ಭಾರತ ಗುಂಪು ಆಡಳಿತಕ್ಕೆ ಇಳಿಯುತ್ತಿದೆಯೇ?

ಇತ್ತೀಚೆಗೆ ಹರ್ಯಾಣದಲ್ಲಿ, ತನ್ನ ಮೂವರು ಸಹೋದರ ರೊಂದಿಗೆ ಈದ್ ಶಾಪಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ 15ರ ಹರೆಯದ ಒಬ್ಬ ಮುಸ್ಲಿಂ ಹುಡುಗನನ್ನು 20 ಮಂದಿಯ ಗುಂಪೊಂದು ಟ್ರೈನ್‌ನಲ್ಲಿ ಮಾರಣಾಂತಿಕವಾಗಿ ಥಳಿಸಿ ಕೊಂದಿತು. ಚೂರಿ ಹಿಡಿದಿದ್ದ ಗುಂಪಿನ ದಾಳಿಯಲ್ಲಿ ಮೂವರು ಸಹೋದರರಿಗೂ ಗಾಯಗಳಾದುವು. ಕೊಲೆಯಾದ ಜುನೈದ್ ಖಾನ್‌ನ ಹತ್ಯೆಗೆ ಟ್ರೈನ್‌ನಲ್ಲಿ ಸೀಟಿನ ಕುರಿತು ಆದ ಜಗಳ ಕಾರಣವೆಂದು ಪೋಲೀಸರು ಹೇಳುತ್ತಾರೆ. ಆದರೆ ಬಂಧಿತ ಹಾಗೂ ಗುಂಪಿನ ಭಾಗವಾಗಿದ್ದವನೊಬ್ಬ ದಾಳಿ ಮಾಡುವಂತೆ ಉಳಿದವರು ತನ್ನನ್ನು ಒತ್ತಾಯಿಸಿದರು, ಯಾಕೆಂದರೆ ಮುಸ್ಲಿಮರು ಗೋಮಾಂಸ ತಿನ್ನುತ್ತಾರೆ ಎಂದು ಟಿವಿಯಲ್ಲಿ ಹೇಳಿದ. ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಆಡಳಿತದಲ್ಲಿ ಹಸು ಎರಡು ಸಮುದಾಯಗಳನ್ನು ಧ್ರುವೀಕರಿಸುವ ಒಂದು ಪಶುವಾಗಿಬಿಟ್ಟಿದೆ ಮತ್ತು ಧಾರ್ಮಿಕ ವಿಭಾಗಗಳು, ವಿಭಜನೆ ಗಳು, ಅಂತರಗಳು ಇನ್ನಷ್ಟು ಅಗಲವಾಗುತ್ತಿವೆ. ಹಸುಗಳ ಮಾರಾಟ ಮತ್ತು ಹತ್ಯೆಗಳ ಮೇಲೆ ಹೇರಿರುವ ನಿರ್ಬಂಧಗಳು ಗೊಂದಲ ಹಾಗೂ ಅನೈತಿಕ ಪೊಲೀಸ್‌ಗಿರಿಗೆ ಕುಮ್ಮಕ್ಕು ನೀಡುತ್ತಿವೆ.
