ಬಸೀರ್ಹತ್ ಹಿಂಸೆ ಲಾಭ ಯಾರಿಗೆ?

ಪಶ್ಚಿಮ ಬಂಗಾಲದ ಬಸೀರ್ಹತ್‌ನಲ್ಲಿ ಜುಲೈ4ರಂದು ಉನ್ಮತ್ತ ಹಿಂಸಾ ಕೃತ್ಯದಿಂದಾಗಿ ಇಬ್ಬರು ಪ್ರಾಣಕಳೆದುಕೊಂಡರು. ಕಳೆದ ಕೆಲವು ವಾರಗಳಿಂದ, ‘‘ಪಶ್ಚಿಮ ಬಂಗಾಲ ಇಸ್ಲಾಮಿಕ್ ರಾಜ್ಯವಾಗುತ್ತಿದೆ; ಅಲ್ಲಿ ಹಿಂದೂಗಳ ಜೀವಕ್ಕೆ ಬೆದರಿಕೆ ಇದೆ; ಅವರ ಸ್ಥಿತಿ ಕಾಶ್ಮೀರ ಪಂಡಿತರ ಸ್ಥಿತಿಯ ಹಾಗೆ ಆಗುತ್ತದೆ’’ ಎಂದು ಸಾಮಾಜಿಕ ಮಾಧ್ಯಮಗಳು ಭಾರೀ ಸುದ್ಧಿಹರಡುತ್ತಿವೆ. ಟಿವಿ ಮಾಧ್ಯಮದ ಒಂದು ವರ್ಗವಂತೂ ಪಶ್ಚಿಮಬಂಗಾಲ ಹಿಂದೂಗಳಿಗೆ ಸುರಕ್ಷಿತವಲ್ಲ; ಮುಸ್ಲಿಮರಿಗೆ ತುಂಬ ಸುರಕ್ಷಿತ ಸ್ಥಳ ಎನ್ನುವ ಅಭಿಪ್ರಾಯವನ್ನು ಬಿತ್ತರಿಸಿತು. ಮಮತಾ ಬ್ಯಾನರ್ಜಿ ಮುಸ್ಲಿಮರನ್ನು ತುಷ್ಟೀಕರಿಸುತ್ತಿದ್ದಾರೆ; ಆಕೆಯ ಸರಕಾರದ ನೆರವಿನಿಂದಾಗಿ ಇಸ್ಲಾಮಿಕ್ ತೀವ್ರಗಾಮಿಗಳು ಅಲ್ಲಿ ಹೆಚ್ಚುತ್ತಿದ್ದಾರೆ ಎಂದೂ ವೆಬ್‌ಸೈಟ್‌ಗಳು ಘೋಷಿಸುತ್ತವೆ.
ಈ ಹಿಂಸಾಕೃತ್ಯಕ್ಕೆ ಫೇಸ್‌ಬುಕ್‌ನ ಒಂದು ಪೋಸ್ಟ್ (ಜುಲೈ 4, 2017) ಪ್ರಚೋದನೆ ನೀಡಿತ್ತು. ಯಾರು ಈ ಫೇಸ್‌ಬುಕ್ ಪೋಸ್ಟಿಂಗ್ ಮಾಡಿದವರೆಂದು ಗೊತ್ತಾದ ಕೂಡಲೇ, ಆ 17 ವರ್ಷದ ಹುಡುಗ ಇದ್ದ ಮನೆಗೆ ಜನ ಮುತ್ತಿಗೆ ಹಾಕಿದರು. ಮುಸ್ಲಿಮರಿಗೆ ಅವಹೇಳನಕಾರಿಯಾದ ಪೋಸ್ಟಿಂಗ್ ಅದಾಗಿತ್ತು. ಪರಿಸ್ಥಿತಿ ಬಿಗಡಾಯಿಸುತ್ತ ಹೋದಾಗ ಆಡಳಿತಯಂತ್ರ ವೌನ ವಹಿಸಿತ್ತು. ಆಕ್ರಮಣಕಾರಿಯಾದ ಮುಸ್ಲಿಮರ ಗುಂಪು ಆ ಮನೆಯನ್ನು ಸುತ್ತುವರಿಯುವವರಿಗೂ ಸರಕಾರದ ವೌನ ಮುಂದುವರಿಯಿತು. ಪೊಲೀಸರ ಆಗಮನ ತುಂಬ ವಿಳಂಬವಾಯಿತು. ಅಂತೂ ಆ ಹುಡುಗನನ್ನು ರಕ್ಷಿಸಲಾಯಿತು.
