಬೀಳಿಸುವ ಸ್ವಾತಿ ಹತ್ಯೆ ಪ್ರಕರಣ ನಡೆದಾಗ, ಮಹಿಳೆಯರ ಸುರಕ್ಷತೆಯ ಪರವಾಗಿ ಧ್ವನಿ ಎತ್ತಿದ್ದೆ.
ದೇಶದಲ್ಲಿ ರಾಜಕೀಯ ಪೋಷಕತ್ವ ಇರುವ ಹತ್ಯೆ ಮನೋಭಾವದ ವಿರುದ್ಧ ನಾನು ಇಂದು ದೃಢವಾಗಿ ನಿಲ್ಲುತ್ತೇನೆ. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ವಿಶ್ವದ ಅತಿಶ್ರೇಷ್ಠ ಪ್ರಜಾಪ್ರಭುತ್ವದ ನಾಗರಿಕ ನಾನು. ಈ ಕಾರಣದಿಂದ ನಮ್ಮ ಸಂವಿಧಾನದ ಆಶಯವನ್ನು ಗೌರವಿಸುವುದು ಹಾಗೂ ಸಂರಕ್ಷಿಸುವುದು ನಮಗೆಲ್ಲರಿಗೂ ಮುಖ್ಯ.
ಭಾರತದ ಹೆಮ್ಮೆಯ ಪ್ರಜೆಯಾಗಿ, ಸಕ್ರಿಯ ಅಥವಾ ನಿಷ್ಕ್ರೀಯವಾಗಿ ಹತ್ಯೆಯನ್ನು ಬೆಂಬಲಿಸುವ ಯಾರ ಅಭಿಪ್ರಾಯವನ್ನೂ ನಾನು ಅನುಮೋದಿಸುವುದಿಲ್ಲ.
ನನ್ನ ನಿಷ್ಠೆ ಇರುವುದು ಭಾರತದ ಸಂವಿಧಾನಕ್ಕೆ.
ಸರಕಾರ ಅಥವಾ ಇತರ ಯಾವುದೇ ಸಂಘ ಸಂಸ್ಥೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲತತ್ವವನ್ನು ಕಡೆಗಣಿಸಿದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತೇನೆ.
ಆದ್ದರಿಂದ ನಾನು ಕಾರ್ಟರ್ ರಸ್ತೆಯಲ್ಲಿ ನಡೆದ ಶಾಂತಿಯುತ ನಾಗರಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ. ನಾನು ಈ ದ್ವೇಷದ ಭಾಗವಾಗಲಾರೆ!
ನನ್ನ ಮಕ್ಕಳು ಈ ದ್ವೇಷದ ವಾರಸುದಾರರಾಗುವುದನ್ನು ನಾನು ಬಯಸುವುದಿಲ್ಲ.
ನನ್ನ ಕೈಗಳಲ್ಲಿ ಅಮಾಯಕರ ರಕ್ತ ಅಂಟಿಸಿಕೊಳ್ಳುವುದಿಲ್ಲ.
ನಾಟ್ ಇನ್ ಮೈ ನೇಮ್!
(‘‘ನಾಟ್ ಇನ್ ಮೈ ನೇಮ್’’ ಎನ್ನುವುದು 2003ರ ಇರಾಕ್ ದಾಳಿ ವಿರುದ್ಧದ ಚಳವಳಿಯ ಜನಪ್ರಿಯ ಘೋಷಣೆಯಾಗಿತ್ತು.)
ಕೃಪೆ: theindianexpress







