ಚೀನಾ-ಭಾರತ ಬಲಾಬಲ
ನೌಕಾಪಡೆ
.jpg)
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಪಿಎಲ್‌ಎ-ಎನ್‌ನ ಅಸ್ತಿತ್ವದ ಹಿನ್ನೆಲೆಯಲ್ಲಿ, ಭಾರತಕ್ಕೆ ಹೋಲಿಸಿದಾಗ, ಚೀನಾದ ವಿಸ್ತಾರಗೊಳ್ಳುತ್ತಿರುವ ನೌಕಾ ಸಾಮರ್ಥ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳ ಇಂಡಿಯಾ ಸ್ಪೆಂಡ್ ವಿಶ್ಲೇಷಣೆಯ ಪ್ರಕಾರ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ (ಪಿಎಲ್‌ಎ-ಎನ್) ಯ ಬಳಿ 283 ಮೇಜರ್ ಸರ್ಫೆೇಸ್ ಯುದ್ಧ ಹಡಗುಗಳಿವೆ. ಇದು ಭಾರತೀಯ ನೌಕಾಪಡೆಯ ಬಳಿ ಇರುವ (66) ಯುದ್ಧ ನೌಕೆಗಳಿಗಿಂತ ನಾಲ್ಕು ಪಟ್ಟು ಹೆಚ್ಚು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಪಿಎಲ್‌ಎ-ಎನ್‌ನ ಅಸ್ತಿತ್ವದ ಹಿನ್ನೆಲೆಯಲ್ಲಿ, ಭಾರತಕ್ಕೆ ಹೋಲಿಸಿದಾಗ, ಚೀನಾದ ವಿಸ್ತಾರಗೊಳ್ಳುತ್ತಿರುವ ನೌಕಾ ಸಾಮರ್ಥ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇತ್ತೀಚಿನ ತಿಂಗಳುಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಚೀನಾದ ಚಟುವಟಿಕೆ ವಿಪರೀತ ಹೆಚ್ಚಿದೆ ಎನ್ನುತ್ತಾರೆ ಭಾರತೀಯ ನೌಕಾಪಡೆಯ ಓರ್ವ ಅಧಿಕಾರಿ. ಕಳೆದ ಕೆಲವು ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಗೆ ಒಂದು ಡಝನ್‌ಗೂ ಹೆಚ್ಚು ಚೀನೀ ಯುದ್ಧ ನೌಕೆಗಳು ಜಲಾಂತರ್ಗಾಮಿ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಹಡಗುಗಳು ಕಂಡುಬಂದಿವೆ.
ಸಿಕ್ಕಿಂ ಸಮೀಪ ಭಾರತ-ಚೀನಾ-ಭೂತಾನ್ ಗಡಿ ಪ್ರದೇಶದಲ್ಲಿ ಮೂರು ವಾರಗಳಿಂದ ಭಾರತೀಯ ಮತ್ತು ಚೀನೀ ಸೇನಾ ಪಡೆಗಳು ಪರಸ್ಪರ ಮುಖಾಮುಖಿಯಾಗಿರುವಂತೆಯೇ, ಈ ಹಡಗುಗಳು ಅಲ್ಲಿ ಕಂಡುಬಂದಿವೆ. ಪರಿಣಾಮವಾಗಿ, ದಿಲ್ಲಿ ಮತ್ತು ಬೀಜಿಂಗ್ ನಡುವೆ ಯುದ್ಧೋನ್ಮಾದದ ವಾಕ್ಸಮರ ನಡೆಯುತ್ತಿದೆ.