ಬಿಜೆಪಿ ನಾಯಕರು ಭಾರೀ ಚುರುಕಾಗಿ ಒಂದು ನಿಯೋಗವಾಗಿ ಆ ಪ್ರದೇಶಕ್ಕೆ ಭೇಟಿ ನೀಡಿದರು. ಅವರು ಗಲಭೆಯಲ್ಲಿ ಮೃತನಾದ 65ರ ಹರೆಯದ ಕಾರ್ತಿಕ ಚಂದ್ರ ಘೋಷ್‌ನ ಶವ ನೋಡಲು ಆಸ್ಪತ್ರೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಘೋಷ್ ಬಿಜೆಪಿ ಘಟಕವೊಂದರ ಅಧ್ಯಕ್ಷನೆಂದು ವಾದಿಸಿದ ಅವರು ಸನ್ನಿವೇಶದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರು. ಆದರೆ ತನ್ನ ತಂದೆ ಬಿಜೆಪಿ ಕಾರ್ಯಕರ್ತನೆನ್ನುವುದನ್ನು ಘೋಷ್‌ರ ಮಗ ಅಲ್ಲಗಳೆದ.
ಪಶ್ಚಿಮ ಬಂಗಾಲದ ರಾಜ್ಯಪಾಲ ಕೆ. ಎನ್. ತ್ರಿಪಾಠಿಯವರು ಅಲ್ಲಿ ನಡೆದ ಹಿಂಸೆಗಾಗಿ ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಮಮತಾ, ರಾಜ್ಯಪಾಲರನ್ನು ಬಿಜೆಪಿಯ ಬ್ಲಾಕ್ ಮಟ್ಟದ ನಾಯಕನೆಂದು ಕರೆದರು. ಬಿಜೆಪಿ ಮತ್ತು ಮಮತಾ ಪರಸ್ಪರ ದೋಷಾರೋಪಣೆ ಮಾಡುತ್ತಿರುವಂತೆಯೇ ಕೋಮು ಹಿಂಸೆ ಒಂದು ರಾಜಕೀಯ ಬಣ್ಣ ಪಡೆಯಿತು. ಒಂದು ವಾರದೊಳಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲಾಯಿತಾದರೂ, ರಾಜ್ಯದಲ್ಲಿ, ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ.
ಬಂಗಾಲದ ಚಿತ್ರ ತುಂಬ ಸಂಕೀರ್ಣವಾಗಿದೆ. ‘ನೊಂದ ಭಾವನೆಗಳಿಗೆ’ ಪ್ರತಿಕ್ರಿಯೆಯಾಗಿ ಮುಸ್ಲಿಂ ನಾಯಕತ್ವದ ಒಂದು ವರ್ಗ ಅಲ್ಲಿ ಸತತವಾಗಿ ಹಿಂಸೆ ಎಸಗುತ್ತಿದೆ. ಅಲ್ಲಿ ಅವರು ‘ಪವಿತ್ರ ಹಸು’ ಅಥವಾ ‘ರಾಮಮಂದಿರ’ ವಿವಾದವನ್ನು ಸೃಷ್ಟಿಸಬೇಕಾಗಿಲ್ಲ; ಮುಸ್ಲಿಂ ನಾಯಕತ್ವದ ತಪ್ಪು ಮಾರ್ಗದರ್ಶನಕ್ಕೊಳಗಾದ ಈ ವರ್ಗ ವಿವಾದವನ್ನು ತಾನೇ ಸೃಷ್ಟಿಸುತ್ತಿದೆ ಮತ್ತು ಬಂಗಾಲವು ಇಸ್ಲಾಮೀಕರಣದ ಹಿಡಿತದೊಳಗಿದೆ, ಅಲ್ಲಿ ಹಿಂದೂಗಳು ಸುರಕ್ಷಿತರಲ್ಲ ಎಂಬ ಚಿತ್ರಣವನ್ನು ಸೃಷ್ಟಿಸಲಾಗುತ್ತಿದೆ.