ಎರಡು ವರ್ಷಗಳ ಹಿಂದೆ ಕೃಷಿ ಕೆಲಸಗಾರ ಮುಹಮ್ಮದ್ ಅಖ್ಲಾಕ್‌ನನ್ನು, ಅವನ ಕುಟುಂಬ ಗೋಮಾಂಸವನ್ನು ಮನೆಯಲ್ಲಿ ಶೇಖರಿಸಿ ಇಟ್ಟಿತ್ತು ಮತ್ತು ತಿಂದಿತ್ತು ಎಂಬ ಗಾಳಿಮಾತನ್ನು ನಂಬಿ, ಜನರ ಗುಂಪೊಂದು ಅವನನ್ನು ಕೊಂದು ಹಾಕಿತು. ಸ್ವಘೋಷಿತ ಗೋರಕ್ಷಕ ಅನೈತಿಕ ಪೊಲೀಸ್ ಗುಂಪುಗಳು, ಯಾವುದೇ ಶಿಕ್ಷೆಯ ಭಯವಿಲ್ಲದೆ, ಜಾನುವಾರು ಸಾಗಾಟಗಾರರನ್ನು ಹತ್ಯೆಗೈದಿವೆ. ಹೆಚ್ಚಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಿಂದೂ ಗುಂಪುಗಳು ಮುಸ್ಲಿಂ ಪುರುಷರನ್ನು ಥಳಿಸಿವೆ; ಗೋಮಾಂಸ ಶೇಖರಿಸಿ ಇಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಒಂದು ಪ್ರಕರಣದಲ್ಲಿ ಥಳಿಸಿದ್ದರೆ, ಇನ್ನೊಂದು ಪ್ರಕರಣದಲ್ಲಿ ಹಿಂದೂ - ಮುಸ್ಲಿಂ ಜೋಡಿಯೊಂದು ಪಲಾಯನಗೈಯಲು ಅದಕ್ಕೆ ಸಹಾಯಮಾಡಿದ್ದಕ್ಕಾಗಿ ಥಳಿಸಲಾಗಿದೆ. ಮೋದಿಯವರ ಕಣ್ಗಾವಲಿನಲ್ಲಿ ಭಾರತ ‘‘ಗುಂಪು ಪ್ರಭುತ್ವ’’ (ಮೊಬಾಕ್ರಸಿ) ದತ್ತ ಹೊರಳುತ್ತದೆಯೇ? ಎಂದು ಹಲವರು ಆತಂಕ ಪಡುತ್ತಿದ್ದಾರೆ.
ಈ ಹತ್ಯೆಗಳ ಬಗ್ಗೆ ಮೋದಿಯವರ ವೌನವನ್ನು ಇವರು ಪ್ರಶ್ನಿಸುತ್ತಿದ್ದಾರೆ ಕೂಡ. ಅಲ್ಪಸಂಖ್ಯಾತರ ರಕ್ಷಣೆಯ ವಿಷಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮುರಿದು ಬಿದ್ದಿರುವಂತೆ ಕಾಣುತ್ತದೆ. ಜೂನ್ 23ರಂದು ಬಿಜೆಪಿ ಆಡಳಿತದ ಹರ್ಯಾಣದಲ್ಲಿ ರೈಲು ನಿಲ್ದಾಣ ದಲ್ಲಿ ಪೋಲೀಸರು ಹದಿ ಹರೆಯದ ಹುಡುಗನನ್ನು ರಕ್ಷಿಸಲು ವಿಫಲರಾ ದರು. ಅಲ್ಲಿದ್ದ ಗುಂಪಿನಿಂದಾಗಿ ತಮಗೆ ಹುಡುಗನನ್ನು ರಕ್ಷಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯ ಪೋಲೀಸ್ ಠಾಣೆಯ ಮುಖ್ಯ ಅಧಿಕಾರಿ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹೇಳಿದರು. ಬಿಜೆಪಿ ಆಡಳಿತದ ರಾಜಸ್ಥಾನದಲ್ಲಿ ಹಾಲುಮಾರುವ 55ರ ಹರೆಯದ ರೈತ ಪೆಹ್ಲ್ಲು ಖಾನ್‌ರನ್ನು ಕಳೆದ ಎಪ್ರಿಲ್‌ನಲ್ಲಿ ಗುಂಪೊಂದು ಹಲ್ಲೆ ನಡೆಸಿ ಕೊಂದಿತು. ಅವನನ್ನು ಕೊಲೆಮಾಡಲಾಗಿತ್ತೆನ್ನುವುದನ್ನು ಹೇಳದೆ ರಾಜ್ಯದ ಮುಖ್ಯಮಂತ್ರಿ ಅವನ ‘‘ಸಾವಿಗೆ’’ ಸಂತಾಪ ಸೂಚಿಸಿದರು. ಹತ್ಯೆಯ ಬಗ್ಗೆ ತನಗೇನೂ ‘‘ವಿಷಾದವಿಲ್ಲ’’, ಯಾಕೆಂದರೆ ಖಾನ್ ಒಬ್ಬ ‘‘ಹಸು ಕಳ್ಳ ಸಾಗಣೆದಾರ’’ನೆಂದು ಓರ್ವ ಬಿಜೆಪಿ ನಾಯಕ ಹೇಳಿದರು. ಇಂತಹ ಕೊಲೆಗಳ ಸರಣಿ, ಹಿಂದೂ ಧರ್ಮಕ್ಕೂ ಮೋದಿಯವರ ಸರಕಾರಕ್ಕೂ ಕೆಟ್ಟ ಹೆಸರು ತರುತ್ತಿದೆ.
‘‘ಯಾವುದೇ ಜೀವಿಯನ ಹತ್ಯೆಗೈಯುವುದು ಮಹಾ ಪಾಪ, ಭಯಾನಕವೆಂದು ತಿಳಿಯುವ ಪ್ರಾಚೀನ ಅಹಿಂಸಾ ಪರಂಪರೆ ಹೊಂದಿ ರುವ ಭಾರತದಲ್ಲಿ, ಗಾಂಧಿ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮುನ್ನಡೆಸಿದ ಅಹಿಂಸಾ ತತ್ವವನ್ನೇ ಇಂದು ಕೊಲೆಗೆ ಒಂದು ಸಮರ್ಥನೆಯಾಗಿ ಬಳಸುತ್ತಿರುವುದು ಊಹಿಸಲೂ ಅಸಾಧ್ಯ ಎಂದು ಖ್ಯಾತ ಲೇಖಕ ಆತಿಶ್ ಸೀರ್ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬರೆದಿದ್ದಾರೆ. ಆದರೆ ಕಾನೂನು ಮತ್ತು ವ್ಯವಸ್ಥೆಯ ಉಸ್ತುವಾರಿ ಹೊತ್ತಿರುವ ಭಾರತದ ಅತ್ಯಂತ ಹಿರಿಯ ಅಧಿಕಾರಿ ರಾಜೀವ್ ಮೆಹ್ರಿಷಿ, ಘಟನೆ ಗಳನ್ನು ಮಾಧ್ಯಮಗಳು ‘‘ಅತಿಯಾಗಿ ವರದಿ ಮಾಡುತ್ತಿವೆ’’ ಎಂದು ಮಾಧ್ಯಮಗಳನ್ನು ದೂಷಿಸಿದ್ದಾರೆ. ‘‘ಅದು (ದ್ವೇಷ ಅಪರಾಧ-ಹೇಟ್ ಕ್ರೈಮ್) ಭಾರತದಲ್ಲಿ ಹೊಸತೇನೂ ಅಲ್ಲ, ಅದು ಊಳಿಗಮಾನ್ಯ ವ್ಯವಸ್ಥೆಯ ಸ್ವರೂಪದ್ದು.....’’ ಎಂದಿದ್ದಾರೆ. ನಿಜ ದ್ವೇಷ ಅಪರಾಧಗಳು ಭಾರತಕ್ಕೆ ಹೊಸದಲ್ಲ.. ಮತ್ತು ಗುಂಪು ಥಳಿಸುವಿಕೆ (ಮಾಬ್ ಲಿಂಚಿಂಗ್) ಕೂಡ ಭಾರತಕ್ಕೆ ಹೊಸತಲ್ಲ. 1982 ಮತ್ತು 1984 ನಡುವೆ 630ಕ್ಕೂ ಹೆಚ್ಚು ಮಂದಿ ಕಮ್ಯೂನಿಸ್ಟ್ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಗುಂಪು ಥಳಿತದಿಂದ ಹತ್ಯೆಯಾಗಿದ್ದಾರೆ. ಕುತೂಹಲದ ವಿಷಯವೆಂದರೆ ಈ ಬಗ್ಗೆ ಬಹಳಷ್ಟು ಸಾರ್ವಜನಿಕ ಆಕ್ರೋಶವೇನೂ ವ್ಯಕ್ತವಾಗಿಲ್ಲ. ಜುನೈದ್ ಖಾನ್‌ನ ಹತ್ಯೆಯಾದ ದಿನವೇ ಶ್ರೀನಗರದ ಮುಖ್ಯ ಮಸೀದಿಯ ಹೊರಗೆ ಮುಸ್ಲಿಮರ ಒಂದು ಗುಂಪು ಒಬ್ಬ ಪೊಲೀಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದಿತು. ಈ ತಿಂಗಳ ಆದಿಯಲ್ಲಿ, ತೆರೆದ ಬಯಲಲ್ಲಿ ಕೆಲವು ಮಹಿಳೆಯರು ತೆರೆದ ಬಯಲಲ್ಲಿ ಮಲವಿಸರ್ಜನೆ ಮಾಡುತ್ತಿದ್ದುದನ್ನು ಕ್ಲಿಕ್ಕಿಸುವುದನ್ನು ವಿರೋಧಿಸಿದಾಗ ಅತ್ಯುತ್ಸಾಹಿ ಸರಕಾರಿ ಅಧಿಕಾರಿಗಳ ಗುಂಪೊಂದು ಓರ್ವ ಮುಸ್ಲಿಂ ಕಾರ್ಯಕರ್ತನನ್ನು ಹೊಡೆದು ಕೊಂದಿತು. ಇತ್ತೀಚೆಗೆ ಪ್ರಕಟವಾದ ಪ್ಯೂ ರಿಸರ್ಚ್ ಸೆಂಟರ್‌ನ ಒಂದು ವಿಶ್ಲೇಷಣೆಯ ಪ್ರಕಾರ ವಿಶ್ವದಲ್ಲಿ ಧಾರ್ಮಿಕ ಅಸಹನೆಯಲ್ಲಿ ಭಾರತ ಅತ್ಯಂತ ಕೆಟ್ಟ ದೇಶಗಳಲ್ಲಿ 4ನೇ ಸ್ಥಾನದಲ್ಲಿದೆ.
ದೇಶದ ಹಲವು ಭಾಗಗಳಲ್ಲಿ ಆಸ್ತಿಗಾಗಿ ಮಹಿಳೆಯ ರನ್ನು ದೆವ್ವ ಹಿಡಿದಿದೆ ಎಂದು ಹೇಳಿ ಥಳಿಸಿ ಕೊಲ್ಲುವುದು ಮಾಮೂಲಿಯಾಗಿದೆ. ಹಾಗೆಯೇ, ಕುಟುಂಬ ಹಿಂಸೆ ಕೂಡ ಅಧಿಕ ಪ್ರಮಾಣದಲ್ಲಿದೆ. ಆದರೆ ಹಲವರು ಹೇಳು ವಂತೆ ಮೋದಿ ಸರಕಾರವು ಹಿಂಸಾ ನಿರತ ಹಿಂದೂ ಗುಂಪುಗಳನ್ನು ಹದ್ದು ಬಸ್ತಿನಲ್ಲಿಡಲು ಒಂದೋ ಅಸಮರ್ಥವಾಗಿದೆ; ಅಥವಾ ಅದಕ್ಕೆ ಮನಸಿಲ್ಲವಾಗಿದೆ.
ಸಮಾಜ ಶಾಸ್ತ್ರಜ್ಞ ಶಿವ್ ವಿಶ್ವನಾಥನ್ ಹೇಳುವಂತೆ ಗುಂಪು ಥಳಿಸುವುದನ್ನು ಒಂದು ದೃಶ್ಯವೆಂಬಂತೆ ಸರಕಾರವು ನೋಡುತ್ತಾ ಕುಳಿತಿರುವಾಗ, ಅಭದ್ರತೆ ಮತ್ತು ಆತಂಕದ ಒಂದು ರಾಜಕಾರಣವು ದೇಶದಲ್ಲಿ ಅರಾಜಕತೆಗೆ ಕಾರಣವಾಗುತ್ತಿದೆ. ಬಲಿಷ್ಠ ನಾಯಕನಿರು ವಾಗ, ಬಹುಮತ ಹೊಂದಿರುವ ಒಂದು ಸರಕಾರವು ದ್ವೇಷ ಅಪರಾಧಗಳನ್ನು ಖಂಡಿಸಲು ನಿರಾಕರಿಸುತ್ತಿರುವಾಗ ಮತ್ತು ಬಹಳ ಮಂದಿ ನಾಗರಿಕರು ವೌನವಹಿಸಿರುವಾಗ ಅಥವಾ ಇದನ್ನೆಲ್ಲಾ ಖಾಸಗಿಯಾಗಿ ಬೆಂಬಲಿಸುವಂತೆ ಕಾಣಿಸುತ್ತಿರುವಾಗ, ದೇಶವು ಅಪಾಯಕಾರಿಯಾದ ಒಂದು ಪ್ರತಾಪವನ್ನು ದಿಟ್ಟಿಸಿ ನೋಡುತ್ತಿದೆಯೇ ಎಂದು ಹಲವರಿಗೆ ಅನ್ನಿಸುತ್ತಿದೆ. ಬೆರಳಣಿಕೆಯಷ್ಟು ಪತ್ರಕರ್ತರು, ಶಿಕ್ಷಕರು ಮತ್ತು ಕಾರ್ಯಕರ್ತರನ್ನು ಹೊರತು ಪಡಿಸಿದರೆ ದೇಶದಲ್ಲಿ ವ್ಯಾಪಕವಾದ ಜನಾಕ್ರೋಶ ಯಾಕೆ ಕಾಣಿಸುತ್ತಿಲ್ಲ. ಸಣ್ಣ ಪ್ರಮಾಣದ ಹಿಂಸೆ ಹಾಗೂ ಬೃಹತ್ ಪ್ರಮಾಣದ ಹಿಂಸೆ ಪರಸ್ಪರ ಸಂಬಂಧ ಹೊಂದಿದೆ ಎಂಬುದು ವೌನ ತಾಳುವ ಹಲವು ಭಾರತೀಯರಿಗೆ ಮನವರಿಕೆಯಾಗಿಲ್ಲ. ದ್ವೇಷ ಅಪರಾಧಗಳು ವ್ಯಾಪಕ ಹಿಂಸೆಗೆ ಹಾದಿಯಾಗುತ್ತವೆ.
‘‘ಪ್ರತಿಭಟಿಸದೆ ನೀವು ಸಹಿಸುವ ಪ್ರತಿಯೊಂದು ಹಿಂಸಾ ಕೃತ್ಯವು ಹಿಂಸೆಯನ್ನು ನಿಮ್ಮ ಮನೆ ಬಾಗಿಲಿಗೆ ಇನ್ನೊಂದು ಹೆಜ್ಜೆ ಹತ್ತಿರ ತರುತ್ತದೆ. ಚಿಕ್ಕ ಹಿಂಸೆಯನ್ನು ಸಹಿಸುವುದರಿಂದಲೇ ದೊಡ್ಡ ಹಿಂಸೆ ಸಾಧ್ಯವಾಗುತ್ತದೆ’’ ಎಂದು ಕೊಲಂಬಿಯಾ ವಿಶ್ವ ವಿದ್ಯಾನಿಲಯದಿಂದ ಸುದೀಪ್ತ ಕವಿರಾಜ್ ಬರೆಯುತ್ತಾರೆ. ಇದು, ಭಾರತ ಮತ್ತೆ ಮತ್ತೆ ಕಡೆಗಣಿಸುತ್ತಿರುವ ಒಂದು ಎಚ್ಚರಿಕೆಯಾಗಿದೆ.