ದಾಸ್ತಾನುಗಳ ಹೋಲಿಕೆ
ಚೀನೀ ನೌಕಾಪಡೆಯ ಬಳಿ 26 ವಿನಾಶಕ ಹಡಗು (ಡಿಸ್ಟ್ರಾಯರ್)ಗಳಿವೆ. ಇವು ಶಕ್ತಿಯುತವಾದ ರಾಡರ್ ಹೊಂದಿರುವ, ತುಂಬ ದೂರದವರೆಗೆ ಪ್ರಯಾಣ ಮಾಡಬಹುದಾದ ಮತ್ತು ಭೂಯುದ್ಧ, ಕ್ಷಿಪಣಿಗಳ ರಕ್ಷಣೆ ಹಾಗೂ ನೀರ ಮೇಲೆ ಮತ್ತು ಜಲಾಂತಗಾರ್ಮಿ ವಿರುದ್ಧ ಯುದ್ಧ (ದಾಳಿ) ಮಾಡುವ ಸಾಮರ್ಥ್ಯ ಹೊಂದಿರುವ ಯುದ್ಧ ನೌಕೆಗಳು. ಇತ್ತೀಚೆಗೆ ಚೀನಾ ಇಂತಹ ಒಂದು ಡಿಸ್ಟ್ರಾಯರನ್ನು ತಯಾರು ಮಾಡಿದೆ. ಇದು 12,000 ಟನ್ ಭಾರದ ಟೈಪ್ 55 ನಮೂನೆಯ ಯುದ್ಧ ನೌಕೆ. ಭಾರತದ ಇತ್ತೀಚಿನ ಯುದ್ಧ ನೌಕೆಗಳಿಗಿಂತ ಇದು ತುಂಬ ದೊಡ್ಡದು ಮತ್ತು ಹೆಚ್ಚು ಶಕ್ತಿಯುತವಾದದ್ದು. ‘‘ಭಾರತದ ಈ ಡಿಸ್ಟ್ರಾಯರ್‌ಗಳು ಇನ್ನೂ ಕಾರ್ಯನಿರ್ವಹಿಸಲು ಸಿದ್ಧವಾಗಿಲ್ಲ; ಅವಿನ್ನೂ ನಿರ್ಮಾಣ ಹಂತದಲ್ಲೇ ಇವೆ’’ ಎನ್ನುತ್ತಾರೆ ಎನ್‌ಡಿಟಿವಿಯ ರಕ್ಷಣಾ ಸಂಪಾದಕ ವಿಷ್ಣು ಸೋಮ್. ಚೀನಾದ ಟೈಪ್-55 ಯುದ್ಧ ನೌಕೆಯಲ್ಲಿ ಅಂತಿಮವಾಗಿ ವಿವಿಧ ಮಾದರಿಯ 120 ಕ್ಷಿಪಣಿಗಳಿರುತ್ತವೆ. ಭಾರತ ಇನ್ನಷ್ಟೇ ಕಾರ್ಯಗತಗೊಳಿಸಬೇಕಾದ ‘ಪ್ರಾಜೆಕ್ಟ್ 15-ದಿ ವಿಶಾಖಪಟ್ಣಂ’ ವರ್ಗದ ಡಿಸ್ಟ್ರಾಯರ್‌ಗಳಲ್ಲಿ 50 ಕ್ಷಿಪಣಿಗಳಿರುತ್ತವೆ. ಪಿಎಲ್‌ಎ-ಎನ್‌ನಲ್ಲಿ ಭಾರತದ ಬಳಿ ಇರುವ ಫ್ರಿಗೆಟ್ (14)ಗಳ ಸುಮಾರು ನಾಲ್ಕು ಪಟ್ಟು (ಅಂದರೆ 52) ಫ್ರಿಗೆಟ್‌ಗಳಿವೆ. ಇವುಗಳಲ್ಲಿ ಡಿಸ್ಟ್ರಾಯರ್‌ಗಳಲ್ಲಿರುವಷ್ಟು ಶಸ್ತ್ರಗಳು ಇಲ್ಲವಾದರೂ ಇವು ಡಿಸ್ಟ್ರಾಯರ್‌ಗಳು ಮಾಡುವಂತಹದೇ ರೀತಿಯ ಕೆಲಸಗಳನ್ನು ಮಾಡಬಲ್ಲವು ಮತ್ತು ಸಾಗರಗಳಲ್ಲಿ ಕಾರ್ಯಾಚರಿಸಬಲ್ಲವು. ಫ್ರಿಗೆಟ್‌ಗಳಿಗೆ ಹೋಲಿಸಿದರೆ ಅಷ್ಟೊಂದು ಶಸ್ತ್ರಗಳನ್ನು ಹೊಂದಿರದ 25 ಕೊರ್ವೆಟ್ ಹಾಗೂ ಕ್ಷಿಪಣಿ ದೋಣಿಗಳನ್ನು ಭಾರತ ಹೊಂದಿದ್ದರೆ, ಇದರ ನಾಲ್ಕು ಪಟ್ಟು (106) ಕೊರ್ವೆಟ್‌ಗಳು ಹಾಗೂ ಕ್ಷಿಪಣಿ ದೋಣಿಗಳು ಚೀನಾದ ಬಳಿ ಇವೆ.
ಭಾರತದ ವಿಮಾನ ವಾಹಕ ನೌಕೆಯ ಸ್ಥಿತಿ ಏನು?
ಇಷ್ಟರವರೆಗೆ, ಭಾರತ ಮತ್ತು ಚೀನಾ ಎರಡರ ಬಳಿಯೂ, ತಲಾ ಒಂದೊಂದು ವಿಮಾನ ವಾಹಕ ಯುದ್ಧ ನೌಕೆಯಿದೆ.
2017 ಎಪ್ರಿಲ್‌ನಲ್ಲಿ ಚೀನಾ ಒಂದು ಹೊಸ ವಿಮಾನ ವಾಹಕ ಯುದ್ಧ ನೌಕೆಯನ್ನು ಕಾರ್ಯಾಚರಣೆಗೊಳಿಸಿತು. ಇದು ಅದರ ಬಳಿ ಈಗಾಗಲೇ ಇರುವ ಲಿಯಾಒನಿಂಗ್ ಯುದ್ಧ ನೌಕೆಯ ಬಳಿಕ ಎರಡನೆಯದು ಮತ್ತು ಸ್ವದೇಶಿ ನಿರ್ಮಿತವಾದ ಮೊದಲನೆಯದು. ಇದು 2020ರಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಇದಕ್ಕೆ ಹೋಲಿಸಿದರೆ ಭಾರತದಲ್ಲೇ ನಿರ್ಮಾಣಗೊಳ್ಳುತ್ತಿರುವ, 2009ರಲ್ಲಿ ಆರಂಭಿಸಲಾದ ಐಎನ್‌ಎಸ್ ವಿಕ್ರಾಂತ್ 2023ರ ಮೊದಲು ಪೂರ್ಣಗೊಳ್ಳುವ ಸಾಧ್ಯತೆಯಿಲ್ಲವೆಂದು 2016ರ ಜುಲೈ 28ರಂದು ‘ದಿ ಹಿಂದು’ ಪತ್ರಿಕೆ ವರದಿ ಮಾಡಿತ್ತು.
ಚೀನಾದ ಬಳಿ ಈಗ ಇರುವ ಲಿಯಾಒನಿಂಗ್, ಸೋವಿಯತ್ ಯುಗದಲ್ಲಿ ಅದು ಉಕ್ರೇನ್‌ನಿಂದ ಕೊಂಡುಕೊಂಡು, ಪುನರ್ ನವೀಕರಣದ ಬಳಿಕ 2012ರಲ್ಲಿ ಕಾರ್ಯಾಚರಣೆಗಿಳಿದ ಒಂದು ಯುದ್ಧ ನೌಕೆ. ನಾಲ್ಕು ವರ್ಷಗಳ ಪರೀಕ್ಷೆಯ ಬಳಿಕ ಲಿಯಾಒನಿಂಗ್, 2016ರ ಡಿಸೆಂಬರ್ 16ರಂದು ತನ್ನ ಮೊತ್ತಮೊದಲ ಶಸ್ತ್ರಾಸ್ತ್ರ ದಾಳಿ ಪರೀಕ್ಷೆ (ಡ್ರಿಲ್)ಗಳನ್ನು ನಡೆಸಿತು. 2017ರ ಜನವರಿ 3ರಂದು ಅದು ಅಂತಹದೇ ಡ್ರಿಲ್‌ಗಳನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಸಿತ್ತು. ಇದು ದಿನೇ ದಿನೇ ಹೆಚ್ಚುತ್ತಿರುವ ಅದರ ದಾಳಿಕೋರ ವರ್ತನೆಯ ಒಂದು ಸಂಕೇತವಾಗಿದೆ.
ಭಾರತೀಯ ನೌಕಾದಳವು ‘ಐಎನ್‌ಎಸ್ ವಿಕ್ರಾಂತ್’ನ ಸ್ವದೇಶೀ ನಿರ್ಮಿತ ಉತ್ತರಾಧಿಕಾರಿಯಾಗಿ ‘ಐಎನ್‌ಎಸ್ ವಿಶಾಲ್’ ಎಂಬ ಯುದ್ಧ ನೌಕೆಯ ನಿರ್ಮಾಣಕ್ಕೆ ಬೇಕಾಗುವ ನಿರ್ದಿಷ್ಟ ವಿವರಗಳನ್ನು ಇದೀಗ ಅಂತಿಮಗೊಳಿಸಿದೆ. ಅಣುಶಕ್ತಿ ಚಾಲಿತ ಐಎನ್‌ಎಸ್ ವಿಶಾಲ್, 65,000 ಟನ್ ಭಾರದ ಯುದ್ಧ ನೌಕೆಯಾಗಿದ್ದು ವಿಕ್ರಾಂತ್ ಮತ್ತು ವಿಕ್ರಮಾದಿತ್ಯಕ್ಕಿಂತ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿರುತ್ತದೆ.
ನೌಕಾ ತತ್ವಗಳು
ಭಾರತೀಯ ನೌಕಾದಳದ 2015ರ ಪರಿಷ್ಕೃತ ನೌಕಾ ತತ್ವದ ಪ್ರಕಾರ ‘ನೀಲಿ ಸಮುದ್ರ’ದಲ್ಲಿ ತನ್ನ ಶಕ್ತಿ ಸಾಮರ್ಥ್ಯವನ್ನು ನೌಕಾದಳ ತೋರಿಸುವಂತೆ ಮಾಡುವುದು ಅದರ ಗುರಿಯಾಗಿದೆ. ವ್ಯಾಖ್ಯಾನದ ಪ್ರಕಾರ, ನೀಲಿ ಸಮುದ್ರ ನೌಕಾದಳವೆಂದರೆ ತೆರೆದ ಸಾಗರಗಳ ಆಳದಲ್ಲಿ ಕಾರ್ಯಾಚರಿಸಲು ಸಮರ್ಥವಿರುವ ಒಂದು ನೌಕಾಪಡೆ. ನೌಕಾದಳದ ಸಿದ್ಧಾಂತದ ಪ್ರಕಾರ ಭಾರತದ ನೌಕಾದಳದ ಕಾರ್ಯಾಚರಣೆ ಕ್ಷೇತ್ರವು ವ್ಯಾಪಕವಾದ ಹಿಂದೂ ಮಹಾಸಾಗರವಾಗಿದೆ. ಇದರಲ್ಲಿ ಅರಬಿ ಸಮುದ್ರ, ಬಂಗಾಲ ಕೊಲ್ಲಿ, ಅಂಡಮಾನ್ ಸಮುದ್ರ, ವಾಯವ್ಯ ಹಿಂದೂ ಮಹಾಸಾಗರ, ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿ, ಏಡನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಹೊಮುಚ್ ಕಣಿವೆಯಂತಹ ಚೋಕ್ ಪಾಯಿಂಟ್‌ಗಳೂ ಸೇರಿವೆ.
ಈ ಪ್ರದೇಶದಲ್ಲಿ ಪಿಎಲ್‌ಎ-ಎನ್‌ನ ಕಾರ್ಯಾಚರಣೆಗಳ ಕ್ಷೇತ್ರ ಹೆಚ್ಚುತ್ತಿರುವುದು ಭಾರತದ ಸ್ಪಷ್ಟ ಹಿತಾಸಕ್ತಿಗಳಿಗೆ ಅದು ಒಡ್ಡುತ್ತಿರುವ ನೇರ ಸ್ಪರ್ಧೆಯಾಗಿದೆ. ಅದರ ಸದ್ಯದ ಶಕ್ತಿ ಚೌಕಟ್ಟಿನ ಉದ್ದೇಶ: ದಕ್ಷಿಣ ಚೀನಾ ಸಮದ್ರ ಮತ್ತು ಪೂರ್ವ ಚೀನಾ ಸಮುದ್ರವನ್ನು ತನ್ನ ವಶಕ್ಕೆ ಪಡೆಯುವುದು. ಈ ಸಮುದ್ರ ಪ್ರದೇಶ ತನಗೆ ಸೇರಿದ್ದೆಂದು ಚೀನಾ ವಾದಿಸುತ್ತಿದೆ. ಇದಕ್ಕಾಗಿ ಅಮೆರಿಕ ಮತ್ತು ತನ್ನ ನೆರೆ ರಾಷ್ಟ್ರಗಳೊಂದಿಗೆ ಅದು ತೀವ್ರ ಸ್ವರೂಪದ ವಿವಾದದಲ್ಲಿ ತೊಡಗಿದೆ.
(ಅಭೀತ್ ಸಿಂಗ್ ಸೇಥಿ, ಓರ್ವ ಹವ್ಯಾಸಿ ಲೇಖಕರು ಮತ್ತು ರಕ್ಷಣಾ ಪಡೆ ವಿಶ್ಲೇಷಕರು).
ಕೃಪೆ: hindustantimes