ಬಸೀರ್ಹತ್ ಹಿಂಸೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರಕ್ಕೆ ಸಾಕಷ್ಟು ಕಾಲಾವಕಾಶವಿತ್ತಾದರೂ, ಅದು ತನ್ನ ಕೆಲಸ ಮಾಡಲಿಲ್ಲ. ಅದು ವಹಿಸಿದ ಪಾತ್ರ ತೃಪ್ತಿಕರವಾಗಿರಲಿಲ್ಲ. ಅಲ್ಲಿ ಸರಕಾರ ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿತ್ತು.
ಅದೇನಿದ್ದರೂ, ಮಮತಾ ಮಾಡಿದರೆನ್ನಲಾದ ಮುಸ್ಲಿಮರ ತುಷ್ಟೀಕರಣ ಆರ್ಥಿಕ ವಿಷಯದಲ್ಲಿ ನಿಜವಲ್ಲ. ಸತ್ಯ ಸಂಗತಿ ಏನೆಂದರೆ, ಬಂಗಾಲದ ಮುಸ್ಲಿಮರ ಆರ್ಥಿಕ ಪರಿಸ್ಥಿತಿ ದೇಶದ ಮುಸ್ಲಿಮರಲ್ಲೇ ಅತ್ಯಂತ ಕೆಟ್ಟ ಸ್ಥಿತಿಯಾಗಿದೆ.
ಇದೇ ವೇಳೆ ಬಿಜೆಪಿಯಿಂದ ಕೋಮು ಧ್ರುವೀಕರಣ ಅತ್ಯಂತ ಭರದಿಂದ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ರಾಮನವಮಿಯ ಹೆಸರು ಕೂಡ ಕೇಳಿ ಬರುತ್ತಿರಲಿಲ್ಲವೋ ಅಂತಹ ಒಂದು ರಾಜ್ಯದಲ್ಲಿ ಈ ವರ್ಷ ರಾಮನವಮಿಯ ಸಮಯದಲ್ಲಿ ಕೈಯಲ್ಲಿ ಭಯ ಹುಟ್ಟಿಸುವ ಖಡ್ಗಗಳನ್ನು ಝಳಪಿಸುತ್ತ ರಾಮನವಮಿ ಮೆರವಣಿಗೆಯನ್ನು ನಡೆಸಲಾಯಿತು. ಇಷ್ಟರವರೆಗೆ ದುರ್ಗಾಮಾತೆ ಮುಖ್ಯದೇವತೆಯಾಗಿದ್ದ ರಾಜ್ಯದಲ್ಲಿ ಗಣೇಶ ಚತುರ್ಥಿಯ ಆಚರಣೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.
ಅಂತಿಮವಾಗಿ, ಈ ಹಿಂಸೆಯಿಂದ ಲಾಭಯಾರಿಗೆ?
ಕೋಮು ಹಿಂಸೆಯ ಕುರಿತು ಪೌಲ್ ಬ್ರಾಸ್‌ರಂತಹ ಹಲವು ವಿದ್ವಾಂಸರ ಅಧ್ಯಯನಗಳು ಹೇಳುವಂತೆ ಒಂದು ಸಾಂಸ್ಥಿಕ ದೊಂಬಿ ತಂತ್ರ (ರಯಟ್ ಮೆಕ್ಯಾನಿಸಂ) ಅಲ್ಲಿ ಕಾರ್ಯವೆಸಗುತ್ತಿದೆ. ಈ ದೊಂಬಿ ತಂತ್ರದ ಮೊದಲ ಭಾಗವೆಂದರೆ ಅಪರಾಧಿಗಳಿಗೆ ಶಿಕ್ಷೆಯಿಂದ ಸಿಗುವ ವಿನಾಯಿತಿ. ಯೇಲ್ ವಿಶ್ವವಿದ್ಯಾನಿಲಯ ನಡೆಸಿದ ಇನ್ನೊಂದು ಅಧ್ಯಯನದ ಪ್ರಕಾರ ಯಾವ ಯಾವ ಪ್ರದೇಶಗಳಲ್ಲಿ ಕೋಮು ಹಿಂಸೆ ನಡೆಯುತ್ತದೆಯೋ ಅಲ್ಲೆಲ್ಲ ದೀರ್ಘಾವಧಿಯಲ್ಲಿ ಚುನಾವಣೆಯಲ್ಲಿ ಲಾಭವಾಗುವುದು ಬಿಜೆಪಿಗೆ. ಇದು ದೊಂಬಿ ತಂತ್ರದ ಎರಡನೆಯ ಭಾಗ. ಒಟ್ಟಿನಲ್ಲಿ, ಸಂಕ್ಷೇಪಿಸಿ ಹೇಳುವುದಾದರೆ ಬಸೀರ್ಹತ್ ಹಿಂಸೆಯನ್ನು ಹೀಗೆ ವಿಶ್ಲೇಷಿಸಬಹುದು: ಮೊದಲ ಹಂತದಲ್ಲಿ, ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾದ ಒಂದು ಪೋಸ್ಟ್ (ಬರಹ) ಪ್ರಕಟವಾಗುತ್ತಿದ್ದಂತೆ ಎರಡನೆ ಹಂತದಲ್ಲಿ ಎರಡು ಮುಸ್ಲಿಂ ತೀವ್ರವಾದಿ ಬಣಗಳಿಂದ ಹಿಂಸಾಚಾರ ನಡೆಯುತ್ತದೆ. ಮೂರನೆ ಹಂತದಲ್ಲಿ, ಹಿಂಸೆ ತಡೆಯಲು ಸರಕಾರದ ವೈಫಲ್ಯ. ನಂತರ, ಅಲ್ಲಿಂದ ಪರಿಸ್ಥಿತಿಯನ್ನು ಬಿಜೆಪಿ ಮುಂದುವರಿಸಿ, ಬಸೀರ್ಹತ್‌ನಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತೋರಿಸುವ ವೀಡಿಯೊ ಪ್ರಸಾರ ಮಾಡಲಾಗುತ್ತದೆ. ಆದರೆ ಆ ವೀಡಿಯೊಗಳು ಬಸೀರ್ಹತ್‌ನಲ್ಲಿ ಚಿತ್ರೀಕರಿಸಿದ ವೀಡಿಯೊಗಳೇ ಅಲ್ಲ; ಅವು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸೆಯನ್ನು ತೋರಿಸುವ ವೀಡಿಯೊಗಳು ಎಂದು ಆ ಮೇಲೆ ತಿಳಿದುಬಂತು. ಹಾಗೆಯೇ ಅಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತೆಂದು ಹೇಳಿ ಭೋಜ್‌ಪುರಿ ಸಿನೆಮಾಗಳಲ್ಲಿ ಇರುವ ಅತ್ಯಾಚಾರ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು. ಅಂತಿಮವಾಗಿ ಬಂಗಾಲದಲ್ಲಿ ಹಿಂದೂಗಳನ್ನು ಬಲಿಪಶುವಾಗಿ ಮಾಡಲಾಗುತ್ತಿದೆಯೆಂದು ಡಂಗುರ ಬಾರಿಸಲಾಗುತ್ತದೆ.
ಇಷ್ಟರವರೆಗೆ ಯಾವ ರಾಜ್ಯದಲ್ಲಿ ಕೋಮುಹಿಂಸೆ ಸಾಕಷ್ಟು ಮಟ್ಟಿಗೆ ನಿಯಂತ್ರಣದಲ್ಲಿತ್ತೋ, ಆ ರಾಜ್ಯದಲ್ಲಿ ಕೋಮು ಹಿಂಸೆ ಸಮುದಾಯಗಳ ಧ್ರುವೀಕರಣಕ್ಕೆ ಕಾರಣವಾಗದಿರಲೆಂದು ಆಶಿಸೋಣ.
ಬಸೀರ್ಹತ್‌ನಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತೋರಿಸುವ ವೀಡಿಯೊ ಪ್ರಸಾರ ಮಾಡಲಾಗುತ್ತದೆ. ಆದರೆ ಆ ವೀಡಿಯೊಗಳು ಬಸೀರ್ಹತ್‌ನಲ್ಲಿ ಚಿತ್ರೀಕರಿಸಿದ ವೀಡಿಯೊಗಳೇ ಅಲ್ಲ; ಅವು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸೆಯನ್ನು ತೋರಿಸುವ ವೀಡಿಯೊಗಳು ಎಂದು ಆ ಮೇಲೆ ತಿಳಿದುಬಂತು. ಹಾಗೆಯೇ ಅಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತೆಂದು ಹೇಳಿ ಭೋಜ್‌ಪುರಿ ಸಿನೆಮಾಗಳಲ್ಲಿ ಇರುವ ಅತ್ಯಾಚಾರ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು.